*ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡ್ ಸೃಷ್ಟಿಸುತ್ತಿರುವ 80ರ ದಶಕದ ಫೋಟೋಗಳು: ಸಾರ್ವಜನಿಕರಿಗೆ ಪೊಲೀಸರಿಂದ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಕಳೆದ ಎರಡು ಮೂರು ದಿನಗಳಿಂದ ಭಾರಿ ಟ್ರೆಂಡ್ ಸೃಷ್ಟಿಸುತ್ತಿರುವ 80 ರ ದಶಕದ ರೆಟ್ರೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ. ಆದರೆ ಈ ಫೋಟೋ ಎಡಿಟಿಂಗ್ ಹಾಗೂ ರೆಟ್ರೋ ಫೋಟೊಗಳ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಟ್ರೆಂಡ್ ಆಗುತ್ತಿರುವ 80ರ ದಶಕದ ರೆಟ್ರೋ ಫೋಟೋ ಎಡಿಟಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರು ಸೂಚಿಸಿದ್ದಾರೆ.
ಫೋಟೋ ಎಡಿಟಿಂಗ್ ಹೆಸರಿನಲ್ಲಿ ಸೈಬರ್ ವಂಚಕರು ಸಾರ್ವಜನಿಕರನ್ನ ವಂಚಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಜನಜಾಗೃತಿ ಮೂಡಿಸಿದ್ದಾರೆ.
80ರ ದಶಕದ ಫೋಟೋಗಳ ಮಾದರಿಯಲ್ಲಿ ತಮ್ಮ ಫೋಟೋಗಳನ್ನ ಎಡಿಟ್ ಮಾಡಿಸಿಕೊಳ್ಳಲು ಸಾರ್ವಜನಿಕರು ವಿವಿಧ ಆ್ಯಪ್ಗಳು ಹಾಗೂ ಆನ್ಲೈನ್ ಲಿಂಕ್ಗಳನ್ನು ಬಳಸುತ್ತಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಅಪರಿಚಿತ ಆ್ಯಪ್ಗಳನ್ನು ಡೌನ್ಲೋಡ್ ಮಾಡುವುದು ಅಥವಾ ಅನುಮಾನಾಸ್ಪದ ಲಿಂಕ್ಗಳನ್ನು ತೆರೆಯುವುದರಿಂದ ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಫೋಟೋ ಎಡಿಟಿಂಗ್ ಅಥವಾ ಹೊಸ ಮಾದರಿಯ ಫೋಟೋ ಸೃಷ್ಟಿಸುವ ನೆಪದಲ್ಲಿ ಕೆಲವರು ವೈಯಕ್ತಿಕ ಮಾಹಿತಿ ಹಾಗೂ ದಾಖಲೆಗಳ ವಿವರ ಕೇಳುವ ಸಾಧ್ಯತೆ ಇದೆ. ಪಾಸ್ವರ್ಡ್, ಬ್ಯಾಂಕ್ ಖಾತೆ ಸೇರಿದಂತೆ ಯಾವುದೇ ಸೂಕ್ಷ್ಮ ಮಾಹಿತಿಯನ್ನ ಅಪರಿಚಿತ ವ್ಯಕ್ತಿಗಳು ಅಥವಾ ಆ್ಯಪ್ಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಪೊಲೀಸರು ಸಲಹೆ ನೀಡಿದ್ದಾರೆ.



