CrimeKannada NewsKarnataka NewsLatest

*ಏಳು ಕೊಲೆ ಪ್ರಕರಣಕ್ಕೆ ಮತ್ತೊಂದು ಬಿಗ್ ಶಾಕ್*: *ಇಂದುಶೇಖರ್ ಕುಟುಂಬದ ಹಳೆಯ ಕರಾಳ ಇತಿಹಾಸ ಬಯಲು*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಒಂದೇ ಕುಟುಂಬದ ಏಳು ಜನರ ಬರ್ಬರ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪುಟ್ಟ ಮಗು ಸೇರಿದಂತೆ ಏಳು ಮಂದಿಯನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಇಂದುಶೇಖರ್ ವಿಚಾರಣೆಯಲ್ಲಿ ಹಲವು ಸಂಗತಿಗಳು ಬೆಳಕಿಗೆ ಬರುತ್ತಿವೆ. ಇದರ ಬೆನ್ನಲ್ಲೇ ಇದೀಗ ಆತನ ಕುಟುಂಬದ ಮತ್ತೊಂದು ಕರಾಳ ಇತಿಹಾಸ ಬಯಲಾಗಿದೆ.

ಇಂದುಶೇಖರ್, ಎಂಟು ವರ್ಷಗಳ ಹಿಂದೆ 15 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಾಗಿ ನಡೆದಿದ್ದ ಭೀಕರ ಡಬಲ್ ಮರ್ಡರ್ ಪ್ರಕರಣದ ಆರೋಪಿ ಬೆಳತೂರು ರಮೇಶ್‌ನ ಸಹೋದರ ಎಂಬ ಮಾಹಿತಿ ಹೊರಬಿದ್ದಿದೆ. ಈ ಹಳೆಯ ಕೊಲೆ ಪ್ರಕರಣದ ವಿವರಗಳು ಈಗ ಮತ್ತೆ ಮುನ್ನೆಲೆಗೆ ಬಂದಿವೆ.

15 ಕೋಟಿ ರೂಪಾಯಿ ಜಾಗಕ್ಕಾಗಿ ಡಬಲ್ ಮರ್ಡರ್!

ಸುಮಾರು ಎಂಟು ವರ್ಷಗಳ ಹಿಂದೆ ಬೆಂಗಳೂರಿನ ಬೆಳತೂರು ಸಮೀಪ 1.8 ಎಕರೆ ಜಾಗಕ್ಕಾಗಿ ಇಂದು ಶೇಖರ ಸಹೋದರ ರಮೇಶ್ ಇಬ್ಬರನ್ನು ಹತ್ಯೆ ಮಾಡಿದ್ದ. ಈ ಜಾಗದ ಮೌಲ್ಯ ಸುಮಾರು 15 ಕೋಟಿ ರೂಪಾಯಿ ಆಗಿತ್ತು. ನಂಜಪ್ಪ ಎಂಬ ವ್ಯಕ್ತಿ ಮೃತಪಟ್ಟ ಬಳಿಕ ಅವರ ಆಸ್ತಿಯನ್ನು ಕಬಳಿಸಲು ರಮೇಶ್ ಸಂಚು ರೂಪಿಸಿದ್ದ.

ಇದಕ್ಕಾಗಿ ವೆಂಕಟರಮಣ ಎಂಬಾತನನ್ನು ಕರೆತಂದು ನಂಜಪ್ಪ ಎಂದು ಬಿಂಬಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ಬಳಿಕ ಕೃಷ್ಣಪ್ಪ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಕರೆತಂದು, ನಕಲಿ ನಂಜಪ್ಪನಿಗೆ ಭೇದಿ ಮಾತ್ರೆ ನೀಡಿ ಕೊಲೆ ಮಾಡಿದ್ದ. ನಂತರ ನಂಜಪ್ಪ ಹೆಸರಿನಲ್ಲಿ ನಕಲಿ ಮರಣ ಪ್ರಮಾಣಪತ್ರವನ್ನೂ ಮಾಡಿಸಿದ್ದ.

ಈ ಕೃತ್ಯದಲ್ಲಿ ರಮೇಶ್ ಜೊತೆಗಿದ್ದ ತೋಟದ ಸೆಕ್ಯೂರಿಟಿ ವೆಂಕಟಸ್ವಾಮಿ, ನಡೆದ ಸಂಗತಿಯನ್ನು ತನ್ನ ಪತ್ನಿ ಸುಧಾರಾಣಿಗೆ ತಿಳಿಸಿದ್ದ. ಆದರೆ ಕೊಲೆಯನ್ನು ವಿರೋಧಿಸಿದ್ದ ಸುಧಾರಾಣಿಯನ್ನೇ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿತ್ತು. ಬಳಿಕ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದರೆ ಪೊಲೀಸರ ತನಿಖೆಯಲ್ಲಿ ಅದು ಕೊಲೆ ಎಂಬುದು ಬೆಳಕಿಗೆ ಬಂದಿತ್ತು.

ಈ ಪ್ರಕರಣದಲ್ಲಿ ಬೆಳತೂರು ರಮೇಶ್ ಮತ್ತು ವೆಂಕಟಸ್ವಾಮಿಯನ್ನು ಪೊಲೀಸರು ಬಂಧಿಸಿದ್ದರು. ಸುಮಾರು ಮೂರು ವರ್ಷ ಜೈಲಿನಲ್ಲಿದ್ದ ರಮೇಶ್, 2021ರಲ್ಲಿ ಜೈಲಿನಲ್ಲೇ ಮೃತಪಟ್ಟಿದ್ದ. ವರ್ತೂರು ಭಾಗದಲ್ಲಿ ಭೂಮಾಫಿಯಾ ನಡೆಸುತ್ತಿದ್ದ ಆರೋಪವೂ ಆತನ ಮೇಲಿತ್ತು. ನಕಲಿ ದಾಖಲೆ ಸೃಷ್ಟಿ ಮತ್ತು ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆತನ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ರೌಡಿಶೀಟ್ ಕೂಡ ತೆರೆಯಲಾಗಿತ್ತು. ಇದೀಗ ಏಳು ಜನರ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್‌ನ ಕುಟುಂಬದ ಹಿನ್ನೆಲೆ ಚರ್ಚೆಗೆ ಬಂದಿದೆ.

Related Articles

Back to top button