Kannada NewsLatest

ಬೆಳಗಾವಿ ನಗರದ ನೀರಿನ ಸಮಸ್ಯೆಗೆ ಪರಿಹಾರ ಯಾವಾಗ ?

ಪ್ರಗತಿ ವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಮಹಾನಗರದಾದ್ಯಂತ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ನೀರಿನ ಮೂಲಗಳು ಹೇರಳವಾಗಿದ್ದರೂ ಪೂರೈಕೆಯ ವ್ಯವಸ್ಥೆಯ ಲೋಪದಿಂದ ಜನರಿಗೆ ನೀರು ಸಿಗದಂತಾಗಿದೆ. ಬೇಸಿಗೆ ಶುರುವಾಗಿದ್ದು ನೀರಿನ ಬೇಡಿಕೆ ಹೆಚ್ಚಾದರೂ ಸಮಸ್ಯೆ ಬಗೆಹರಿಯದ ಕಾರಣ ಜನ ಮಹಾನಗರ ಪಾಲಿಕೆ ಮತ್ತು ಖಾಸಗಿ ಕಂಪನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕಳೆದ ೨-೩ ವರ್ಷಗಳ ಹಿಂದಿನವರೆಗೂ ಮಹಾನಗರಪಾಲಿಕೆಯ ವತಿಯಿಂದ ನೀರು ಬಿಡಲಾಗುತ್ತಿತ್ತು. ಬಳಿಕ ೨೪X೭ ನೀರು ಪೂರೈಕೆ ಮಾಡುವ ಸಲುವಾಗಿ ಯೋಜನೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಯಿತು. ಅಲ್ಲಿಂದ ನಗರದ ವಿವಿಧ ಬಡಾವಣೆಗಳಲ್ಲಿ ಶುರುವಾರ ನೀರಿನ ಸಮಸ್ಯೆ ಮೂರು ವರ್ಷ ಕಳೆಯುತ್ತ ಬಂದರೂ ಬಗೆ ಹರಿದಿಲ್ಲ.

ಮೂರು ತಿಂಗಳ ಹಿಂದೆ ವಾಲ್‌ಮನ್‌ಗಳ ಮುಷ್ಕರದಿಂದಾಗಿ ೨೦-೨೫ ದಿನಗಳವರೆಗೂ ನಗರದ ಬಹುತೇಕ ಬಡಾವಣೆಗಳಿಗೆ ನೀರು ಪೂರೈಕೆಯಾಗದೆ ಜನ ತತ್ತರಿಸಿದ್ದರು. ಆ ಬಳಿಕ ಆಗಾಗ ತಾಂತ್ರಿಕ ದೋಷ, ಮೋಟರ್ ಸುಟ್ಟಿರುವ ನೆಪ ಹೇಳುತ್ತ ನೀರು ಬಿಡದೆ ಖಾಸಗಿ ಕಂಪನಿಯವರು ಸತಾಯಿಸುತ್ತಿದ್ದಾರೆ ಎಂಬುದು ನಗರದ ನಿವಾಸಿಗಳ ಆರೋಪವಾಗಿದೆ.

ಪ್ರತಿಭಟನೆಗಳು, ಎಚ್ಚರಿಕೆಗೂ ಕಿವಿಗೊಡದ ಜಡತ್ವ:

ನಗರದ ನೆಹರು ನಗರ, ರಾಮನಗರ, ಸುಭಾಷ್ ನಗರ, ಬಸವ ಕಾಲೋನಿ, ವೈಭವ ನಗರ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ೧೦-೧೫ ದಿನಗಳಾದರೂ ನೀರು ಬಿಡದ ಕಾರಣ ನೀರಿಗಾಗಿ ಹಾಹಾಕಾರ ಬುಗಿಲೆದ್ದಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಮತ್ತು ಉತ್ತರ ಕ್ಷೇತ್ರದ ಶಾಸಕ ಅನೀಲ್ ಬೆನಕೆ ಅವರು ನೀರು ಪೂರೈಕೆ ಗುತ್ತಿಗೆ ಪಡೆದಿರುವ ಎಲ್‌ಎಂಡ್‌ಟಿ ಕಂಪನಿ ಹಾಗೂ ಮಹಾನಗರ ಪಾಲಿಕೆ ಅಕಾರಿಗಳ ಸಭೆ ಕರೆದು ಕಡಕ್ ಎಚ್ಚರಿಕೆ ನೀಡಿದ್ದರೂ ಏನೂ ಪರಿಣಾಮ ಬೀರಿಲ್ಲ. ಮಾ.೨೮ರಂದು ಸುಭಾಷ್ ನಗರ ನೆಹರು ನಗರ ಮೊದಲಾದ ಬಡಾವಣೆಗಳ ಜನ ಪಾಲಿಕೆ ಎದುರು ಮುಷ್ಕರ ನಡೆಸಿ, ಬಳಿಕ ಅಕಾರಿಗಳ ಸಭೆ ಕರೆದು ಎಚ್ಚರಿಕೆ ನೀಡಲಾಗಿತ್ತು. ಆದರೆ ನೀರು ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಕಳೆದ ೧೫ ದಿನಗಳಿಂದ ಮಹಾನಗರ ಪಾಲಿಕೆಯಿಂದ ನೀರು ಪೂರೈಕೆಯಾಗದ ಕಾರಣ ಬಸವ ಕಾಲೋನಿ, ವೈಭವ ನಗರ ಮೊದಲಾದ ಬಡಾವಣೆಗಳ ಮಹಿಳೆಯರು ಗುರುವಾರ ಅಕ್ಷರಶಃ ರಸ್ತೆಗಿಳಿದು ಪ್ರತಿಭಟನೆ ನಡೆಸಿ ನಗರದ ನೀರು ಪೂರೈಕೆ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿರುವ ಖಾಸಗಿ ಕಂಪನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಕಾಲಿ ಕೊಡಗಳನ್ನು ಮುಂದಿಟ್ಟು ಖಾಸಗಿ ಕಂಪನಿಯ ವಿರುದ್ಧ ಘೋಷಣೆ ಕೂಗಿದ ಮಹಿಳೆಯರು ಕಳೆದ ೧೫ ದಿನಗಳಿಂದ ನೀರು ಪೂರೈಕೆಯಾಗದೆ ಸಂಕಷ್ಟವಾಗಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಬಸವ ಕಾಲೋನಿ ನಿವಾಸಿ ಉಮಾ ಕರ್ಜಗಿಮಠ ಮಾತನಾಡಿ, ಕಳೆದ ೧೫ ದಿನಗಳಿಂದ ನಮ್ಮ ಬಡಾವಣೆಗೆ ನೀರು ಪೂರೈಕೆ ಆಗಿಲ್ಲ. ಮಹಾನಗರ ಪಾಲಿಕೆ ಅಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಖಾಸಗಿ ಕಂಪನಿಗೂ ಮನವಿ ಪತ್ರ ಕಳಿಸಿದ್ದೇವೆ. ನಮ್ಮ ಮನವಿಗೆ ಯಾವುದೇ ಸ್ಪಂದನೆ ಇಲ್ಲ. ೨೪*೭ ನೀರು ಪೂರೈಕೆ ಮಾಡುವುದಾಗಿ ಹೇಳಿ ಖಾಸಗಿ ಕಂಪನಿಗೆ ಗುತ್ತಿಗೆ ಕೊಟ್ಟಿದ್ದಾರೆ. ಈಗ ೨೪ ದಿನಕ್ಕೊಮ್ಮೆ ನೀರು ಬರುವಂತಾಗಿದೆ ಆರೋಪಿಸಿದರು.

ಮಾತನಾಡಿ,೨೦೦೪ರಿಂದ ಕಳೆದ ೨ ವರ್ಷದ ಹಿಂದಿನವರೆಗೂ ನೀರಿನ ಸಮಸ್ಯೆ ಆಗಿರಲಿಲ್ಲ. ಕಳೆದ ೨ ವರ್ಷಗಳಿಂದ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಜಿಲ್ಲಾಧಿಕಾರಿ ಮತ್ತು ಸಂಬAಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಬೇಕು ಎಂದು ಬಸವ ಕಾಲೋನಿ ನಿವಾಸಿಗಳ ಸಂಘದ ಅಧ್ಯಕ್ಷ ಕಲ್ಲಪ್ಪ ಯಲ್ಲಪ್ಪ ಗಾಡಿಗೇರ ಒತ್ತಾಯಿಸಿದ್ದಾರೆ.

ನಗರದಲ್ಲಿ ನೀರು ಪೂರೈಕೆಯಲ್ಲಿ ನಿರಂತರ ವ್ಯತ್ಯಯವಾಗುತ್ತಿದ್ದು ಈ ಸಮಸ್ಯೆಗೆ ಪರಿಹಾರ ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕರವೇ ಆಟೋ ಘಟಕದ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button