Kannada NewsKarnataka NewsLatest

ಬೆಳಗಾವಿ ಟಿಕೆಟ್: ಸೋಮವಾರದವರೆಗೂ ಸೀಕ್ರೆಟ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ಈಗ ಗಂಭೀರತೆ ಪಡೆದಿದೆ.

ಕಳೆದ ಐದೂವರೆ ತಿಂಗಳಿನಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಸಾಕಷ್ಟು ಊಹಾಪೋಹಗಳೂ ಹರಡಿದ್ದವು. ಈಗಲೂ ಊಹಾಪೋಹ ನಿಂತಿಲ್ಲ. ಕ್ಷಣಕ್ಕೊಬ್ಬರ ಹೆಸರು ಹರಿದಾಡುತ್ತಿದೆ. ಆದರೆ ವಿಷಯ ಹೊರಬೀಳುವುದು ಸೋಮವಾರದ ಹೊತ್ತಿಗೆ.

ಭಾರತಾಯ ಜನತಾಪಾರ್ಟಿಯಿಂದ ಸುಮಾರು 35 ಜನರು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 10 ಹೆಸರು ಗಂಭೀರವಾಗಿಯೇ ಪರಿಗಣಿಸಲ್ಪಟ್ಟಿದೆ. ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯಸಭೆಯ ಮಾಜಿ  ಸದಸ್ಯರಾದ ರಮೇಶ ಕತ್ತಿ, ಡಾ.ಪ್ರಭಾಕರ ಕೋರೆ, ಎಂ.ಬಿ.ಜಿರಲಿ, ಶೃದ್ಧಾ ಶೆಟ್ಟರ್, ಡಾ.ವಿಶ್ವನಾಥ ಪಾಟೀಲ, ಡಾ.ಗಿರೀಶ್ ಸೋನವಾಲ್ಕರ್, ಡಾ.ರವಿ ಪಾಟೀಲ, ಶಂಕರಗೌಡ ಪಾಟೀಲ, ಸಂಜಯ ಪಾಟೀಲ ಮೊದಲಾದವರ ಹೆಸರು ಮೊದಲ ಸಾಲಿನಲ್ಲಿದೆ.

ಆದರೆ ಇದೇ 10 ಹೆಸರಲ್ಲಿ ಅಥವಾ ಇದೇ 35 ಹೆಸರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು ಎನ್ನುವ ನಿಯಮವೇನೂ ಇಲ್ಲ. ಇವರನ್ನೆಲ್ಲ ಬಿಟ್ಟು ಅಚ್ಛರಿಯ ಹೆಸರೂ ಹೊರಗೆ ಬರಬಹುದು. ನಿನ್ನೆ ಗೋಕಾಕದ ಮುರುಘೇಂದ್ರ ಸ್ವಾಮಿಗಳ ಹೆಸರೂ ತೇಲಿ ಬಂದಿತ್ತು. ಸಂಘ ಪರಿವಾರದ ಕೆಲವರ ಹೆಸರು ಆಗಾಗ ಕೇಳಿ ಬರುತ್ತಿದೆ. ಆದರೆ ಈ ಕ್ಷಣದ ಮಟ್ಟಿಗೆ ಹೇಳುವುದಾದರೆ ಎಲ್ಲವೂ ಊಹಾಪೋಹ.

ಶನಿವಾರ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಚರ್ಚೆ ನಡೆದು 2 ಅಥವಾ 3 ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡಲಾಗುತ್ತದೆ. ಇದನ್ನಿಟ್ಟುಕೊಂಡು ಕೇಂದ್ರ ನಾಯಕರು ಭಾನುವಾರ ಇಲ್ಲವೇ ಸೋಮವಾರ ಚರ್ಚಿಸಿ ಅಂತಿಮಗೊಳಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಇದೇ 2 -3 ಹೆಸರಲ್ಲಿ ಕೇಂದ್ರ ಚುನಾವೆ ಸಮಿತಿ ಒಬ್ಬರನ್ನು ಆಯ್ಕೆ ಮಾಡಬೇಕೆಂದೇನೂ ಇಲ್ಲ. ಅವರ ಆಯ್ಕೆ ಬೇರೆಯೇ ಆಗಿರಬಹುದು. ಈಗಾಗಲೆ ಆಯ್ಕೆ ಮಾಡಿಕೊಂಡಿರಲೂಬಹುದು.

ಇನ್ನು ಕಾಂಗ್ರೆಸ್ ನಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಸತೀಶ್ ಜಾರಕಿಹೊಳಿ ಅವರನ್ನೇ ಕಣಕ್ಕಿಳಿಸಬಹುದು. ತಪ್ಪಿದರೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೆಸರಿದೆ. ಬಿಜೆಪಿ ಅಭ್ಯರ್ಥಿ ಘೋಷಣೆಯವರೆಗೂ ಕಾದು ನೋಡಿ ಕಾಂಗ್ರೆಸ್ ತನ್ನ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ. ಸಧ್ಯದ ಮಟ್ಟಿಗೆ ಹೇಳುವುದಾದರೆ ಸೋಮವಾರದವರೆಗೂ ಎರಡೂ ಪಕ್ಷಗಳು ಸೀಕ್ರೆಟ್ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಮಂಗಳವಾರ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button