ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಹಾತ್ಮಾ ಗಾಂಧೀಜಿ ಜಯಂತಿಯ ನಿಮಿತ್ಯವಾಗಿ ನಗರದ ಕಿರ್ಲೊಸ್ಕರ ರಸ್ತೆಯಲ್ಲಿನ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪಾದಕರ ಸಹಕಾರಿ ಸಂಘಕ್ಕೆ ಭೇಟಿ ನೀಡಿದ ಶಾಸಕ ಅನಿಲ ಬೆನಕೆ ಖಾದಿ ಮತ್ತು ಗ್ರಾಮೋದ್ಯೋಗವನ್ನು ಪ್ರೋತ್ಸಾಹಿಸಿ ಸ್ವದೇಶಿ ವಸ್ತುಗಳನ್ನು ಬಳಸುವಂತೆ ಜನರಲ್ಲಿ ಮನವಿ ಮಾಡಿದರು.
ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿರವರ ೧೫೧ ನೇ ಜಯಂತಿಯನ್ನು ಹಾಗೂ ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಲಾಲ ಬಹದ್ದೂರ ಶಾಸ್ತ್ರಿಜಿ ರವರ ೧೧೬ ನೆ ಜಯಂತಿಯನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದ್ದು, ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇವರ ಕೊಡುಗೆ ಅಪಾರವಾಗಿದೆ. ಮಹಾತ್ಮಾ ಗಾಂಧೀಜಿ ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವದೇಶಿ ಖಾದಿ ಗ್ರಾಮೋದ್ಯೋಗವನ್ನು ಬೆಳೆಸಲು ಚಳುವಳಿಗಳನ್ನು ನಡೆಸಿದ್ದಾರೆ ಎಂದ ಅವರು ಇಂದಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹೆಚ್ಚಿನ ಪ್ರಮಾಣದಲ್ಲಿ ಸ್ವದೇಶಿ ವಸ್ತುಗಳನ್ನು ಬಳಸಲು ಕರೆ ಕೊಟ್ಟಿದ್ದಾರೆ ಎಂದರು.
ಖಾದಿ ಮತ್ತು ಗ್ರಾಮೊದ್ಯೋಗ ಘಟಕಗಳು ಉತ್ಪಾದಿಸುವ ಉತ್ಪನ್ನಗಳು ಪರಿಸರ ಸ್ನೇಹಿ, ನೈಜ ಹಾಗೂ ಆರೋಗ್ಯಕರ ವಸ್ತುಗಳಾಗಿದ್ದು, ಈ ಉತ್ಪನ್ನಗಳು ನಗರ ಪ್ರದೇಶಗಳ ಜನತೆ, ಅದರಲ್ಲಿಯೂ ವಿಶೇಷವಾಗಿ ಯುವ ಜನಾಂಗದ ಆಕರ್ಷಣೆಯಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಖಾದಿ ಮಾರುಕಟ್ಟೆ ಅಭಿವೃಧ್ದಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದ ಕ್ಷೇತ್ರದ ಉದ್ದಿಮೆದಾರರನ್ನು ಹಾಗೂ ಸಂಘ ಸಂಸ್ಥೆಗಳನ್ನು ಉತ್ತೇಜಿಸಲಾಗುತ್ತಿದ್ದು, ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರಿಂದ ಖಾದಿ ಉತ್ಪನ್ನಗಳ ಮಾರುಕಟ್ಟೆಗಾಗಿ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೊದ್ಯೋಗ ಸಹಕಾರಿ ಉತ್ಪಾದಕರ ಸಂಘದ ಅಧ್ಯಕ್ಷರಾದ ಎಸ್. ಬಿ. ಪಾಟೀಲ, ಉಪಾಧ್ಯಕ್ಷರಾದ ಮಹಾದೇವ ತುಕ್ಕಾರ, ಮಹಾಲಿಂಗ ತಂಗಡಗಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ