*ಸರಣಿ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್: ಬಸ್ ಓಡಿಸುತ್ತಿದ್ದಾಗಲೇ ಮೂರ್ಛೆ ಹೋದ ಚಾಲಕ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಶನಿವಾರ ನಡೆದಿದ್ದ ಸರಣಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಬಿಎಂಟಿಸಿ ಎಲೆಕ್ಟ್ರಾನಿಕ್ ಬಸ್ ಡಿಕ್ಕಿ ಹೊಡೆದ ಪರಿಣಾಮ 9 ವಾಹನಗಳ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದ ಸಿಸಿಟಿವಿ ದೃಶ್ಯ ಬಿಡುಗಡೆಯಾಗಿದ್ದು, ಘಟನೆ ಆತಂಕ ಮೂಡಿಸಿದೆ.
ಬಿಎಂಟಿಸಿ ಬಸ್ ಚಾಲಕ ಬಸ್ ಓಡಿಸುತ್ತಿದ್ದಾಗಲೇ ಏಕಾಏಕಿ ಮೂರ್ಛೆ ಹೋಗಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಿಗ್ನಲ್ ನಲ್ಲಿ ನಿಂತಿದ್ದ ವಾಹನಗಳಿಗೆ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಡಿಕ್ಕಿಯಾಗಿತ್ತು. ಅಪಘಾತದ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ಬಸ್ ಚಾಲಕ ಬಸ್ ಓಡಿಸುತ್ತಿದ್ದಾಗಲೇ ಮೂರ್ಛೆ ಹೋಗಿದ್ದು, ಬಸ್ ನಿಯಂತ್ರಣ ಕಳೆದುಕೊಂಡು ವಾಹನಗಳಿಗೆಗುದ್ದಿದೆ.
ಅಪಘಾತದ ಬಳಿಕ ಬಸ್ ಚಾಲಕನನ್ನು ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದು, ಬಸ್ ಒಳಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಅಪಘಾತಕ್ಕೆ ಕಾರಣ ಬಸ್ ಚಾಲಕನ ಅನಾರೋಗ್ಯ ಹಾಗೂ ಆತನಿಗೆ ಮೂರ್ಛೆ ರೋಗ ಬಂದಿದ್ದು ಎಂದು ತುಳಿದುಬಂದಿದೆ. ಬಸ್ ಮುಂದೆ ಚಲಿಸುತ್ತಿದ್ದಂತೆ ಕಂಡಕ್ಟರ್ ಬಸ್ ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ ಆದರೂ ಸಾಧ್ಯವಗದೇ ನಾಲ್ಕು ಕಾರು, ಒಂದು ಬೈಕ್ ಸೇರಿ 9 ವಾಹನಗಳಿಗೆ ಡಿಕ್ಕಿ ಹೊಡೆದು ಬಸ್ ನಿಂತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.