Latest

*ವಿಶೇಷ ಅನುದಾನದಲ್ಲಿ ರಾಜ್ಯಕ್ಕೆ ಶೂನ್ಯ ಕೊಡುಗೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; ಡಿ.ಕೆ.ಶಿವಕುಮಾರ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಭದ್ರಾವತಿಯ ಜನ ಸಂಗಮೇಶ್ ಅವರನ್ನು ಕಳೆದ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಕಳೆದ ಬಾರಿ ನಮ್ಮ ಸರ್ಕಾರ ಉತ್ತಮ ಆಡಳಿತ ನೀಡಿದ್ದರೂ, ಜನ ನಮ್ಮ ಮೇಲೆ ವಿಶ್ವಾಸ ಇಡದೆ ಕೇವಲ 80 ಸ್ಥಾನ ನೀಡಿದರು. ದಳದವರು 38 ಸೀಟು ಗೆದ್ದಿದ್ದರು. ಆದರೂ ನಾವು ಕುಮಾರಸ್ವಾಮಿ ಅವರಿಗೆ ಸರ್ಕಾರ ನಡೆಸಲು ಬೆಂಬಲ ನೀಡಿದ್ದೆವು. ಅವರು ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಅವರ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಆದರೆ ಈ ರಾಜ್ಯದಲ್ಲಿ ಜನತಾ ದಳ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಭದ್ರಾವತಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯತರು, ಮುಸಲ್ಮಾನರು, ಪರಿಶಿಷ್ಟ ಜಾತಿ, ಪಂಗಡದವರು ಸೇರಿದಂತೆ ಎಲ್ಲ ವರ್ಗದವರೂ ಇದ್ದಾರೆ. ಇಲ್ಲಿ ಜಾತಿ ಮೇಲೆ ರಾಜಕಾರಣ ಮಾಡಿದರೆ ಪ್ರಯೋಜನವಿಲ್ಲ. ನೀತಿ ಮೇಲೆ ರಾಜಕಾರಣ ಮಾಡಬೇಕು. ನಾವು ಹುಟ್ಟುವಾಗ ಇಂತಹುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ಕಾಂಗ್ರೆಸ್ ಎಲ್ಲ ಜಾತಿ ಹಾಗೂ ವರ್ಗದ ಪಕ್ಷ. ಎಲ್ಲರಿಗೂ ರಕ್ಷಣೆ ನೀಡುತ್ತಾ ಬಂದಿದ್ದೇವೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಈ ಜಿಲ್ಲೆಯಲ್ಲಿ ಬೇಕಾದಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ ರಾಜ್ಯ ಸರ್ಕಾರ ನಡೆಸಿದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ ಎಂದು ಹೇಳಿದ್ದು, ಅದರಲ್ಲಿ ಎಷ್ಟು ಕೋಟಿ ಬಂಡವಾಳ ಶಿವಮೊಗ್ಗ ಜಿಲ್ಲೆಯಲ್ಲಿ ಹೂಡಿಕೆಯಾಗಲಿದೆ ಎಂದು ಬಿಜೆಪಿಯವರು ಉತ್ತರಿಸಲಿ. ಈ ಕ್ಷೇತ್ರದಲ್ಲಿ ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೀರಿ. ಕೇಂದ್ರ ಸರ್ಕಾರ ವಿಐಎಸ್ಎಲ್ ಕಾರ್ಖಾನೆ ಮಾರಲು ಆಹ್ವಾನ ನೀಡಿದರೂ ಯಾರೊಬ್ಬರೂ ಮುಂದೆ ಬಂದಿಲ್ಲ ಯಾಕೆ? ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಶುದ್ಧವಾದ ವಾತಾವರಣ ನಿರ್ಮಣವಾಗಬೇಕು. ಎಲ್ಲ ವರ್ಗದವರಿಗೆ ಗೌರವ ಸಿಗಬೇಕು. ಬಿಜೆಪಿಯವರು ನಾವು ಹಿಂದೂ ನಾವು ಮುಂದು ಎಂದು ಹೇಳುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಹಿಂದೂ, ಮುಸಲ್ಮಾನ, ಕ್ರೈಸ್ತ, ಸಿಖ್, ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರು ಸೇರಿದಂತೆ ಎಲ್ಲ ಸಮಾಜ ಒಂದು ಎನ್ನುತ್ತೇವೆ. ಕಾಂಗ್ರೆಸ್ ಸರ್ಕಾರ ಉಳುವವನಿಗೆ ಭೂಮಿ, ಪಿಂಚಣಿ, ಮನೆ, ಅಕ್ಕಿ ಕೊಟ್ಟಿದ್ದೇವೆ. ಯಾವುದಾದರೂ ಒಂದು ಕಾರ್ಯಕ್ರಮವನ್ನು ಒಂದು ಜಾತಿಗೆ ಮಾತ್ರ ನೀಡಿದ್ದೇವಾ? ಇಂದು ಜಾತಿ, ಧರ್ಮ ಬಿಟ್ಟು, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿರುವ ಶಕ್ತಿ, ಪೀಠಿಕೆಯಂತೆ ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ಪಕ್ಷ ಕೆಲಸ ಮಾಡಿಕೊಂಡು ಬಂದಿದೆ.

ಕಮಲ ಕೆರೆಯಲ್ಲಿದ್ದರೆ ಚೆನ್ನ, ತೆನೆ ಹೊಲದಲ್ಲಿದ್ದರೆ ಚೆನ್ನ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದಕ್ಕಾಗಿ ರಾಜ್ಯದಲ್ಲಿ ಬದಲಾವಣೆ ಮಾಡಬೇಕು. ನಿಮ್ಮ ಹೃದಯದದಲ್ಲಿ ಜಾತ್ಯಾತೀತ ತತ್ವವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ನಿಮಗೆ ಗೊತ್ತಿದೆ. ಕುಮಾರಣ್ಣ ಏನಾದರೂ ಹೇಳಲಿ. ನೀವು ಕಾಂಗ್ರೆಸ್ ಪಕ್ಷ ಬೆಂಬಲಿಸಿದರೆ ರಾಜ್ಯ, ಎಲ್ಲ ಸಮಾಜದವರು ಉಳಿಯುತ್ತಾರೆ ಎಂದು ಹೇಳಿದರು.

ವಿಎಸ್ಐಎಲ್ ವಿಚಾರದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಸಂಗಮೇಶ್ ಸೋತಿದ್ದರೂ ಈ ಕಾರ್ಖಾನೆಗೆ ಜೀವ ತುಂಬಲು ಸಿದ್ದರಾಮಯ್ಯನವರ ಬಳಿ ಕಾಡಿ ಬೇಡಿ, ಗಣಿ ಭೂಮಿ ಮಂಜೂರು ಮಾಡಿದ್ದರು. ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರು ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲು ಆಗಲಿಲ್ಲ. ಕೇಂದ್ರ ಮಂತ್ರಿ ಬಂದು 6 ಸಾವಿರ ಕೋಟಿ ಕೊಡಿಸುವುದಾಗಿ ಹೇಳಿಸಿದ್ದರು. ಇದು ಸುಳ್ಳಿನ ಭರವಸೆ. ಸುಳ್ಳಿನ ಕಾರ್ಖಾನೆಯ ಮತ್ತೊಂದು ಹೆಸರು ಬಿಜೆಪಿ. ಅವರಿಗೆ ನುಡಿದಂತೆ ನಡೆಯಲು ಆಗಿಲ್ಲ. 50 ದಿನಗಳ ನಂತರ ಈ ಜನ ಬಿಜೆಪಿಯನ್ನು ಗಂಟು ಮೂಟೆ ಕಟ್ಟಿಸಿ ಮನೆಗೆ ಕಳುಹಿಸಿದರೆ, ಕಾಂಗ್ರೆಸ್ ನಾಯಕರನ್ನು ವಿಧಾನಸೌಧಕ್ಕೆ ಕಳುಹಿಸಲಿದ್ದಾರೆ.

ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಲು ಈ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಬೆಳಗಾವಿಯಿಂದ ಆರಂಭಿಸಿ ರಾಜ್ಯದುದ್ದಗಲ ನಾವು ಪ್ರವಾಸ ಮಾಡಿದ್ದೇವೆ. ನಾವು ಇಲ್ಲಿ ನಿಮ್ಮ ಜೈಕಾರ, ಹೂವಿನ ಹಾರಕ್ಕೆ ನಾನಿಲ್ಲಿಗೆ ಬಂದಿಲ್ಲ. ಭದ್ರಾವತಿಯ ಜನರ ಜತೆ ನಾವಿದ್ದೇವೆ, ಅವರ ಕೈ ಬಲಪಡಿಸುತ್ತೇವೆ ಎಂದು ಹೇಳಲು ಬಂದಿದ್ದೇವೆ. ನಮಗೆ ನಿಮ್ಮ ಕಷ್ಟ ಅರ್ಥವಾಗುತ್ತದೆ. ಬಿಜೆಪಿಯವರು ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಅವರಿಂದ ಮಾಡಲು ಆಗಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ಸರ್ಕಾರದ ಎಲ್ಲ ಇಲಾಖೆ ನೇಮಕಾತಿಯಲ್ಲಿ ಅಕ್ರಮ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಪಕ್ಕದ ಕ್ಷೇತ್ರದ ಶಾಸಕ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿದ್ದಾಗ, ಅವರ ಪಕ್ಷದ ಗುತ್ತಿಗೆದಾರರಿಂದಲೇ 40% ಕಮಿಷನ್ ಕೇಳಿದರು. ಅದನ್ನು ನೀಡಲಾಗದೇ ಆತ ನೇಣಿಗೆ ಶರಣಾದ. ನಾವು ವಿಧಾನಸೌಧದಲ್ಲಿ ಹೋರಾಟ ಮಾಡಿದ ನಂತರ ಅವರು ರಾಜೀನಾಮೆ ನೀಡಿದರು. ಮತ್ತೆ ಮಂತ್ರಿಯಾಗಲು ಎಲ್ಲ ಪ್ರಯತ್ನ ಮಾಡಿದರು. ಆ ಮೂಲಕ ಲಂಚಕ್ಕೊಬ್ಬ, ಮಂಚಕ್ಕೊಬ್ಬ ಅಧಿಕಾರ ಕಳೆದುಕೊಂಡರು. ಇದೊಂದು ಬಿ ರಿಪೋರ್ಟ್ ಸರ್ಕಾರ. ಬಿ ರಿಪೋರ್ಟ್ ಕೊಟ್ಟರೂ ಯಾಕೆ ಮಂತ್ರಿಗಿರಿ ನೀಡಲಿಲ್ಲ. ಆ ಗುತ್ತಿಗೆದಾರ ಕೆಲಸ ಮಾಡಿದ್ದ ಎಂದು ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರದಲ್ಲಿ 40% ಕಮಿಷನ್ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ಗೂಳಿಹಟ್ಟಿ ಶೇಖರ್ 22 ಸಾವಿರ ಕೋಟಿಯಷ್ಟು ಅಕ್ರಮ ನಡೆದಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇದೊಂದು ಭ್ರಷ್ಟ ಸರ್ಕಾರ.

ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಹೋಗಿರುವ ನಿರ್ಮಲಾ ಸೀತರಾಮನ್ ಅವರು ಕೇಂದ್ರ ಹಣಕಾಸು ಮಂತ್ರಿಯಾಗಿದ್ದಾರೆ. ವಿಶೇಷ ಅನುದಾನದಲ್ಲಿ ರಾಜ್ಯಕ್ಕೆ ಶೂನ್ಯ ಕೊಡುಗೆ ನೀಡಿದ್ದಾರೆ. ಈ ರಾಜ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಬಂದು ಜನರ ಕಷ್ಟ ಕೇಳದ ಪ್ರಧಾನಮಂತ್ರಿಗಳು ಹಾಗೂ ಅಮಿತ್ ಶಾ ಅವರು ಈಗ 15 ದಿನಕ್ಕೊಮ್ಮೆ ಬಂರುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಈ ಡಬಲ್ ಇಂಜಿನ್ ಸರ್ಕಾರ ಯಾರೊಬ್ಬರಿಗೂ ನೆರವು ನೀಡಲಿಲ್ಲ. ಚಾಮರಾಜನಗರದಲ್ಲಿ 36 ಜನ ಆಕ್ಸಿಜನ್ ಇಲ್ಲದೆ ಸತ್ತರು. ಇಡೀ ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾದಾಗ, ನಿಮ್ಮ ಮನೆ ಮಗ ಬಿ ವಿ ಶ್ರೀನಿವಾಸ್ ದೆಹಲಿಯಲ್ಲಿ ಕೂತು ಆಕ್ಸಿಜನ್ ಕೊಡಿಸಿ ಜೀವ ಉಳಿಸಿದ್ದರು. ಹೀಗಾಗಿ ಅವರನ್ನು ಆಕ್ಸಿಜನ್ ಮ್ಯಾನ್ ಎಂದು ಕರೆದರು.

ಕಂದಾಯ ಗ್ರಾಮಗಳ ವಿಚಾರವಾಗಿ ನಮ್ಮ ನಾಯಕರು ಸಾಕಷ್ಟು ಹೋರಾಟ ಮಾಡಿದ್ದಾರೆ. ಉಳುವವನಿಗೆ ಭೂಮಿ ನೀಡಲು ಭೂಸುಧಾರಣಾ ಕಾಯ್ದೆ ಜಾರಿಗೆ ತಂದಿದ್ದೇವೆ. ಭಾರತ್ ಜೋಡೋ ಸಮಯದಲ್ಲಿ ಹಿರಿಯ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಬಂದರು. ಆಗ ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೇಕಾಯಿ ಇದನ್ನು ನೀಡಲು ಬಂದಿದ್ದೇನೆ ಎಂದು ತಿಳಿಸಿದರು. ಇದು ಕಾಂಗ್ರೆಸ್ ಪಕ್ಷ. ಇಂತಹ ಒಂದು ಕಾರ್ಯಕ್ರಮವನ್ನು ಬಿಜೆಪಿ ಹಾಗೂ ದಳದವರು ನೀಡಿಲ್ಲ. ಯಡಿಯೂರಪ್ಪನವರು ಹಾಗೂ ಶೋಭಕ್ಕ ಸೇರಿ ಸೀರೆ ಹಾಗೂ ಸೈಕಲ್ ಕೊಟ್ಟರು.

ಮುಂದಿನ ದಿನಗಳಲ್ಲಿ ಅರಣ್ಯ ಕಾಯ್ದೆ ವಿಚಾರದಲ್ಲಿ ನಮ್ಮ ತೀರ್ಮಾನ ಮಾಡಿ ಯಾರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ನಿಮ್ಮೆಲ್ಲರಿಗೂ ರಕ್ಷಣೆ ನೀಡುತ್ತೇವೆ. ನಮ್ಮ ಹೆಗಡೆ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದು, ಅದರ ಸಲಹೆಯನ್ನು ಆಧರಿಸಿ ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇನ್ನು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವಾಗಲು ಕಾಂಗ್ರೆಸ್ ಪಕ್ಷ 2 ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ಈಗ 200 ಯುನಿಟ್ ವಿದ್ಯುತ್ ಉಚಿತ, ಆಮೂಲಕ ಇನ್ನು ಮುಂದೆ ನೀವು 200 ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ಕೊಡ್ತೆವೆ. ಜತೆಗೆ 10 ಕೆಜಿ ಅಕ್ಕಿ. ನಾನು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರ್ತದೆ. ಇನ್ನು ಪ್ರತಿ ಮನೆಗೆ ನೀಡಲಾಗುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಕೆ ಮಾಡುತ್ತೇವೆ.

ಬಿಜೆಪಿಯವರು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು ಯಾರಿಗಾದರೂ ಬಂತಾ? ಇಲ್ಲಿ ನೀವು ಮತ ಹಾಕುವಾಗ ಬರುವ ಶಬ್ಧ ದೆಹಲಿಗೆ ಕೇಳಿಸಬೇಕು. ಇಲ್ಲಿ ಸಂಗಮೇಶ್ ಗೆಲ್ಲಿಸಬೇಕು, ಮೋದಿಯನ್ನು ಹಾರಿಸಬೇಕು. ಯಡಿಯೂರಪ್ಪನವರನ್ನು ಅವರ ಪಕ್ಷದವರೇ ಹಾರಿಸಿದ್ದಾರೆ.

ಕುವೆಂಪು, ಬಸವಣ್ಣ, ಶಿಶುನಾಳ ಷರೀಫರ, ಕನಕದಾಸರ ನಾಡಲ್ಲಿ ನಾವು ನುಡಿದಂತೆ ನಡೆಯುತ್ತೇವೆ, ನಿಮ್ಮ ಸೇವೆ ಮಾಡುತ್ತೇವೆ. ನಿಮ್ಮ ವಿಶ್ವಾಸ ಆಶೀರ್ವಾದ ನಮ್ಮ ಮೇಲಿರಲಿ ಎಂದರು.

*ವಿಐಎಸ್ಎಲ್ ಕಾರ್ಮಿಕರೊಂದಿಗೆ ಸಿಎಂ ಮಹತ್ವದ ಸಭೆ*

 

https://pragati.taskdun.com/visl-factoryshivamoggacm-basavaraj-bommaimeetiing/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button