ಮುಂದುವರೆದ ಉದ್ಧವ್ ಠಾಕ್ರೆ ಉದ್ಧಟತನ; ರಾಜ್ಯದ ಸಾರಿಗೆ ನಿಗಮಕ್ಕೂ ಧಮ್ಕಿ ಹಾಕಿದ ಮಹಾರಾಷ್ಟ್ರ ಸರ್ಕಾರ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗಡಿ, ಭಾಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಕರ್ನಾಕದ ಜೊತೆ ಕ್ಯಾತೆ ತೆಗೆಯುತ್ತಿರುವ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮ ಕೂಡ ಕರ್ನಾಟಕದ ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ಧಮ್ಕಿ ಹಾಕಿ ಪತ್ರವೊಂದನ್ನು ರವಾನಿಸಿದೆ.
ಮಿರಜದ ಶಾಸ್ತ್ರಿ ವೃತ್ತದಲ್ಲಿ ಬಸ್ಸುಗಳ ನಿಲುಗಡೆಯೇ ಇಲ್ಲ. ಅಲ್ಲಿಗೆ ಬರುವ ಕರ್ನಾಟಕದ ” ಪರ್ಮಿಟ್ ಇಲ್ಲದ” ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತವೆ. ಇದರಿಂದಾಗಿ ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮಕ್ಕೆ ಹಾನಿಯಾಗುತ್ತದೆ. ಇದನ್ನು ತಡೆಯದಿದ್ದರೆ ಇದೇ ಫೆಬ್ರುವರಿ 23 ರಂದು ರಸ್ತೆ ತಡೆ ನಡೆಸುವದಾಗಿ ಸಾಂಗ್ಲಿ ಜಿಲ್ಲಾ ಶಿವಸೇನೆ ಘಟಕವು ಅಲ್ಲಿಯ ರಸ್ತೆ ಸಾರಿಗೆ ನಿಗಮಕ್ಕೆ ಪತ್ರ ಬರೆದಿದೆ. ಇದನ್ನು ಆಧರಿಸಿ ಅಲ್ಲಿಯ ಸಾರಿಗೆ ಅಧಿಕಾರಿಗಳು ಕರ್ನಾಟಕದ ವಾಯುವ್ಯ ಸಾರಿಗೆ ಅಧಿಕಾರಿಗಳಿಗೆ ಖಡಕ್ ಪತ್ರ ಬರೆದಿದ್ದಾರೆ.
“ಪರ್ಮಿಟ್ ಇಲ್ಲದ” ಬಸ್ಸುಗಳನ್ನು ಮಹಾರಾಷ್ಟ್ರಕ್ಕೆ ಕಳಿಸಬಾರದು. ಒಂದು ವೇಳೆ ಕಳಿಸಿದಲ್ಲಿ ಶಿವಸೇನಾ ಪಕ್ಷದಿಂದಾಗುವ ಪರಿಣಾಮಗಳಿಗೆ ನೀವೇ ಹೊಣೆಗಾರರು ಎಂದು ಬೆದರಿಕೆ ದಾಟಿಯಲ್ಲಿ ಮಹಾರಾಷ್ಟ್ರದ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಕರ್ನಾಟಕದ ಸಾರಿಗೆ ನಿಗಮದಲ್ಲಿ “ಪರ್ಮಿಟ್ ಇಲ್ಲದ” ಬಸ್ಸುಗಳು ಇರಲು ಸಾಧ್ಯವೇ ಇಲ್ಲ.ಅಲ್ಲದೇ ಒಂದು ರಾಜ್ಯದ ಅಧಿಕಾರಿಗಳು ಮತ್ತೊಂದು ರಾಜ್ಯದ ಅಧಿಕಾರಿಗಳಿಗೆ ಈ ರೀತಿ ಪತ್ರ ಬರೆಯುವದೂ ಸಹ ಅಂತಾರಾಜ್ಯ ಒಪ್ಪಂದಗಳ ಉಲ್ಲಂಘನೆಯಾಗುತ್ತದೆ. ಸಾಂಗ್ಲಿ ಶಿವಸೇನಾ ಘಟಕವು ಕೊಟ್ಟ ಪತ್ರದ ಆಧಾರದ ಮೇಲೆಯೇ ಈ ರೀತಿ ಅಧಿಕಾರಿಗಳು ” ಅಧಿಕೃತ ಧಮ್ಕಿ” ನೀಡುತ್ತಿರುವದು ಇದೇ ಮೊದಲು. ಇದನ್ನು ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಮಹಾರಾಷ್ಟ್ರದ ಸಾರಿಗೆ ಸಚಿವರಿಗೆ ಕರ್ನಾಟಕದ ಪ್ರತಿಭಟನೆಯನ್ನು ಲಿಖಿತವಾಗಿಯೇ ಕಳಿಸಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ