*9 ದಿನಗಳಲ್ಲಿ 41.20 ಗಂಟೆ ಕಲಾಪ; 9 ಶಾಸಕರು ಅನುಮತಿ ಪಡೆಯದೆ ಗೈರು: ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದ ವಿಧಾನ ಸಭೆಯ ಸಭಾಂಗಣದಲ್ಲಿ 15ನೇ ವಿಧಾನ ಸಭೆಯ 14ನೇ ಅಧಿವೇಶನವು ಡಿಸೆಂಬರ್ 19 ರಿಂದ 29 ರವರೆಗೆ 09 ದಿನಗಳ ಕಾಲ ನಡೆದಿದ್ದು, ಸುಮಾರು 41 ಗಂಟೆ 20 ನಿಮಿಷಗಳ ಕಾಲ ಕಾರ್ಯಕಲಾಪ ನಡೆಸಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.19 ರಿಂದ ಒಂಭತ್ತು ದಿನಗಳ ಕಾಲ ಜರುಗಿದ ಚಳಿಗಾಲ ಅಧಿವೇಶನ ಕಾರ್ಯಕಲಾಪಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ (ಡಿ.30) ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ವಿಧಾನ ಪರಿಷತ್, ವಿಧಾನದ ಸಭೆಯ ಕಲಾಪದಲ್ಲಿ ಉತ್ತಮ ಸದನ ಚರ್ಚೆಗಳು ನಡೆದವು. ಇದಕ್ಕೆ ಸಹಕರಿಸಿದ ಜಿಲ್ಲಾಡಳಿತ, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಹಾಗೂ ಮಧ್ಯಮ ಪ್ರತಿನಿಧಿಗಳಿಗೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ ತಿಳಿಸಿದರು.
ಇತ್ತೀಚೆಗೆ ನಿಧನ ಹೊಂದಿದ ಗಣ್ಯರುಗಳಿಗೆ ಸಂತಾಪ ಸೂಚನಾ ನಿರ್ಣಯವನ್ನ ಮಂಡಿಸಿ,ಆಂಗೀಕರಿಸಲಾಗಿದೆ. ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ.
ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ ಮಹಾನಗರ ಪಾಲಿಕೆಗಳಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ (ಹಂತ-III)ರ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿ ಮತ್ತು 2021-22ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸಿನ ಲೆಕ್ಕಗಳ (ಸಂಪುಟ I ಮತ್ತು II)ನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಹೇಳಿದರು.
2021-22ನೇ ಸಾಲಿನ ವಿಧಾನಮಂಡಲದ ವಿವಿಧ ಜಂಟಿ ಸಮಿತಿಗಳು ಮತ್ತು ವಿಧಾನಸಭೆಯ ವಿವಿಧ ಸಮಿತಿಗಳನ್ನು ಪುನರ್‌ರಚನೆ ಮಾಡಲು ಸದನವು ಮಾನ್ಯ ಸಭಾಧ್ಯಕ್ಷರವರಿಗೆ ಡಿಸೆಂಬರ್ 27, 2022 ರಂದು ಅಧಿಕಾರ ನೀಡಲಾಗಿರುತ್ತದೆ. ಒಂದು ಹಕ್ಕುಚ್ಯುತಿ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದ್ದು, ಈ ಬಗ್ಗೆ ಚರ್ಚಿಸಿ ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.
ಸದನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2022-23ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತು ಹಾಗೂ 2022-23ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಡಿಸೆಂಬರ್ 26,2022 ರಂದು ಮಂಡಿಸಿದ್ದು, ಡಿಸೆಂಬರ್ 29,2022 ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ.
2021ನೇ ಸಾಲಿನ ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಹಿಂಪಡೆಯಲಾಗಿದೆ.
ಈ ಅಧಿವೇಶನದಲ್ಲಿ 12 ವಿಧೇಯಕಗಳನ್ನು ಮಂಡಿಸಲಾಗಿದ್ದು, ಕಳೆದ ಅಧಿವೇಶನದಲ್ಲಿ ಬಾಕಿ ಇದ್ದ 0) ವಿಧೇಯಕ, ವಿಧಾನ ಪರಿಷತ್ತಿನಿಂದ. ಅ೦ಗೀಕಾರವಾದ ರೂಪದಲ್ಲಿರುವ 02 ವಿಧೇಯಕಗಳು ಹಾಗೂ ಧನಯೋಗ ವಿಧೇಯಕವೂ ಸೇರಿದಂತೆ ಒಟ್ಟು 09 ವಿಧೇಯಕಗಳನ್ನು ಅಂಗೀಕರಿಸಲಾಗಿದೆ ಎಂದು ಹೇಳಿದರು.
ನಿಯಮ 60 ರಡಿಯಲ್ಲಿ ನೀಡಿದ ನಿಲುವಳಿ ಸೂಚನೆಗಳನ್ನು, ನಿಯಮ 69 ಕ್ಕೆ. ಪರಿವರ್ತಿಸಿರುವುದನ್ನು ಸೇರಿಸಿ ಒಟ್ಟು 17 ಸೂಚನೆಗಳನ್ನು ನಿಯಮ 69 ರಡಿಯಲ್ಲಿ ಸ್ವೀಕರಿಸಿದ್ದು, 05 ಸೂಚನೆಗಳನ್ನು ನಿಯಮ 69 ರಡಿಯಲ್ಲಿ ಚರ್ಚಿಸಲಾಗಿರುತ್ತದೆ.
ಮಹಾರಾಷ್ಟ್ರವು ಅನಾವಶ್ಯಕವಾಗಿ ಸೃಷ್ಟಿಸುವ ಗಡಿ ವಿವಾದವನ್ನು ಖಂಡಿಸಿ ರಾಜ್ಯದ ಹಿತರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ಸದನವು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿಶೇಷ ಚರ್ಚೆ ನಡೆಸಲಾಗಿದೆ. ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಸೇರಿದಂತೆ ವಿವಿಧ ಸಮಿತಿಗಳ 08 ವರದಿಗಳನ್ನು ಸದನದಲ್ಲಿ ಮಂಡಿಸಲಾಗಿರುತ್ತದೆ. ಸಭೆಯ ಮುಂದಿಡಲಾದ ಕಾಗದ ಪತ್ರಗಳ 1, 2 ಮತ್ತು 3ನೇ ಪಟ್ಟಿಯಿಂದ 24 ಅಧಿಸೂಚನೆಗಳು, 01 ಅಧ್ಯಾದೇಶ. 106 ವಾರ್ಷಿಕ ವರದಿಗಳು ಹಾಗೂ 122 ಲೆಕ್ಕಪರಿಶೋಧನಾ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿರುತ್ತದೆ ಎಂದು ಹೇಳಿದರು.
ಒಟ್ಟು 2125 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 146 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 1923 ಪ್ರಶ್ನೆಗಳ ಪೈಕಿ 1614 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ.
ನಿಯಮ 351 ರಡಿಯಲ್ಲಿ 160 ಸೂಚನೆಗಳನ್ನು ಅಂಗೀಕರಿಸಿದ್ದು, 101 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸಳೆಯುವ 289 ಸೂಚನೆಗಳ ಪೈಕಿ 85 ಸೂಚನೆಗಳನ್ನು ಚರ್ಚಿಸಲಾಗಿದೆ ಮಂಡಿಸಲಾಗಿದೆ. ಒಟ್ಟಾರೆಯಾಗಿ 190 ಸೂಚನೆಗಳಿಗೆ ಉತ್ತರವನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 40 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸುವರ್ಣ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ವಿಶ್ವಗುರು ಬಸವಣ್ಣ, ಮಹಾತ್ಮಾ ಗಾಂಧೀಜಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಭಾಯಿ ಪಟೇಲ್, ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ವೀರ್ ಸಾವರ್ಕರ್ ಇವರುಗಳ ಭಾವಚಿತ್ರಗಳನ್ನು 19.12.2022 ರಂದು ಅನಾವರಣಗೊಳಿಸಲಾಗಿದೆ ಹಾಗೂ 29.12.2022 ರಂದು ಸುವರ್ಣ ವಿಧಾನಸೌಧದ ಆವರಣದಲ್ಲಿ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿ ಇವರುಗಳ ಪ್ರತಿಮೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಮಾಡಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಸದನ ನಡೆಸಲು ಸಹಕರಿಸಿದ ಸಭಾ ನಾಯಕರಾದ ಮುಖ್ಯಮಂತ್ರಿಯವರಿಗೆ, ವಿರೋಧ ಪಕ್ಷದ ನಾಯಕರಿಗೆ ಸಚಿವ ಸಂಪುಟದ ಸದಸ್ಯರಿಗೆ, ಸರ್ಕಾರಿ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ, ಎಲ್ಲಾ ಸದಸ್ಯರುಗಳಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಇಲಾಖಾ ಮುಖ್ಯಸ್ಥರು, ಅಧಿಕಾರಿ ಸಿಬ್ಬಂದಿಯವರಿಗೆ ಬೆಳಗಾವಿಯಲ್ಲಿ ವಸತಿ ಮತ್ತು ಸಾರಿಗೆ ವ್ಯವಸ್ಥೆ ಮಾಡಿಕೊಟ್ಟು ಶಾಸಕರ ಸೌಕರ್ಯಕ್ಕೆ ನಿರಂತರವಾಗಿ ಪ್ರಯತ್ನಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಬೆಳಗಾವಿ ಜಿಲ್ಲಾಡಳಿತದವರಿಗೆ ಹಾಗೂ ಕಾನೂನು ಸುವ್ಯವಸ್ಥೆಯ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಿದ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗೂ ವಿಧಾನಸಭೆ ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತರಾದ ಎಂ. ಬಿ. ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಹೆಚ್.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
*ಬಿಜೆಪಿಯವರು ರಾಜಕೀಯವಾಗಿ ಚಾಕೊಲೇಟ್ ನೀಡುವ ಕೆಲಸ ಮಾಡುತ್ತಿದ್ದಾರೆ; ಡಿ.ಕೆ.ಶಿವಕುಮಾರ್ ವಾಗ್ದಾಳಿ*
https://pragati.taskdun.com/d-k-shivakumarhublikrishna-meldanderesarvation/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ