ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಂದಿನ ಚುನಾವಣೆ ಗೋಕಾಕನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾಡೋಣ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ರಮೇಶ್ ಜಾರಕಿಹೊಳಿ ಏನು ಹೇಳಿದ್ದಾರೆ ಎಂಬುವುದು ಯಾರಿಗೂ ಅರ್ಥವಾಗಿಲ್ಲ. ನಾವು ಯಾವುದೇ ಚುನಾವಣೆಯನ್ನು ಕೇಂದ್ರಿಕೃತ ಮಾಡಿಲ್ಲ, ಸ್ವತಂತ್ರವಾಗಿಯೇ ಮಾಡಿದ್ದೇವೆ. ಅವರು ಮಾತ್ರ ಅಧಿಕಾರವನ್ನು ಕೈಯಲ್ಲಿಯೇ ಹಿಡಿದುಕೊಂಡಿರುತ್ತಾರೆ ಎಂದು ತಿವಿದಿದ್ದಾರೆ.
ಇನ್ನೂ ವಿಧಾನಪರಿಷತ್ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಾತನಾಡಿ, ಈಗಾಗಲೇ ಹೇಳಿದಂತೆ ಬಿಜೆಪಿ, ಪಕ್ಷೇತರ ಅಭ್ಯರ್ಥಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ, ಆ ವಿಶ್ವಾಸ ನಮಗಿದೆ. 3 ಸಾವಿರಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆಯುತ್ತಿವೆ. ಪರಿಷತ್ ಚುನಾವಣೆಯಲ್ಲಿ ಬೇರೆ ಪಕ್ಷದ ಮತಗಳನ್ನು ಪಡೆಯುವಲ್ಲಿ ಯಶಸ್ವಿ ಆಗಿದ್ದೇವೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಶಾಸಕರು ತಮ್ಮ ತಮ್ಮ ಮತಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಾರೆ. ಬೆಳಗಾವಿ ಜಿಲ್ಲೆಗೆ ಸಂಬಂಧ ಪಟ್ಟಿರುವ ವಿಷಯಗಳಿದ್ದರೆ ಎಲ್ಲ ಶಾಸಕರು ಕೂಡಿ ಚರ್ಚಿಸುತ್ತೇವೆ. ಕೆಲವು ವಿಷಯಗಳು ಎಲ್ಲ ಪಕ್ಷದವರು ಕೇಳುವಂತಹ ವಿಷಯಗಳಿವೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಪಾದಯಾತ್ರೆ ನಡೆಸಿದ್ದಾರೆ. ಅವರೊಂದಿಗೆ ಚರ್ಚಿಸಲಿದ್ದೇನೆ ಎಂದು ತಿಳಿಸಿದರು.
ಪಟ್ಟಣ ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಎರಡು ದಿನಗಳಿಂದ ಸಭೆ ನಡೆಸುತ್ತಿದ್ದೇವೆ. ನಿನ್ನೆ ಚಿಕ್ಕೋಡಿ, ಇಂದು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸಭೆ ನಡೆಸಿದ್ದೇವೆ. ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದ್ದು, ನಾಳೆ ಸಂಜೆಯೊಳಗೆ ಬಿ -ಫಾರ್ಮ್ ನೀಡುತ್ತೇವೆ ಎಂದರು.
ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ