
ಪ್ರಗತಿವಾಹಿನಿ ಸುದ್ದಿ; ಸವದತ್ತಿ: ಕೇಂದ್ರ ಬಿಜೆಪಿ ಸರ್ಕಾರ ದಿನದಿಂದ ದಿನಕ್ಕೆ ಬೆಲೆ ಏರಿಕೆ ಮಾಡುತ್ತಿದೆ. ಅಡುಗೆ ಅನಿಲ, ಪೆಟ್ರೋಲ್ ಮತ್ತು ಡಿಜೈಲ್ ಬೆಲೆ ಗಗನಕ್ಕೇರಿದ್ದು, ಬಡವರ ಮೇಲೆ ಬರೆ ಎಳದಿದೆ. ನಮ್ಮ ಸರಕಾರದ ಅವಧಿಯಲ್ಲಿ ಬಡವರಿಗೆ ಅನ್ನ ಭಾಗ್ಯ, ಕ್ಷೀರ ಭಾಗ್ಯ, ರೈತ ಕಲ್ಯಾಣ, ವಿದ್ಯಾ ಸಿರಿ, ಕೃಷಿ ಭಾಗ್ಯ, ಶಿಕ್ಷಣ ಹಕ್ಕು ಕಾಯ್ದೆ, ಜಲ ಸಿರಿ, ಆಹಾರ ಭದ್ರತಾ ಕಾಯ್ದೆ, ಗ್ರಾಮೀಣ ಉದ್ಯೋಗ ಖಾತ್ರಿ ನರೇಗಾ ಯೋಜನೆ ಸೇರಿದಂತೆ ಇನ್ನು ಹಲವಾರು ಯೋಜನೆಗಳನ್ನು ನೀಡಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸ್ಥಳೀಯ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಪಕ್ಷ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸರಳ ವ್ಯಕ್ತಿತ್ವ ಸದಾ ಸಾಮಾನ್ಯ ಜನರ ಜೊತೆ ಬೆರೆಯುವ ಏಕೈಕ ನಮ್ಮೆಲ್ಲರ ನೆಚ್ಚಿನ ಯುವ ನಾಯಕರಾದ ಸತೀಶ ಜಾರಕಿಹೊಳಿಗೆ ಮತ ನೀಡುವಂತೆ ಕೇಳಿದರು.
ಈ ವೇಳೆ ಮಾತನಾಡಿದ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ ರಾಜ್ಯದಲ್ಲಿರುವುದು ಬರೀ ಪರ್ಸಂಟೇಜ್ ಸರಕಾರ. ಕೊರೋನಾದಲ್ಲಿ ದುಡ್ಡು ಹೊಡೆದ ಸರಕಾರ. ಯಾರೊಬ್ಬರಿಗೂ ಒಂದು ಪೈಸೆ ನೆರವು ಸಿಗಲಿಲ್ಲ. ಇಂತಹ ಸರಕಾರ ಬೇಕೇನ್ರಿ? ಮುಂದಿನ ಬಾರಿ ನಮ್ಮ ಸರಕಾರ ಬಂದಾಗ ಬಿಲ್ ಲೆಸ್ ಆಸ್ಪತ್ರೆ ಆರಂಭಿಸುತ್ತೇವೆ. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡ್ತೀವಿ. ಪ್ರತಿ ನಿರುದ್ಯೋಗಿಗೆ ಪ್ರತಿ ತಿಂಗಳು 6 ಸಾವಿರ ರೂ ಕೊಡ್ತೀವಿ ಎಂದು ಘೋಷಿಸಿದರು.
ನಾವು ಬಡವರಿಗೆ ಭೂಮಿ ಕೊಡುವ ಯೋಜನೆ ಮಾಡಿದರೆ ಈ ಸರಕಾರ ಬಡವರ ಭೂಮಿ ಕಿತ್ತು ಕೊಂಡು ದೊಡ್ಡವರಿಗೆ ಮಾರುವ ಕಾನೂನು ತರುತ್ತಿದೆ ಎಂದೂ ಆರೋಪಿಸಿದರು.
ನೂರಾರು ಕೋಟಿ ಖರ್ಚು ಮಾಡಿ ಕಟ್ಟಿದ ಸುವರ್ಣ ವಿಧಾನಸೌಧದಲ್ಲಿ ಏನೂ ಚರ್ಚೆ ಮಾಡುವುದಕ್ಕೇ ಅವಕಾಶ ಕೊಡುತ್ತಿಲ್ಲ. ಅಧಿವೇಶನವನ್ನೇ ನಡೆಸುತ್ತಿಲ್ಲ ಎಂದರು. ರಾಜ್ಯದಲ್ಲಿ ಸಾರಿಗೆ ನೌಕರ ನಡೆಸುತ್ತಿರುವ ಧರಣಿ ಬಗ್ಗೆ ತೆಲೆ ಕೆಡಸಿಕೊಳ್ಳದ ಸರ್ಕಾರ ಸಾರ್ವಜನಿಕರು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಸತೀಶ ಜಾರಕಿಹೋಳಿ, ಕೆ ಎಚ್ ಮುನಿಯಪ್ಪ, ಪ್ರಕಾಶ ಹುಕ್ಕೇರಿ, ಎ ಎಂ ಇಂಡಸಗೇರಿ, ಡಿ ಆರ್ ಪಾಟೀಲ, ಬಿ ಆರ್ ಯಾವಗಲ್, ಎಐಸಿಸಿ ಕಾರ್ಯದರ್ಶಿ ಸಂದಿಪ, ಶಾಸಕರಾದ ರಾಜೇಗೌಡ, ಜಿ ಎಸ್ ಗಡ್ಡದೇವರಮಠ,ಮಾಜಿ ಶಾಸಕರಾದ ಸುಭಾಷ ಕೌಜಲಗಿ, ಉಮೇಶ ಬಾಳಿ, ವಿಶ್ವಾಸ ವೈದ್ಯ, ಆರ್ ವಿ ಪಾಟೀಲ, ಪಂಚನಗೌಡ ದ್ಯಾಮನಗೌಡರ, ಸೌರವ ಚೋಪ್ರಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ-ಕಿರಿಯ ಮುಖಂಡರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವ್ಯಕ್ತಿ ಪೂಜೆಗಿಂತ, ಪಕ್ಷದ ತತ್ವ ಸಿದ್ದಾಂತಕ್ಕೆ ಮಹತ್ವ ನೀಡಿ: ಸಿ.ಟಿ.ರವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ