ಭೂತ ಮಿಲನ…. ಪತ್ರದ ಕೆಳಗೆ ಎರಡು ಸಹಿಗಳಿದ್ದವು….

ಭೌತಾತೀತ ಆತ್ಮಗಳ ಮಿಲನ ಹೀಗೂ ಉಂಟೆ?

ಪ್ರೊ ಜಿ ಎಚ್ ಹನ್ನೆರಡುಮಠ

“ಪ್ರಿಯಾ….” ಪ್ರಥಮ ದರ್ಜೆಯ ರೂಪವತಿ ಅಲ್ಲದಿದ್ದರೂ ಪ್ರಥಮ ದರ್ಜೆಯ ಲಾವಣ್ಯವತಿ ! ಸುಖಕೊಡುವ ಸೊಬಗಿನ ಸುಬ್ಬಿ. ಕಣ್ಣಲ್ಲಿಯೇ ಕುಡಿಯಬಲ್ಲ ಮದಿರಾಚಲುವಿ.
ಅವಳು ಮಾತನಾಡಿದರೆ ಅವಳ ಅಂತರಂಗವೇ ಮಾತಾಡುತ್ತದೆ ಎಂಬಷ್ಟು ಆತ್ಮೀಯತೆ- ತನ್ಮಯತೆ- ಪ್ರೀತಿ ಮತ್ತು ಮಾಧುರ್ಯ. “ಪ್ರಿಯಾ” ಶಬ್ದಕ್ಕೂ ಇವಳಿಗೂ ಇರುವ ಸಂಬಂಧ ಸಕ್ಕರೆಗೂ ಸಿಹಿಗೂ ಇರುವಷ್ಟು ಪ್ರಗಾಢ.
ಡಾಕ್ಟರಳಾಗಬೇಕೆಂಬ ಅವಳ ಮುಗಿಲೆತ್ತರದ ಕನಸು ಬೆಂಗಳೂರಿಗೆ ಅವಳನ್ನು ಎಳೆದು ತಂದಿತ್ತು. ವಿಮಾನ ನಿಲ್ದಾಣದಿಂದ ನೇರವಾಗಿ ಬಹುಮಹಡಿ ಹೋಟೆಲೊಂದರಲ್ಲಿ ಬಂದು ತಂಗಿದಳು. ಮೆಡಿಕಲ್ ಸಿಲೆಕ್ಶನ್ನಿಗಾಗಿ ಕ್ರಮಬದ್ದವಾದ ಪರೀಕ್ಷೆಗಳೆಲ್ಲವನ್ನೂ ಪೂರೈಸಿದಳು.
“ಪ್ರಿಯಾ” …. ದಿಲ್ಲಿಯ ಹುಡಿಗಿಯಾದರೂ ದಿಲ್‌ಖುಶ್ ಲಲನೆ. ಅವಳ ಬೆಕ್ಕಿನ ಕಣ್ಣುಗಳ ಹಿಂದೆ ಅವಿತಿದ್ದ ಚಿರ್ಚಗಳಿಗೆ ಲೆಕ್ಕವೇ ಇಲ್ಲ.
ಈ ಅತ್ಯಾಧುನಿಕ ಹೊಟೇಲಿನ ಆರನೆಯ ಮಹಡಿಯ ಡಬಲ್ ರೂಮಿನಲ್ಲಿ ಪ್ರಿಯಾ ತಂಗಿದಳು. ಅವಳು ಬಂದದ್ದು ಸಿಂಗಲ್ಲಾದರೂ ಸಿಕ್ಕದ್ದು ಡಬಲ್ ರೂಮು. ಈ ಡಬಲ್-ಸಿಂಗಲ್‌ಗಳಲ್ಲೇ ಅವಳ ಅದ್ಭುತ ರಹಸ್ಯ ಆರಂಭವಾಗುವಂತಿದ್ದರೆ ಯಾಕೆ ಬೇಡ?
ವಿಚಿತ್ರ ! ಮೆಡಿಕಲ್ಲಿಗೆ ಸಿಲೆಕ್ಟ ಆಗದಿದ್ದರೆ ದಿಲ್ಲಿಗೆ ವಾಪಸ್ಸು ಹೋಗಲೇಬಾರದೆಂಬ ನಿರ್ಧಾರದಿಂದಲೇ ಬಂದ ದುಡುಕಿನ ಬೆಡಗಿ ಇವಳು. ಹೊರಳಿ ಹೋಗದಿದ್ದರೇನಾಯಿತು…. ಇವಳ ಮುದ್ದಿನ ಕೈ ಹಿಡಿಯುವ ಕನ್ನಡ ವೀರರು ಬೆಂಗಳೂರಲ್ಲೇ ಸಿಗಬಹುದಲ್ಲಾ…..
ಆಯ್ತು ! ಅವಳ ಪರಮಾವಧಿ ಪ್ರಯತ್ನವೆಲ್ಲಾ ದನಕ್ಕೆ ಹಾಕಿದ ಧಾರವಾಡ ಪೇಢೆ ಆಯ್ತು ! ಎಲ್ಲಾ ವ್ಯರ್ಥ. ಆಯ್ಕೆ ಆಗಲಿಲ್ಲ. ಆ ದಿನ ಸಹನಾತೀತ ನೋವಿನಿಂದಲೇ ಹೋಟಲ್ಲಿಗೆ ಮರಳಿ ಬಂದಳು. ಬಾಗಿಲು ಮುಚ್ಚುವ ಮುನ್ನ ಬೆಂಗಳೂರಿನ ಒಂದು ಪ್ಲೇಟ ಇಡ್ಲಿ ರೂಮಿಗೆ ತರಿಸಿಕೊಂಡಳು. ಅರ್ಧಮಾತ್ರ ತಿಂದಳು. ಬಟ್ಟಲಲ್ಲಿಯ ಸಾಂಬಾರ ಕುಡಿದಳು. ಅದೂ ಅರ್ಧಮಾತ್ರ. ಮೇಲೆ ಕಾಫಿ ಹೀರಿದಳು. ಅದೂ ಅರ್ಧ ಉಳಿಸಿದಳು. ರೂಮಿನ ಬಾಗಿಲು ಮುಚ್ಚಿಕೊಂಡಳು….
ಬೆಳಿಗ್ಗೆ ಅವಳ ಬಾಗಿಲು ತೆರೆಯಲೇ ಇಲ್ಲ ! ಮಧ್ಯಾಹ್ನವೂ ತೆರೆಯಲಿಲ್ಲ. ಸಂಜೆಯೂ ತೆರೆಯಲಿಲ್ಲ. ರಾತ್ರಿಯೂ ತೆರೆಯಲಿಲ್ಲ. ಮಾರನೇ ದಿನವೂ ಬೆಳಿಗ್ಗೆ ಬಾಗಿಲು ತರೆಯಲಿಲ್ಲ. ಪೇಪರ್ ಬಾಯ್ ಬಂದು ಬಾಗಿಲು ಬಡಿದು ಹೋದ. ಸಪ್ಲಾಯರ್ ಕೂಗಿ ಹೋದ. ಕ್ಲೀನರ್ ಬಂದು ಬೋಲ್ಟ ಬಡಿದ. ಉತ್ತರವಿಲ್ಲ. ಕೊನೆಗೆ ಮ್ಯಾನೇಜರ್ ಬಂದ. ಮತ್ತೆ ಕೆಲವರು ಬಂದರು. ಕೂಗಿಯೇ ಕೂಗಿದರು. ಕಿಡಕಿ ಗ್ಲಾಸು ಒಡೆದರು. ಒಳಗೆ ಇಣಿಕಿದರು. ನೋಡುತ್ತಾರೆ. ಗಾದಿಯ ಮೇಲೆ ಅವಳ ಹೆಣ ಹಾಯಾಗಿ ಮಲಗಿದೆ ! ಅಹಾ…. ಎಷ್ಟು ಸುಂದರ ಹೆಣ !!
ಪೋಲೀಸರು ಬಂದರು. ಬಾಗಿಲು ಒಡೆದರು. ಪಂಚನಾಮಿ. ದಿಲ್ಲಿಗೆ ಪ್ರಿಯಾಳ ಮನೆಗೆ ಫೋನು. ಹೆಣ ನಾರುತ್ತಿತ್ತು. ಮಗ್ಗಲು ರೂಮಿನವರು ಅಂಜಿ ಓಡಿಹೋದರು. ಕೊನೆಗೆ ಶವವನ್ನು ಹಾಸ್ಪಿಟಲಿನ ಡೆಡ್‌ಬಾಡಿ ಚೇಂಬರಿಗೆ ಸಾಗಿಸಲಾಯಿತು. ಮತ್ತೆ ಚೌಕಾಶಿ. ಮತ್ತೆ ತನಿಖೆ. ಅವಳು ಸ್ಪಷ್ಟವಾಗಿ ಬರೆದಿಟ್ಟ ಪತ್ರಗಳು ಅವಳ ನೈಟಗೌನ್ ಕಿಸೆಯಲ್ಲೇ ಸಿಕ್ಕವು. ಸುಂದರವಾಗಿ ಇಂಗ್ಲೀಷಿನಲ್ಲಿ ತಂದೆಗೆ ತಾಯಿಗೆ ಗೆಳತಿಗೆ ಹಾಗೂ ಪೋಲೀಸ್ ಅಧಿಕಾರಿಗೆ ಬರೆದ ನಾಲ್ಕು ಪತ್ರಗಳಿದ್ದವು. ಕೇವಲ ಅವಳ ಅಕ್ಷರಗಳನ್ನು ನೋಡಿಯೇ ಅವಳನ್ನು ಪ್ರೀತಿಸಬೇಕು…. ಅಷ್ಟು ಮೋಹಕವಾಗಿದ್ದವು ! ಎಂಥಾ ಸೌಂದರ್ಯ…. ಎಂಥಾ ಶೈಲಿ…. ಎಂಥಾ ಪರಿಣಾಮ !
ಹೆಣ ಹೋಯಿತು. ಹೋಟೆಲಿನ ಆ ರೂಮ ನಂಬರ-೩೧೩ ಖಾಲಿ ಆಯಿತು. ಹೋಟೇಲ್ ಮಾಲೀಕ ಎದುರು ನಿಂತೇ ರೂಮನ್ನು ಅತ್ಯಾಧುನಿಕ ವಾಶಿಂಗ್ ಪೌಡರಗಳಿಂದ ಒಂದಲ್ಲ ಹತ್ತು ಬಾರಿ ತೊಳಿಸಿದ. ಹೆಣದ ವಾಸನೆ ಅಷ್ಟೇ ಅಲ್ಲ, ಹೆಣದ ನೆನಪೂ ತೊಳೆದು ಹೋಗುವಂತೆ ತಿಕ್ಕಿ ತಿಕ್ಕಿ ತೊಳೆಸಿದ. ಒಡೆದ ವಿಂಡೋ ಗ್ಲಾಸ ಫ್ರೇಮ್, ಮುರಿದ ಬಾಗಿಲು ದಿಢೀರನೆ ರಿಪೇರಿ ಕಂಡವು. ರೂಮಿನಲ್ಲಿ ಹೊಸ ಗಾದಿ, ಹೊಸ ಬೆಡ್ ಶೀಟ್, ಹೊಸ ಕರ್ಟನ್ ಅಳವಡಿಸಲಾಯಿತು. ಅಲ್ಲಲ್ಲಿ ಸುವಾಸನೆಯ ಎಣ್ಣೆ ಚಿಮುಕಿಸಿದರು. ಮ್ಯಾನೇಜರ್ ಆದಿನ ತನ್ನ ಕೌಂಟರಿನ ರಾಘವೇಂದ್ರಸ್ವಾಮಿಗಳ ದೊಡ್ಡ ಚಿತ್ರಕ್ಕೆ ಎರಡು ಮಾಲೆ ಹಾಕಿ, ನಾಲ್ಕು ಊದಿನ ಕಡ್ಡಿ ಹಚ್ಚಿದ! ಕಡೆಗೆ ಆತ ತನ್ನ ಮನೆಯಲ್ಲೇ ಮಲಗಿದರೂ ಅಂಜಿಕೆಯಿಂದ ಹೆಂಡತಿಯ ಕೈಹಿಡಿದುಕೊಂಡೇ ಮಲಗಿದ !
* * *
ಹಾಂ….. ಇದೇ ದಿನ….?
ಹೌದು…. ಖಂಡಿತವಾಗಿಯೂ ಇದೇ ದಿನವೇ…. ಇದೇ ರೂಮಿಗೆ …. ಧಾರವಾಡದ ಇನ್ನೊಬ್ಬ ಸುಂದರ ಸುಖವಂತ ತರುಣ ಬಂದ. ಈತ ಇಂಜಿನೀಯರ ಪದವಿ ಪಡೆದವ. ಇದೇದಿನ ಅವನ ನೌಕರಿ ಸಿಲೆಕ್ಶನ್ ಆಗಿತ್ತು! ತುಂಬಾ ತೃಪ್ತಿ. ತುಂಬಾ ಖುಶಿ. ತುಂಬಾ ಸಂತೋಷ. ಹೊಟೇಲಿನ ರಜಿಸ್ಟರದಲ್ಲಿ ತನ್ನ ಹೆಸರನ್ನು “ಪ್ರಮೋದ” ಎಂದು ಬರೆದು ಸಹಿ ಹಾಕಿದ. ಈತ ಸಹಿ ಹಾಕುವಾಗ ಕೌಂಟರಮನ್ ಗದಗದ ನಡುಗುತ್ತಿದ್ದ. ಕಾರಣ ಆ ಹೆಣದ ರೂಮ ನಂಬರ -೩೧೩….ಅದನ್ನೇ ಪ್ರಥಮ ಬಾರಿಗೆ ಇವನಿಗೆ ಕೊಡಲಾಗಿತ್ತು ! ಅಂತೂ ಡೆಡ್ ಬಾಡಿ ರೂಮಿಗೆ ಪ್ರಮೋದನ ಲಿವಿಂಗ ಬಾಡಿ ಬಂತು !
ಇದಾವುದೂ ಪ್ರಮೋದನಿಗೆ ಗೊತ್ತೇ ಇರಲಿಲ್ಲ. ಕಾರಣ ಈತ ಹೊಸಬನಲ್ಲವೇ….?
ಸಣ್ಣ ವಯಸಿನ ರೂಮಬಾಯ್ ಪ್ರಮೋದನ ಸೂಟಕೇಸ ಹಾಗೂ ಇನ್ನೊಂದು ಸುಂದರ ನಕ್ಷೆಯ ಬಗಲಚೀಲ ಹೊತ್ತು ರೂಮಿಗೆ ನಡೆದ. ಪ್ರಮೋದ ಹುಡುಗನನ್ನು ಹಿಂಬಾಲಿಸಿದ. ಆ ರೂಮಿನ ಬೀಗವನ್ನು ಹುಡುಗ ಗದಗದ ನಡುಗುತ್ತ ತೆಗೆದದ್ದು ಇವನಿಗೆ ಗೊತ್ತಾಗಲೇ ಇಲ್ಲ. ಬೀಗ ತೆಗೆದ ಹುಡುಗ ಬಾಗಿಲು ತೆಗೆಯಲೇ ಇಲ್ಲ. “ಯಾಕೆ ಹೀಗೆ” ಎಂಬರ್ಥದ ದೃಷ್ಟಿ ಆ ಹುಡುಗನತ್ತ ಪ್ರಮೋದ ಬೀರಿದ. ಆ ದೃಷ್ಟಿಗೆ ಉತ್ತರವಾಗಿ ಹುಡುಗನ ತುಟಿ ಗದ್ಗದಿಸುತ್ತಿರುವದು ಕಂಡಿತು. ಹುಡುಗ ಥರಥರ ನಡುಗುತ್ತಿದ್ದಾನೆ ! ” ಏನು ಜ್ವರವೇ?”….ಅಂತ ಪ್ರಮೋದ ಕೇಳಿದ. ಆತ ಇನ್ನೂ ನಡುಗತೊಡಗಿದ ! “ಅಯ್ಯೋ ಪಾಪ…. ಈ ಸಣ್ಣ ಹುಡುಗ…. ನನಗೇ ಅಂಜಿಬಿಟ್ಟಿದೆಯಲ್ಲಾ…. ನಾನೇನು ಭೂತವಾ !”…. ಅಂತ ಪ್ರಮೋದ ಮರುಗಿದ. ತಾನೇ ಬಾಗಿಲು ತೆರೆದು ತಾನೇ ಸೂಟಕೇಸ ಒಳಗೊಯ್ದ. ಹುಡುಗ ಆಕಡೆ ರಪಾಟಿಕಿತ್ತು ರೆಂವ್ ಅಂತ ಓಡಿಹೋದ !
ಪ್ರಮೋದ ಇಂದು ಎಷ್ಟು ಖುಶಿಯಾಗಿದ್ದನೆಂದರೆ ಆ ರೂಮಿನ ಬಾಗಿಲು ಠಕ್ಕನೇ ಮುಚ್ಚಿದವನೇ ನೆಕ್‌ಟೈ ಕೂಡ ಬಿಚ್ಚದೇ, ಬೂಟು ಬಿಚ್ಚದೇ, ಆ ಸುಂದರ ಸೊಬಗಿನ ಗಾದಿಯ ಮೇಲೆ ಬುಡುಕ್ಕೆಂದು ಉರುಳಿ ….ಖುಶಿಖುಶಿಯ ಪ್ರೇಮಗೀತೆಗಳನ್ನು ಗುನುಗುನಿಸುತ್ತ…. ಉರುಳಾಡಿಬಿಟ್ಟ. ಇಂದೇ ಅಪಾಯಿಂಟ್‌ಮೆಂಟ ಆದ ಖುಶಿ. ಮಲಗಿದಲ್ಲೇ ಸಿಗರೇಟು ಸೇದಿದ. ಅಡ್ಡ ಮಲಗಿದ , ಉದ್ದ ಮಲಗಿದ, ಅಂಗಾತ ಮಲಗಿದ. ಪಕ್ಕದ ಬೆಡ್ಡಿನ ದೊಡ್ಡ ತಲೆದಿಂಬು ಎದೆಮೇಲೆ ಇಟ್ಟುಕೊಂಡು ಮೃದುವಾಗಿ ಚುಂಬಿಸಿ ಮಲಗಿದ. ಒಮ್ಮೆ ವಾಚು ನೋಡಿದ. ರಾತ್ರಿ ಎಂಟಾಗಿತ್ತು. ಏನೋ ವಿಚಾರ ಬಂತು. ಪಟ್ಟನೇ ಎದ್ದ. ಐದು ನಿಮಿಷದಲ್ಲಿ ತನ್ನ ಕೂದಲುಗಳನ್ನು ಹಿಕ್ಕಿಕೊಂಡ. ರೇಶಿಮೆ ಲಡಿಯಂತೆ ಉಂಡುಂಡೆಯಾದ ಆ ಕೂದಲುಗಳು…. ಹಿಕ್ಕಿದರೂ ಹೊನ್ನವರೆ ಹೂವು…. ಹಿಕ್ಕದಿದ್ದರೂ ಹುಂಚೀಹೂವಿನಂತೆ ಚಂದಾಗಿ ಕಾಣುತ್ತಿದ್ದವು.
ಲಗುಬಗೆಯಿಂದ ಪ್ರಮೋದ ಹೊರಗೆ ಬಂದು ರೂಮಿಗೆ ಬೀಗ ಹಾಕಿದ. ರೂಮಬಾಯ್ ಇವನನ್ನು ಅಂಜುತ್ತಲೇ ನೋಡುತ್ತ ನಿಂತಿದ್ದ. ಲಿಫ್ಟಿನಿಂದ ಕೆಳಗಿಳಿದು ಕೌಂಟರಿಗೆ ಬಂದು ಪ್ರಮೋದ ರೂಮಿನ ಚಾವಿಯನ್ನು ಕೌಂಟರಮನ್ ಎದುರಿಗೆ ಒಗೆದ. ಆತ ಇವನನ್ನು ಭೀತಿಯ ಕಣ್ಣಿನಿಂದ ನೋಡಿದ. “ಇವರೇಕೆ ನನ್ನನ್ನು ಅಂಜಿ ನೋಡುತ್ತಿದ್ದಾರೆ ?” ಎಂದು ಪ್ರಮೋದ ತನಗೆ ತಾನೇ ಅಂದುಕೊಂಡ. ಅವನ ಒಳಗಿನಿಂದಲೇ ಉತ್ತರ ಬಂತು…. “ಓಹೋ…. ಹೌದು…. ಹೌದು…. ನನಗೆ ದೊಡ್ಡ ನೌಕರಿ ಸಿಕ್ಕಿದೆ. ಇನ್ನುಮೇಲೆ ಎಲ್ಲರೂ ನನಗೆ ಅಂಜಲೇಬೇಕಲ್ಲಾ ! ” ಎಂದುಕೊಂಡ.
ನೇರವಾಗಿ ತನ್ನನ್ನು ಆಟೋದಲ್ಲಿ ತೂರಿಕೊಂಡ. ಸೆಕೆಂಡ್ ಶೋ ನೋಡಲು ಹೋದ. ಅದೊಂದು ಸುಂದರ ಶೃಂಗಾರಭರಿತ ಹದಿಹರೆಯದ ಫಿಲ್ಮು. ತುಂಬಾ ಚೆನ್ನಾಗಿತ್ತು.
* * *
ಮಧ್ಯರಾತ್ರಿ ಲಾಜಿಂಗಿಗೆ ಮರಳಿ ಬಂದು ಕೌಂಟರಿನಿಂದ ಚಾವಿ ಪಡೆದ. ಲಿಫ್ಟ ಬಂದಾಗಿತ್ತು. ಪಟ್….ಪಟ್….ಪಟ್…. ಬೂಟು ಕಟಿಯುತ್ತ ಮೆಲ್ಲನೆ ಮೇಲೇರಿದ. ನಾಲ್ಕನೇ ಅಂತಸ್ತು ಹತ್ತಿದಾಗ ತೇಕುಹತ್ತಿ ಒಂದು ಕ್ಷಣ ನಿಂತ. ಆಗ ಯಾರದೋ ಶೀತಲ ಹಸ್ತ ಅವನ ಹಣೆಯ ಮೇಲೆ ಇಟ್ಟಂತಾಯಿತು. ಹೊಳ್ಳಿ ನೋಡಿದ. ಯಾರೂ ಇರಲಿಲ್ಲ. “ಇದೂ ಸಿನಿಮಾ…” ಎಂದು ನಕ್ಕ !
ಮತ್ತೆ ಮೇಲೇರಿದ. ಗಾಢರಾತ್ರಿ. ಮಂದದೀಪ. ಇಡೀ ಹೊಟೇಲು ಬೆಕೋ ಬರಮಪ್ಪ ಆಗಿತ್ತು.
ರೂಮಿನ ಬೀಗ ತಗೆದ. ಒಳನುಗ್ಗಿದ. ಬಾಗಿಲು ಇಕ್ಕಿದ. ಬೂಟು ಮಾತ್ರ ತೆಗೆದ ಕಾಲುಚೀಲ ತೆಗೆಯಲಿಲ್ಲ. ಹಾಸಿಗೆ ಮೇಲೆ ಹಾಯಾಗಿ ಈಜುಬಿದ್ದ. ಯಾರೋ ಅವನ ಕಿವಿಯಲ್ಲಿ ಗುನುಗುನಿಸಿ ಗಾನಿಸಿದಂತಾಯಿತು! ಹೊರಳಿ ನೋಡಿದ. ಯಾರೂ ಇರಲಿಲ್ಲ. ಇದೂ ಒಂದು ಸಿನಿಮಾ ಅಂತ ನಕ್ಕ ! ಈ ಕುಲುಕಾಟದಲ್ಲಿ ನಿದ್ರೆ ಹತ್ತಿತು….
ರಾತ್ರಿ ಒಂದು ಗಂಟೆಗೆ ಯಾರೊ ಇವನ ಮೇಲೆ ಇವನನ್ನು ಗಾಢವಾಗಿ ಅಪ್ಪಿ ಮಲಗಿದ್ದಾರೆ ! ಅಪ್ಪುಗೆಯಿಂದಲೇ ಇದು ಬಿಸಿರಕ್ತದ ಹೊಸಹೆಣ್ಣು ಎಂದು ಅನಿಸಿತು. ಇವನಿಗೆ ಗಾಬರಿಯಾದರೂ ಆ ಹೆಣ್ಣು ಬಿಡಲಿಲ್ಲ. ಕಿವಿಯಲ್ಲಿ ಮೆಲ್ಲನೇ …. “ಫಿಲ್ಮು ಚನ್ನಾಗಿತ್ತು ಡಿಯರ್…. ನಾನೂ ನಿನ್ನ ಜೊತೆಗೇ ಬಂದಿದ್ದೆ…. ನಿನ್ನ ಪಕ್ಕದ ಕುರ್ಚಿಯಲ್ಲಿ ಕುಂತಿದ್ದೆ”…. ಎಂದು ಮಲ್ಲಿಗೆ ಕಂಠದಲ್ಲಿ ಮೆಲ್ಲನೆ ಕಿವಿಕಡಿದು ಹೇಳಿದಂತಾಯಿತು. ಇವನಿಗೆ ಕೈಕಾಲು ಅಲುಗಿಸಲೂ ಶಕ್ತಿ ಬರಲಿಲ್ಲ. ಹಾಗೇ ಬಿದ್ದುಕೊಂಡ. ಹಾಗೇ ಮಬ್ಬು. ಹಾಗೇ ಅರೆನಿದ್ರೆ. ಪದೇ ಪದೇ ಸ್ಪರ್ಶ. ಅದೇ ಮಾತು. ಅದೇ ಚುಂಬನ. ಮುಂದೆ ಬರುಬರುತ್ತ ಭಯ ಕಡಿಮೆ ಆಗಿ ಸುಖದ ಬಾಗಿಲು ತೆರೆದಂತಾಯಿತು. ಕೊನೆಗೊಮ್ಮೆ ಆ ಹೆಣ್ಣು ಇವನ ಶರೀರದಲ್ಲೇ ಪ್ರವೇಶಿಸಿದ್ದು ಇವನಿಗೆ ಹೇಗೆ ಗೊತ್ತಾಗಬೇಕು……?
* * *
ಬೆಳಗಿನ ಹೊತ್ತಿಗೆ ತೀರಾ ಮಂಕಾಗಿದ್ದ. ನಿನ್ನಿನ ರಭಸ ಇರಲಿಲ್ಲ. ಆ ವೀರಾವೇಶ ಇರಲಿಲ್ಲ. ಶಕುಂತಲೆಗೆ ಸೋತ ದುಶ್ಶಂತನಂತೆ ಮೆತ್ತಗಾಗಿದ್ದ. ಮನಸು ಮತ್ತೆ ಮತ್ತೆ ಅದೇ ಅನುಭವವನ್ನು ಪದೇಪದೇ ಬಯಸಿದಂತೆ ಆಗುತ್ತಿತ್ತು. ನಡುನಡುವೆ ಇವನ ಆ ಶರೀರ ಇವನದಾಗಿರುತ್ತಿರಲಿಲ್ಲ. ಇವನ ಶರೀರ ಇನ್ನೊಬ್ಬರದಾಗುತ್ತಿತ್ತು. ಒಂದೇ ಶರೀರದಲ್ಲಿ …”ತಾನು” ಮತ್ತು….”ಇನ್ನೊಂದು”…. ಎರಡು ಜೀವಚೈತನ್ಯಗಳು ರಮಿಸಿದಂತೆ….. ಕ್ರೀಡಿಸಿದಂತೆ….. ಸಂಭೋಗಿಸಿದಂತೆ…. ವಿಚಿತ್ರ ಅನುಭವ ! ತನ್ನ ಶರೀರ ಬಿಟ್ಟು ತಾನು ಆ ರೂಮಿನ ಒಳಗಡೆಗೆ ಸುತ್ತಾಡಿ …. ಯಾರದೋ ಜೊತಗೆ ಮುಟ್ಟಾಟ ಆಡಿ…. ಮರಳಿ ಬಂದು, ನಂತರ ತನ್ನ ಶರೀರ ತಾನೇ ಪ್ರವೇಶಿಸಿದ ವಿಚಿತ್ರ ಅನುಭವವಾಯಿತು. ಇದು ಕನಸೋ…. ಕಲ್ಪನೆಯೋ…. ಏನೂ ತಿಳಿಯದೆ…. ತಲೆ ಕೆರೆದುಕೊಂಡು ಸಿಗರೇಟು ಉರಿಸಿದ.
* * *
ಟಿಫಿನ್ ಮುಗಿಸಿ ಮೇಲೆದ್ದ. ಡ್ರೆಸ್ ಮಾಡಿದ. ತನ್ನ ಅಪಾಯಿಂಟ್‌ಮೆಂಟಿಗೆ ಮುಖ್ಯ ಕಾರಣಕರ್ತನಾದ ತನ್ನ ಗೆಳೆಯನ ತಂದೆಗೆ ಥ್ಯಾಂಕ್ಸ ಹೇಳಿ ಬರಬೇಕಾಗಿತ್ತು. ಹೊರಟ. ಯಾರೋ ಕಿವಿಯಲ್ಲಿ…. “ಪ್ರಮೋದ…. ನೀನು ಹೋಗಬೇಕಾಗಿಲ್ಲ…. ಬಾ…. ಬಾ….” ಎಂದು ನಿಲ್ಲಿಸಿದಂತಾಯಿತು. ಒಳಗೊಳಗೇ ಹಗ್ಗಹಚ್ಚಿ ಎಳೆದಂತಾಯಿತು. ಬಿದ್ದುಕೊಂಡ. “ಹೀಗೇಕೆ ಆಗುತ್ತಿದೆ…. ನನಗೆ ಯಾರು ಬೆನ್ನು ಹತ್ತಿದ್ದಾರೆ….. ಇದು ಯಾವುದಾದರೂ “ಘೋಸ್ಟ” ಇರಬಹುದೇ?”… ಎಂದುಕೊಂಡ.
ಒಂದು ಸಲ ಸಿಗರೇಟು ಉರಿಸಿದಾಗ ತನ್ನ ಅಜ್ಜನ ನೆನಪಾಯಿತು. ಅಜ್ಜ ವೀರಭದ್ರ ತಾತಾ. ಅವನಿಗೆ ಹಾಡೇಹಗಲು ದೆವ್ವ ಕಾಣಿಸುತಿದ್ದವಂತೆ ! ದೆವ್ವಗಳ ಜೋಡಿ ಮಾತಾಡುತ್ತಿದ್ದನಂತೆ ದೆವ್ವಗಳ ಮಾತು ಅವನಿಗೆ ಸ್ಪಷ್ಟವಾಗಿ ಕೇಳುತ್ತಿದ್ದವಂತೆ. ಅಜ್ಜ ಒಮ್ಮೊಮ್ಮೆ ಪ್ರಮೋದನಿಗೆ ಹೇಳುತ್ತಿದ್ದ… “ಪಮೂ …. ದೆವ್ವಾ ಅಂದ್ರ ಎಲ್ಲಾ ಕೆಟ್ಟ ಅಲ್ಲಾ…. ಕೆಲವೊಂದು ದೆವ್ವಾ ಕೆಟ್ಟಿರ್ತಾವು….. ಒಂದೊಂದು ದೆವ್ವಾ ಬ್ಹಾಳಾ ಚೊಲೊ ಇರ್ತಾವು. ಚೊಲೊ ದೆವ್ವಂದ್ರ ಚೊಲೊ ಹೇಂತೀಗಿಂತ ಚೊಲೊ ಇರ್ತಾವು….” ಎಂದು ಚೇಷ್ಟೆ ಮಾಡುತ್ತಿದ್ದ. ಯಾರಿಗೆ ಆರನೇ ಇಂದ್ರಿಯ ಜಾಗೃತ ಇರ್ತದೋ ಅವರಿಗೆ ದೆವ್ವಾ-ದೇವ್ರು ಎಲ್ಲಾ ಕಾಣ್ತಾವು ಅಂತಿದ್ದ. ಆದರೆ ಆ ಚೇಷ್ಟೆಯ ಮಾತು ಇಂದು ಇವನಿಗೆ ಖರೇ ಹಕೀಕತ್ತು ಆಗಿಬಿಟ್ಟಿದೆ. ಕುಂತಕುಂತಲ್ಲೇ ಅಪ್ಪುಗೆ…. ಕುಂತಕುಂತಲ್ಲೇ ಕಿವಿ ಕಡಿದಂತೆ…. ಕುಂತಕುಂತಲ್ಲೇ ಟೊಂಕ ಚೂಟಿದಂತೆ… ಕುಂತಲ್ಲೇ ಕುಲುಕಾಟ…. ಮಲಗಿದಲ್ಲೇ ಮುಲುಕಾಟ …..ಏನಿದು ? ಯಾರು ಇದು ? ಇದು ಅಜ್ಜ ಹೇಳಿದಂತೆ ಒಳ್ಳೇ ದೆವ್ವವೋ ?…..ಈಜ ಇಟ್ ಎ ಗುಡ್ ಅಂಡ್ ಲವಿಂಗ ಘೋಸ್ಟ ?
* * *
ಹೊರಗೆ ಹೋಗಲು ಡ್ರೆಸ್ಸು ಮಾಡಿಕೊಂಡು, ಬೂಟು ಹಾಕಿಕೊಂಡ ಪ್ರಮೋದ ಮತ್ತೆ ಹಾಸಿಗೆಗೆ ಬಿದ್ದ. ಇಡೀರಾತ್ರಿ ಅರೆನಿದ್ರೆ ಆದುದರಿಂದ ಒಂದು ಜಂಪು ಹತ್ತಿತು. ಆ ಜಂಪಿನಲ್ಲಿ ಆ ಹುಡಿಗಿ ಮತ್ತೆ ಬಂದಳು ! ಹುಡಿಗಿ ಅಂದರೆ ಹುಡಿಗಿ…. ತುಪ್ಪದ ಗಡಿಗಿ…. ಬೆಲ್ಲದ ಬಡಿಗಿ ! ಇವನ ಇಡೀ ಶರೀರವನ್ನು ತುಟಿಯಿಂದಲೇ ಚೀಪಿದಳು. ಹೀಗೆ ಇಂಥಾ ಸುಖಾ ಇದ್ದರೆ ಇದೇ ಇರಲಿ…. ಅನಿಸಿತು. ಮನುಷ್ಯರಿಂದ ದೊರೆಯದ ಸುಖ ಭೌತಾತೀತ ಅತಿಮಾನಸಿಗರಿಂದ ದೊರೆಯುತ್ತಿದ್ದರೆ ಏಕೆ ಬೇಡ ? ಎಷ್ಟೇ ಆದರೂ ನಾವು ಮಾಡುವುದೆಲ್ಲಾ ಸುಖಕ್ಕಾಗಿ ಅಲ್ಲವೇ ?
* * *
ಪ್ರಮೋದನಿಗೆ ಮೊದಲ ಪೋಸ್ಟಿಂಗ ಅವನ ಊರು ಧಾರವಾಡಕ್ಕೆ ಆಯಿತು. ನೌಕರಿಯೇನೊ ನಿಧಾನವಗಿ ಸಾಗಿತು. ಆದರೆ ಹೊರಗಿನ ಜಗತ್ತಿನ ಬಗ್ಗೆ ಅಪಾರ ಜಿಗುಪ್ಸೆ ಆರಂಭವಾಯಿತು. ಒಳಗಿನಜಗತ್ತಿನಲ್ಲಿ ದೊರೆಯುವ ಅಮಿತ ಸುಖ…. ಆತ್ಮರತಿ…. ಅಶರೀರ ಸಂಭೋಗ…. ಹೊರಗಿನ ಜಗತ್ತಿನಲ್ಲಿ ಇಲ್ಲ ಅನಿಸಿತು. ದಿನೇದಿನೇ ಮಂಕಾಗತೊಡಗಿದ. ಸದಾಕಾಲ ಚಾದರಿನ ಒಳಗೆ ಬೆಚ್ಚನೆ ಕಾಲು ಚಾಚಿ ಮಲಗುವದೊಂದೇ ಬಾಕಿ. ಒಮ್ಮೆಯಂತೂ ಅವಳು ನಡುರಾತ್ರಿಯಲ್ಲೇ ಇವನನ್ನು ಕಚ್ಚನೇ ಕಚ್ಚಿ ಹೇಳಿದಳು….. “ಪ್ರಮೋದ…. ನಾಳೆಯಿಂದ ನೌಕರಿಗೆ ಹೋಗಬೇಡ ಡಿಯರ್…. ನನ್ನ ಕೂಡ ನನ್ನ ಮನೆಗೆ ಬಂದು ಬಿಡು….” ಈತ ಕೇಳಿದ…..”ಎಲ್ಲಿದೆ ನಿನ್ನ ಮನೆ ಪ್ರಿಯೆ ?” ಈ ಪ್ರಶ್ನೆ ಕೇಳುತ್ತಿದ್ದಂತೆ ಇವನಿಗೆ ಮಂಪರು ಕವಿದಂತಾಯಿತು. ಅವಳು ಸಿಹಿತುಂಬಿ ಉತ್ತರಿಸಿದಳು….. “ಪ್ರಿಯಾ…. ಈ ನಿಮ್ಮ ಜಗತ್ತು ಜಡಜಗತ್ತು. ನಿಮ್ಮದು ಜೀವಂತ ಸ್ಮಶಾನ. ನೀವೆಲ್ಲಾ ಹೆಣಗಳು. ಯಾವ ಸುಖವೂ ದೊರೆಯದ ಹೆಣಗಳು. ಬಾ ನನ್ನ ಜಗತ್ತಿಗೆ. ನಮ್ಮದೇ ಒಂದು ದೊಡ್ಡ ಜಗತ್ತಿದೆ. ನಾವೆಲ್ಲಾ ಹಕ್ಕಿಗಿಂತಲೂ ಹಗುರು. ಜಡದ ಭಾರವೇ ನಮಗಿಲ್ಲ. ನಮಗೆ ರೋಗವೇ ಇಲ್ಲ. ನಮ್ಮ ಲೋಕ ನಿಮ್ಮ ಲೋಕಕ್ಕಿಂತ ಸಾವಿರ ಲಕ್ಷ ಪಟ್ಟು ಸುಂದರ. ಬಾ…. ನೋಡ ಬಾ…. ನಮ್ಮಲ್ಲಿ ಕೋರ್ಟ ಇಲ್ಲ…. ಪೋಲೀಸ್ ಸ್ಟೇಷನ್ ಇಲ್ಲ…. ಜೇಲು ಇಲ್ಲ…. ದವಾಖಾನೆ ಇಲ್ಲ… ಆಪರೇಷನ್ ಇಲ್ಲ…. ಹಣ ಕೀಳುವ ಡಾಕ್ಟರರಿಲ್ಲ….. ರೇಷನ್ ಅಂಗಡಿ ಇಲ್ಲ…. ಖಾನಾವಳಿ ಇಲ್ಲ….. ಸ್ವಾಮಿ ಜಗದ್ಗುರು ಇಲ್ಲ…. ಲಂಚ ರುಜುವಾತು ಇಲ್ಲ. ನಾವೆಲ್ಲಾ ಹಾರಾಡುವ ಹೂವುಗಳು…. ತೇಲಾಡುವ ಮೋಡಗಳು…. ನಗುವ ಕಾರಂಜಿಗಳು. ಪ್ರಮೋದ…. ಬಾಬಾ…. ಈ ಹೊಲಸು ಮುಳ್ಳಿನ ಸ್ವಾರ್ಥೀ ಜಗತ್ತು ಬಿಟ್ಟು ನಮ್ಮ ಮಲ್ಲಿಗೆಯ ನಗರಕ್ಕೆ ಬಾ ಗೆಳೆಯಾ. ನಿನಗೆ ಆಣೆಮಾಡಿ ಹೇಳುತ್ತೇನೆ…. ನಮ್ಮ ಸುಖದ ಸಾವಿರದ ಒಂದಂಶ ಕೂಡಾ ನಿಮ್ಮ ಈ ಜಗತ್ತಿನಲ್ಲಿ ಇಲ್ಲ. ನಮಗೆ ನಮ್ಮದೇ ಜಗತ್ತಿದೆ. ನಾವು ಸೆಕೆಂಡಿನಲ್ಲಿ ಅಮೇರಿಕೆಯಲ್ಲಿರಬಹುದು. ಸೆಕೆಂಡಿನಲ್ಲಿ ಅಂಟಾರ್ಟಿಕಾದಲ್ಲಿರಬಹುದು. ನಮಗೆ ಥಂಡಿ ಇಲ್ಲ. ಮಳೆ ಇಲ್ಲ. ಬಿಸಿಲಿಲ್ಲ. ಬಿರುಗಾಳಿ ಇಲ್ಲ. ರಾತ್ರಿಯ ಪೀಡೆ ಇಲ್ಲ. ಬಾಬಾ…. ಬಾ ಪ್ರಮೋದ….ಈ ನಿನ್ನ ದೇಹವನ್ನು ಯಾವುದಾದರೂ ಹಳೆಕುಣಿ ನೋಡಿ ಹುಗಿದು ಬಾ ಗೆಳೆಯಾ…. ಬಂದುಬಿಡು…. ಬಂದುಬಿಡು ಪ್ರಿಯಾ…..”
* * *
ತಂದೆ-ತಾಯಿ ಇವನ ಮಂಕುಬಡಿದ ಗುಂಗು ಕಂಡು ಕಂಗಾಲಾದರು. ಯಾರೋ ಹೇಳಿದರು…. “ನಿಮ್ಮ ಮಗನಿಗೆ ವಯಸ್ಸಿನ ರೋಗ…. ಮದುವೆ ಮಾಡಿಬಿಡಿರಿ…. ಎಲ್ಲಾ ಸರಿ ಆಗುತ್ತದೆ…”
ಕಡೆಗೆ ತಂದೆತಾಯಿಯ ಭಾರೀ ಒತ್ತಾಯದ ಮೇರೆಗೆ ಪ್ರಮೋದ ಒಂದು ಸಲ ಬೆಳಗಾವಿಯ ಠಳಕವಾಡಿಯಲ್ಲಿ ಇರುವ ಒಂದು ಠೀಕ ಬಂಗಲೆಗೆ ಕನ್ಯಾ ನೋಡಲು ಹೋದ. ಎದುರಿಗೆ ಆ ಕನ್ಯೆ…. ಸೀರೆ ಮುಚ್ಚಿದ ಕುಂಬಳಕಾಯಿಯಂತೆ ಬಂದು ಕೂತಿತು. ಸಂಪ್ರದಾಯದ ಪ್ರಕಾರ ಪ್ರಮೋದನ ತಂದೆ ಆ ಹುಡಿಗಿಗೆ…. “ಏನು ತಂಗೀ ನಿನ್ನ ಹೆಸರೇನು ?….. ಎಂದು ಕೇಳಿದರು. ಆ ಹುಡಿಗಿ ಅಂಜುತ್ತ….ಭಯದಿಂದ….”ಶಂಕ್ರವ್ವ” ಎಂದಿತು.
ಆ ಕ್ಷಣದಲ್ಲಿ ಪ್ರಿಯಾಳ ದೆವ್ವ ಖೊಕ್ ಖೊಕ್ ನಗುತ್ತ ಎದುರಿಗೇ ನಿಂತದ್ದು ಪ್ರಮೋದನಿಗೆ ಭಾಸವಾಯಿತು. ಇವರ ಜೊತೆಗೆ ಕನ್ಯಾ ನೋಡಲು ಸಂಪ್ರದಾಯದಂತೆ ಒಬ್ಬ ಸ್ವಾಮಿಯೂ ಬಂದಿದ್ದ. ಆತ ಆ ಹುಡಿಗಿಯ ಐದೂ ಬೆರಳನ್ನು ದಾರದಿಂದ ಅಳೆದು, ಶಾಸ್ತ್ರದಂತೆ ಮೂರು ಪಟ್ಟು ಮಡಚಿ, ನಂತರ ದಾರವನ್ನು ಅವಳ ಬಲಗಾಲಿನ ಹೆಬ್ಬೆರಳಿನಿಂದ ಅವಳ ಹೆಣೆಯ ಕುಂಕುಮದವರೆಗೆ ಅಳೆದ. “ಅಡ್ಡೀ ಇಲ್ಲಾ…. ಅಳತೆ ಸರಿಯಾಗಿದೆ….” ಅಂದ. ಆ ದೆವ್ವ ಖೊಕ್ ಖೊಕ್…. ನಕ್ಕಂತೆ ತೋರಿತು. ಯಾರಗೂ ಗೋಚರಿಸಲಿಲ್ಲ.
ಪ್ರಮೋದನ ಅಜ್ಜ ಹಿಂದೊಮ್ಮೆ ಹೇಳಿದ್ದ…. “ಈ ಜಗತ್ತಿನಲ್ಲಿ ಕೆಲವರಿಗೆ ಮಾತ್ರ ದೆವ್ವ ನೋಡಬಲ್ಲ…. ಭೂತದ ಕಣ್ಣು ….ಇರುತ್ತದೆ” …ಅಂತ.
ಈಗ ಈ ಕನ್ಯಾ ಪರೀಕ್ಷೆಯಲ್ಲಿ ಸ್ವಾಮಿ ತನ್ನ ಇಂಟರವ್ಯೂ ಮುಂದುವರೆಸಿದ…. “ಏನವಾ ತಂಗಿ….ನಿನಗ ಓದಾಕ ಬರತೈತ್ಯಾ?” ಆ ಹುಡಿಗಿ ಗದಗದಾ ನಡುಗುತ್ತ ಕುಂತಿತು. ದೆವ್ವ ಮತ್ತೂ ನಕ್ಕಂತಾಯಿತು. ಇನ್ನೊಬ್ಬ ಹಿರಿಯ ಆ ಹುಡಿಗಿಗೆ ಕೇಳಿದ….. “ಏನವಾ ತಂಗಿ…. ನಿನಗೆ ಗಾಯನಾ-ಹಾಡು ಬರತಾವೇನು ?” ಆ ಹುಡಿಗಿ ಉತ್ತರಿಸುವ ಮೊದಲೇ ಹುಡಿಗಿಯ ಅಜ್ಜಿ…. “ಇಲ್ರಿ ನಾವು ಹಾಡ ಕಲಿಸಿಲ್ರಿ….. ಅಡಿಗಿ ಕಲಿಸೇವ್ರಿ. ರೊಟ್ಟಿಪಲ್ಲೆ ಚೊಲೊ ಮಾಡ್ತಾಳ್ರಿ….” ಅಂತ ಅಂದಳು.
ಆದರೆ ವಿಚಿತ್ರ ! ಅದ್ಭುತ ! ಆ ಹುಡಿಗಿ ಶಂಕ್ರೆವ್ವ ಈಗ ಅತ್ಯಂತ ರಾಗಬದ್ಧವಾಗಿ ಹಿಂದಿಯಲ್ಲಿ ಹಾಡತೊಡಗಿದಳು ! ಹುಡಿಗಿಯ ತಂದೆ-ತಾಯಿ ದಿಗ್ಭ್ರಾಂತರಾಗಿ ದೆವ್ವ ನಿಂತಂತೆ ನಿಂತರು. ತುಂಬಾ ನಾಚಿಕೆಯಿಂದ ಕುಂತ ಹುಡಿಗಿ ಒಮ್ಮೆಲೇ ಆಕಾಶವಾಣಿ ಶೈಲಿಯಲ್ಲಿ ಹಾಡತೊಡಗಿದ್ದು ಕಂಡು ಸ್ವತಃ ಸ್ವಾಮಿಯೂ ಅಂಜಿಬಿಟ್ಟ. ಪ್ರಮೋದನ ತಂದೆ-ತಾಯಿ ಕಂಗಾಲ ಕಾಗಿಯಾಗಿ ಬಾಯ್ಬಾಯಿ ಬಿಡುತ್ತ ನಿಂತರು. ಹುಡಿಗಿಯ ರಾಗ ಏರತೊಡಗಿತು ! ಎಲ್ಲರ ಮೈಯಲ್ಲಿ ಬೆವರು ಇಳಿಯತೊಡಗಿತು !!
ಕೊನೆಗೆ ಆ ಹುಡಿಗಿ ಖೊಕ್ ಖೊಕ್ ಎಂದು ಬಿದ್ದುಬಿದ್ದು ನಗತಾಡಗಿದಾಗ ಎಲ್ಲರಿಗೂ ತರತರದ ಸಂಶಯ ಮೂಡತೊಡಗಿದವು. ಅವಳು ದಿಲ್ಲಿ ಹುಡಿಗಿ ಅಂತ ಯಾರಿಗೂ ಗೊತ್ತಾಗಲೇಇಲ್ಲ. ಕೊನೆಗೆ ಆ ಶಂಕ್ರೆವ್ವ ಎದ್ದುನಿಂತು ಆಧುನಿಕ ಶೈಲಿಯಲ್ಲಿ ಪ್ರಮೋದನನ್ನೆ ಜಗ್ಗಿ ನರ್ತನಮಾಡತೊಡಗಲು ಆ ಸ್ವಾಮಿ…. ಅಯ್ಯಯ್ಯೋ ಇದು ದೆವ್ರೀ…ದೆವ್ವಾ…. ಎಂದು ಚೀರಿಬಿಟ್ಟ ! ಅವನ ಧೋತರದಲ್ಲಿ ಒಂದು ಹನಿ ಕಾರಂಜಿ ಸಿಡಿದದ್ದು ಅವನಿಗೇ ಗೊತ್ತಾಗಲಿಲ್ಲ. ಇದು ದೆವ್ವ ಅಂತ ತಿಳಿದಾಕ್ಷಣ ತಿನ್ನಲು ಇಟ್ಟ ಅವಲಕ್ಕಿ- ಉಂಡಿ- ಚಕ್ಲಿ ಅಲ್ಲೇ ಬಿಟ್ಟು ಎಲ್ಲರೂ ಕಿತಗೊಂಡ ಕಿನ್ಯಾ ಅಂತ ಓಡಿಬಿಟ್ಟರು !
* * *
ಬರಬರುತ್ತ ಪ್ರಮೋದನ ನಿರಾಶೆ ಹೆಚ್ಚಾಯಿತು. ಸದಾ ಏಕಾಂತ. ಸದಾ ಹಾಸಿಗೆ. ನೌಕರಿಗೆ ಹೋಗುವದೆಂದರೆ ಜೇಲಿಗೆ ಹೋಗುವ ಅನುಭವ ! ಊಟವೆಂದರೆ ವಿಷ. ಹಗಲು ನೋಡಿದರೆ ಅಂಜಿಕೆ. ಬೆಳಕು ಕಂಡರೆ ಭಯ. ಒಮ್ಮೊಮ್ಮೆ ಯಾರೊಡನೆಯೋ ಮಾತಾಡಿದಂತೆ ಬಡಬಡಿಸುವ. ಯಾವ ವೈದ್ಯರಿಗೂ ಈ ಕಾಯಿಲೆಯ ಹೆಸರು ಗೊತ್ತಾಗಲಿಲ್ಲ. ಎಲ್ಲರೂ ನರ್ವಸ್ ವೀಕನೆಸ್ ಅಂತ ಹೇಳಿ ತರತರದ ಚಿಕೆತ್ಸೆ-ಗುಳಿಗಿ- ಇಂಜೆಕ್ಶನ್ ಕೊಟ್ಟು ಕೈತೊಳೆದುಕೊಂಡರು. ಮಂತ್ರವಾದಿಗಳು ಕೊಟ್ಟ ನಿಂಬೆಹಣ್ಣು- ತಾಯಿತ-ಕುಂಕುಮ- ಅರಿಷಿಣ ಗೊಂಬಿ ತಿಪ್ಪೆ ಕಂಡವು. ಭೂತ ಬಿಡಿಸಲು ಬಂದ ಒಬ್ಬ ಮಂತ್ರವಾದಿ ಕಿಡಕಿಯಿಂದ ಹಾರಿ ಪರಾರಿ ಪೌ ಆದ !
ಇದೇ ಕಾಲಕ್ಕೆ ಶಿವಮೊಗ್ಗೆಗೆ ವರ್ಗವಾಯಿತು. ಒಂದು ತಿಂಗಳು ರಜೆ ಹಾಕಿ ಮನೆಗೇ ಬಂದು ಕುಳಿತ. ತಂದೆ ಅಬ್ಬರಿಸಿ ಬಯ್ದರು. “ವಾತಾವರಣ ಬದಲಾಗುತ್ತದೆ…. ಹೋಗು….” ಎಂದು ಶಿವಮೊಗ್ಗೆಗೆ ನೂಕಿದರು. ಅನಿವಾರ್ಯವಾಗಿ ಪ್ರಯಾಣ ಹೊರಟ…..
* * *
ಮಗ ಹೋದ ಮೂವತ್ತು ದಿನಕ್ಕೆ ಒಂದು ಸುದ್ದಿ ಬಂತು…. “ನಿಮ್ಮ ಮಗ ಪ್ರಮೋದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ…. ತಕ್ಷಣ ಬನ್ನಿರಿ….”
ಇವರು ಹೌಹಾರಿ ಒಂದು ಟ್ಯಾಕ್ಸಿ ಮಾಡಿಕೊಂಡು ಶಿವಮೊಗ್ಗೆಗೆ ಹೋದರು. ಹೆಣದ ತನಿಖೆ ಮುಗಿದಿತ್ತು. ಪ್ರಮೋದನ ಹೆಣ ಆಸ್ಪತ್ರೆಯ ಶವದ ಕೋಣೆಯಲ್ಲಿತ್ತು. ಇವರು ಪೋಲೀಸ್ ಸ್ಟೇಶನ್ನಿಗೆ ಹೋದರು. ಇನ್ಸಪೆಕ್ಟರ್ ಇವರ ಎದುರಿಗೆ ಮಗನ ಕೊನೆಯ ಪತ್ರ ಇರಿಸಿದರು…..
“ಡ್ಯಾಡಿ… ವ್ಹೆರಿಸಾರಿ…. ನನ್ನ ಘೋಷ್ಟ….ನನ್ನ ಪ್ರೀತಿಯ ಹುಡಿಗಿ…. ನನ್ನ ಮುಂದೆ ಕುಳಿತು ಈ ಪತ್ರ ಬರೆಸುತ್ತಿದ್ದಾಳೆ. ಅವಳಿಗಾಗಿ ನಾನು ಸಾಯಲೇಬೇಕಾಗಿದೆ. ಮಮ್ಮಿ…. ಕ್ಷಮಿಸು….. ನನ್ನನ್ನು ಮರೆತುಬಿಡು. ನನ್ನ ಘೋಷ್ಟ ಭಾರೀ ಅವಸರ ಮಾಡುತ್ತಿದ್ದಾಳೆ. ಅವಳಿಲ್ಲದೇ ನಾನು ಬದುಕಲಾರೆ. ನಾನು ಖುದ್ದಾಗಿ ಆತ್ಮ ಹತ್ಯೆ ಮಾಡಿಕೊಂಡಿದ್ದೇನೆ. ತನಿಖೆ ಮಾಡಬೇಡಿರಿ. ನಿಮಗೆ ಕೊನೆ ನಮಸ್ಕಾರ…. ನಿಮ್ಮ ಮಗ…. ಹಾಗೂ ನಿಮ್ಮ ಸೊಸೆ….”
ಪತ್ರದ ಕೆಳಗೆ ಎರಡು ಸಹಿಗಳಿದ್ದವು….
ಒಂದು ಸಹಿ ಕನ್ನಡದಲ್ಲಿ……. “ಪ್ರಮೋದ” !
ಇನ್ನೊಂದು ಸಹಿ ಇಂಗ್ಲಿಷಿನಲ್ಲಿ…….”ಪ್ರಿಯಾ ಪ್ರಮೋದ” !!

 ಲೇಖಕರು –

ಪ್ರೊ ಜಿ ಎಚ್ ಹನ್ನೆರಡುಮಠ
# ೫ : “ಮಾವುಮಲ್ಲಿಗೆ” : ಇಂದ್ರಪ್ರಸ್ಥ ಕಾಲನಿ
ಗೊಟ್ಟಿಗೆರೆ ಅಂಚೆ : ಬೆಂಗಳೂರ- ೫೬೦೦೮೩

ದೂರವಾಣಿ- ೯೯೪೫೭ ೦೧೧೦೮

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button