ಬೆಳಗಾವಿ ಲೋಕಸಭೆ ಚುನಾವಣೆ: ಫೀಲ್ಡಿಗಿಳಿದ ಬಿಜೆಪಿ ಚಾಣಕ್ಯ -ಆಕಾಂಕ್ಷಿಗಳ ಪಟ್ಟಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರದ ಸಚಿವರಾಗಿದ್ದ ಸುರೇಶ ಅಂಗಡಿಯವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ತಯಾರಿ ಜೋರಾಗಿದೆ.
ಬಹುತೇಕ ಫೆಬ್ರವರಿ ಮಧ್ಯಭಾಗದಲ್ಲಿ ಚುನಾವಣೆ ನಡೆಯುವುದು ನಿಶ್ಚಿತ. ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆ ತಯಾರಿಯನ್ನು ಜೋರಾಗಿ ಆರಂಭಿಸಿದೆ. 2004ಕ್ಕಿಂತ ಮೊದಲು ಬೆಳಗಾವಿ ಕ್ಷೇತ್ರ ಕಾಂಗ್ರೆಸ್ ಕೈಯಲ್ಲಿತ್ತು. 2004ರಿಂದ ಸತತವಾಗಿ 4 ಬಾರಿ ಸುರೇಶ ಅಂಗಡಿ ಗೆಲುವು ಸಾಧಿಸಿದ್ದರು.
ಸುರೇಶ ಅಂಗಡಿ ಕೊರೋನಾದಿಂದಾಗಿ 2020ರ ಸೆಪ್ಟಂಬರ್ 23ರಂದು ನಿಧನರಾಗಿದ್ದಾರೆ. ಅಲ್ಲಿಂದ 6 ತಿಂಗಳೊಳಗಾಗಿ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗಾಗಿ ಸಮಿತಿ ರಚನೆ ಮಾಡಿದ್ದು ಈಗಾಗಲೆ 2 ಬಾರಿ ಸಭೆ ನಡೆಸಿದೆ. 3 -4 ಜನರು ಸ್ಪರ್ಧಿಸುವ ಆಸಕ್ತಿ ತೋರಿಸಿದ್ದು, ಇನ್ನೂ ಅಭ್ಯರ್ಥಿ ಅಂತಿಮಗೊಳಿಸಿಲ್ಲ. ಕ್ಷೇತ್ರವನ್ನು ಮರಳಿ ಪಡೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಲಿದೆ.
ಬಿಜೆಪಿಯಲ್ಲಿ ಎರಡು ಡಜನ್ ಗಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಕೇಂದ್ರ ಬಿಜೆಪಿ ಈಗಾಗಲೆ 3 ರೀತಿಯ ಸಮೀಕ್ಷೆ ನಡೆಸಿದ್ದು (ಇಲ್ಲಿ ಕ್ಲಿಕ್ ಮಾಡಿ – ಬೆಳಗಾವಿ ಲೋಕಸಭೆ ಚುನಾವಣೆ: ದೆಹಲಿ ಸೇರಿದ ಬಿಜೆಪಿಯ ಮೂರು ಸಮೀಕ್ಷೆ ವರದಿಗಳು) ಅವುಗಳನ್ನಾಧರಿಸಿ ಕೇಂದ್ರ ಸಮಿತಿ ಅಭ್ಯರ್ಥಿ ಆಯ್ಕೆ ಮಾಡಲಿದೆ.
ಅಮಿತ್ ಶಾ ನೇರ ಫೀಲ್ಡ್ ಗೆ
ಇದು ಉಪಚುನಾವಣೆಯಾಗಿರುವುದರಿಂದ ಎಲ್ಲ ನಾಯಕರೂ ಬಿಡುವು ಹೊಂದಿದ್ದಾರೆ. ಹಾಗಾಗಿ ಬೆಳಗಾವಿ ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಬಹುತೇಕ ನಾಯಕರು ಬೆಳಗಾವಿಯಲ್ಲಿ ಬೀಡುಬಿಡು ಸಾಧ್ಯತೆ ಇದೆ. ಬೆಳಗಾವಿ ಚುನಾವಣೆ ಕಣ ರಂಗೇರಲಿದೆ.
ವಿಶೇಷವೆಂದರೆ ಬಿಜೆಪಿ ಈಗಾಗಲೆ ಬೆಳಗಾವಿಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಚುನಾವಣೆ ಸಿದ್ಧತೆಗೆ ಪರೋಕ್ಷ ಚಾಲನೆ ನೀಡಿದೆ. ಇದೀಗ ಜ.9ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದು ಅವರು ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಇದು ಕೂಡ ಚುನಾವಣೆ ತಂತ್ರದ ಭಾಗವೆನ್ನಲಾಗುತ್ತಿದೆ.
ಇದರ ಜೊತೆಗೆ, ಬಿಜೆಪಿಯ ಚಾಣಕ್ಯ ಎಂದೇ ಹೆಸರಾಗಿರುವ ಮಾಜಿ ರಾಷ್ಟ್ರೀಯ ಅಧ್ಯಕ್ಷ, ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿ ಲೋಕಸಭೆ ಉಪಚುನಾವಣೆ ಕಣಕ್ಕಿಳಿದಿದ್ದಾರೆ. ತಮ್ಮದೇ ಟೀಮ್ ಕಳಿಸಿ ಸಮೀಕ್ಷೆ ವರದಿ ತರಿಸಿಕೊಂಡಿರುವ ಅಮಿತ್ ಶಾ, ಜನೆವರಿ 16ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ( ಜ.16ರಂದು ಅಮಿತ್ ಶಾ ಬೆಳಗಾವಿಗೆ ) ಅಂದು ಅವರು ಕಾರ್ಯಕರ್ತರ ಸಮಾವೇಶ ನಡೆಸುವ ಸಾಧ್ಯತೆ ಇದೆ.
ಅಮಿತ್ ಶಾ ಅವರೇ ನೇರವಾಗಿ ಚುನಾವಣೆ ಕಣಕ್ಕೆ, ಅದೂ ಚುನಾವಣೆ ಇನ್ನೂ ಘೋಷಣೆಯಾಗುವ ಮುನ್ನವೇ ಇಳಿದಿರುವುದು ಕುತೂಹಲ ಮೂಡಿಸಿದೆ. ಬಿಜೆಪಿಯಿಂದ ಮೂವರು ಮಾಜಿ ಸಂಸದರು ಸೇರಿದಂತೆ 25ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಸುರೇಶ ಅಂಗಡಿ ಅವರ ಕುಟುಂಬಕ್ಕೇ ಟಿಕೆಟ್ ನೀಡಬೇಕೆನ್ನುವ ಕೂಗೆದ್ದಿದೆ.
ಹಾಗಾಗಿ ಅಮಿತ್ ಶಾ ಸ್ವತಃ ಮುಂದೆ ನಿಂತು ಅಭ್ಯರ್ಥಿ ಆಯ್ಕೆ ಮತ್ತು ಚುನಾವಣೆ ಪ್ರಚಾರ ನಡೆಸುವ ಸಾಧ್ಯತೆ ಇದೆ. ಅಲ್ಲದೆ ಮೂರು ಹೋಳಾಗಿರುವ ಬೆಳಗಾವಿ ಬಿಜೆಪಿ ನಾಯಕರನ್ನೆಲ್ಲ ಚುನಾವಣೆಗಾಗಿ ಒಂದುಗೂಡಿಸಬಹುದು.
ಒಟ್ಟಾರೆ, ಅಮಿತ್ ಶಾ ಬೆಳಗಾವಿ ಭೇಟಿ ಕುತೂಹಲ ಮೂಡಿಸಿದ್ದು, ಚುನಾವಣೆ ಇನ್ನಷ್ಟು ರಂಗು ಪಡೆಯಲಿದೆ.
(ಬಿಜೆಪಿ ಆಕಾಂಕ್ಷಿಗಳು – ಡಾ. ಪ್ರಭಾಕರ ಕೋರೆ, ರಮೇಶ ಕತ್ತಿ, ಅಮರಸಿಂಹ ಪಾಟೀಲ, ಡಾ.ಗಿರೀಶ್ ಸೋನವಾಲ್ಕರ್, ಶಂಕರಗೌಡ ಪಾಟೀಲ, ಡಾ.ಸೋನಾಲಿ ಸರ್ನೋಬತ್, ಶೃದ್ಧಾ ಅಂಗಡಿ, ಎಂ.ಬಿ.ಜಿರಲಿ, ಸಂಜಯ ಪಾಟೀಲ, ಅಮರನಾಥ ಜಾರಕಿಹೊಳಿ, ವೀರೇಶ ಕಿವಡಸಣ್ಣವರ್, ಕಿರಣ ಜಾಧವ, ಡಾ.ರವಿ ಪಾಟೀಲ, ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್, ಮಹಾಂತೇಶ ವಕ್ಕುಂದ, ರಾಜೇಂದ್ರ ಹರಕುಣಿ, ರಾಜು ಟೋಪಣ್ಣವರ್, ಭಾರತಿ ಮಗ್ದುಮ್, ಉಜ್ವಲಾ ಬಡವಣಾಚೆ, ಪಾಂಡುರಂಗ ರಡ್ಡಿ, ದೀಪಾ ಕುಡಚಿ ಇತ್ಯಾದಿ)
ಜ.16ರಂದು ಅಮಿತ್ ಶಾ ಬೆಳಗಾವಿಗೆ – ರಮೇಶ್ ಜಾರಕಿಹೊಳಿ ಮಾಹಿತಿ
ಬೆಳಗಾವಿ ಲೋಕಸಭೆ ಚುನಾವಣೆ: ದೆಹಲಿ ಸೇರಿದ ಬಿಜೆಪಿಯ ಮೂರು ಸಮೀಕ್ಷೆ ವರದಿಗಳು
ಸುರೇಶ ಅಂಗಡಿ ಪುತ್ರಿ, ಹುಬ್ಬಳ್ಳಿ ಸೊಸೆ ಬೆಳಗಾವಿ ಪಾಲಿಟಿಕ್ಸ್ ಗೆ ಎಂಟ್ರಿ – ವೀಡಿಯೋ ಸಹಿತ ವರದಿ
ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ ಜೊತೆ ಚಾಟ್ ಮಾಡುತ್ತಿದ್ದೀರಾ? – ಈ ಸುದ್ದಿ ಓದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ