Kannada NewsLatest

*ರಾಜಹಂಸಗಡ ಕೋಟೆಯಲ್ಲಿ ಬೃಹತ್ ಶಿವಾಜಿ ಪ್ರತಿಮೆ ಅನಾವರಣ ಮಾಡಿದ ಸಿಎಂ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅನಾವರಣ ಮಾಡಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ರಾಜಹಂಸಗಡ ಕೋಟೆಗೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಶಿವಾಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರತಿಮೆ ಅನಾವರಣ ಮಾಡಿದರು.

43 ಅಡಿ ಎತ್ತರದ ಬೃಹತ್ ಶಿವಾಜಿ ಪ್ರತಿಮೆ ಇದಾಗಿದ್ದು, ಇದೇ ವೇಳೆ ರಾಜಹಂಸಗಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಸಿಎಂ ಚಾಲನೆ ನೀಡಿದರು. ಸಚಿವ ಗೋವಿಂದ ಕಾರಜೋಳ, ಸುನೀಲ್ ಕುಮಾರ್, ಸಂಸದೆ ಮಂಗಳಾ ಅಂಗಡಿ, ಶಾಸಕರಾದ ಅಭಯ. ಪಾಟೀಲ, ಅನಿಲ ಬೆನಕೆ, ರಮೇಶ್ ಜಾರಕಿಹೊಳಿ, ಮೊದಲಾದವರು ಉಪಸ್ಥಿತರಿದ್ದರು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕರಾದ ನಂತರ ವಿಶೇಷ ಪ್ರಯತ್ನ ಮಾಡಿ ರಾಜಹಂಸಗಡ ಕೋಟೆ ಅಭಿವೃದ್ಧಿ ಮತ್ತು ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ್ದಾರೆ.

ರಾಜಹಂಸಗಡ ಕೋಟೆ ಅಭಿವೃದ್ದಿಗೆ ಹೆಚ್ಚುವರಿ 5 ಕೋಟಿ ಅನುದಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:

ದೇಶ ಕಂಡ ಅಪ್ರತಿಮ ನಾಯಕ ಹಾಗೂ ಹಿಂದೂ ಧರ್ಮದ ರಕ್ಷಣೆಗೆ ಕೆಚ್ಚೆದೆಯ ಹೋರಾಟ ಮಾಡಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಸಂತಸ ತಂದಿದೆ. ರಾಜಹಂಸಗಡ ಕೋಟೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆ.ಆರ್.ಐ.ಡಿ.ಎಲ್, ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ (ಮಾ.2) ರಾಜಹಂಸಗಡ ಕೋಟೆ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ಈ ಅನುದಾನವನ್ನು ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಪೂರಕವಾಗಿ ಸಮುದಾಯ ಭವನ, ವಿಶ್ರಾಂತಿ ಗೃಹ ನಿರ್ಮಾಣ ಜೊತೆಗೆ ಇತರ ಮೂಲಭೂತ ಸೌಕರ್ಯ ಕಲ್ಪಿಸಿ, ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದು ತಿಳಿಸಿದರು.

ಧರ್ಮರಕ್ಷಣೆಗೆ ಸೆಣಸಾಡಿದ ಶಿವಾಜಿ ಮಹಾರಾಜರು:

ಶಿವಾಜಿ ಮಹಾರಾಜರ ಇತಿಹಾಸ ಪ್ರತಿಯೊಬ್ಬರಿಗೂ ತಿಳಿದ ವಿಷಯ. ಅವರು ಈ ದೇಶ ಕಂಡ ಅಪ್ರತಿಮ ನಾಯಕ. ಮೊಗಲರು ಹಾಗೂ ಪರಕೀಯರ ಆಡಳಿತದಲ್ಲಿ ಸಿಲುಕಿದ ಸಂದರ್ಬದಲ್ಲಿ ಹಿಂದೂ ಸಾಮ್ರಾಜ್ಯ ಕಟ್ಟುಲು, ಮೊಗಲರ ದೊಡ್ಡ ಸಾಮ್ರಾಜ್ಯದ ವಿರುದ್ಧ ಹೋರಾಡಿದ್ದಾರೆ.

ಶಿವಾಜಿ ಮಹಾರಾಜರು ತಾಯಿ ಜೀಜಾಬಾಯಿ ಅವರ ಪ್ರೇರಣೆ, ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಸಕಲ ವಿದ್ಯಾ, ಕಲೆಗಳನ್ನು ಕಲಿತು ಪರಿಣಿತರಾದ ಶ್ರೇಷ್ಠ ನಾಯಕರು. ತಮ್ಮ ಸ್ವಾರ್ಥಕ್ಕೆ ಹೊರಾಡದೆ, ಹಿಂದೂ ಧರ್ಮ ಹಾಗೂ ಸಾಮ್ರಾಜ್ಯ ಉಳಿವಿಗೆ ನಿರಂತರ ಹೋರಾಡಿದ ಮಹನೀಯರು ಎಂದು ಹೇಳಿದರು.

ಧೈರ್ಯ, ಶೌರ್ಯ, ಛಲದಿಂದ ಪರಕೀಯರ ದೈತ್ಯ ಸೈನ್ಯವನ್ನು ಸೋಲಿಸಲು ಆತ್ಮವಿಶ್ವಾಸದ ಜೊತೆಗೆ ತೋಳ್ಬಲದಲ್ಲಿ ಛಲವಿದೆ ಎಂದು ತಮ್ಮ ಸೈನ್ಯಕ್ಕೆ ತೋರಿಸಿಕೊಟ್ಟರು. ಅನೇಕ ಯುದ್ಧಗಳನ್ನು ಮಾಡಿ, ತಮ್ಮ ಪರಾಕ್ರಮದ ಮೂಲಕ ದೇಶದ ಉಳಿವಿಗೆ ಹೋರಾಡಿ ಹಲವಾರು ಕೋಟೆ ಕಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತಿಹಾಸವನ್ನು ಸ್ಮರಿಸಿದರು.

 

 

ಇಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ

https://pragati.taskdun.com/the-statue-of-chhatrapati-shivaji-maharaj-will-be-unveiled-today/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button