
ಪ್ರಗತಿವಾಹಿನಿ ಸುದ್ದಿ: ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಹತನಾದ ಲಷ್ಕರ್-ಎ-ತೊಯ್ಬಾ (LeT) ಉಗ್ರ ಮೊಹಮ್ಮದ್ ಲತೀಫ್ ಭಟ್ನ ಅಂತ್ಯಕ್ರಿಯೆಯನ್ನು ಆತನ ಸ್ವಗ್ರಾಮದಿಂದ ಸುಮಾರು 160 ಕಿ.ಮೀ. ದೂರದಲ್ಲಿ ಬಿಗಿ ಭದ್ರತೆಯೊಂದಿಗೆ ನೆರವೇರಿಸಲಾಗಿದೆ.
ಉಗ್ರನ ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಈ ನಿರ್ಧಾರ ಕೈಗೊಂಡಿವೆ ಎನ್ನಲಾಗಿದೆ.
ಕುಲ್ಗಾಮ್ ಜಿಲ್ಲೆಯ ಬ್ರೇವನ್ ಗ್ರಾಮದ ನಿವಾಸಿಯಾಗಿದ್ದ ಲತೀಫ್ ಭಟ್ನ ಮೃತದೇಹವನ್ನು ಉತ್ತರ ಕಾಶ್ಮೀರದ ಕುಪ್ಪಾರ ಜಿಲ್ಲೆಯ ಹಂದ್ವಾರ ಬಳಿಯ ಬಂಗೂಸ್ ಪ್ರದೇಶಕ್ಕೆ ಕೊಂಡೊಯ್ದು ದಫನ್ ಮಾಡಲಾಗಿದೆ.
ಅಂತ್ಯಕ್ರಿಯೆ ಸ್ಥಳ ತಲುಪಲು ಸುಮಾರು 10 ಕಿ.ಮೀ. ಮುಂಚಿತವಾಗಿಯೇ ಭದ್ರತಾ ಪಡೆಗಳು ಕುಟುಂಬಸ್ಥರ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದವು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಲತೀಫ್ನ ತಂದೆ ಮುಸ್ತಾಕ್ ಅಹ್ಮದ್ ಭಟ್, ಕುಟುಂಬದ ಚಿಕ್ಕಪ್ಪಂದಿರು, ಬಾವ ಸೇರಿದಂತೆ ಕೆಲವೇ ಆಪ್ತ ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಮೂಲಕ ಉಗ್ರರ ಅಂತ್ಯಕ್ರಿಯೆ ಸಂದರ್ಭದಲ್ಲಿ ಸಾರ್ವಜನಿಕವಾಗಿ ಜನ ಸೇರುವುದನ್ನು ತಡೆಯಲು ಭದ್ರತಾ ಪಡೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ.




