Kannada NewsLatest

ಬೆಳಗಾವಿ ಕರ್ನಾಟಕದ ಕಿರೀಟ; ಕನ್ನಡಿಗರ ಅಭಿವೃದ್ಧಿ, ರಕ್ಷಣೆಗೆ ಸರಕಾರ ಬದ್ಧ: ಸಿಎಂ ಬೊಮ್ಮಾಯಿ ಘೋಷಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡಿಗರ ಅಭಿವೃದ್ಧಿ ಹಾಗೂ ರಕ್ಷಣೆ ಸರಕಾರದ ಜವಾಬ್ದಾರಿಯಾಗಿದೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅಥವಾ ದೇಶದ ಯಾವುದೇ ರಾಜ್ಯದಲ್ಲಿರಲಿ ಅವರ ಅಭಿವೃದ್ಧಿಗೆ ಬದ್ಧವಾಗಿದ್ದು, ಈ ರಾಜ್ಯದ ನಾಡು-ನುಡಿ ಅಭಿವೃದ್ಧಿಪಡಿಸುವುದು ಸರಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಸಂನ್ಮೂಲ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ನಿ. ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಡಾ. ಶ್ಯಾಮ ಪ್ರಸಾದ ಮುಖರ್ಜಿ ವೇದಿಕೆಯಲ್ಲಿ ಶುಕ್ರವಾರ (ಡಿ.2) ರಾಮದುರ್ಗ ತಾಲೂಕಿನ ಅಂದಾಜು ರೂ. 671.28 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನವಭಾರತ ನಿರ್ಮಾಣಕ್ಕಾಗಿ ನವ ಕರ್ನಾಟಕ ನಿರ್ಮಿಸಲು ಜನರು ಕೈಜೋಡಿಸಬೇಕು. ಸುಮಾರು 2739 ಕೋಟಿ ರೂ.ಗಳ ಅನುದಾನವನ್ನುಂಕಳೆದ ಮೂರೂವರೆ ವರ್ಷಗಳಲ್ಲಿ ತಂದು ವಿವಿಧ ಇಲಾಖೆಗಳ ಅಭಿವೃದ್ಧಿ ಮಾಡಿ, ರಾಮದುರ್ಗ ಕ್ಷೇತ್ರವನ್ನು ಅಭಿವೃದ್ಧಿ ಶೀಲ ಕ್ಷೇತ್ರವನ್ನಾಗಿ ಮಾಡಲಾಗಿದೆ. ನೀರಾವರಿ, ಮೂಲಭೂತ ಸೌಕರ್ಯ, ವಿದ್ಯುತ್, ಶಿಕ್ಷಣ, ಆಸ್ಪತ್ರೆ, ಬ್ಯಾರೇಜ್ ನಿರ್ಮಾಣ, ಬೃಹತ್ ನೀರಾವರಿ ಯೋಜನೆಗಳನ್ನು ಈ ಕ್ಷೇತ್ರ ಕ್ಕೆ ತಂದು ಜಲಜೀವನ್ ಮಿಷನ್ ಅಡಿ ಪ್ರರಿ ಮನೆಗೆ ಗಂಗೆಯನ್ನು ಹರಿಸುವ ಸಾಹಸವನ್ನು ಶಾಸಕ ಮಹಾದೇವಪ್ಪ ಯಾದವಾಡ ಅವರು ಮಾಡಿದ್ದಾರೆ. ಸರಕಾರ ಜನಪ್ರಿಯವಾದರೆ ಸಾಲದು, ಜನಪರ ಸರಕಾರ ಇದ್ದಾಗ ಮಾತ್ರ ಕಟ್ಟ ಕಡೆಯ ಗ್ರಾಮಕ್ಕೂ ಅಭಿವೃದ್ಧಿ ಯೋಜನೆಗಳು ತಲುಪುತ್ತವೆ ಎಂದರು.

ಗಡಿಭಾಗದ ಜಿಲ್ಲೆಗಳ1800 ಗ್ರಾಮ ಪಂಚಾಯತಿಗಳ ಸಂಪೂರ್ಣ ಅಭಿವೃದ್ಧಿ :
ನಮ್ಮ ಸರಕಾರ ಸಮಗ್ರ ಕರ್ನಾಟಕದ ಚಿಂತನೆ ಮಾಡಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ನಡುಭಾಗದಿಂದ ಹಿಡಿದು ಗಡಿಭಾಗದವರೆಗೆ ಅಭಿವೃದ್ಧಿಯನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಬೀದರ್ , ಕಲಬುರಗಿ, ಯಾದಗಿರಿ,ಬೆಳಗಾವಿ ಹಾಗೂ ಬಿಜಾಪುರ ಜಿಲ್ಲೆಗಳ ಗಡಿ ಭಾಗದ ಗ್ರಾಮಗಳಲ್ಲಿ 2 ನೂತನ ಕಾರ್ಯಕ್ರಮ ರೂಪಿಸಿದೆ. ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರ, ತಮಿಳುನಾಡು, ಕೇರಳ ಗೋವಾ ಹಾಗೂ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿರುವ ರಾಜ್ಯದ ಜಿಲ್ಲೆಗಳಲ್ಲಿ 1800 ಗ್ರಾಮ ಪಂಚಾಯತಿಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುವ ಕಾರ್ಯಕ್ರಮ ಗಳನ್ನು ಈ ವರ್ಷದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಗಡಿ ಭಾಗದ ಸಮಗ್ರ ರಸ್ತೆಗಳ ಸುಧಾರಣೆಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಗಡಿ ಭಾಗದ ಗ್ರಾಮಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೂಪಿಸಿರುವ ಜಲ್ ಜೀವನ್ ಮಿಷನ್ ಯೋಜನೆಯಡಿ ಈ ವರ್ಷ ಗಡಿ ಭಾಗದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಿದೆ ಎಂದರು.

ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ 100 ಕೋಟಿ:

ಗಡಿಯಾಚೆ ಇರುವವರು ನಮ್ಮವರು; ಅಲ್ಲಿನ ಕನ್ನಡ ಶಾಲೆಗಳನ್ನು ಅಲ್ಲಿನ ರಾಜ್ಯ ಸರಕಾರ ಕಡೆಗಣಿಸಿರುವುದರಿಂದ ಮೂಲಸೌಕರ್ಯ ಕಲ್ಪಿಸುವುದು ಸಾಧ್ಯವಾಗಿರುವುದಿಲ್ಲ. ಗಡಿಭಾಗದ ಕನ್ನಡ ಶಾಲೆಗಳ ಅಭಿವೃದ್ದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಇದೇ ವರ್ಷ 100 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಕನ್ನಡದ ಶಾಲೆಗಳ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.

ಗೋವಾದಲ್ಲಿ ಕನ್ನಡ ಭವನ:
ಗೋವಾದಲ್ಲಿ ಹತ್ತು ಕೋಟಿ‌ ರೂಪಾಯಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಅದೇ ರೀತಿ ಸೋಲಾಪುರ ಹಾಗೂ ಕಾಸರಗೋಡಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ತಲಾ ಹತ್ತು ಕೋಟಿ ರೂಪಾಯಿಗಳನ್ನು ಸರಕಾರ ನೀಡಲಿದೆ ಎಂದರು.

ಕನ್ನಡಿಗರ ಹಿತಚಿಂತನೆ, ರಕ್ಷಣೆ ಹಾಗೂ ಅಭಿವೃದ್ದಿ:
ಕನ್ನಡ ನಾಡಿನ ಭಕ್ತರು ಭೇಟಿ ನೀಡುವ ಪುಣ್ಯಕ್ಷೇತ್ರಗಳಾದ ಪಾಂಡರಾಪುರ, ತುಳಜಾಪುರ, ಶ್ರೀ ಶೈಲ, ಅಯ್ಯಪ್ಪ ದೇವಾಲಯಗಳಲ್ಲಿ ಯಾತ್ರಿ ನಿವಾಸ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಕನ್ನಡಿಗರ ಹಿತಚಿಂತನೆ, ರಕ್ಷಣೆ ಹಾಗು ಅಭಿವೃದ್ದಿ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ವಿಶ್ವದ ಯಾವುದೇ ಭಾಗದಲ್ಲಿರಲಿ, ಭಾರತದ ಯಾವುದೇ ರಾಜ್ಯದಲ್ಲಿರಲಿ ಅವರ ಅಭಿವೃದ್ದಿ, ಹಿತಚಿಂತನೆ ಮತ್ತು ರಕ್ಷಣೆ ಮಾಡುವ ಕೆಲಸ ಕರ್ನಾಟಕ ಸರ್ಕಾರ ಮಾಡಿಕೊಂಡು ಬಂದಿದೆ ಎಂದರು.

ತಡೆಗೋಡೆ ನಿರ್ಮಾಣಕ್ಕೆ 120 ಕೋಟಿ ರೂ.ಗಳ ಅನುಮೋದನೆ:
ಕೋವಿಡ್ 2 ವರ್ಷಗಳ ಕಾಲ ಬಾಧಿಸಿದರೂ ನಾವು ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿಲ್ಲ. 75 ವರ್ಷಗಳ ಕಾಲ ಆಗದೆ ಇರುವ ಅಭಿವೃದ್ಧಿಯನ್ನು 2 ವರ್ಷಗಳಲ್ಲಿ ಮಾಡಲಾಗಿದೆ. ಜನರಿಗೆ ಕೋವಿಡ್ ಸುರಕ್ಷಾ ಚಕ್ರವನ್ನು ಒದಗಿಸಲಾಗಿದೆ ಎಂದರು.

ದುಡಿಯುವ ವರ್ಗಕ್ಕೆ ವಿಶೇಷ ಸವಲತ್ತುಗಳನ್ನು ಒದಗಿಸಿ ಅಭಿವೃದ್ಧಿ ಮಾಡಲಾಗಿದೆ. ರಾಮದುರ್ಗ ತಾಲ್ಲೂಕಿನ ಕೆಲ ಗ್ರಾಮಗಳು ಪದೇ ಪದೇ ಪ್ರವಾಹದಿಂದ ಬಾಧಿತಗೊಳ್ಳುವುದನ್ನು ತಪ್ಪಿಸಲು ಮಲಪ್ರಭಾ ನದಿತೀರದಲ್ಲಿ ತಡೆಗೋಡೆ ನಿರ್ಮಿಸಲು ಸರಕಾರ ಮುಂದಾಗಿದೆ. 120 ಕೋಟಿ ರೂ.ಗಳಿಗಿಂತ ಹೆಚ್ವು ಅನುದಾನವನ್ನು ಅನುಮೋದಿಸಿ ಕಾಮಗಾರಿಗೆ ಅಡಿಗಲ್ಲು ಹಾಕಲಾಗಿದೆ. ಶಾಶ್ವತವಾಗಿ ಊರುಗಳನ್ನು ಉಳಿಸುವ ಕೆಲಸವನ್ನು ಶಾಸಕರು ಮಾಡಿದ್ದಾರೆ.

ಕೆರೆ ತುಂಬಿಸುವ ಯೋಜನೆ:
ಏತ ನೀರಾವರಿಯಿಂದ ವಂಚಿತಗೊಂಡಿರುವ 19 ಗ್ರಾಮಗಳ ಕೆರೆ ತುಂಬಿಸುವ ಯೋಜನೆ ಜಾರಿಗೆ ತರಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಅವರು ನಿರಂತರ ಒತ್ತಡ ತಂದಿದ್ದಾರೆ. ಕ್ಷೇತ್ರದ ಬಗ್ಗೆ ಅವರ ಕಳಕಳಿಯನ್ನು ಅರಿತುಕೊಂಡು ಅವರ ಒತ್ತಾಯದಂತೆ 19 ಕೆರೆಗಳನ್ನು ತುಂಬಿಸುವ ಯೋಜನೆಗೆ ಕೂಡಲೇ ಡಿಪಿಆರ್ ತಯಾರಿಸಿ ಮುಂದಿನ ಬಜೆಟ್ ನಲ್ಲಿ ಅನುದಾನ ತೆಗೆದಿರಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ :
ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯು ರಾಜ್ಯದ ಕಿರೀಟವಿದ್ದಂತೆ. ಈ ಜಿಲ್ಲೆಯ ನೀರಾವರಿ, ಕೈಗಾರಿಕೋದ್ಯಮ, ಕೃಷಿ ಅಭಿವೃದ್ಧಿಗೆ ಸರಕಾರ ನೆರವು ನೀಡಲಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ಸರಕಾರ ವಿಶೇಷ ಯೋಜನೆ ರೂಪಿಸಲಿದೆ ಎಂದು ತಿಳಿಸಿದರು.

ಎಲ್ಲ ಸಮುದಾಯಗಳಿಗೆ ಸರಕಾರಿ ಸೌಲಭ್ಯ :
ಹತ್ತು ಲಕ್ಷಕ್ಕೂ ಅಧಿಕ ಮಕ್ಕಳಿಗೆ 600 ಕೋಟಿ ರೂಪಾಯಿ ಶಿಷ್ಯವೇತನವನ್ನು ರೈತ ವಿದ್ಯಾನಿಧಿ ಯೋಜನೆ ಮೂಲಕ ಒದಗಿಸಲಾಗಿದೆ. ಇದೇ ರೀತಿ ಕೃಷಿ ಕೂಲಿಕಾರರು, ಮೀನುಗಾರರು, ಚಾಲಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದೆ .6 ಲಕ್ಷ ಕೃಷಿ ಕೂಲಿಕಾರರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುವುದು. ಎಲ್ಲ ಸಮುದಾಯಗಳಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಲಾಗಿದೆ. 20 ಕುರಿ ಮತ್ತು 1 ಮೇಕೆಯಂತೆ 20 ಸಾವಿರ ಕುರಿಗಾಹಿಗಳ ಸಂಘಗಳಿಗೆ ನೀಡುವ ಯೋಜನೆಗೆ 354 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ :
ಕಾಯಕ, ಸ್ತ್ರೀ ಸಾಮರ್ಥ್ಯ , ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ಎಲ್ಲ ವರ್ಗದ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸರಕಾರ ನೆರವು ನೀಡುತ್ತಿದೆ.ವಿವೇಕ ಯೋಜನೆಯಡಿ 8000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುವುದು.ನಮ್ಮ ಕ್ಲಿನಿಕ್, ಶಾಲಾ ಕೊಠಡಿಗಳ ನಿರ್ಮಾಣ, ಆರೋಗ್ಯ ಸೌಲಭ್ಯ ಹೆಚ್ಚಳ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿದ ಅವರು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಲಾಗಿದೆ. ಪ್ರಜಾಪ್ರಭುತ್ವ ಎಂದರೆ ಮತ ಹಾಕುವುದು ಮಾತ್ರವಲ್ಲ; ದೇಶ ಕಟ್ಟುವುದರಲ್ಲಿ ಸರ್ವರ ಪಾಲ್ಗೊಳ್ಳುವಿಕೆಯು ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಲಾಗಿದೆ.ಗೋವುಗಳ ರಕ್ಷಣೆ ನಮ್ಮ ಸಂಸ್ಕೃತಿ. 30 ಜಿಲ್ಲೆಗಳಲ್ಲಿ ಗೋಶಾಲೆ ಪ್ರಾರಂಭಿಸಲಾಗಿದ್ದು, ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಹಿಂದಿನ ಸರಕಾರಗಳಿಗೆ ಇಚ್ಛಾಶಕ್ತಿ ಇಲ್ಲದಿರುವುದರಿಂದ ಪರಿಶಿಷ್ಟ ಜಾತಿ/ಪಂಗಡಗಳ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ. ಆದರೆ ಯಾವುದೇ ಟೀಕೆ-ಟಿಪ್ಪಣಿಗೆ ಸೊಪ್ಪುಹಾಕದೇ ಪರಿಶಿಷ್ಟ ಜಾತಿ/ಪಂಗಡಗಳ ಸಮುದಾಯದ ಮೀಸಲಾತಿ ಹೆಚ್ಚಿಸುವ ದಿಟ್ಟ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ ಎಂದರು.

ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸಚಿವರಾದ ಮುರುಗೇಶ್ ನಿರಾಣಿ, ನಗರಾಭಿವೃದ್ಧಿ ಸಚಿವರಾದ ಬಿ.ವಿ.ಬಸವರಾಜ್(ಭೈರತಿ), ಕೆಎಂಎಫ್ ಅಧ್ಯಕ್ಷರಾದ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮಂಗಳ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಿ.ರಾಜೀವ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಹನುಮಂತ ನಿರಾಣಿ, ಶಾಸಕರಾದ ಅನಿಲ್ ಬೆನಕೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

‘ಮಹಾ’ ಸಚಿವರಿಗೆ ಗಡಿ ಪ್ರವೇಶಕ್ಕೆ ಅವಕಾಶ ನೀಡದಂತೆ ಒತ್ತಾಯ; ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು

https://pragati.taskdun.com/karavecm-basavaraj-bommaimeetbelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button