Kannada NewsLatest

ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸರಿಂದ ಪಾರದರ್ಶಕ ನಡೆ: ಸಚಿವ ಅರಗ ಜ್ಞಾನೇಂದ್ರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸರು ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಅವರು ಪರಿಷತ್‌ನಲ್ಲಿ ತಿಳಿಸಿದರು.

ಸದಸ್ಯ ಯು.ಬಿ.ವೆಂಕಟೇಶ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 11 ಬಿಟ್‌ಕಾಯಿನ್ ಪ್ರಕರಣಗಳು ದಾಖಲಾಗಿವೆ. ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ನಿಯಮಾನುಸಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಡಾರ್ಕ್ ವೆಬ್ ಮುಖಾಂತರ ಡ್ರಗ್ಸ್ ಪ್ರಕಣದಲ್ಲಿ ಶ್ರೀಕಿ ಸಿಕ್ಕಿಹಾಕಿಕೊಂಡಾಗ ಪೊಲೀಸರಿಗೆ ಬಿಟ್‌ಕಾಯಿನ್ ಹ್ಯಾಕರ್ ಅಂತ ಗೊತ್ತಿರಲಿಲ್ಲ, ವಿಚಾರಣೆ ನಡೆಸಿದ ನಂತರ ಶ್ರೀಕಿ ಹ್ಯಾಕರ್ ಅಂತ ಗೊತ್ತಾಯಿತು ಎಂದು ವಿವರಿಸಿದ ಗೃಹ ಸಚಿವ ಅರಗಜ್ಞಾನೇಂದ್ರ ಅವರು ನಿಯಮಾನುಸಾರ ಯಾವ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬೇಕಾಗಿತ್ತೋ ಅವುಗಳನ್ನು ದಾಖಲಿಸಲಾಗಿದೆ ಎಂದರು.

ಶ್ರೀಕಿಯನ್ನು ಉಳಿಸುವ ಅಗತ್ಯ ನಮಗಿಲ್ಲ ನಿಯಮಾನುಸಾರ ಏನು ಮಾಡಬೇಕೋ ಅವುಗಳನ್ನು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಶ್ರೀಕಿಯನ್ನು ಪೊಲೀಸರೇ ಡ್ರಗ್ಸ್ ಸೇವನೆ ಮಾಡಲು ಹೇಳುತ್ತಿದ್ದಾರೆ ಮತ್ತು ಅವರಿಗೆ ರಾಬರ‍್ರಿ ಹೊಡೆಯಲಾಗಿದೆ ಮತ್ತು ಠಾಣೆಗೆ ಕರೆಯಿಸಿ ಪೊಲೀಸರಿಗೆ ಬಿಟ್ ಕಾಯಿನ್‌ಗಳನ್ನು ಹ್ಯಾಕ್ ಮಾಡಿಸಿಕೊಂಡಿದ್ದಾರೆ. ಎಸ್‌ಐ ಪರೀಕ್ಷೆಗಳಲ್ಲಿ 22 ಅಭ್ಯರ್ಥಿಗಳ ಅಂಕಗಳನ್ನು ಪೊಲೀಸರು ಹ್ಯಾಕ್ ಮಾಡಿಸಿಕೊಂಡಿದ್ದಾರೆ ಎಂದು ಸದಸ್ಯ ಯು.ಬಿ.ವೆಂಕಟೇಶ ಅವರ ಆರೋಪಗಳಿಗೆ ಉತ್ತರಿಸಿದ ಸಚಿವ ಅರಗ ಜ್ಞಾನೇಂದ್ರ ಅವರು ಈಗ ಶ್ರೀಕಿ ಜಾಮೀನು ಮೇಲೆ ಹೊರಗಡೆಯೇ ಇದ್ದಾನೆ, ತೊಂದರೆ ಕೊಟ್ಟಿದ್ದರೇ ಮಾಧ್ಯಮದವರಿಗೆ ತಿಳಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು; ತಮ್ಮೆಲ್ಲ ಆರೋಪಗಳು ನಿರಾಧಾರ ಎಂದು ಸ್ಪಷ್ಟಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button