
ಇಬ್ಬರು ಅರೆಸ್ಟ್
ಪ್ರಗತಿವಾಹಿನಿ ಸುದ್ದಿ: ಅಕ್ರಮ ಸಂಬಂಧ ಆರೋಪದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಘಟನೆ ಬೀದರ್ ನಲ್ಲಿ ನಡೆದಿತ್ತು. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗನಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಷ್ಣು (27) ಮೃತ ಯುವಕ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಲಾತೂರ್ ಗ್ರಾಮದ ಮಹಿಳೆಯೊಂದಿಗೆ ಯುವಕ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪವಿತ್ತು. ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಮಹಿಳೆ ಹಾಗೂ ಯುವಕ ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಮಹಿಳೆ ಮೂರು ತಿಂಗಳ ಹಿಂದೆ ತನ್ನ ತವರು ಮನೆ ನಾಗನಪಲ್ಲಿಗೆಗೆ ಬಂದು ನೆಲೆಸಿದ್ದು, ಅ.೨೧ರಂದು ಯುವಕ ವಿಷ್ಣು ತನ್ನ ಇಬ್ಬರು ಸ್ನೇಹಿತರೊಂದಿಗೆ ಬೈಕ್ ನಲ್ಲಿ ನಾಗನಪಲ್ಲಿಗೆ ಬಂದಿದ್ದ.
ಈತನನ್ನು ಕಂಡ ಮಹಿಳೆಯ ಸಹೋದರ ಹಾಗೂ ತಂದೆ ಯುವಕನನ್ನು ಹಿಡಿದು ಮನಬಂದಂತೆ ದೊಣ್ಣೆಯಿಂದ ಥಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಯುವಕ ಸಾವನ್ನಪ್ಪಿದ್ದಾನೆ. ಚಿಂತಾಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.



