*ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಭೀಮಣ್ಣ ಖಂಡ್ರೆ(102) ವಯೋಸಹಜ ಕಾಯಿಲೆಯಿಂದ ಬೀದರ್ನಲ್ಲಿ ನಿಧನರಾಗಿದ್ದಾರೆ. ಇಂದು ಬೆಳಗ್ಗೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದ್ದು, ಇಂದು ಅಂತ್ಯಕ್ರಿಯೆ ನಡೆಯಲಿದೆ. ಭೀಮಣ್ಣ ಖಂಡ್ರೆ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 2 ಗಂಟೆಗೆ ಬೀದರ್ ಜಿಲ್ಲೆಯ ಭಾಲ್ಕಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮುತ್ಸದ್ದಿ ರಾಜಕಾರಣಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಭೀಮಣ್ಣ ಅವರ ಪುತ್ರ ಸಚಿವ ಈಶ್ವರ ಖಂಡ್ರೆ ಕಣ್ಣೀರು ಹಾಕಿದ್ದಾರೆ.
ಅಪಾರ ಅಭಿಮಾನಿಗಳನ್ನು ಅಗಲಿರುವ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರವನ್ನು ಭಾಲ್ಕಿಯ ಗಾಂಧಿ ಗಂಜ್ ನಲ್ಲಿರುವ ಅವರ ಮನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬಳಿಕ ಸಂಜೆ ಭಾಲ್ಕಿಯ ಚಿಕಲ್ ಚಂದ ರಸ್ತೆಯಲ್ಲಿನ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ ನೆರವೇರಲಿದೆ.
ಶ್ರೀಮತಿ ಲಿಂಗೈಕ್ಯ ಲಕ್ಷ್ಮೀಬಾಯಿ ಅವರ ಸಮಾಧಿಯ ಪಕ್ಕದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನರವೇರಲಿವೆ ಎಂದು ಪುತ್ರ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಶಾಂತಿಧಾಮಕ್ಕೆ ತೆರಳಲಾಗುವುದು. ಸಂಜೆ 5 ಗಂಟೆಗೆ ಲಿಂಗಾಯತ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಲಿದೆ. ಇಂದು ಸಂಜೆ ನಮ್ಮ ತಾಯಿಯವರ ಸಮಾಧಿ ಪಕ್ಕದಲ್ಲೇ ನಮ್ಮ ತಂದೆಯವರ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.




