Karnataka NewsLatest

ಬೆಳಗಾವಿ ವಿಭಾಗ: ಮೇ 4ರಂದು 17.94 ಕೋಟಿ ರೂ. ಮದ್ಯ ಮಾರಾಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಬೆಳಗಾವಿ ವಿಭಾಗದಲ್ಲಿ ಮೇ 4ರಂದು ಒಟ್ಟಾರೆ 3,79,757 ಲೀಟರ್ ಮದ್ಯ ಹಾಗೂ 99,857 ಲೀಟರ್ ಬಿಯರ್ ಮಾರಾಟವಾಗಿದೆ. ಇದರ ಒಟ್ಟಾರೆ ಅಂದಾಜು ಮೌಲ್ಯ 17.94 ಕೋಟಿ ರೂಪಾಯಿಗಳಾಗಿರುತ್ತದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೆಳಗಾವಿ ವಿಭಾಗದಲ್ಲಿ ಕೆ.ಎಸ್.ಬಿ.ಸಿ.ಎಲ್, ಡಿಪೋಗಳಲ್ಲಿ ಸಾಕಷ್ಟು ಪ್ರಮಾಣದ ವಿವಿಧ ಬ್ರಾಂಡಗಳ ಮದ್ಯದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ ಎಂದು ಅಬಕಾರಿ ಜಂಟಿ ಆಯುಕ್ತರಾದ ಡಾ.ವೈ.ಮಂಜುನಾಥ ಅವರು ತಿಳಿಸಿದ್ದಾರೆ.
ಅಗತ್ಯವಿರುವಷ್ಟು ಮದ್ಯವನ್ನು ಸಿ.ಎಲ್-2 ಮತ್ತು ಎಂ.ಎಸ್.ಐ.ಎಲ್ ಸಂಸ್ಥೆಯ ಸಿಎಲ್ 11(ಸಿ) ಮದ್ಯದಂಗಡಿಗಳಿಂದ ಮಾರಾಟ ಮಾಡಲಾಗುವುದು. ಗ್ರಾಹಕರು ಮದ್ಯವನ್ನು ಖರೀದಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.
       ಮಾಸ್ಕ್ ಧರಿಸದೇ ಇದ್ದಲ್ಲಿ ಅಂತಹ ಗ್ರಾಹಕರಿಗೆ ಮದ್ಯವನ್ನು ನೀಡಲಾಗುವುದಿಲ್ಲ. ಇದರ ಜೊತೆಗೆ ಗ್ರಾಹಕರು  ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕೂಡ ಪಾಲಿಸಬೇಕಾಗುತ್ತದೆ ಮತ್ತು ಮದ್ಯದಂಗಡಿಗಳ ಹತ್ತಿರ ಇಡಲಾದ ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಉಪಯೋಗಿಸಲು ಮನವಿ ಮಾಡಲಾಗಿದೆ.
       4ನೇ ಮೇ 2020 ರ ದಿನಾಂಕದಂದು ಮದ್ಯ ಖರೀದಿಸಲು ಇದ್ದಂತಹ ಒತ್ತಡ ಮತ್ತು ಬೇಡಿಕೆ 5 ನೇ ಮೇ 2020 ರ ದಿನಾಂಕದಂದು ಕಡಿಮೆಯಾಗಿರುತ್ತದೆ.
       ಗ್ರಾಹಕರು ಮದ್ಯ ದೊರೆಯುವುದಿಲ್ಲವೆಂಬ ಆತಂಕಕ್ಕೆ ಒಳಗಾಗಬಾರದು. ಪ್ರತಿದಿನ ಮದ್ಯ ಮಾರಾಟದ ಸಮಯ ಬೆಳಗ್ಗೆ 9 ರಿಂದ ಸಾಯಂಕಾಲ 7 ಗಂಟೆಯವರೆಗೆ ಇರುತ್ತದೆ. ಮದ್ಯ ಸಿಗುವುದಿಲ್ಲವೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ನಂಬಬಾರದು.
 ಅಬಕಾರಿ ದಾಳಿ-2.55 ಕೋಟಿ ಮೌಲ್ಯದ ಮದ್ಯ ಹಾಗೂ ಸಾಮಗ್ರಿ ವಶ:
       ಕೋವಿಡ್-19 ನಿಮಿತ್ಯ ಜಾರಿಯಾದ ಲಾಕ್‍ಡೌನ್ ಅವಧಿಯಲ್ಲಿ ದಿನಾಂಕ : 24-03-2020 ರಿಂದ 03-05-2020 ರ ವರೆಗೆ ಬೆಳಗಾವಿ ವಿಭಾಗದ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟ, ವಿಜಯಪೂರ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ 3,340 ಅಬಕಾರಿ ದಾಳಿಗಳನ್ನು ನಡೆಸಿ 404 ಪ್ರಕರಣಗಳನ್ನು ದಾಖಲಿಸಿ 185 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.
       ಈ ಸಂಬಂಧದಲ್ಲಿ 17,887 ಲೀಟರ್ ಮದ್ಯ, 106 ಲೀಟರ್ ಹೊರರಾಜ್ಯದ ಮದ್ಯ  14,118 ಬಾಟಲ್ ಬಿಯರ್ 68 ಲೀಟರ್ ಸೇಂಧಿ, 80ಲೀಟರ್ ಸಂತ್ರಾ, 98 ಲೀಟರ್ ಕಾಜು ಫೆನಿ, 2.5 ಲೀಟರ್ ನೀರು ಮಿಶ್ರಿತ ಮದ್ಯಸಾರಾಯಿ, 3,613 ಕಳ್ಳಭಟ್ಟಿ ಸಾರಾಯಿ, 4,825 ಬೆಲ್ಲದ ಕೊಳೆ, 26.84 ಲೀಟರ್ ವೈನ್ ಹಾಗೂ 268 ದ್ವಿಚಕ್ರ ವಾಹನಗಳು ಹಾಗೂ 16 ನಾಲ್ಕು ಚಕ್ರಗಳ ವಾಹನಗಳನ್ನು ಜಪ್ತುಪಡಿಸಿಕೊಳ್ಳಲಾಗಿದೆ.
       ಜಪ್ತಿ ಮಾಡಲಾಗಿರುವ ಎಲ್ಲ ಅಬಕಾರಿ ವಸ್ತುಗಳ ಮೌಲ್ಯ 1.46 ಕೋಟಿ ರೂಪಾಯಿ ಹಾಗೂ ಜಪ್ತು ಪಡಿಸಿದ ವಾಹನಗಳ ಅಂದಾಜು ಮೌಲ್ಯ 1.90 ಕೋಟಿ ರೂಪಾಯಿಗಳಾಗಿದ್ದು, ಒಟ್ಟು ಮೌಲ್ಯ 2.55 ಕೋಟಿ ರೂಪಾಯಿಗಳಾಗಿರುತ್ತದೆ ಎಂದು ಅಬಕಾರಿ ಜಂಟಿ ಆಯುಕ್ತರಾದ ಡಾ.ವೈ.ಮಂಜುನಾಥ ಅವರು ತಿಳಿಸಿದ್ದಾರೆ.
       ಬೆಳಗಾವಿ ಜಿಲ್ಲೆಯಲ್ಲಿ ಅಬಕಾರಿ ಉಪ ಆಯುಕ್ತರಾದ ಬಸವರಾಜ ನೇತೃತ್ವದಲ್ಲಿ ಎಲ್ಲ ಅಬಕಾರಿ  ಸಿಬ್ಬಂದಿಯವರು ಅತ್ಯುತ್ತಮವಾಗಿ ತನಿಖಾ ಚಟುವಟಿಕೆಗಳನ್ನು ನಿರ್ವಹಿಸಿ ಸಾಕಷ್ಟು ಪ್ರಮಾಣದ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ .
       ಆದ್ದರಿಂದ ಲಾಕ್‍ಡೌನ್ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬೆಳಗಾವಿ ವಿಭಾಗದ ಎಲ್ಲ ಅಬಕಾರಿ ಉಪ ಆಯುಕ್ತರು ಹಾಗೂ ಎಲ್ಲ ಅಬಕಾರಿ ಸಿಬ್ಬಂದಿಯವರಿಗೆ ಅಬಕಾರಿ ಜಂಟಿ ಆಯುಕ್ತರಾದ ಡಾ. ವೈ  ಮಂಜುನಾಥ ಇವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button