ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಬ್ಬು ಬೆಳೆ ಸಕ್ಕರೆ ತಯಾರಿಕೆಗೆ ಮಾತ್ರ ಸೀಮಿತವಾದ ಬೆಳೆಯಲ್ಲ, ಕಬ್ಬಿನ ತ್ಯಾಜ್ಯವಾದ ಬಗಸೆ ಬಳಸಿ ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದು. ಪಶು ಆಹಾರ, ಲ್ಯಾಕ್ಟಿಕ್ ಆ್ಯಸಿಡ್, ಸಾವಯವ ಆ್ಯಸಿಡ್ ಹಾಗೂ ಅಲಂಕಾರಿಕ ವಸ್ತುಗಳ ತಯಾರಿಕೆ, ಹೀಗೆ ಅನೇಕ ಆದಾಯದ ಮಾರ್ಗಗಳಿದ್ದು, ಮುಂಬರುವ ದಿನಗಳಲ್ಲಿ ಕಬ್ಬು ಬೆಳೆಗೆ ರಾಜ್ಯ ಮಟ್ಟದಲ್ಲಿ ಬೇಡಿಕೆ ಬರಲಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಸಕ್ಕರೆ ಸಚಿವರಾದ ಶಂಕರ ಬ. ಪಾಟೀಲ ಮುನೇನಕೊಪ್ಪ ಅವರು ತಿಳಿಸಿದರು.
ನಗರದ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆವರಣದಲ್ಲಿ ಸೋಮವಾರ (ಮೇ.9) ನಡೆದ ಪ್ರಯೋಗಾಲಯ, ಬೋಧನಾ ಕೊಠಡಿ, ಅಥಿತಿ ಗೃಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಖಾನೆಗಳು ರೈತರಿಂದ ಕಬ್ಬು ತೆಗೆದುಕೊಂಡು, ನಿಯಮಗಳ ಪ್ರಕಾರ ನಿಗದಿತ ಅವಧಿಯಲ್ಲಿ ಬಿಲ್ ಪಾವತಿ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು. ಕಬ್ಬು ಪಡೆದು ಈ ವರೆಗೆ ರೈತರಿಗೆ ಬಿಲ್ ಪಾವತಿಸದ ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಿ, ಸದ್ಯದಲ್ಲೇ ಕಾರ್ಖಾನೆ ಮಾಲೀಕರ ಸಭೆ ನಡೆಸಿ ರೈತರಿಗೆ ಕಬ್ಬು ಬೆಳೆಯ ಬಾಕಿ ಬಿಲ್ ತಕ್ಷಣ ಪಾವತಿಸುವಂತೆ ಸೂಚನೆ ನೀಡಲಾಗುವದು ಎಂದು ತಿಳಿಸಿದರು.
ರಾಜ್ಯದಲ್ಲಿನ ಸಹಕಾರಿ ಸಂಘಗಳ ಸಭೆ ಕರೆದು, ಆರ್ಥಿಕ ನಷ್ಟದಲ್ಲಿರುವ ಕಾರ್ಖಾನೆಗಳ ಪುನರ್ ಪ್ರಾರಂಭ ಹಾಗೂ ಲಾಭದಾಯಕ ಚಟುವಟಿಕೆ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಬ್ಬು ಬೆಳೆಯಿಂದ ವಿವಿಧ ರಾಸಾಯನಿಕ ಪದಾರ್ಥಗಳು ಹಾಗೂ ಅಲಂಕಾರ ವಸ್ತುಗಳನ್ನು ತಯಾರಿಸಬಹುದು. ಮುಂಬರುವ ದಿನಗಳಲ್ಲಿ ಕಬ್ಬು ಬೆಳೆಗೆ ರಾಜ್ಯ ಮಟ್ಟದಲ್ಲಿ ಬೇಡಿಕೆ ಬರಲಿದೆ ಎಂದು ಹೇಳಿದರು.
ರಾಜ್ಯದ ಉತ್ತಮ ಸಕ್ಕರೆ ಕಾರ್ಖಾನೆಗಳಿಗೆ ಸಂಸ್ಥೆಗಳಿಂದ ಪ್ರಶಸ್ತಿ ನೀಡಲು ಆಡಳಿತ ಮಂಡಳಿಯಿಂದ ಆಯ್ಕೆ ಪ್ರಕ್ರಿಯೆ ಮಾನದಂಡಗಳನ್ನು ರೂಪಿಸಲು ತೀರ್ಮಾನಿಸಲಾಗಿದೆ. ಸದ್ಯದಲ್ಲೇ ಈ ಕುರಿತು ಸಭೆ ನಡೆಸಲಾಗುವುದು ಎಂದು ಸಚಿವ ಮುನೇನಕೊಪ್ಪ ತಿಳಿಸಿದರು.
ಇದಕ್ಕೂ ಮುಂಚೆ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ, ಪ್ರಯೋಗಾಲಯ, ಅಥಿತಿ ಗೃಹ, ಗ್ರಂಥಾಲಯ, ಬೋಧನಾ ಕೊಠಡಿಗಳನ್ನು ಉದ್ಘಾಟಿಸಿದರು. ನಂತರ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ವಿವಿಧ ಸಕ್ಕರೆ ಕಾರ್ಖಾನೆ ಮಾಲೀಕರರೊಂದಿಗೆ ಸಭೆ ನಡೆಯಿತು.
ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರಾದ ಅಶೋಕ ಪಾಟೀಲ, ಕಬ್ಬು ಅಭಿವೃದ್ಧಿ ಆಯುಕ್ತರಾದ ಶಿವಾನಂದ ಕಲಕೇರಿ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕರಾದ ಡಾ.ಆರ್.ಬಿ. ಖಾಂಡಗಾವೆ ಹಾಗೂ ವಿವಿಧ ಸಕ್ಕರೆ ಕಾರ್ಖಾನೆಯ ಮಾಲಿಕರು ಉಪಸ್ಥಿತರಿದ್ದರು.
ಬಸ್ ಗಾಗಿ ಕಾಯುತ್ತಿದ್ದ ಯುವಕನ ಕೈಗೆ ಮಗು ಕೊಟ್ಟು ಪರಾರಿಯಾದ ಮಹಿಳೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ