Belagavi NewsBelgaum NewsPolitics

*ಜಿಲ್ಲಾ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗಳಿಗೆ ಸರ್ಜರಿ ಆಗಬೇಕಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಬೀಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ದಿಂದ ಬಾಣಂತಿ ಸಾವು ಪ್ರಕರಣ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿರುವ (ಬೀಮ್ಸ್) ಅವ್ಯವಸ್ಥೆಗಳಿಗೆ ಸರ್ಜರಿ ಆಗಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ವೈದ್ಯರ ನಿರ್ಲಕ್ಷ್ಯ ದಿಂದ ಬಾಣಂತಿ ಸಾವನ್ನಪ್ಪಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮವಾಗಬೇಕು. ಶಿಸ್ತು, ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ಕೆಲವೊಂದು ವ್ಯವಸ್ಥೆಗಳನ್ನು ಸರಿಪಡಿಸಬೇಕಿದೆ ಎಂದು ಹೇಳಿದರು.

ನಾವು ಕೇವಲ ಬಾಯಿ ಮಾತಿಗೆ ಹೇಳಬಾರದು. ಇದನ್ನು ಜಾರಿಗೆ ತರಬೇಕು. ಈ ಮೊದಲು ನಾನು ಆಸ್ಪತ್ರೆಗೆ ಭೇಟಿ ನೀಡಿದ್ದು, ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವೆ ಎಂದು ಸಚಿವರು ಪ್ರತಿಕ್ರಿಯಿಸಿದರು.

ಗೃಹಲಕ್ಷ್ಮೀ ಯೋಜನೆಗೆ ತೊಂದರೆ ಇಲ್ಲ
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಗೃಹಲಕ್ಷ್ಮೀ ಯೋಜನೆ ವಿಚಾರವಾಗಿ ನಾನು ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದ್ದೇನೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿದವರಿಗೆ, ಯಾರು ತೆರಿಗೆ ಕಟ್ಟುವುದಿಲ್ಲ ಅಂತಹವರಿಗೆ ಗೃಹಲಕ್ಷ್ಮೀ ಹಣ ಸಂದಾಯ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

80 ಸಾವಿರ ಬಿಪಿಎಲ್ ಕಾರ್ಡ್ ಗಳನ್ನ ರದ್ದತಿ ಮಾಡುವ ಬದಲಿಗೆ ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿರುವುದರಿಂದ ಯಾವುದೇ ಗೊಂದಲ ಇಲ್ಲ, ಎಪಿಎಲ್, ಬಿಪಿಎಲ್ ಇದ್ದವರಿಗೆ ಗೃಹಲಕ್ಷ್ಮೀ ಹಣ ಬಂದೇ ಬರುತ್ತೆ ಎಂದು ಸಚಿವರು ಹೇಳಿದರು.

ಸರ್ಕಾರ ಸುಭದ್ರ
ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಖರೀದಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇಡೀ ದೇಶದಲ್ಲಿ ಈ ರೀತಿಯ ವ್ಯವಹಾರ ನಡೆಯುತ್ತಿದೆ. ಬಿಜೆಪಿಯವರು ನಿರಂತರವಾಗಿ ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಗಟ್ಟಿಯಾಗಿದ್ದಾರೆ. ಸುಭದ್ರವಾಗಿರುವ ಸರ್ಕಾರವನ್ನು ಯಾರು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸಚಿವ ಸಂಪುಟ ಪುನರಚನೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಖಾತೆ ಬದಲಾವಣೆ ಚರ್ಚೆ ಆಗಿಲ್ಲ ಎಂದು ಸಚಿವರು ಹೇಳಿದರು.

ಡಿಸೆಂಬರ್ 9 ರಿಂದ 10 ದಿನಗಳ ಕಾಲ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಬೆಳಗಾವಿ ಜಿಲ್ಲೆಯ ವಿಭಜನೆ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಬರಬಹುದು. ಈ ಕುರಿತು ಎಲ್ಲ ಶಾಸಕರ ಜತೆಗೆ ಒಂದು ಸುತ್ತು ಮಾತನಾಡಲಾಗಿದೆ, ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವರು ಹೇಳಿದರು.

ಮಹಾರಾಷ್ಟ್ರದಲ್ಲಿ ಎಂವಿಎ ಅಧಿಕಾರಕ್ಕೆ
ಮಹಾರಾಷ್ಟ್ರದಲ್ಲಿ ನಾನು ಕೂಡ ಐದು ದಿನಗಳ ಕಾಲ ಪ್ರಚಾರ ಮಾಡಿದ್ದೇನೆ. ಕಾಂಗ್ರೆಸ್ ಒಳಗೊಂಡ ಮಹಾವಿಕಾಸ ಅಘಾಡಿ (ಎಂವಿಎ) ಸರ್ಕಾರ ರಚಿಸಲಿದೆ ಎಂದು ತಿಳಿಸಿದರು. ರಾಜ್ಯದ ಉಪ ಚುನಾವಣೆಯಲ್ಲಿ ಮೂರೂ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button