ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಿಳಾ ಪಾತ್ರಧಾರಿಗಳ ಕೊರತೆಯಿದೆಯನ್ನುವುದು ಅಂದಿನ ಮಾತು. ಇಂದು ಸಾಕಷ್ಟು ಮಹಿಳೆಯರು ಸುಂದರ ಅಭಿನಯ ನೀಡುತ್ತಿದ್ದಾರೆ ಎನ್ನುವದಕ್ಕೆ ಇಂದಿನ ಈ ನಾಟಕದ ಪಂಚಕನ್ಯೆಯರೇ ಸಾಕ್ಷಿ ಎಂದು ಹಿರಿಯ ಕವಿ, ನಿವೃತ್ತ ಪ್ರಾಚಾರ್ಯ ಪ್ರೊ. ಎಂ. ಎಸ್. ಇಂಚಲ ಇಂದಿಲ್ಲಿ ಹೇಳಿದರು.
ರಂಗಸಂಪದದವರು ಹಮ್ಮಿಕೊಂಡಿದ್ದ ದಿ. ಶಿವಕುಮಾರ ಸಂಬರಗಿಮಠ ನಾಟಕೋತ್ಸವ ಮತ್ತು ರಂಗಸಖ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಮೂರು ದಿನಗಳ ಈ ನಾಟಕೋತ್ಸವದ ಮೊದಲ ದಿನವಾದ ಇಂದು ಡಾ. ಅರವಿಂದ ಕುಲಕರ್ಣಿ ನಿರ್ದೇಶನದ ‘ಪಂಚ ಕನ್ಯಾ ಸ್ಮರೇ ನಿತ್ಯಂ’ ನಾಟಕ ಪ್ರದರ್ಶನಗೊಂಡಿತು. ನಾಟಕವನ್ನು ವೀಕ್ಷಿಸಿದ ಪ್ರೊ. ಎಂ. ಎಸ್. ಇಂಚಲ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ, ಕವಿ ಡಾ. ಸರಜು ಕಾಟ್ಕರ್ ಮಾತನಾಡಿ ‘ಪಂಚ ಕನ್ಯಾ ಸ್ಮರೇ ನಿತ್ಯಂ’ ಪುರಾಣ ಕಥೆಯನ್ನು ಈ ರೀತಿಯಾಗಿಯೂ ನೋಡಬಹುದೆಂದು ನಾಟಕಕರರು ತುಂಬ ಸುಂದರವಾಗಿ ತೋರಿಸಿಕೊಟ್ಟಿದ್ದಾರೆ ಇದಕ್ಕೊಂದು ಹೊಸ ಆಯಾಮ ನೀಡಿದ್ದಾರೆ. ಪಂಚಕನ್ಯೆಯರಿಗೆ ಪುರಷರಿಂದಾದ ದೌರ್ಜನ್ಯಗಳನ್ನು ಲೇಖಕರು ಅತ್ಯಂತ ಸಮರ್ಥವಾಗಿ ನಿರೂಪಿಸಿದ್ದಾರೆ ಎಂದು ಹೇಳಿದರು.
ಡಾ. ಬಸವರಾಜ ಜಗಜಂಪಿಯವರು ಮಾತನಾಡಿ, ತ್ರೇತಾಯುಗ ಮತ್ತು ದ್ವಾಪಾರಯುಗ ಎರಡನ್ನೂ ಕಲಿಯುಗದಲ್ಲಿ ನಾವು ನೋಡುವಂತಹ ಅವಕಾಶವನ್ನು ನೀಡಿರುವ ಲೇಖಕಿ ವಿನೂತಾ ಹಂಚಿನಮನಿ, ನಿರ್ದೇಶನ ನೀಡಿ ನಮ್ಮೆಲ್ಲರೆದುರಿಗೆ ಸಾದರ ಪಡಿಸಿದಂತಹ ಡಾ. ಅರವಿಂದ ಕುಲಕರ್ಣಿ ಹಾಗೂ ಎಲ್ಲ ಕಲಾವಿದರು ಅಭಿನಂದನಾರ್ಹರು ಎಂದು ಹೇಳಿದರು.
ರಂಗಸಂಪದದ ಸಂಸ್ಥಾಪಕ ಶ್ರೀಪತಿ ಮಂಜನಬೈಲು, ರೇಖಾ ಬಾಳೆಕುಂದ್ರಿ ಮಾತನಾಡಿದರು. ಪದ್ಮಾ ಕುಲಕರ್ಣಿ, ನಿರ್ಮಲಾ ಬಟ್ಟಲ, ಪವಿತ್ರಾ ರೇವಣಕರ, ವಾಮನ ಮಳಗಿ, ಯೋಗೇಶ ದೇಶಪಾಂಡೆ, ಪ್ರಸಾದ ಕಾರಜೋಳ ಅಭಿನಯಿಸಿರುವ ಈ ನಾಟಕವನ್ನು ಶ್ರೀಮತಿ ವಿನುತಾ ಹಂಚಿನಮನಿ ರಚಿಸಿದ್ದಾರೆ. ಡಾ. ಅರವಿಂದ ಕುಲಕರ್ಣಿ ನಿರ್ದೇಶಿಸಿರುವ ಈ ನಾಟಕಕ್ಕೆ ಸಂತೋಷ ಮಹಾಲಯ(ಮೇಕಪ್), ಶ್ರೀನಿವಾಸ ಕುಲಕರ್ಣಿ(ತಾಂತ್ರಿಕ ಸಹಾಯ), ಶರಣಯ್ಯ ಮಠಪತಿ(ರಂಗಪರಿಕರ ಸಹಾಯ) ರಾಜು ಪವಾರ ಮತ್ತು ಗುರುದತ್ತ ಪೇಟ್ನೇಕರ (ನೆಳಲು-ಬೆಳಕು)ನ್ನು ನೀಡಿದ್ದಾರೆ.
ಶ್ರೀಮತಿ ವಿಜಯಲಕ್ಷ್ಮೀ ಸಂಬರಗಿಮಠ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಇದೆ ಸಂದರ್ಭದಲ್ಲಿ ಲೇಖಕ ಡಾ. ಡಿ. ವ್ಹಿ. ಗುರುಪ್ರಸಾದ ಇವರ ಆತ್ಮಕಥೆ “ಕೈಗೆ ಬಂದ ತುತ್ತು” ಕೃತಿ ಬಿಡುಗಡೆಗೊಂಡಿತು. ಪ್ರೊ. ರಾಘವೇಂದ್ರ ಪಾಟೀಲ ಕೃತಿ ಬಿಡುಗಡೆ ಮಾಡಿದರು. ಎಂ. ಕೆ. ಜೈನಾಪುರ ಅಧ್ಯಕ್ಷತೆಯನ್ನು ವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ