ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಕೋವಿಡ್-19ರ ಆರಂಭದಲ್ಲಿದ್ದ ಗಂಭೀರತೆಯನ್ನು ಈಗ ನಾಗರಿಕರು ತೆಗೆದುಕೊಳ್ಳುತ್ತಿಲ್ಲ. ಪರರಾಜ್ಯದಿಂದ ಬಂದವರ ಆರ್‍ಟಿಪಿಸಿಆರ್ ಪರೀಕ್ಷೆ ಕಡ್ಡಾಯ. ವ್ಯಾಪಾರಕ್ಕಾಗಿ ಬಂದವರನ್ನೂ ಸಹ ಕಡ್ಡಾಯವಾಗಿ ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುವುದು. ವಾರದ ಸಂತೆಯು ಇನ್ನುಮುಂದೆ ಒಂದೆ ಸ್ಥಳದಲ್ಲೆ ಜರುಗಿಸದೆ ನಾಲ್ಕು ದಿಶೆಗಳಲ್ಲಿ ಜರುಗಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಕೋವಿಡ್-19 ಸೋಂಕಿನ ಎರಡನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲ್ಲೂಕಿನ ಅಧಿಕಾರಿಗಳು, ಹಿರಿಯರು ಹಾಗೂ ಪತ್ರಕರ್ತರೊಂದಿಗೆ ಸ್ಥಳೀಯ ನಗರಸಭೆಯಲ್ಲಿ ಸಭೆ ಜರುಗಿಸಿ ಅವರು ಮಾತನಾಡಿದರು. ‘ನಗರದ ಮುನಿಸಿಪಲ್ ಪ್ರೌಢಶಾಲೆ, ಎಪಿಎಂಸಿ ಆವರಣ, ಮಾವಿನ ಹಣ್ಣಿನ ಮಾರ್ಕೆಟ್ ಮತ್ತು ಮುರ್ಗುಡ್ ಸೇತುವೆ ಬಳಿ ವಾರದ ಸಂತೆ ನಡೆಸಲಾಗುವುದು. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ, ಸ್ವಚ್ಛತೆ ಕಾಪಾಡಿ’ ಎಂದು ಮನವಿ ಮಾಡಿಕೊಂಡರು.
‘ವ್ಯಾಕ್ಸಿನೇಶನ್ ಬಹಳ ಮುಖ್ಯವಾದದ್ದು. ನಗರದಲ್ಲಿ ಎಂಜಿಎಂ ಮತ್ತು ಪಿಎಚ್‍ಸಿ ಈ ಎರಡು ಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತಿದೆ. ಅದೆ ರೀತಿ ಆಯಾ ಗ್ರಾಮಗಳಲ್ಲಿಯೂ ನೀಡಲಾಗುತ್ತಿದ್ದು ಇಲ್ಲಿಯವರೆಗೆ 19746 ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ನಗರದಲ್ಲಿ ಇನ್ನು ಮುಂದೆ ಪ್ರತಿ ವಾರ್ಡ್‍ಗಳಲ್ಲಿ ಲಸಿಕೆ ಪಡೆಯುವ ಕೇಂದ್ರ ಸ್ಥಾಪಿಸಲು ಪ್ರಯತ್ನಿಸಲಾಗುವುದು. ಎಂಜಿಎಂನಲ್ಲಿ 8 ಆಕ್ಸಿಜನ್ ಬೆಡ್‍ಗಳಿವೆ ಇನ್ನೂ 25 ಆಕ್ಸಿಜನ್‍ಗಳನ್ನು ಶೀಘ್ರದಲ್ಲೆ ತರಿಸಲಾಗುವುದು’ ಎಂದರು.
ತಾಲ್ಲೂಕಾ ವೈದ್ಯಾಧಿಕಾರಿ ಡಾ. ವಿಠ್ಠಲ್ ಶಿಂಧೆ ಮಾತನಾಡಿ ‘ಕೋವಿಡ್-19ರ ಎರಡನೇಯ ಅಲೆಯಲ್ಲಿ ನಾಲ್ಕೈದು ದಿನಗಳಿಗೊಮ್ಮೆ 1 ಅಥವಾ 2 ಕರೊನಾ ವೈರಸ್ ಸೋಂಕಿತರು ಕಂಡುಬರುತ್ತಿದ್ದರು. ಆದರೆ ಈಗ ದಿನಕ್ಕೆ 6-7 ಸೋಂಕಿತರು ಕಂಡುಬರುತ್ತಿದ್ದಾರೆ. ಇಂದು ನಗರದಲ್ಲಿ 5 ಹಾಗೂ ಗ್ರಾಮೀಣ ಭಾಗದಲ್ಲಿ 7 ಸೇರಿ ತಾಲ್ಲೂಕಿನಲ್ಲಿ ಒಟ್ಟು 12 ಸೋಂಕಿತರು ಇದ್ದಾರೆ. ’ ಎಂದರು.
ಸ್ಥಳೀಯ ವೈದ್ಯ ಹಾಗೂ ಕರ್ನಾಟಕ ವ್ಯಾಕ್ಸಿನೇಶನ್ ಆ್ಯಡವಾಯಜರ್ ಕಮಿಟಿ ಸದಸ್ಯ ಡಾ. ಬಳರಾಮ ಜಾಧವ ಮಾತನಾಡಿ ‘ವ್ಯಾಕ್ಸಿನ್‍ಗೆ ಯಾರೂ ಹೆದರಬೇಡಿ, ಅದರಿಂದ ಪ್ರತಿಕಾರಶಕ್ತಿ ವೃದ್ಧಿಯಾಗುತ್ತದೆ’ ಎಂದರು.
ತಹಸೀಲ್ದಾರ ಪ್ರಕಾಶ ಗಾಯಕವಾಡ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಬಿಇಓ ರೇವತಿ ಮಠದ, ಸಿಪಿಐ ಸಂತೋಷ ಸತ್ಯನಾಯಿಕ ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ನೀತಾ ಬಾಗಡೆ, ಸದಸ್ಯರು, ಪ್ರಣವ ಮಾನವಿ, ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ