ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಸಂಭವಿಸಿದ್ದ ಕಾರು ಅಪಘಾತ ದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಅಪಘಾತದ ಹಿಂದೆ ಸಚಿವ ಆರ್. ಅಶೋಕ್ ಪುತ್ರನ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.
ಎರಡು ದಿನಗಳ ಹಿಂದೆ ಬಳ್ಳಾರಿಯ ಮರಿಯಮ್ಮನ ಹಳ್ಳಿಯಲ್ಲಿ ಕಾರು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ರಸ್ತೆ ಮೇಲೆ ನಡೆದು ಹೋಗುತ್ತಿದ್ದ ರವಿನಾಯ್ಕ್, ಸಚಿನ್ ಹೆಸರಿನ ಇಬ್ಬರು ಮೃತಪಟ್ಟಿದ್ದರು. ಈ ವೇಳೆ ಕಾರು ಚಲಾಯಿಸಿದ್ದು ಸಚಿವ ಆರ್ ಅಶೋಕ್ ಮಗ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಪ್ರಕರಣ ಮುಚ್ಚಿ ಹಾಕಲು ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿರುವುದರಿಂದ ಈ ಕುರಿತು ಪೊಲೀಸರೂ ಮೌನವಾಗಿದ್ದಾರೆ ಎನ್ನಲಾಗಿದೆ.
ಅಪಾಘಾತಕ್ಕೀಡಾದ ಕಾರು ನ್ಯಾಷನಲ್ ಪಬ್ಲಿಕ್ ಶಾಲೆ ಹೆಸರಲ್ಲಿ ನೋಂದಣಿಯಾಗಿದೆ. ಫೆ.10 ಮಧ್ಯಾಹ್ನ 3.30ಕ್ಕೆ ಬಳ್ಳಾರಿ ಮರಿಯಮ್ಮನ ಹಳ್ಳಿಯಲ್ಲಿ ವೇಗವಾಗಿ ಬಂದ ಐಷಾರಾಮಿ ಕಾರೊಂದು ಅಪಘಾತಕ್ಕೆ ಈಡಾಗಿತ್ತು. ಈ ವೇಳೆ ರಸ್ತೆ ಮೇಲೆ ಪಾದಾಚಾರಿಗಳಾದ ರವಿನಾಯ್ಕ್, ಸಚಿನ್ ಮೃತಪಟ್ಟಿದ್ದರು. ಘಟನೆ ನಡೆದು ಮೂರು ದಿನಗಳ ನಂತರ ಈ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ರವಿನಾಯ್ಕ್, ಶಿವಕುಮಾರ್, ರಾಕೇಶ್, ಸಚಿನ್, ವರುಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ