Kannada NewsLatestNational

*BREAKING: ನದಿಗೆ ಉರುಳಿಬಿದ್ದ ಸ್ಕಾರ್ಪಿಯೋ ಕಾರು*: *6 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಸೇತುವೆಯಿಂದ ಸ್ಕಾರ್ಪಿಯೋವೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಮಕ್ಕಳು ಸೇರಿದಂತೆ 6 ಜನರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಏಕಾಏಕಿ ನದಿಗೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ. ನಿಶ್ಚಿತಾರ್ಥ ಸಮಾರಂಭ ಮುಗಿಸಿ ಮನೆಗೆ ಮರಳುತ್ತಿದ್ದ ಕುಟುಂಬದ ಪ್ರಯಾಣ ಭೀಕರ ದುರಂತದಲ್ಲಿ ಅಂತ್ಯಗೊಂಡಿದೆ.

ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ಸುಪೌಲ್ ಜಿಲ್ಲೆಯ ಕುಟುಂಬದ ಸದಸ್ಯರು ತಿಲಕ್ ಸಮಾರಂಭ ಮುಗಿಸಿ ಮನೆಗೆ ವಾಪಸ್ ತೆರಳುತ್ತಿದ್ದಾಗ, ಬೈರ್ಗಚ್ಛಿ–ಸಿಕ್ಟಿ ಮುಖ್ಯ ರಸ್ತೆಯ ಬೀಡಿ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ನದಿಗೆ ಬಿದ್ದಿದೆ. ಪರಿಣಾಮ ಮೂವರು ಬಾಲಕರು, ಮೂವರು ಯುವಕರು ಜಲಸಮಾಧಿಯಾಗಿದ್ದಾರೆ.

ಮೃತರೆಲ್ಲರೂ ಸುಪೌಲ್ ಜಿಲ್ಲೆಯ ಪಿಪ್ರಾ ಬ್ಲಾಕ್‌ನ ತುಮಹಾ ಗ್ರಾಮದ ನಿವಾಸಿಗಳಾಗಿದ್ದು, ಸಿಕ್ಟಿ ಬ್ಲಾಕ್‌ನ ಭಪಟಿಯಾ ಗ್ರಾಮದ ಸಮಾರಂಭದಲ್ಲಿ ಭಾಗವಹಿಸಿ ತಡರಾತ್ರಿ ಮನೆಗೆ ಹಿಂದಿರುಗುತ್ತಿದ್ದರು. ಸೇತುವೆ ಬಳಿ ಇದ್ದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ಆಳವಾದ ನದಿಗೆ ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಯಶ್ ಕುಮಾರ್ (16), ಸೌರಭ್ ಕುಮಾರ್ (15), ಆದಿತ್ಯ ಅಮನ್ (20), ಮುನ್ನಾ ಕುಮಾರ್ (22), ಆರ್ಯನ್ (15) ಹಾಗೂ ಚಾಲಕ ಕುಂದನ್ ಯಾದವ್ (28) ಎಂದು ಗುರುತಿಸಲಾಗಿದೆ.

ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಾಳು ಸೇರಿದಂತೆ ಎಲ್ಲರನ್ನೂ ಅರಾರಿಯಾ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆರು ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಗಾಯಗೊಂಡ ಓರ್ವ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Related Articles

Back to top button