Kannada NewsKarnataka NewsLatest

ಬೆಳಗಾವಿ ಬಿಜೆಪಿಯಲ್ಲಿ ಭಾರೀ ಬೆಳವಣಿಗೆ: ಜಾರಕಿಹೊಳಿ ಬ್ರದರ್ಸ್ ನಿಂದ ಬಿಜೆಪಿಗೆ ಡ್ಯಾಮೇಜ್, ಕಂಟ್ರೋಲ್ ಗೆ ತಂತ್ರಗಾರಿಕೆ ಹೆಣೆದ ನಾಯಕರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಭಾರತೀಯ ಜನತಾಪಾರ್ಟಿಯ ಬೆಳಗಾವಿ ಜಿಲ್ಲಾ ಘಟಕದಲ್ಲಿ ಭಾರೀ ಬೆಳವಣಿಗೆ ನಡೆದಿದೆ. ಮೊಟ್ಟ ಮೊದಲ ಬಾರಿಗೆ ಜಾರಕಿಹೊಳಿ ಸಹೋದರರನ್ನು ಹೊರಗಿಟ್ಟು ಬಿಜೆಪಿ ನಾಯಕರೆಲ್ಲ ಒಂದು ಕಡೆ ಕುಳಿತು ಗಂಭೀರ ಚರ್ಚೆ ನಡೆಸಿದ್ದಾರೆ.

ಜಾರಕಿಹೊಳಿ ಸಹೋದರರಿಂದ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಡ್ಯಾಮೇಜ್ ಆಗಿತ್ತಿದ್ದು ಬಿಜೆಪಿ ಉಳಿಸಬೇಕೆಂದರೆ ಗಂಭೀರ ಕ್ರಮವಾಗಬೇಕೆನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ಶಿವಬಸವನಗರದಲ್ಲಿರುವ ಸಚಿವ ಉಮೇಶ ಕತ್ತಿ ನಿವಾಸದಲ್ಲಿ ಬಿಜೆಪಿಯ ಇಬ್ಬರು ಸಂಸದರು, ಹಾಲಿ, ಮಾಜಿ ಸಚಿವರು, ಹಾಲಿ, ಮಾಜಿ ಶಾಸಕರೆಲ್ಲ ಶನಿವಾರ ಸಂಜೆ ಸೇರಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಉಂಟಾಗಿರುವ ದೊಡ್ಡ ಹೊಡೆತ ಅವರನ್ನೆಲ್ಲ ಅಲ್ಲಿ ಸೇರುವಂತೆ ಮಾಡಿತ್ತು. ಕಳೆದ ಲೋಕಸಭಾ ಚುನಾವಣೆ ವೇಳೆಯೂ ಪಕ್ಷಕ್ಕೆ ದೊಡ್ಡ ಹೊಡೆತ ಉಂಟಾಗಿದೆ. ಅದರ ಮುಂದುವರಿದ ಭಾಗವೇ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ. ಜೊತೆಗೆ ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲೂ ಇದೇ ರೀತಿಯಾಗಿದೆ. ಆಗಲೇ ಎಚ್ಚೆತ್ತುಕೊಂಡಿದ್ದರೆ ಈ ಹಂತಕ್ಕೆ ಹೋಗುತ್ತಿರಲಿಲ್ಲ ಎನ್ನುವುದು ನಿನ್ನೆ ನಡೆದ ಸಭೆಯ ಪ್ರಮುಖ ಚರ್ಚೆ.

ಮಾಜಿ ಸಚಿವ, ಹಾಲಿ ಶಾಸಕ ರಮೇಶ ಜಾರಕಿಹೊಳಿ ಮತ್ತು ಹಾಲಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಭೆಗೆ ಆಹ್ವಾನಿಸಿರಲಿಲ್ಲ. ರಮೇಶ ಜಾರಕಿಹೊಳಿ ಅವರ ಆಪ್ತರಾಗಿರುವ ಶಾಸಕರಾದ ಮಹೇಶ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ ಅವರನ್ನೂ ಕರೆದಿರಲಿಲ್ಲ. ಮಂಗಲಾ ಅಂಗಡಿ ಅವರು ಸಭೆ ಬಂದಿರಲಿಲ್ಲ.

ಮಾಜಿ ಸಂಸದ ಪ್ರಭಾಕರ ಕೋರೆ, ಸಂಸದರಾದ ಅಣ್ಣಾ ಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಸಚಿವ ಉಮೇಶ ಕತ್ತಿ, ಸಚಿವೆ ಶಶಿಕಲಾ ಜೊಲ್ಲೆ ಇದ್ದರು. ಜಿಲ್ಲೆಯ ಬಿಜೆಪಿ ಶಾಸಕರಾದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡ್ಡಗೌಡರ್, ಪಿ.ರಾಜೀವ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮೊದಲಾದವರು ಕ್ಲೋಸ್ ಡೋರ್ ಮೀಟಿಂಗ್ ನಲ್ಲಿ ಪಾಲ್ಗೊಂಡಿದ್ದರು.

ಸಭೆಯ ಪ್ರಮುಖ ಅಜೆಂಡಾ ಜಾರಕಿಹೊಳಿ ಸಹೋದರರಿಂದ ಬೆಳಗಾವಿಯಲ್ಲಿ ಬಿಜೆಪಿಗೆ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡುವುದು ಹೇಗೆ ಎನ್ನುವುದು.

ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಇಂತಹ ಸ್ಥಿತಿ ಎದುರಿಸುವುದು ಅವಮಾನಕರ ಎಂದು ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೀಗೆಯೇ ಬಿಟ್ಟರೆ ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ, 2023ರ  ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದ ಹೊಡೆತ ಖಚಿತ ಎಂದು ಅಭಿಪ್ರಾಯಪಟ್ಟರು. ತಾವೇ ಬಿಜೆಪಿಯನ್ನು ಸೋಲಿಸಿ ಬೇರೆಯವರ ತಲೆಗೆ ಕಟ್ಟುವ ಯತ್ನ ಮಾಡುತ್ತಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಓರ್ವರು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಯ ಕುರಿತು ಇನ್ನಷ್ಟು ಗಂಭೀರ ಚಿಂತನೆ, ಚರ್ಚೆ ಅಗತ್ಯವಾಗಿದೆ. ರಾಜ್ಯಮಟ್ಟದ ನಾಯಕರನ್ನಿಟ್ಟುಕೊಂಡು ಸಭೆ ನಡೆಸಬೇಕಾದ ಅಗತ್ಯವಿದೆ. ಈ ಕುರಿತು ಶೀಘ್ರದಲ್ಲಿ ವ್ಯವಸ್ಥೆ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಇಲ್ಲಿ ನೀವು ಹೀಗೆ ಕೂಗಿದ್ರೆ ಅಲ್ಲಿ ನನಗೆ ಹೊಡೆತ ಬೀಳುತ್ತೆ ಎಂದ ಮಾಜಿ ಡಿಸಿಎಂ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button