Belagavi NewsBelgaum NewsKannada NewsKarnataka NewsNationalPolitics

*ಬೆಳಗಾವಿ ಅಧಿವೇಶನಕ್ಕೆ ಮೊದಲು ಬಿಜೆಪಿ ಭಿನ್ನಮತ ಮುಗಿಯುತ್ತಾ?* *ಅಥವಾ ಕಲಾಪ ಬಹಿಷ್ಕಾರವೇ ಅನಿವಾರ್ಯವಾಗುತ್ತಾ?*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿಎಸ್ ವೈ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್‌ ನೇರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೇ ವಿಜಯೇಂದ್ರಗೆ ಸೆಡ್ಡು ಹೊಡೆದು ವಕ್ಫ್ ಕುರಿತು ಪ್ರತ್ಯೇಕ ಹೋರಾಟ ನಡೆಸುತ್ತಿದ್ದಾರೆ. ಇನ್ನೊಂದೆಡೆ ವಿಜಯೇಂದ್ರ ಪರವಾಗಿ ರೇಣುಕಾಚಾರ್ಯ ನೇತೃತ್ವದಲ್ಲಿ ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ದಿಢೀರ್ ದೆಹಲಿಗೆ ತೆರಳಿದ್ದಾರೆ.

ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ ಕುರಿತು ಹೈಕಮಾಂಡ್ ನಾಯಕರ ಗಮನಕ್ಕೆ ತರಲು ಅವರು ತೆರಳಿದ್ದಾರೆ. ಅದರಲ್ಲೂ ಪ್ರಮುಖವಾಗಿ ಯತ್ನಾಳ್‌ ಆ್ಯಂಡ್ ಟೀಂ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಹೈಕಮಾಂಡ್ ಗೆ ವಿಜಯೇಂದ್ರ ದೂರು ನೀಡುತ್ತಿದ್ದಾರೆ.

ಇದೇ ಡಿಸೆಂಬರ್ 3 ರಂದು ಕೋರ್ ಕಮಿಟಿ ಸಭೆ ಸಹ ನಿಗದಿಯಾಗಿದೆ. ಇದಕ್ಕೂ ಮುನ್ನ ವಿಜಯೇಂದ್ರ ದೆಹಲಿಗೆ ತೆರಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಕೋರ್ ಕಮಿಟಿ ಸಭೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಒಬ್ಬರನ್ನು ಹೈಕಮಾಂಡ್ ಕಳುಹಿಸಲಿದೆ. ಇದರ ನಡುವೆ ವಿಜಯೇಂದ್ರ ದಿಢೀರ್ ದೆಹಲಿಗೆ ತೆರಳಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಉಲ್ಬಣಗೊಂಡಿರುವ ಅಸಮಾಧಾನವನ್ನು ಬಿಜೆಪಿ ಹೈಕಮಾಂಡ್‌ ಸರಿಪಡಿಸಲಿದೆಯೇ? ಹೈಕಮಾಂಡ್‌ ರಾಜಿ ಸಂಧಾನಕ್ಕೆ ಯತ್ನಾಳ್ ಅಂಡ್ ಟೀಂ ಒಪ್ಪಲಿದೆಯೇ? ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಬದಲು ತಮ್ಮ ಸ್ವಪಕ್ಷದ ವಿರುದ್ಧ ಹೋರಾಡುತ್ತಿರೋದಕ್ಕೆ ಬಿಜೆಪಿ ಕಾರ್ಯಕರ್ತರು ಬೇಸರಗೊಂಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದ ಬಿಜೆಪಿಗೆ ತೀವ್ರ ಮುಗುರವಾಗುತ್ತಿದೆ. ಬಿಜೆಪಿ ಹೈಕಮಾಂಡ್ ಅಷ್ಟೊಂದು ದುರ್ಬಲವಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಡಬೇಕಾದ ಸಂದರ್ಭದಲ್ಲಿ ಪಕ್ಷದೊಳಗಿನ ಭಿನ್ನಮತದ ವಿರುದ್ಧ ಹೋರಾಡಬೇಕಾದ ಸ್ಥಿತಿ ತೀವ್ರ ಇಕ್ಕಟ್ಟು ಸೃಷ್ಟಿಸಿದೆ.

ಇದೇ 9ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಳದ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಸರಕಾರದ ವಿರುದ್ಧ ಸಮರ ಸಾರಬೇಕಾದ ಬಿಜೆಪಿಗೆ ತನ್ನೊಳಗಿನ ಬೆಂಕಿ ಆರಿಸುವುದಕ್ಕೇ ಸಾಧ್ಯವಾಗುತ್ತಿಲ್ಲ. ಸಮರ್ಥವಾಗಿ ಸರಕರಾದ ಮೇಲೆ ಸಮರ ಸಾರಲಾಗದೆ ಯಾವುದಾದರೊಂದು ವಿಷಯ ಇಟ್ಟುಕೊಂಡು ಕಲಾಪ ಬಹಿಷ್ಕರಿಸಿ ಹೊರನಡೆಯುವುದೇ ಅನಿವಾರ್ಯವಾಗಬಹುದು.

ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಸರಕಾರದ ಹಗರಣಗಳ ವಿರುದ್ಧ ದೊಡ್ಡಮಟ್ಟದಲ್ಲಿ ಹೋರಾಟ ಮಾಡುವ ಅವಕಾಶ ಬಿಜೆಪಿಗೆ ಇತ್ತು. 2028ರ ವಿಧಾನಸಭೆ ಚುನಾವಣೆಯಲ್ಲಾದರೂ ಅಧಿಕಾರಕ್ಕೆ ಬರಲು ಪಕ್ಷ ಸಿದ್ಧವಾಗಬೇಕಿತ್ತು. ಆದರೆ ಭಿನ್ನಮತದಿಂದಾಗಿ ಪಕ್ಷ ಕುದಿಯುತ್ತಿದೆ. ಭಿನ್ನಮತೀಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಕ್ಷವನ್ನು ನಿಯಂತ್ರಿಸಲು ಸಾಧ್ಯವಾಗದೆ ವಿಜಯೇಂದ್ರ ಟೀಮ್ ಒದ್ದಾಡುವಂತಾಗಿದೆ. ಪಕ್ಷದ ಹೈಕಮಾಂಡ್ ಕೂಡ ಈ ಎಲ್ಲ ಅಹಿತಕರ ಬೆಳವಣಿಗೆಗಳನ್ನು ನೋಡಿಯೂ ಕಣ್ಮುಚ್ಚಿ ಕುಳಿತಂತಿದೆ. ಕಾರ್ಯಕರ್ತರು ಎಲ್ಲೆಡೆ ಮುಜುಗರ ಅನುಭವಿಸುವಂತಾಗಿದೆ.

ಒಟ್ಟಾರೆ ಬೆಳಗಾವಿ ಅಧಿವೇಶನ ಈ ಬಾರಿಯೂ ಫಲಪ್ರದವಿಲ್ಲದೆ ಕಾಟಾಚಾರದ ಅಧಿವೇಶನವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button