*ಐತಿಹಾಸಿಕ ಬೆಂಗಳೂರು ಕಂಬಳಕ್ಕೆ ಅದ್ಧೂರಿ ಚಾಲನೆ; ಕಂಬಳ ಜೋಡು ಕೆರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕರಾವಳಿಯ ಕಂಬಳದ ಕಲರವ ಜೋರಾಗಿದೆ. ಅರಮನೆ ಮೈದಾನದಲ್ಲಿ ಕಂಬಳೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿದೆ.
ಅರಮನೆ ಮೈದಾನದಲ್ಲಿ ದೀಪ ಬೆಳಗುವ ಮೂಲಕ ಕಂಬಳದ ಜೋಡು ಕರೆ -ರಾಜ ಮಹಾರಾಜ ಟ್ರ್ಯಾಕ್ ನ್ನು ದಿ.ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಿದರು.
ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದ್ದು, ರಾಜ ಮಹಾರಾಜ ಹೆಸರಿನ ಕಂಬಳ ಕೆರೆಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಲಾಯಿತು. ಈ ವೇಳೆ ಕಂಬಳ ಕೆರೆಗೆ ಗಂಗಾರತಿ ನೆರವೇರಿಸಲಾಯಿತು. ಬಳಿಕ ಸಂಪ್ರದಾಯದಂತೆ ಕಂಬಳ ಕೆರೆಗೆ ಜೋಡಿ ಕೋಣಗಳನ್ನು ಇಳಿಸಲಾಯಿತು.
ಬಳಿಕ ಕಂಬಳ ಓಟ ಆರಂಭವಾಗಿದ್ದು, ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ಕಂಬಳ ನಡೆಯಲಿದೆ. ಐತಿಹಾಸಿಕ ಬೆಂಗಳೂರು ಕಂಬಳ ವೀಕ್ಷಿಸಲು ಜನಸಾಗರವೇ ಹರಿದು ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ