ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುವ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಟಿಕೆಟ್ ಹಂಚಿಕೆಯಲ್ಲೂ ತೀವ್ರ ಗೊಂದಲ ಕಾಣಿಸಿದೆ. ಬೆಳಗಾವಿ ಉತ್ತರ, ರಾಯಬಾಗ ಮತ್ತು ಗೋಕಾಕ ಕ್ಷೇತ್ರ ಕಾಂಗ್ರೆಸ್ ಗೆ ಕಗ್ಗಂಟಾಗಿದ್ದರೆ, ಅಥಣಿ, ಬೆಳಗಾವಿ ಉತ್ತರ, ಖಾನಾಪುರ, ಬೈಲಹೊಂಗಲ ಕ್ಷೇತ್ರಗಳು ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬೆಳಗಾವಿ ಉತ್ತರದ ಕಾಂಗ್ರೆಸ್ ಟಿಕೆಟ್ ಗೆ ಆಸೀಫ್ (ರಾಜು) ಸೇಠ್ ಮತ್ತು ಅಜೀಂ ಪಟವೇಗಾರ ಮಧ್ಯೆ ಪೈಪೋಟಿ ನಡೆದಿದೆ. ರಾಯಬಾಗದಲ್ಲಿ ಶಂಬು ಕಲ್ಲೋಳ್ಕರ್ ಮತ್ತು ಮಹಾವೀರ್ ಮೋಹಿತೆ ಟಿಕೆಟ್ ಗೆ ಪಟ್ಟು ಹಿಡಿದಿದ್ದಾರೆ. ಗೋಕಾಕದಲ್ಲಿ ಮಹಾಂತೇಶ ಕಡಾಡಿ ಮತ್ತು ಚಂದ್ರಶೇಖರ ಕೊಣ್ಣೂರ್ ಮಧ್ಯೆ ಪೈಪೋಟಿ ಇದೆ.
ಬೈಲಹೊಂಗಲ ಬಿಜೆಪಿ ಟಿಕೆಟ್ ಗೆ ಮಾಜಿ ಸಾಸಕರಾದ ಜಗದೀಶ ಮೆಟಗುಡ್ ಮತ್ತು ವಿಶ್ವನಾಥ ಪಾಟೀಲ ಪಟ್ಟು ಹಿಡಿದಿದ್ದು ಕಗ್ಗಂಟಾಗಿದೆ. ಯಾರಿಗೇ ಕೊಟ್ಟರೂ ಮತ್ತೊಬ್ಬರು ಬಂಡಾಯ ಸಾರುವ ನಿರೀಕ್ಷೆ ಇದೆ.
ಬೆಳಗಾವಿ ಉತ್ತರದಲ್ಲಿ ಹಾಲಿ ಶಾಸಕ ಅನಿಲ ಬೆನಕೆ ಬದಲು ಬೇರೆಯವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ದೊಡ್ಡಮಟ್ಟದಲ್ಲಿ ಬೇಡಿಕೆ ಇದೆ. ಲಿಂಗಾಯತ ಸಮಾಜಕ್ಕೆ ಕೊಡಬೇಕೆನ್ನುವ ಬೇಡಿಕೆ ಒಂದು ಕಡೆಯಾದರೆ, ಮರಾಠಾ ಭಾಷಿಕರಲ್ಲೇ ಬದಲಿ ಅಭ್ಯರ್ಥಿ ನಿಲ್ಲಿಸಬೇಕೆನ್ನುವ ಬೇಡಿಕೆಯೂ ಇದೆ.
ಖಾನಾಪು ಬಿಜೆಪಿಯಲ್ಲಿ 7 ಆಕಾಂಕ್ಷಿಗಳಿದ್ದು ಅವರಲ್ಲಿ ಮೂವರ ಮಧ್ಯೆ ತೀವ್ರ ಪೈಪೋಟಿ ಇದೆ. ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಬಂದಿರುವ ಮಾಜಿ ಶಾಸಕ ಅರವಿಂದ ಪಾಟೀಲ, ಸಹಕಾರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವಿಠ್ಠಲ ಹಲಗೇಕರ್ ಹಾಗೂ ವೈದ್ಯೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಡಾ.ಸೋನಾಲಿ ಸರ್ನೋಬತ್ ಟಿಕೆಟ್ ಗೆ ತೀವ್ರ ಪೈಪೋಟಿ ನಡೆಸಿದ್ದಾರೆ.
ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಲಕ್ಷ್ಮಣ ಸವದಿ ಮತ್ತು ಹಾಲಿ ಶಾಸಕ ಮಹೇಶ ಕುಮಟಳ್ಳಿ ಮಧ್ಯೆ ಪೈಪೋಟಿ ನಡೆದಿದೆ. ಮಹೇಶ ಕುಮಟಳ್ಳಿಗೆ ಟಿಕೆಟ್ ಕೊಡಿಸಲು ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರಯತ್ನ ನಡೆಸಿದ್ದಾರೆ. ಆದರೆ ತಮಗೇ ಟಿಕೆಟ್ ಬೇಕೆಂದು ಸವದಿ ಪಟ್ಟು ಹಿಡಿದಿದ್ದಾರೆ. ಯಾರಿಗೇ ಕೊಟ್ಟರೂ ದೊಡ್ಡಮಟ್ಟದ ಬಂಡಾಯ ಖಚಿತ ಎನ್ನುವ ಸ್ಥಿತಿ ಸಧ್ಯಕ್ಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ