
ಪ್ರಗತಿವಾಹಿನಿ ಸುದ್ದಿ: ಕದ್ದ ಬೈಕನ್ನು ತಳ್ಳಿ ಕೊಂಡು ಹೋಗುತ್ತಿದ್ದಾಗಲೇ ನಿಪ್ಪಾಣಿ ಪೊಲೀಸರು ಬೈಕ್ ಕಳ್ಳರನ್ನು ಬಂಧಿಸಿರುವ ಘಟನೆ ನಡೆದಿದೆ.
ನಿಪ್ಪಾಣಿ ಠಾಣೆಯ ಪಿಎಸ್ ಐ ನರಸಪ್ಪನವರ್ ಹಾಗೂ ಸಿಬ್ಬಂದಿಗಳು ಗವಾಣಿ ಕ್ರಾಸ್ ಬಳಿ ಪೆಟ್ರೋಲಿಂಗ್ ನಲ್ಲಿದ್ದಾಗ ವ್ಯಕ್ತಿಯೋರ್ವ ಯಮಹ ಆರ್ ಎಕ್ಸ್ 100 ಬೈಕ್ ನ್ನು ರಸ್ತೆಯಲ್ಲಿ ತಳ್ಳಿಕೊಂಡು ಹೋಗುತ್ತಿದ್ದ. ಅನುಮಾನಗೊಂಡ ಪೊಲೀಸರು ಆತನನ್ನು ತಡೆದು ದಾಖಲಾತಿ ಪರಿಶೀಲಿಸಿದಾಗ ಅದು ಕಳ್ಳತನ ಮಾಡಿರುವ ಬೈಕ್ ಎಂಬುದು ಗೊತ್ತಾಗಿದೆ.
ತಕ್ಷಣ ಬೈಕ್ ಸಮೇತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸೋಮನಾಥ ಪುಂಡಲೀಕ (೨೧) ಎಂದು ಗುರುತಿಸಲಾಗಿದೆ. ಉದ್ಯೋಗದಲ್ಲಿ ಮೆಕಾನಿಕ್ ಎಂದು ತಿಳಿದುಬಂದಿದೆ. ಬಂಧಿತನ ವಿಚಾರಣೆ ವೇಳೆ ಈತನೊಂದಿಗೆ ಇನ್ನೋರ್ವ ಕೂಡ ಕಳ್ಳತನದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಯಲ್ಲಪ್ಪಾ ದಾವಣೆಕರ್ (೨೩) ಎಂಬಾತ ಕೂಡ ಬೈಕ್ ಕಳ್ಳತನದಲ್ಲಿ ಕೈಜೋಡಿಸಿದ್ದು, ಆತನನ್ನು ಕೂಡ ಬಂಧಿಸಿ ತನಿಖೆ ನಡೆಸಿದ್ದಾರೆ.
ಇಬ್ಬರೂ ಮಹಾರಾಷ್ಟ್ರದ ಕೊಲ್ಲಾಪುರ ಆದಾಪುರಗಳಲ್ಲಿ ಬೈಕ್ ಗಳನ್ನು ಕಳ್ಳತನಮಾಡುತ್ತಿರುವುದು ಬೆಳಕಿಗೆ ಬಂದಿದೆ. 1,10,000 ಮೌಲ್ಯದ ಮೂರು ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.


