Kannada NewsKarnataka NewsNationalPolitics

*ಕೇಂದ್ರದ ಬಿಜೆಪಿಗೆ ದಲಿತ, ಒಬಿಸಿ ಸಂಸದರು ಬೇಕಾಗಿಲ್ಲ: ಗೃಹ ಸಚಿವ ಪರಮೇಶ್ವರ *

ಪ್ರಗತಿವಾಹಿನಿ ಸುದ್ದಿ: ಕೇಂದ್ರದ ಬಿಜೆಪಿಗೆ ದಲಿತ, ಒಬಿಸಿ ಸಂಸದರು ಬೇಕಾಗಿಲ್ಲ ಅನ್ಸುತ್ತೆ. ರಾಜ್ಯದಿಂದ ದಲಿತ, ಒಬಿಸಿ ಸಮುದಾಯದವರೂ ಸಂಸದರಾಗಿ ಆಯ್ಕೆ ಆಗಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಆದರೆ ಬಿಜೆಪಿಗೆ ದಲಿತರು ಬೇಡ. ಹಾಗಾಗಿ ಈ ಎರಡೂ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಿಂದ ಐವರು ಕೇಂದ್ರದ ಸಚಿವರಾದರು. ಅವರಿಗೆಲ್ಲ ಅಭಿನಂದನೆ ಸಲ್ಲಿಸುತ್ತೇನೆ. ನಮಗೆ ಜಿಎಸ್ಟಿ ಬಾಕಿ ಬರಬೇಕಿದೆ. ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿವೆ. ಹಲವು ನೀರಾವರಿ ಯೋಜನೆಗಳ ಅನುಮತಿ ಬೇಕಿದೆ. ಅನೇಕ ಸವಾಲುಗಳು ಐದೂ ಜನರ ಮುಂದಿವೆ. ಇದನ್ನೆಲ್ಲ ಆದ್ಯತೆ ಮೇಲೆ ಬಗೆಹರಿಸುವ ಜವಾಬ್ದಾರಿ ಈ ನೂತನ ಸಚಿವರ ಮೇಲಿದೆ ಎಂದರು.

ಅಲ್ಲದೆ ಎಚ್‌.ಡಿ. ಕುಮಾರಸ್ವಾಮಿ ಅವರು ಎರಡು ಸಲ ಸಿಎಂ ಆಗಿದ್ದವರು. ಈಗ ಕೇಂದ್ರದಲ್ಲಿ ಸಚಿವರಾಗಿ ಆಯ್ಕೆ ಆಗಿದ್ದಾರೆ. ಸ್ವಾಭಾವಿಕವಾಗಿ ಅವರಿಗೆ ಕೇಂದ್ರದ ಸಹಕಾರ ಇದ್ದೇ ಇರುತ್ತ. ಇದನ್ನ ಉಪಯೋಗ ಮಾಡಿಕೊಂಡು ಕುಮಾರಸ್ವಾಮಿ ಅವರು ರಾಜ್ಯದ ಹಿತಾಸಕ್ತಿ ಕಾಪಾಡಲಿ ಎಂದು ಹೇಳಿದರು.

ಐವರು ಕೇಂದ್ರ ಸಚಿವರ ಮೇಲೆ ನಾವು ವಿಶ್ವಾಸ ಇಟ್ಕೊಂಡಿದ್ದೇವೆ. ರಾಜ್ಯದ ಸಮಸ್ಯೆಗಳನ್ನು ಕೇಂದ್ರದ ಮಟ್ಟದಲ್ಲಿ ಪರಿಹರಿಸ್ತಾರೆ ಅಂತ ವಿಶ್ವಾಸ ಇದೆ. ಇದರಲ್ಲಿ ಅವರು ವಿಫಲರಾದರೆ ಅವರಿಗೂ ಅವರ ಪಕ್ಷಕ್ಕೂ ನಷ್ಟ. ನಾವು ಕಾದು ನೋಡ್ತೇವೆ. ನಮ್ಮ ರಾಜ್ಯದ ಸಮಸ್ಯೆಗಳು ಕೇಂದ್ರದಲ್ಲಿ ಬಗೆಹರಿಸದಿದ್ದರೆ ಸಹಜವಾಗಿ ಅವರಿಗೆ ದೂಷಣೆ ಮಾಡಬೇಕಾಗುತ್ತದೆ. ಇದಕ್ಕೆ ಅವರು ಅವಕಾಶ ಕೊಡಲ್ಲ ಅನ್ಕೋತೇವೆ ಎಂದರು. 

ನಮ್ಮಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಚರ್ಚೆ ನಡೆಯುತ್ತಿಲ್ಲ. ಯಾರೋ ನಾಲ್ಕು ಜನ ಮಾತಾಡ್ತಾರೆ, ಹಾಗಂದ ಮಾತ್ರಕ್ಕೆ ಅದು ಪಕ್ಷದ ಹೇಳಿಕೆ ಆಗಲ್ಲ. ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಸೃಷ್ಟಿ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಪಕ್ಷದಲ್ಲಿ ಎಲ್ಲವೂ ಸರಿ ಇದೆ ಅಂತ ಹೈಕಮಾಂಡ್ ಗೆ ಅನಿಸಿದರೆ ಈ ತೀರ್ಮಾನ ಮಾಡಲು ಹೋಗುವುದಿಲ್ಲ. ಮುಂದೆ ವರಿಷ್ಠರು ಏನು ತೀರ್ಮಾನ ಮಾಡುತ್ತಾರೋ ಕಾದು ನೋಡೋಣ ಎಂದರು.

ವೈಷ್ಣೋದೇವಿ ದರ್ಶನಕ್ಕೆ ಹೋದವರ ಮೇಲೆ ಪದಗ್ರಹಣ ಕಾರ್ಯಕ್ರಮದ ದಿನದಂದೇ ಉಗ್ರರ ದಾಳಿ ಆಗಿದೆ. ಈ ದಾಳಿ ತಪ್ಪಿಸಲು ಹೋಗಿ ಬಸ್ ಕಂದಕಕ್ಕೆ ಬಿದ್ದಿದೆ. ಅಷ್ಟೆ ಹೊರತು , ಯಾವುದೇ ಟೆರರ್ ಅಟ್ಯಾಕ್ ನಡೆದಿಲ್ಲ, ಇನ್ನಷ್ಟು ರಕ್ಷಣೆ ಕೊಡಬೇಕಿದೆ. ಆದರೆ ಈ ಪ್ರಕರಣದಲ್ಲಿ ಭದ್ರತಾ ಲೋಪ ಆಗಿರೋದು ಹೌದು ಎನಿಸುತ್ತದೆ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button