ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಲ್ಲರ ಸಹಕಾರದಿಂದ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಿಸಲಾಗುತ್ತಿದೆ. ಎಲ್ಲರ ಸಾಮರಸ್ಯ ಮತ್ತು ಸಹಭಾಗಿತ್ವದಲ್ಲಿ ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಮಾಡಬೇಕಾದ ಕೆಲಸ ಬಹಳ ಇದೆ. ಕೋವಿಡ್-19 ಕಾಟ ಇಲ್ಲದಿದ್ದರೆ ರಾಜ್ಯದ ಅಭಿವೃದ್ಧಿ ನಾಗಾಲೋಟದಲ್ಲಿ ಇರುತ್ತಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ “ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ” ಸರಕಾರದ ಒಂದು ವರ್ಷದ ಪ್ರಗತಿ ವರದಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮೂರು ವರ್ಷಗಳಲ್ಲಿ ಎಲ್ಲರಿಗೂ ಸೂರು; ರೈತರಿಗೆ ಅನುಕೂಲ ಕಲ್ಪಿಸಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಕಲ್ಯಾಣದ ಕನಸು ನನಸಾಗಿಸಲು ಬದ್ಧ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ರೈತರು ಸೇರಿದಂತೆ ಎಲ್ಲ ಶ್ರಮಿಕ ವರ್ಗದವರ ಗೌರಯುತ ಬದುಕಿಗೆ ಯೋಜನೆ ರೂಪಿಸಲಾಗುವುದು.
ಕೊರೊನ ವೈರಸ್ ಜತೆ ಬದುಕುವುದನ್ನು ನಾವು ರೂಢಿಸಿಕೊಂಡು ನಾಡು ಕಟ್ಟುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ರಾಜ್ಯದಾದ್ಯಂತ ನೇರಪ್ರಸಾರ:
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ನೇರಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಅದೇ ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕೂಡ ಈ ಕಾರ್ಯಕ್ರಮ ನೇರ ಪ್ರಸಾರವಾಯಿತು.
ಜಿಲ್ಲಾಮಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಸರ್ಕಾರದ ವರ್ಷದ ಪ್ರಗತಿ ವರದಿ ವಿಶೇಷ ಪುಸ್ತಕ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ “ಜನಪದ” ಹಾಗೂ “ಮಾರ್ಚ್ ಆಫ್ ಕರ್ನಾಟಕ” ಮಾಸಿಕಗಳನ್ನು ಬಿಡುಗಡೆಗೊಳಿಸಿದರು.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ವಿಧಾನಸಭೆಯ ಉಪ ಸಭಾಧ್ಯಕ್ಷರಾದ ಆನಂದ ಮಾಮನಿ, ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ರಾಜ್ಯ ಸಭೆ ಸದಸ್ಯರಾದ ಈರಣ್ಣ ಕಡಾಡಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮಹೇಶ್ ಕುಮಠಳ್ಳಿ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಶಾಸಕರಾದ ದುರ್ಯೋಧನ ಐಹೊಳೆ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೊಲೀಸ್ ಆಯುಕ್ತರಾದ ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಯೋಜನೆಗಳ ಫಲಾನುಭವಿಗಳು ಕೂಡ ಹಾಜರಿದ್ದರು.
ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ರಾಮದುರ್ಗ ತಾಲ್ಲೂಕಿನ ನರಸಾಪುರ ಗ್ರಾಮದ ಶೇಕವ್ವ ಅರಭಾವಿ ಕುರಿತು ಅವರ ಮಗಳು ಪವಿತ್ರಾ ತಮ್ಮ ಸಮಸ್ಯೆಯನ್ನು ಟಿಕ್ ಟಾಕ್ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು.
ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ತಕ್ಷಣವೇ ಅರಭಾವಿ ಅವರ ಕುಟುಂಬಕ್ಕೆ ಅಗತ್ಯ ಔಷಧಿ ಪೂರೈಸಿದ್ದರು.
ಇಂದಿನ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪವಿತ್ರಾ ಅರಭಾವಿ ಜತೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಪವಿತ್ರಾಳ ತಾಯಿಯ ಆರೋಗ್ಯವನ್ನು ವಿಚಾರಿಸಿದರು. ಮುಂಬರುವ ದಿನಗಳಲ್ಲಿ ಅಗತ್ಯ ನೆರವು ಒದಗಿಸುವ ಭರವಸೆಯನ್ನು ಕೂಡ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ