ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದಾಗಿ ಬೆಳಗಾವಿ ಸೇರಿದಂತೆ ಹೊಸದಾಗಿ ಮತ್ತೆ 22 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಗೆ ರಾಜ್ಯ ಸರ್ಕಾರ ಸೇರ್ಪಡೆ ಮಾಡಿದೆ.
ಈ ಮೊದಲು 61 ತಾಲೂಕುಗಳನ್ನು ನೆರೆ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅತಿಹೆಚ್ಚು ಮಳೆಯಿಂದಾಗಿ ಹಾನಿಗೀಡಾಗಿದ್ದ ತಮ್ಮ ಕ್ಷೇತ್ರ ಮೂಡಿಗೆರೆ ತಾಲುಕನ್ನು ಪ್ರವಾಹ ಪೀಡಿತ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಹಾಗೂ ಸೂಕ್ತ ಪರಿಹಾರ ನೀಡದೇ ನಿರ್ಲಕ್ಷಿಸಿದ್ದಕ್ಕೆ ಸರ್ಕಾರದ ಧೋರಣೆ ವಿರುದ್ಧ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿಧಾನಸೌಧದ ಎದುರು ಏಕಾಂಗಿಯಾಗಿ ಧರಣಿ ನಡೆಸಿದ್ದರು. ಇದೀಗ ಏಕಾಂಗಿ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಮೂಡಿಗೆರೆ ಸೇರಿದಂತೆ ಮತ್ತೆ 22 ತಾಲೂಕುಗಳನ್ನು ಪ್ರವಾಹಪೀಡಿತ ಪ್ರದೇಶ ಎಂದು ಘೋಷಿಸಿದೆ.
ಬೆಳಗಾವಿ ತಾಲೂಕನ್ನು ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿಶೇಷ ಪ್ರಯತ್ನ ಮಾಡಿದ್ದರು.
ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದು, ಬೆಳಗಾವಿ, ಚಿಕ್ಕಮಗಳೂರು, ಮೂಡಿಗೆರೆ, ಕಡೂರು, ತರೀಕೆರೆ, ಸೂಪ, ಹೊಸನಗರ, ಬಬಲೇಶ್ವರ, ಕೋಲಾರ, ಮುದ್ದೆಬಿಹಾಳ ಸೇರಿದಂತೆ ಹೊಸದಾಗಿ 22 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದರು.
ಇನ್ನು ಕರಾವಳಿ ಭಾಗದಲ್ಲಿ ಚಂಡಮಾರುತದ ಅಬ್ಬರ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ಘೋಷಿಸುವ ನಿಟ್ಟಿನಲ್ಲಿ ಅಲರ್ ಸಿಸ್ಟಂ ನ್ನು 40 ಕಡೆ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ. ಒಂದೊಂದು ಸಿಸ್ಟಂಗೆ 12 ಕೋಟಿ ಖರ್ಚಾಗಲಿದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.
ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ