Latest

Positive angle – ತಾಲಿಬಾನಿಗಳು ಒಳ್ಳೆಯ ಆಡಳಿತ ಕೊಡುವುದಾದರೆ ತಪ್ಪೇನಿದೆ ?

ಬೃಹಸ್ಪತಿ

ಭಾರತಕ್ಕೆ ಬ್ರಿಟಿಷರು ಬಂದಂತೆ ಅಪ್ಘಾನಿಸ್ತಾನಕ್ಕೆ ರಷ್ಯನ್ನರು ಅಮೇರಿಕನ್ನರು ಬಂದರು. ಶಾಂತಿಯ ನೆಪದಲ್ಲಿ ಕಳೆದ 40 ವರ್ಷದ ಅವಧಿಯಲ್ಲಿ ಈ ಎರಡೂ ದೇಶಗಳ ಸೈನ್ಯ ಸ್ಥಳೀಯ ಸುಮಾರು 4 ಲಕ್ಷ ಜನರನ್ನು ಕಗ್ಗೊಲೆ ಮಾಡಿದೆ. ಮೊದಲರ್ಧ ರಷ್ಯನ್ನರ, ಉಳಿದರ್ಧ ಅಮೇರಿಕನ್ನರ ಬಂದೂಕಿನ ಕೆಳಗೆ ಬದುಕುವ ದುರಾದೃಷ್ಟ ಅಪ್ಘನ್ ಜನರದ್ದಾಗಿತ್ತು.‌
ಪರಕೀಯರ ಆಕ್ರಮಣದಿಂದ ಮುಕ್ತರಾಗುವ ಸಲುವಾಗಿ ತಾಲೀಬಾನಿಗಳು ಬಂದೂಕು ಕೈಗೆತ್ತಿಕೊಂಡರು ( ಮೊದಲ ಬಾರಿ ).
ಆದರೆ ಅವರ ನೀತಿ ನಿರೂಪಣೆಗಳು ಸರಿ ಇರಲಿಲ್ಲ. ಅಮೇರಿಕಾ ಮತ್ತು ರಷ್ಯಾದ ಆಡಳಿತದಲ್ಲಿ ದೇಶದ ಸಂಸ್ಕೃತಿ ಹಾಳಾಗಿದೆ ಎಂದು ಭಾವಿಸಿದ ಕಟ್ಟರ್ ತಾಲಿಬಾನಿಗಳು ಪೂರಾ ಪುರಾತನ ಆಡಳಿತ ವ್ಯವಸ್ಥೆ ಜಾರಿಗೆ ತಂದಿದ್ದು ಮತ್ತು ಅದನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆ ಅತ್ಯಂತ ಕ್ರೂರವಾಗಿದ್ದಿದ್ದು ಆ ದೇಶವನ್ನು ಮತ್ತೂ ಅಧಃಪತನಕ್ಕೆ ತಳ್ಳಿತು.
ಸ್ತ್ರೀಯರು ಮನೆಯ ಕಿಟಕಿಯಿಂದಲೂ ಕಾಣಬಾರದು ಎಂದು ಕಿಟಿಕಿಗಳಿಗೆ ಕಪ್ಪು ಬಳಿಯಲಾಗುತ್ತಿತ್ತು. ನಮಾಜು ಮಾಡದ ಗಂಡಸರನ್ನು, ಪ್ರೀತಿ ಪ್ರೇಮಕ್ಕೆ ಸಿಲುಕುವ ಯುವತಿಯರನ್ನು ನಡು ರಸ್ತೆಯ ಮೇಲೆ ಕಲ್ಲು ಹೊಡೆದು ಸಾಯಿಸಲಾಗುತ್ತಿತ್ತು.
ಪರಕೀಯರ ಆಡಳಿತ ಇದ್ದರೂ ಪರವಾಗಿಲ್ಲ ಅನ್ನುವ ಮಟ್ಟಕ್ಕೆ ಅಲ್ಲಿಯ ಜನ ತಲುಪಿದರು.
ಆಗಲೇ ಜಗತ್ತಿನ ಯಾವುದೇ ರಾಷ್ಟ್ರದ ಆಂತರಿಕ ವಿಷಯದಲ್ಲಿ ಕಡ್ಡಿ ಅಲ್ಲಾಡಿಸುವ ರಾಜಕೀಯ ಪಟು ಅಮೇರಿಕಾ ಅಪಘಾನಿಸ್ತಾನದಲ್ಲಿ ಪ್ರವೇಶ ಮಾಡಿತು. ಅಲ್ಲಿ ಅಮೇರಿಕಾದ ಕಾಲು ಭಾಗದ ಸೇನೆಯೇ ನೆಲೆಗೊಂಡಿತು.
ವಾಸ್ತವದಲ್ಲಿ ಅಮೇರಿಕದ ಈ ಹೆಜ್ಜೆ ಅಪಘಾನಿಗಳ ಉಪಕಾರಕ್ಕೆ ಆಗಿರಲಿಲ್ಲ. ರಷ್ಯಾಕ್ಕೆ ಹೊಂದಿಕೊಂಡಿರುವ ಅಪಘಾನದಲ್ಲಿ ಅಮೇರಿಕಾದ ಸೇನೆ ನೆಲೆಗೊಳ್ಳುವುದರಿಂದ ಅಮೇರಿಕಕ್ಕೆ ಯಾವ್ಯಾವ ಪ್ರಯೋಜನಗಳಿವೆ ಅನ್ನುವುದು ರಹಸ್ಯವಲ್ಲ.
ಅಲ್ಲೊಂದು ನೆಪ ಮಾತ್ರಕ್ಕೆ ಸ್ಥಳೀಯರ ಸರಕಾರ ರಚನೆ ಮಾಡಿ ಅಮೇರಿಕಾ ಆ ದೇಶದ ಆಡಳಿತ ಚುಕ್ಕಾಣಿಯನ್ನು ಪರೋಕ್ಷವಾಗಿ ಹಿಡಿಯಿತು‌.
ಆದರೆ ಗುಡ್ಡಗಾಡಿನ ಆ ರಾಷ್ಟ್ರದ ಮೂಲೆ ಮೂಲೆಗಳಲ್ಲಿ ಅಡಗಿಕೊಂಡಿದ್ದ ತಾಲಿಬಾನಿಗಳು ಸುಮ್ಮನೇ ಕೂತಿರಲಿಲ್ಲ. ನಿರಂತರ ಸಂಘಟಿತರಾಗುತ್ತಲೇ ಇದ್ದರು.‌
ಇನ್ನೂ ಇಂಟ್ರೆಸ್ಟಿಂಗ್ ವಿಷಯ ಅಂದರೆ ದಶಕಗಳ ಹಿಂದೆ ಈ ದೇಶದಲ್ಲಿ ರಷ್ಯಾದ ಸೈನ್ಯ ಇದ್ದಾಗ ಈ ತಾಲಿಬಾನಿಗಳನ್ನು ವ್ಯವಸ್ಥಿತವಾಗಿ ಸಂಘಟಿಸಿ ಅವರ ಕೈಗೆ ವೆಫನ್ ಗಳನ್ನು ಕೊಟ್ಟಿದ್ದು ಇದೇ ಅಮೇರಿಕಾ.
ಹೀಗೆ ಅಮೇರಿಕದ ಸೈನ್ಯ ದೇಶವನ್ನು ಪರೋಕ್ಷವಾಗಿ ಆಳುತ್ತಿರುವುದರ ವಿರುದ್ಧ ಸಂಘಟಿತರಾಗುತ್ತಲೇ ಇದ್ದ ತಾಲಿಬಾನಿಗಳು ಅವಕಾಶಕ್ಕಾಗಿ ಕಾಯುತ್ತಲೇ ಇದ್ದರು.

ಇತ್ತ ಅಮೇರಿಕಾದಲ್ಲೂ ವಿರೋಧ ಇತ್ತು….

ಇತ್ತ ಅಮೇರಿಕಾದಲ್ಲಿ ಅಪಘಾನಿಸ್ತಾನಕ್ಕೆ ಸೈನ್ಯ ಕಳಿಸಿರುವುದರ ವಿರುದ್ಧ ಅಲ್ಲಿನ ಜನ ವಿರೋಧ ಮಾಡುತ್ತಲೇ ಬಂದಿದ್ದರು. ಡೊನಾಲ್ಡ್ ಟ್ರಂಪ್  ಅವಧಿಯಲ್ಲೇ ಸೈನ್ಯವನ್ನು ವಾಪಸ್ ಕರೆಸಿಕೊಳ್ಳುವ ಕಾರ್ಯ ತೀರಾ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡಿತ್ತು.
‌ಪ್ರಸ್ತುತ ಜೊ ಬೈಡನ್ ನ ಅವಧಿಯಲ್ಲಿ ಅಮೇರಿಕಾ ಒಂದೆಡೆ ಕೊವಿಡ್ ಮಹಾಮಾರಿಯಿಂದ ನಲುಗಿದೆ. ಆರ್ಥಿಕತೆ ಕುಸಿಯುತ್ತಿದೆ. ಇನ್ನೊಂದೆಡೆ ಅಪಘಾನ್ ನಲ್ಲಿ ತನ್ನ ಸೈನ್ಯ ಇಟ್ಟು ಸಾಕಲು ಟ್ರಿಲಿಯನ್ ಗಟ್ಟಲೆ ಡಾಲರ್ ವ್ಯಯವಾಗುತ್ತಿದೆ.

ಇದರ ನಡುವೆ, ಕಡು ವಿರೋಧಿ ರಷ್ಯಾ ಈಗ ಒಕ್ಕೂಟ ರಾಷ್ಟ್ರವಾಗಿ ಉಳಿದಿಲ್ಲ. ಅದರ ಬಲವೂ ಕುಗ್ಗಿದೆ. ಇನ್ನೊಂದೆಡೆ ತನ್ನದೇ ರಾಷ್ಟ್ರದ ಜನರ ವಿರೋಧವನ್ನೂ ಸಹ ಅಮೇರಿಕಾ ಸರಕಾರ ಅಪಘಾನ್ ವಿಷಯದಲ್ಲಿ‌ ಎದುರಿಸಬೇಕಿದೆ.
ಈ ಎಲ್ಲ ಒತ್ತಡಗಳಿಂದಾಗಿ ಅಮೇರಿಕಾ ಅಪಘಾನದಿಂದ ತನ್ನ ಸಂಪೂರ್ಣ ಸೈನ್ಯ ವಾಪಸ್ ಕರೆಸಿಕೊಳ್ಳುವ ನಿರ್ಧಾರ ಮಾಡಿತು.‌
ಇತ್ತ ಈ ಅವಕಾಶವನ್ನು ಬಳಸಿಕೊಂಡ ತಾಲೀಬಾನ್ ಒಂದೇ ವಾರದ ಅವಧಿಯಲ್ಲಿ ರಾಜಧಾನಿ ಕಾಬುಲ್ ಸಮೇತ ಇಡೀ ರಾಷ್ಟ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಈ ಬಾರಿ ತಾಲಿಬಾನಿಗಳು ಬದಲಾಗಿದ್ದು ಅವರ ಹೇಳಿಕೆಗಳ ಮೂಲಕ ವ್ಯಕ್ತವಾಗುತ್ತಿದೆ. ಶಾಂತಿಯಿಂದಲೇ ಆಡಳಿತ ನಡೆಸುವ ವಾಗ್ಧಾನ ನೀಡುತ್ತಿದ್ದಾರೆ. ಎಲ್ಲೂ ಸಂಘರ್ಷ ನಡೆದ ಬಗ್ಗೆ ವರದಿಯಾಗಿಲ್ಲ. ಅಭಿವೃದ್ಧಿ ಮತ್ತು ಸ್ತ್ರೀ ಸ್ವಾತಂತ್ರ್ಯದ ಕುರಿತು ಮುಕ್ತವಾದ ಅಭಿಪ್ರಾಯ ಅವರಿಂದ ಬರುತ್ತಿದೆ.
ಒಂದೊಮ್ಮೆ ಅವರು ಹೇಳಿದಂತೆಯೇ ನಡೆದುಕೊಂಡು ಆ ದೇಶಕ್ಕೊಂದು ಒಳ್ಳೆಯ ಆಡಳಿತ ಕೊಡುವುದಾದರೆ ತಪ್ಪೇನಿದೆ ? ಅಪಘಾನಿಸ್ತಾನವು ಶಾಶ್ವತವಾಗಿ ಅಮೇರಿಕಾದ ತೆಕ್ಕೆಯಲ್ಲೇ ಇರಬೇಕು ಅಂತ ನಾವು ನೀವು ಬಯಸಬಹುದು. ಆ ದೇಶದ ಮೂಲನಿವಾಸಿಗಳು ಬಯಸುತ್ತಾರಾ ? ಸ್ವಾತಂತ್ರ್ಯ ಅನ್ನುವುದು ಎಲ್ಲ ರಾಷ್ಟ್ರಕ್ಕೂ ಬೇಕಿದೆ.

ಆದರೆ ಈ ಎಲ್ಲದರ ನಡುವೆ , ತಾಲೀಬಾನಿಗಳಿಗೆ ಈಗ ತಾವು ಮೊದಲಿನಂತೆ ಕ್ರೂರಿಗಳಾಗಿ ಉಳಿದಿಲ್ಲ ಎಂಬ ವಿಶ್ವಾಸವನ್ನು ಆ ರಾಷ್ಟ್ರದ ಜನರಿಗೆ ಒದಗಿಸಬೇಕಾದ ಬಹು ದೊಡ್ಡ ಸವಾಲು ಎದುರಾಗಿದೆ. ದೇಶ ತೊರೆಯಲು ಜನ ಹುಚ್ಚೆದ್ದು ಓಡುತ್ತಿದ್ದಾರೆ. ಕಾಬುಲ್ ವಿಮಾನ ನಿಲ್ದಾಣ ಜಾತ್ರೆ ಪೇಟೆಯಂತಾಗಿದೆ. ಇತ್ತ ತಾಲಿಬಾನ್ ಮುಖಂಡರು ಜನರಿಗೆ ಭಯಭೀತರಾಗದಂತೆ ವಿಶ್ವಾಸದ ಮಾತುಗಳನ್ನು ಹೇಳುತ್ತಲೇ ಇದ್ದಾರೆ. ಆದರೆ ಈ ಹಿಂದೆ ಅವರ ಕ್ರೂರ ಆಡಳಿತ ನೋಡಿದ್ದ ಅಲ್ಲಿನ ಜನ ಅಷ್ಟು ಬೇಗ ನಂಬಲು ತಯಾರಿಲ್ಲ.
ಇನ್ನೊಂದೆಡೆ ಅಂತಾರಾಷ್ಟ್ರೀಯ ಮಾಧ್ಯಮಗಳ ಬಾಯಿಂದ ಉಗ್ರರು ಉಗ್ರರು ಅಂತ ಕರೆಸಿಕೊಳ್ಳುವುದನ್ನು ಹೇಗಾದರೂ ಮಾಡಿ ತೊಲಗಿಸಿಕೊಳ್ಳಬೇಕಾದ ಬಹು ದೊಡ್ಡ ಸವಾಲು ಸಹ ತಾಲೀಬಾನಿಗಳಿಗೆ ಉಂಟಾಗಿದೆ.
ಅಂತಿಮವಾಗಿ ಉಳಿಯುವುದು ಒಂದೇ ಪ್ರಶ್ನೆ – ತಾಲೀಬಾನಿಗಳು ದೇಶಭಕ್ತರಾ? ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಾ? ಅಥವಾ ಭಯೋತ್ಪಾದಕರಾ?

ಅಪ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ; ಬರೋಬ್ಬರಿ 640 ಜನರು ಒಮ್ಮೆಲೆ ಏರ್ ಲಿಫ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button