Belagavi NewsBelgaum NewsKannada NewsKarnataka News

*ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳುವಳಿ*: *ರೈತ ಮುಖಂಡ ಚೂನಪ್ಪ ಸೇರಿದಂತೆ ನೂರಾರು ರೈತರು ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ ಹೆಚ್ಚಿನ ಬೆಲೆ ಹಾಗೂ ಸರ್ಕಾರದಿಂದ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಜೈಲ್ ಭರೋ ಚಳುವಳಿ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.

ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ (MSP) ಅಥವಾ ಕನಿಷ್ಠ ₹4,500 – ₹3,600 ನಿಗದಿಪಡಿಸಬೇಕು ಮತ್ತು ರಾಜ್ಯ ಸರ್ಕಾರದಿಂದ ಟನ್ ಕಬ್ಬಿಗೆ ₹1,000 ಪ್ರೋತ್ಸಾಹಧನ/ಪರಿಹಾರ ನೀಡಬೇಕು ಎಂಬುದು ರೈತರ ಮುಖ್ಯ ಬೇಡಿಕೆಯಾಗಿದೆ.

ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗಿನ ಸಭೆಯಲ್ಲಿ ಪ್ರತಿ ಟನ್‌ಗೆ ₹3,600 ದರ ನಿಗದಿ ಕುರಿತು ಚರ್ಚೆಯಾಗಿದ್ದರೂ, ಸರ್ಕಾರದಿಂದ ಸ್ಪಷ್ಟ ಪರಿಹಾರ ಘೋಷಣೆಯಾಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಕಬ್ಬು ಬೆಳೆಗಾರರು ಹೋರಾಟ ಮುಂದುವರೆಸಿದ್ದಾರೆ.

ಹತ್ತರಗಿ ಟೋಲ್ ಬಳಿ ಹಾಗೂ ಬೆಳಗಾವಿಯ ವಿವಿಧ ಭಾಗಗಳಲ್ಲಿ ರೈತರು ‘ಜೈಲ್ ಭರೋ’ ಚಳವಳಿ ಮತ್ತು ಪ್ರತಿಭಟನೆ ನಡೆಸುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ಆಯಾ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮತ್ತು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಆದಾಗ್ಯೂ ಇಂದು ಬೆಳಿಗ್ಗೆಯಿಂದಲೇ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಹೋರಾಟ ತೀವ್ರಗೊಂಡಿದ್ದು, ಬೆಳಗಾವಿ ನಗರದತ್ತ ಧಾವಿಸುತ್ತಿದ್ದ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ತಡೆಯಲು ಯತ್ನಿಸಿದ್ದಾರೆ.

ಬೆಳಗಾವಿ ನಗರಕ್ಕೆ ಪ್ರವೇಶಿಸಲು ಪೊಲೀಸರು ಬಿಟ್ಟಿಲ್ಲ. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆದಿದೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ರೈತ ಮುಖಂಡ ಚೂನಪ್ಪ ಪೂಜಾರಿ ಹಾಗೂ ಹಲವರನ್ನು ವಶಕ್ಕೆ ಪಡೆದಿದ್ದಾರೆ.

Related Articles

Back to top button