Kannada NewsKarnataka News

ಬೆಳಗಾವಿ ಅಧಿವೇಶನ ಗುರುವಾರ ಮಧ್ಯಾಹ್ನವೇ ಮುಕ್ತಾಯ; ಸಂಜೆ ಸಚಿವ ಸಂಪುಟ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಡಿ.19ರಿಂದ ನಡೆಯುತ್ತಿದ್ದ ಚಳಿಗಾಲದ ಅಧಿವೇಶನ ಗುರುವಾರ ಮಧ್ಯಾಹ್ನ ಅಂತ್ಯವಾಗಲಿದೆ. ಉತ್ತರ ಕರ್ನಾಟಕದ ಎಲ್ಲ ನಿರೀಕ್ಷೆಗಳನ್ನೂ ಹುಸಿಗೊಳಿಸಿ ಗುರುವಾರವೇ ಶಾಸಕರೆಲ್ಲ ಊರಿಗೆ ಮರಳಲಿದ್ದಾರೆ. ಗುರುವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿಗಳು ಸಚಿವಸಂಪುಟ ಸಭೆ ನಡೆಸಲಿದ್ದು, ತೀವ್ರ ಕುತೂಹಲ ಮೂಡಿಸಿದೆ.

 

ಡಿ.19ರಿಂದ 30ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಿಶ್ಚಯಿಸಲಾಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಒಂದು ದಿನ ಮೊದಲೇ ಅಧಿವೇಶನ ಮುಕ್ತಾಯ ಕಾಣುತ್ತಿದೆ. ಆರಂಭದಿಂದಲೂ ಅತ್ಯಂತ ಕಡಿಮೆ ಸಂಖ್ಯೆಯ ಶಾಸಕರ ಉಪಸ್ಥಿತಿಯಲ್ಲೇ ಅಧಿವೇಶನ ನಡೆದುಕೊಂಡು ಬಂದಿತ್ತು. ಯಾವ ವಿಷಯಗಳೂ ಗಂಭೀರವಾಗಿ ಚರ್ಚೆ ಕಾಣಲೇ ಇಲ್ಲ. ಉತ್ತರ ಕರ್ನಾಟಕದ ವಿಷಯಗಳಂತೂ ನಿರೀಕ್ಷೆಯಲ್ಲೇ  ಮುಗಿದುಹೋಯಿತು.

ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ ಶಾ ಶುಕ್ರವಾರ ಮಂಡ್ಯದಲ್ಲಿ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳು ಸೇರಿದಂತೆ ಬಿಜೆಪಿಯ ಸಚಿವರು, ಶಾಸಕರು ಅದರಲ್ಲಿ ಭಾಗವಹಿಸಬೇಕಿರುವುದರಿಂದ ಅಧಿವೇಶನವನ್ನು ಗುರುವಾರವೇ ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು.

ಕಾಂಗ್ರೆಸ್ ಕೂಡ ಶುಕ್ರವಾರ ವಿಜಯಪುರದಲ್ಲಿ ಕೃಷ್ಣೆಗಾಗಿ ಹೋರಾಟ ಹಮ್ಮಿಕೊಂಡಿದೆ. ಹಾಗಾಗಿ ಅಧಿವೇಶನ ಮುಂದುವರಿಸುವ ಆಸಕ್ತಿ ಅವರಿಗೂ ಇರಲಿಲ್ಲ. ಜೆಡಿಎಸ್ ಆರಂಭದಿಂದಲೂ ನಿರ್ಲಕ್ಷ್ಯದಿಂದಲೇ ಕಲಾಪದಲ್ಲಿ ಭಾಗವಹಿಸಿತ್ತು.  ಹಾಗಾಗಿ ಅಧಿವೇಶನವನ್ನು ಇನ್ನೂ ಮುಂದುವರಿಸಿ ಎನ್ನುವವರ ಯಾರೂ ಇರಲಿಲ್ಲ.

ಗುರುವಾರ ಅಧಿವೇಶನ ಮುಕ್ತಾಯವಾಗುವುದನ್ನು ಅರಿತ ಬಹುತೇಕ ಶಾಸಕರು ಬುಧವಾರವೇ ಬೆಳಗಾವಿಯಿಂದ ಕಾಲ್ಕಿತ್ತಿದ್ದಾರೆ. ಗುರುವಾರ ಸದನ ಮತ್ತಷ್ಟು ಬಣಗುಡುವುದು ಖಚಿತ. ಬೆಳಗ್ಗೆ ಮಾತ್ರ ಕಲಾಪ ನಡೆಸಿ ಮಧ್ಯಾಹ್ನಕ್ಕೆ ಎರಡೂ ಕಲಾಪ ಅನಿರ್ಧಿಷ್ಠಾವಧಿ ಮುಂದಕ್ಕೆ ತಳ್ಳಲ್ಪಡುತ್ತದೆ.

ಮಧ್ಯಾಹ್ನ ನಂತರ ಮುಖ್ಯಮಂತ್ರಿಗಳು ಕೆಲವು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, 5 ಗಂಟೆಗೆ ಸಚಿವಸಂಪುಟ ಸಭೆ ನಡೆಸಲಿದ್ದಾರೆ. ಪಂಚಮಸಾಲಿ ಮೀಸಲಾತಿ ಸೇರಿದಂತೆ ಕೆಲವು ಮಹತ್ವದ ವಿಚಾರಗಳು ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ.

ರಾತ್ರಿಯೇ ಮುಖ್ಯಮಂತ್ರಿಗಳು ಬೆಂಗಳೂರಿಗೆ ತೆರಳಲಿದ್ದಾರೆ.

ಪ್ರಗತಿವಾಹಿನಿ ಅಧಿವೇಶನ ಮೊಟಕುಗೊಳ್ಳುವ ಕುರಿತು ಮೊದಲೇ ಪ್ರಕಟಿಸಿತ್ತು… 

*ಒಂದು ದಿನ ಮೊದಲೇ ಚಳಿಗಾಲದ ಅಧಿವೇಶನ ಮುಕ್ತಾಯ?*

https://pragati.taskdun.com/belagaviwinter-sessiondecember-29th/

ಸುವರ್ಣ ಸೌಧದ ಆವಣದಲ್ಲಿ ನಾಳೆ ಚನ್ನಮ್ಮ, ರಾಯಣ್ಣ, ಗಾಂಧೀಜಿ, ಅಂಬೇಡ್ಕರ್ ಪ್ರತಿಮೆಗೆ ಶಂಕುಸ್ಥಾಪನೆ

https://pragati.taskdun.com/foundation-stone-laying-for-statue-of-channamma-rayanna-gandhiji-ambedkar-tomorrow-in-the-courtyard-of-suvarna-soudha/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button