
ಪ್ರಗತಿವಾಹಿನಿ ಸುದ್ದಿ: ಬೆಟ್ಟಿಂಗ್ ಚಟಕ್ಕೆ ಬಿದ್ದು ಕಳ್ಳತನ ಮಾಡುತ್ತಿದ್ದ ಸಾಫ್ಟ್ ವೇರ್ ಎಂಜಿನಿಯರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಎ.ಮೂರ್ತಿ (27) ಬಂಧಿತ ಆರೋಪಿ. ಶಿವಮೊಗ್ಗ ಮೂಲದ ಮೂರ್ತಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ. ಆದರೆ ವಿಪರೀತ ಬೆಟ್ಟಿಂಗ್ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದ.
ತಂದೆ ಅಣ್ಣಪ್ಪ, ಮಗನ ಸಾಲ ತೀರಿಸಲು ಶಿವಮೊಗ್ಗದಲ್ಲಿದ್ದ ಆಸ್ತಿ ಮಾರಿದ್ದರು. ದುಡಿದು ಜೀವನ ಸಾಗಿಸೋಣ ಎಂದು ಬೆಂಗಳೂರಿಗೆ ಬಂದಿದ್ದರು. ಕುಟುಂಬ ಬೆಂಗಳೂರಿಗೆ ಬಂದರೂ ಬೆಟ್ಟಿಂಗ್ ಬಿಡದ ಮೂರ್ತಿ, ಹಣಕ್ಕಾಗಿ ಮನೆಗಳ್ಳತನ ಆರಂಭಿಸಿದ್ದ. ಅಂಗಾಳ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯರ ಸರಗಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ.
ಪ್ರಕರಣ ಸಂಬಂಧ ಮಾಗಡಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೋಣನಕುಂಟೆ, ಸಿದ್ದಗುಂಟೆಪಾಳ್ಯ, ಅವಲಹಳ್ಳಿ ಸೇರಿದಂತೆ ಹಲವೆಡೆ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.