ಪ್ರಗತಿವಾಹಿನಿ ಸುದ್ದಿ; ಹಿರಿಯೂರು: ಭ್ರಷ್ಟಾಚಾರವನ್ನು ಹುಟ್ಟಿಹಾಕಿದ್ದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಲೋಕಾಯುಕ್ತವನ್ನು ಮುಚ್ಚಿ ಎಸಿಬಿಯನ್ನು ಪ್ರಾರಂಭಿಸಿದರು. 50 ಕ್ಕಿಂತ ಹೆಚ್ಚು ಪ್ರಕರಣಗಳು ಕಾಂಗ್ರೆಸ್ ನವರ ಮೇಲಿತ್ತು. ಅವುಗಳನ್ನು ಮುಚ್ಚಿಹಾಕಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಬಿಜೆಪಿ ವತಿಯಿಂದ ಇಂದು ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ತಾವೇ ಶುದ್ಧಹಸ್ತರು ಎನ್ನುವಂತೆ ಮಾತನಾಡುವ ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಭ್ರಷ್ಟಾಚಾರ ಮಾಡಿದೆ. ಸಾಮಾಜಿಕ ನ್ಯಾಯವೆಂದು ಮಾತನಾಡುವ ಕಾಂಗ್ರೆಸ್, ಸಾಮಾಜಿಕ ಅನ್ಯಾಯವನ್ನೇ ಮಾಡಿದೆ. ಹೆಚ್ಚಿನ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ಕಳೆದುಕೊಂಡಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಭಾಜಪ ಪರ ಫಲಿತಾಂಶ ಕರ್ನಾಟಕ ರಾಜ್ಯದ ಭಾಜಪ ಗೆಲುವಿಗೆ ಮುನ್ನುಡಿ ಬರೆಯಲಿದೆ ಎಂದರು.
ಕಾಂಗ್ರೆಸ್ ಪಕ್ಷ 50 ವರ್ಷಕ್ಕಿಂತ ಹೆಚ್ಚು ಕರ್ನಾಟಕವನ್ನು ಆಳಿದ್ದಾರೆ. ವಾಣಿವಿಲಾಸ ಸಾಗರದ ಕಾಯಕಲ್ಪ ಮಾಡಬೇಕೆನ್ನುವ ಇಚ್ಛಾಶಕ್ತಿ ಅವರಿಗಿರಲಿಲ್ಲ. ಇಲ್ಲಿನ ಜನ ಮತ ಹಾಕಿ ಗೆಲ್ಲಿಸಿದ ಕಾಂಗ್ರೆಸ್ ಪಕ್ಷ, ಜನರಿಗೆ ನೀರು ಪೂರೈಸುವ ಮೂಲಕ ಜನರ ಋಣವನ್ನು ತೀರಿಸುವ ಕೆಲಸ ಮಾಡಲಿಲ್ಲ. ಆದರೆ ಈ ಕೆಲಸವನ್ನು ಭಾಜಪ ಸರ್ಕಾರ ಮಾಡಿದೆ ಎಂದರು.
ಕಾಂಗ್ರೆಸ್ ನವರು ಮತ್ತೆ ಅಧಿಕಾರಕ್ಕೆ ಬರಬೇಕೆಂದು ಹಂಬಲಿಸುತ್ತಾರೆ. ಅವರ ಅಧಿಕಾರದ ಐದು ವರ್ಷಗಳಲ್ಲಿ ಅನ್ನಭಾಗ್ಯದಲ್ಲಿ ಕನ್ನ ಹೊಡೆದರು.ಎಸ್ ಸಿ ಎಸ್ ಟಿ ಗಳಿಗೆ ನೀಡುವ ದಿಂಬು ಹಾಸಿಗೆಗಳಿಗೂ ಕನ್ನ, ಸಣ್ಣನೀರಾವರಿ, ಜಲಸಂಪನ್ಮೂಲ, ವಿದ್ಯುಚ್ಛಕ್ತಿಯಲ್ಲಿ ಭ್ರಷ್ಟಾಚಾರ ಮಾಡಿದರು. ಎಸ್ ಸಿ ಎಸ್ ಟಿ , ಹಿಂದುಳಿದ ವರ್ಗದ ವಿರೋಧಿ ಕಾಂಗ್ರೆಸ್ ಪಕ್ಷ ಎಂದು ತಿಳಿಸಿದರು.
*ದುಡಿಯುವ ವರ್ಗಕ್ಕೆ ಶಕ್ತಿ ತುಂಬಲಾಗುತ್ತಿದೆ
ರಾಜ್ಯದ ಜನ ಆರ್ಥಿವಾಗಿ ಅಭಿವೃದ್ಧಿಯಾದರೆ, ರಾಜ್ಯದ ಆರ್ಥಿಕತೆ ಸುಧಾರಿಸುತ್ತದೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕುರಿಗಾಹಿಗಳಿಗೆ 354 ಕೋಟಿ ರೂ. ಯೋಜನೆ, ನೇಕಾರರು, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ , 24 ವೃತ್ತಿಗಳ ಕುಶಲಕರ್ಮಿಗಳಿಗೆ ತಲಾ 50 ಸಾವಿರ ರೂ. ಸಹಾಯಧನ, ಸ್ತ್ರೀಸಾಮರ್ಥ್ಯ ಯೋಜನೆಯಿಂದ 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ, ಸ್ವಾಮಿವಿವೇಕಾನಂದ ಯುವಶಕ್ತಿ ಯೋಜನೆಯಿಂದ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಮೂಲಕ ದುಡಿಯುವ ವರ್ಗದ ಸಬಲೀಕರಣ. ಇದು ಸರ್ಕಾರದ ಪರಿಕಲ್ಪನೆ. ಮೀಸಲಾತಿ ಹೆಚ್ಚಳ ನಮ್ಮ ಸರ್ಕಾರದ ದಿಟ್ಟ ನಿರ್ಣಯವಾಗಿದೆ ಎಂದರು.
*5 ವರ್ಷದೊಳಗೆ 7 ಲಕ್ಷ ಎಕರೆಗೆ ನೀರಾವರಿ:*
ಕೃಷಿಗೆ ನೀರು, ಯುವಕರ ಕೈಗೆ ಉದ್ಯೋಗ, ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕನ್ನು ನೀಡಿದ ಸರ್ಕಾರದ ಗುರಿಯಾಗಿದೆ. ನೀರಾವರಿ ಯೋಜನೆಗಳನ್ನು 7 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿಯನ್ನು 5 ವರ್ಷದ ಅವಧಿಯೊಳಗೆ ನೀಡಿರುವುದು ನಮ್ಮ ಬದ್ಧತೆಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯ ಸಧ್ಯದಲ್ಲಿಯೇ ರಾಜ್ಯದ ಪ್ರಥಮ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲಿದ್ದು, ಯೋಜನೆಗಾಗಿ 16 ಸಾವಿರ ಕೋಟಿ ಕೇಂದ್ರ ಸರ್ಕಾರದಿಂದ ಬರಲಿದೆ. ಮೈಸೂರಿನ ಮಹಾರಾಜರ ಕುಟುಂಬದವರು ತಮ್ಮ ಒಡವೆಗಳನ್ನು ಒತ್ತೆ ಇಟ್ಟು ಜಲಾಶಯ ನಿರ್ಮಿಸಿದ್ದು, ಮಹಾರಾಜರ ಪ್ರತಿಮೆ ನಿರ್ಮಾಣ ಕಾರ್ಯ ಅತ್ಯಂತ ಸಮಂಜಸವಾಗಿದೆ ಎಂದರು.
*ಆರೋಗ್ಯ ಕ್ಷೇತ್ರದ ಅಭಿವೃದ್ಧಿ:*
ಶಿಕ್ಷಣಕ್ಕೆ ಒತ್ತು ನೀಡುವ ನಮ್ಮ ಸರ್ಕಾರ, ಒಂದೇ ವರ್ಷದಲ್ಲಿ 8000 ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಮೇಲ್ದರ್ಜೆಗೇರಿಸುವ ಯೋಜನೆಯ ಮೂಲಕ ಆರೋಗ್ಯ ಕ್ರಾಂತಿ ಮಾಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಕನ್ನಡಕ, ಕಿವಿಗೆ ಶ್ರವಣ ಉಪಕರಣ, ಡಯಾಲಿಸಿಸ್ ಸೈಕಲ್ ಹೆಚ್ಚಳ , ಹೀಗೆ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ ಎಂದರು.
*ಕಾಂಗ್ರೆಸ್ 2023 ರಲ್ಲಿ ಸಂಪೂರ್ಣ ಮುಳುಗಲಿದೆ*
ನಾನು ಮುಖ್ಯಮಂತ್ರಿಯಾಗಬೇಕೆಂದರೆ ಕಾಂಗ್ರೆಸ್ಸಿಗೆ ಮತ ಹಾಕಿ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಅವರ ಗೊಂದಲದಲ್ಲಿ ಕಾಂಗ್ರೆಸ್ ಮುಳುಗುವ ಹಡಗಾಗಿದೆ. ಸಂಪೂರ್ಣವಾಗಿ ಮುಳುಗಿದೆ. ಇಡೀ ದೇಶದಲ್ಲಿ ಮುಳುಗಿದ್ದು, ಕರ್ನಾಟಕದಲ್ಲಿಯೂ 2023 ರಲ್ಲಿ ಮುಳುಗಲಿದೆ ಎಂದರು.
*ಕರ್ನಾಟಕದಲ್ಲಿ ಕಾಂಗ್ರೆಸ್ ಪಾದಯಾತ್ರೆ ಸಂಪೂರ್ಣ ವಿಫಲ*
ಇಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಮಾಡಿದರು. ತೀರ್ಥಹಳ್ಳಿ ಶಿವಮೊಗ್ಗದಿಂದ ಜನ ಬಂದು ಚಳ್ಳಕೆರೆಯಲ್ಲಿ ಸೇರಿದರು. ಅರ್ಧ ಪಾದಯಾತ್ರೆ, ಅರ್ಧ ಕಾರ್ ಹತ್ತುವುದು- ಇದು ಇವರ ಪಾದಯಾತ್ರೆ. ಈ ಪಾದಯಾತ್ರೆ ಕರ್ನಾಟಕದಲ್ಲಿ ಯಾವ ರೀತಿಯಲ್ಲಿಯೂ ಪರಿಣಾಮ ಬೀರಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಾದಯಾತ್ರೆ ಸಂಪೂರ್ಣವಾಗಿ ವಿಫಲವಾಗಿದೆ. ಜನಸಂಕಲ್ಪ ಯಾತ್ರೆಯನ್ನು ಕಂಡು ಕಾಂಗ್ರೆಸ್ ಪಕ್ಷ ಗಾಬರಿಯಾಗಿದೆ. ಆದ್ದರಿಂದ ಆರೋಪಗಳನ್ನು ಮಾಡಿ ಬಿಜೆಪಿಯ ಹೆಸರನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಆದರೆ ಕಾಂಗ್ರೆಸ್ ಕಾಲದಲ್ಲಿ ಭಷ್ಟಾಚಾರ ತುಂಬಿ ತುಳುಕುತ್ತಿತ್ತು. ಅವರು ನೀಡಿದ ಭಾಗ್ಯಗಳಲ್ಲಿಯೂ ಭ್ರಷ್ಟಟಾಚಾರವಾಗಿದೆ. ಇದೇ ಜಿಲ್ಲೆಯ ಮಂತ್ರಿಗಳು ಎಸ್.ಸಿ.ಎಸ್.ಟಿ ಜನಾಂಗದ ಹಾಸ್ಟೆಲ್‍ಗಳ ಹಾಸಿಗೆ ದಿಂಬಿನಲ್ಲಿಯೂ ಹಣ ಬಿಡಲಿಲ್ಲ. ಪರಿಶಿಷ್ಟ ಜಾತಿ, ಪಂಗಡದವರ ಬಗ್ಗೆ ಮಾತನಾಡಲೂ ನಾಚಿಕೆಯಾಗಬೇಕು. ಬಿಡಿಎ ಜಮೀನು, ನೀರಾವರಿ, ವಿದ್ಯುತ್ ಎಲ್ಲದರಲ್ಲಿಯೂ ಭ್ರಷ್ಟಾಚಾರ ಮಾಡಿದ್ದು, ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಎಂಬಂತಾಗಿದೆ. ಮತ್ತೊಮ್ಮೆ ಅವರು ಅಧಿಕಾರಕ್ಕೆ ಬಂದರೆ ಅವರು ಮಾಡುವುದೇ ಭ್ರಷ್ಟಾಚಾರ. ಆದ್ದರಿಂದ ಭ್ರಷ್ಟ ಕಾಂಗ್ರೆಸ್ ನ್ನು ಕರ್ನಾಟಕದ ನೆಲದಿಂದ ಸಂಪೂರ್ಣವಾಗಿ ಇರದಂತೆ ಬೇರು ಸಮೇತವಾಗಿ ಕಿತ್ತು ಒಗೆಯಬೇಕೆಂದು ಕರೆ ನೀಡಿದರು.
ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯ ಸಮೃದ್ದಿಯಾಗಿದೆ
ಈ ಭಾಗದ ಅಭಿವೃದ್ಧಿಗೆ ಭದ್ರಾ ಮೇಲ್ದಂಡೆ ಯೋಜನಯನ್ನು ನಮ್ಮ ಕಾಲದಲ್ಲಿ ರೂಪಿಸಿ, ಬಿ.ಎಸ್ ಯಡಿಯೂರಪ್ಪ ಅವರು ಈ ಯೋಜನೆಯನ್ನು ಪ್ರಾರಂಭಿಸಿದರು. ಈ ವರ್ಷ ಮೂರು ಸಾವಿರ ಕೋಟಿ ರೂ.ಗಳನ್ನು ಈ ಯೋಜನೆಗಾಗಿ ಮೀಸಲಿರಿಸಿದ್ದು, ಇದಲ್ಲದೆ, ಕೇಂದ್ರ ಸರ್ಕಾರ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ರಾಷ್ಟ್ರೀಯ ಹೂಡಿಕೆ ಮಂಡಳಿಯಿಂದ ಅನುಮೋದನೆ ನೀಡಲಾಗಿದ್ದು, ಕೇಂದ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ ಕೂಡಲೇ 16 ಸಾವಿರ ಕೋಟಿ ರೂ.ಗಳನ್ನು ಒದಗಿಸಲಿದೆ.
ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಸೇರಿದಂತೆ ಸಮಗ್ರ ಚಿತ್ರದುರ್ಗದ ಅಭಿವೃದ್ಧಿ ಆಗಲಿದೆ. ರಾಣಿಕೆರೆಗೆ ಇಂದು ಬಾಗಿನ ಅರ್ಪಿಸಲಾಗಿದೆ. 1985 ರಲ್ಲಿ ರಾಜೀವ್ ಗಾಂಧಿ ಅವರು ಇಲ್ಲಗೆ ಬಂದ ಸಂದರ್ಭದಲ್ಲಿ ಒಂದು ಹನಿಯೂ ನೀರು ಇರಲಿಲ್ಲ. ಆದರೆ ದೇವರ ಆಶೀರ್ವಾದದಿಂದ ರಾಣಿಕೆರೆ ಸಂಪೂರ್ಣವಾಗಿ ತುಂಬಿದೆ. ಸಮೃದ್ಧಿಯ ಸಂಕೇತ.
ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯ ಸಮೃದ್ದಿಯಾಗಿದೆ. ಈ ಭಾಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಈ ಯೋಜನೆಯಿಂದಾಗಿ ಒಂದು ಲಕ್ಷ ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚು ಭೂಮಿ ನೀರಾವರಿಯಾಗಲಿದೆ. ರೈತನ ಬೆವರಿಗೆ ಬೆಲೆ ಸಿಗುವ ಕಾಲ ಬಂದಿದೆ. ಈ ಭಾಗದ ರೈತರ ಮುಖದಲ್ಲಿ ನಗೆ ಮೂಡಿಸುವ ಆಶಾಕಿರಣವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ಮೂಲಕ ಮಾಡಲಿದೆ ಎಂದರು.
*ರಾಜ್ಯದ ಜನ ಕಾಂಗ್ರೆಸ್ ತಿರಸ್ಕರಿಸಿದ್ದಾರೆ*
ಕಾಂಗ್ರೆಸ್ಸಿನ ನಾಯಕರಿಗೆ ಸಾಮಾಜಿಕ ನ್ಯಾಯ ಭಾಷಣದ ಸರಕಾಗಿದೆ. ಎಲ್ಲಾ ಸಮಾಜಗಳಿಗೆ ಕಾಂಗ್ರೆಸ್ ಕಾಲದಲ್ಲಿ ಅನ್ಯಾಯವಾಗಿದೆ ಹೊರತಾಗಿ ನ್ಯಾಯ ಸಿಕ್ಕಿಲ್ಲ. ವೀರಶೈವ- ಲಿಂಗಾಯತರನ್ನು ಒಡೆಯುವ ಹುನ್ನಾರ ಕಾಂಗ್ರೆಸ್ ಮಾಡಿದೆ. ಎಲ್ಲಾ ಹಿಂದುಳಿದ ವರ್ಗದವರ ಉಪಪಂಗಡಗಳನ್ನು ಗುರುತಿಸಿ ಸಮೀಕ್ಷೆಮಾಡಿ ಹಿಂದುಳಿದ ವರ್ಗಗಳನ್ನು ಸೃಷ್ಟಿಸಿದರು. ಆ ಮೂಲಕ ಸಮಾಜ ಒಡೆಯಲು ಹುನ್ನಾರ ಮಾಡಿ ಅದರ ಪ್ರಯೋಜನೆವನ್ನು ಚುನಾವಣೆಯಲ್ಲಿ ಪಡೆಯುವ ಹುನ್ನಾರ ನಡೆಸಿದರು. ಆದರೆ ಕರ್ನಾಟಕದ ಜನ ಸಂಪೂರ್ಣವಾಗಿ ತಿರಸ್ಕಾರ ಮಾಡಿದರು ಎಂದರು.
*ಚಳ್ಳಕೆರೆಯ ಗತವೈಭವವನ್ನು ಮರುಕಳಿಸುವ ಸಂಕಲ್ಪ*
ಚಳ್ಳಕೆರೆಯ ಗತವೈಭವವನ್ನು ಮರುಕಳಿಸುವ ಸಂಕಲ್ಪವನ್ನು ಮಾಡಲಾಗಿದ್ದು, ಎಣ್ಣೆ ವ್ಯಾಪಾರಕ್ಕೆ ವಿಶೇಷ ಅನುದಾನವನ್ನು ನೀಡಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಚಳ್ಳಕೆರೆಯಲ್ಲಿ ಭಾಜಪ ಗೆಲ್ಲಿಸಬೇಕೆಂಬ ಸಂಕಲ್ಪ ಮಾಡಿದ್ದು, ಇದನ್ನು ನಾವು ಈಡೇರಿಸಲು ಒಗ್ಗಟ್ಟಾಗಿ ಪಕ್ಷದ ಸಂಘಟನೆ ಮಾಡಿದರೆ ನೂರಕ್ಕೆ ನೂರು ಭಾಜಪ ಗೆಲ್ಲಲಿದೆ ಎಂದರು.
ಚಳ್ಳಕೆರೆ ಬರುವ ದಿನಗಳಲ್ಲಿ ನಮ್ಮ ಪ್ರಧಾನಿ ನರೆಂದ್ರ ಮೋದಿಯವರ ಆಶೀರ್ವಾದದೊಂದಿಗೆ ಇಡೀ ದೇಶದಲ್ಲಿ ಪ್ರಮುಖ ನಗರವಾಗಲಿದೆ. ದೇಶದಲ್ಲಿ ಈಗಾಗಲೇ ಇಸ್ರೋ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆ , ಬೃಹತ್ ಪ್ರಮಾಣದ ಅಭಿವೃದ್ಧಿ ಆಗಲಿದೆ. ವಿಶ್ವದಲ್ಲಿ ಐದು ಲ್ಯಾಡಿಂಗ್ ಸ್ಥಳಗಳ ಪೈಕಿ ಚಳ್ಳಕೆರೆಯ ಇಸ್ರೋ ಸ್ಯಾಟಿಲೈಟ್ ಲ್ಯಾಡಿಂಗ್ ವ್ಯವಸ್ಥೆ ಆರನೇಯದ್ದಾಗಿ ಸೇರ್ಪಡೆಯಾಗಲಿದೆ. ಇದಕ್ಕೆಲ್ಲಾ ಕೇಂದ್ರ ಸರ್ಕಾರದ ನೆರವು ಪಡೆದು ಈ ಕೆಲಸ ಕಾರ್ಯಗಳು ನಡೆಯುತ್ತಿದೆ. ಇಲ್ಲಿಂದ ಚಿತ್ರದುರ್ಗಕ್ಕೆ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ಬರಲಿದೆ. ಈ ಎಲ್ಲಾ ಕೆಲಸಗಳಾಗಬೇಕಾದರೆ ಚಳ್ಳಕೆರೆಯಲ್ಲಿ ನಮಗೆ ಬೇಕಾದ ಶಾಸಕರನ್ನು ಆಯ್ಕೆ ಮಾಡುವ ಅವಶ್ಯಕತೆ ಇದೆ. ಜನಪರ ಕೆಲಸ ಮಾಡುವ ಜನಸೇವಕರನ್ನು ಆಯ್ಕೆ ಮಾಡುವುದು ಪ್ರಮುಖವಾಗಿದೆ, ಕಳೆದ ಬಾರಿ ಜನ ನಮಗೆ ಮತ ನೀಡಲು ಸಿದ್ಧರಿದ್ದರೂ ಕೂಡ ನಮ್ಮ ತಪ್ಪಿನಿಂದ ಕಳೆದುಕೊಂಡಿದ್ದೇವೆ. ಈ ಬಾರಿ ಒಂದಾಗಿ ಚಳ್ಳಕೆರೆ ಕ್ಷೇತ್ರವನ್ನು ನಮ್ಮದಾಗಿಸಿಕೊಳ್ಳಲು ಸಂಕಲ್ಪ ಮಾಡಬೇಕು ಎಂದರು.
*ಸಾಮಾಜಿಕ ನ್ಯಾಯ ಒದಗಿಸುವ ಕ್ರಾಂತಿಕಾರಿ ನಿರ್ಧಾರ*
ಭಾರತೀಯ ಜನತಾ ಪಕ್ಷ ಎಸ್.ಸಿ/ ಎಸ್.ಟಿ ಮೀಸಲಾತಿಯನ್ನು ಹೆಚ್ಚಿಸಿದೆ. ಕಾಂಗ್ರೆಸ್ ಪಕ್ಷ 50 ವರ್ಷಗಳಾದರೂ ಇದನ್ನು ಹೆಚ್ಚಿಸುವ ತಾಕತ್ತು ಇರಲಿಲ್ಲ. ಭಾಜಪ ಬಂದ ಮೇಲೆ ಈ ದಿಟ್ಟ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಈ ಜನಾಂಗಕ್ಕೆ ನ್ಯಾಯ, ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂಬ ಕಾರಣದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಅವರೂ ಕೂಡ ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಮುಂದೆ ಬಂದು ಸ್ವಾಭಿಮಾನದ ಬದುಕು ಬದುಕಬಹುದು ಎಂಬ ಕಾರಣದಿಂದ ಈ ನಿರ್ಣಯ ತೆಗೆದುಕೊಂಡು ಲಕ್ಷಾಂತರ ಯುವಕರಿಗೆ ಬಹಳ ದೊಡ್ಡ ಪ್ರಮಾಣದ ಅನುಕೂಲವಾಗಲಿದೆ. ಇದೊಂದು ಕ್ರಾಂತಿಕಾರಿ ನಿರ್ಧಾರ. ಬಳ್ಳಾರಿಯ ಪರಿಶಿಷ್ಟ ಪಂಗಡದ ರ್ಯಾಲಿಯಲ್ಲಿ ಕರ್ನಾಟಕದ ಎಸ್.ಟಿ ಜನ 5 ಲಕ್ಷಕ್ಕಿಂತಲೂ ಹೆಚ್ಚು ಜನ ಸೇರಿ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳನ್ನು ಮುಖ್ಯಮಂತ್ರಿಗಳು ತಿಳಿಸಿದರು.
*ಚಳ್ಳಕೆರೆಯ ಸಮಗ್ರ ಅಭಿವೃದ್ಧಿಯ ಜವಾಬ್ದಾರಿ ನನ್ನದು*
ಎಸ್.ಟಿ ಕ್ಷೇತ್ರವಾದ ಚಳ್ಳಕೆರೆಯ ಅಭಿವೃದ್ಧಿ ಇನ್ನೂ ಆಗಬೇಕಿದೆ. ಅಭಿವೃದ್ಧಿ ಇಲ್ಲಿ ಕುಂಠಿತವಾಗಿದೆ. ಇಲ್ಲಿನ ಶಾಸಕ ತಿಪ್ಪೇಸ್ವಾಮಿ ಮುತ್ಸದಿ ರಾಜಕಾರಣಿ. ಬಿಜೆಪಿಯಿಂದ ಶಾಸಕರಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶವಿದೆ. ಈ ಬಾರಿ ನಾವು ಕಮಲವನ್ನು ಅರಳಿಸಿಯೇ ತೀರಬೇಕೆಂದು ಸಂಕಲ್ಪ ಮಾಡಬೇಕು. ಚಳ್ಳಕೆರೆಯ ಉತ್ಸಾಹ ಕಂಡು ಬರುವ ದಿನಗಳಲ್ಲಿ ಚಳ್ಳಕೆರೆಯ ಸಮಗ್ರ ಅಭಿವೃದ್ಧಿಯ ಜವಾಬ್ದಾರಿಯನ್ನು ತಾವೇ ಹೊರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಇಲ್ಲಿ ಆಗಬೇಕಾದ ಎಲ್ಲಾ ಕೆಲಸಗಳನ್ನು ಸರ್ಕಾರದಿಂದ ಮಾಡುತ್ತೇವೆ, ಜನರು ಭಾಜಪ ಆರಿಸಬೇಕು ಎಂದರು. ಬಿಜೆಪಿಗೆ ಶಕ್ತಿ ತುಂಬಿದರೆ ಬರುವ ಐದು ವರ್ಷ ಸಮೃದ್ಧಿಯ, ಅಭಿವೃದ್ಧಿಯ, ಸುರಕ್ಷಿತ ಕರ್ನಾಟಕವನ್ನು ಕಟ್ಟಲು ಪಣ ತೊಟ್ಟಿದ್ದೇವೆ. ನವ ಕರ್ನಾಟದಿಂದ ನವ ಭಾರತ ನಿರ್ಮಾಣ ನಮ್ಮ ಸಂಕಲ್ಪ ಎಂದರು.
*ವಾಣಿವಿಲಾಸ ಜಲಾಶಯ ಕಾಲುವೆಗಳ ಆಧುನೀಕರಣಕ್ಕೆ 738 ಕೋಟಿ ರೂ.
ವಾಣಿವಿಲಾಸ ಸಾಗರ ಜಲಾಶಯದ ಕಾಲುವೆಗಳು ಮುಚ್ಚಿಹೋಗಿದ್ದು, ಅವುಗಳ ಆಧುನೀಕರಣಕ್ಕಾಗಿ 738 ಕೋಟಿ ರೂ.ಗಳನ್ನು ನೀಡಲಾಗಿದೆ. ಕಾಲುವೆಗಳನ್ನು ನವೀಕರಣಗೊಳಿಸುವ ಮೂಲಕ ರೈತರ ಕೃಷಿಗೆ ಸಹಕರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಾಣಿ ವಿಲಾಸ ಸಾಗರ ಜಲಾಶಯದ ನಿರ್ವಹಣೆ ಯೋಜನೆಯಡಿ 20 ಕೋಟಿ ರೂ. ನೀಡಲಾಗಿದ್ದು, ವಾಣಿ ವಿಲಾಸ ಸಾಗರ ಜಲಾಶಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಾಣಿ ವಿಲಾಸಸಾಗರ ಜಲಾಶಯ ಪ್ರವಾಸಿ ಆಕರ್ಷಣೆಯಾಗಿದ್ದು, ಸುಂದರ ಉದ್ಯಾನವನ್ನು ನಿರ್ಮಿಸಲು ಅನುಮತಿಯನ್ನು ಸರ್ಕಾರ ನೀಡಲಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ 5 ಟಿಎಂಸಿ ನೀರನ್ನು ಖಾಯಂ ಆಗಿ ಒದಗಿಸಲು ಆದೇಶ ನೀಡಲಾಗುವುದು ಎಂದು ತಿಳಿಸಿದರು.
*ಭದ್ರಾ ಮೇಲ್ದಂಡೆ ಯೋಜನೆ :*
ಈ ಭಾಗದ ಜನರು 2007 ಹಾಗೂ 2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 580 ದಿನಗಳ ಸುದೀರ್ಘ ಹೋರಾಟ ನಡೆಸಿದ್ದರು. ಹಿಂದಿನ ಸರ್ಕಾರಗಳು ಈ ಹೋರಾಟವನನ್ನು ನಿರ್ಲಕ್ಷಿಸಿದ್ದರು. ನಮ್ಮ ನಾಯಕರಾದ ಯಡಿಯೂರಪ್ಪ ಅವರ ಸರ್ಕಾರದಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿಸಿ , ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಜಿಲ್ಲೆಯ ಜನರಿಗೆ ಭದ್ರಾ ಮೇಲ್ದಂಡೆಯಿಂದಲೂ ನೀರು ಒದಗಿಸುವ ಹಾಗೂ ವಾಣಿವಿಲಾಸ ಸಾಗರಕ್ಕೆ ನೀರು ಬಿಡಿಸುವ ಭರವಸೆಯನ್ನು ಈಡೇರಿಸಲಾಗಿದೆ. ರಾಜ್ಯದಲ್ಲಿ ನಿಸರ್ಗದ, ಜಲದ ಹಾಗೂ ಜನರ ಸಂಪನ್ಮೂಲಗಳಿದ್ದು, ಸ್ಪಷ್ಟವಾದ ಅಭಿವೃದ್ಧಿಯ ಹಾದಿಯಲ್ಲಿ ನಡೆಯಲು ದಿಟ್ಟ ನಾಯಕತ್ವ ಬೇಕಿದೆ ಎಂದರು.
*ಹಿರಿಯೂರು ತಾಲ್ಲೂಕಿನ ಅಭಿವೃದ್ಧಿಗೆ ಬದ್ಧ :*
ಈ ಪ್ರದೇಶದಲ್ಲಿ ಸುಮಾರು 500 ಕೋಟಿಗಿಂತಲೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಯುಜಿಡಿ ಯೋಜನೆಯಡಿ 208 ಕೋಟಿ ರೂ. ನಿಗದಿಪಡಿಸಿದ್ದು, ಮೊದಲನೇ ಹಂತದಲ್ಲಿ 104 ಕೋಟಿ ರೂ.ಗಳನ್ನು ಮಂಜೂರಾತಿ ನೀಡಲಾಗಿದೆ. ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ, ಚಳ್ಳಕೆರೆ ಸೇರಿದಂತೆ ಎಲ್ಲ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಹನಿ ನೀರಾವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, 1 ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುವುದು. ಈ ಭಾಗದಲ್ಲಿ ಇಸ್ರೋ, ಐಐಟಿ ಇದೆ. ಇಸ್ರೋ ಸಂಸ್ಥೆ ಮರುಬಳಕೆಯಾಗಬಹುದಾದ ರಾಕೆಟ್ ಲ್ಯಾಂಡಿಂಗ್ ಪ್ರಯೋಗವನ್ನು ಚಳ್ಳಕೆರೆಯ ಘಟಕದಲ್ಲಿ ನಡೆಸಲು ಕ್ರಮ ಕೈಗೊಳ್ಳುತ್ತಿದೆ. ಇಸ್ರೋ ಘಟಕದ ಸ್ಥಾಪನೆಗೆ ಭೂಮಿಯನ್ನು ಯಡಿಯೂರಪ್ಪನವರ ಸರ್ಕಾರ ನೀಡಿದೆ.
ಚಿತ್ರದುರ್ಗದಲ್ಲಿ 1000 ಎಕರೆಯ ಇಂಡಸ್ಟ್ರಿಯಲ್ ಟೌನ್ಶಿಪ್ ಮಾಡಲು ಸ್ಥಳವನ್ನು ಗುರುತಿಸಲಾಗಿದೆ. ಈ ಕಾಮಗಾರಿಯನ್ನು ಮುಂದಿನ ಜನವರಿಯಲ್ಲಿ ಪ್ರಾರಂಭಿಸಲಾಗುವುದು. ಈ ಯೋಜನೆಯಿಂದ ಆರ್ಥಿಕ ಬದಲಾವಣೆ, ಕೈಗಾರಿಕಾ ಆಬಿವೃದ್ಧಿ, ಯುವಕರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ. ಚಿತ್ರದುರ್ಗದ ಮೂಲಕ ತುಮಕೂರು – ದಾವಣಗೆರೆ ರೈಲು ಯೋಜನೆಗೆ ಬೇಕಾದ ಅನುದಾನವನ್ನು ಒದಗಿಸಲಾಗುತ್ತಿದ್ದು, ಮುಂದಿನ ಮಾರ್ಚ್ ಒಳಗೆ ಯೋಜನೆಗೆ ಅಡಿಗಲ್ಲು ಹಾಕಲಾಗುವುದು. ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಿದ್ದು, ಕಾರ್ಯನಿರ್ವಹಿಸುತ್ತಿಲ್ಲ. ಇದರ ಪುನಶ್ಚೇತನಕ್ಕೆ ಬೇಡಿಕೆ ಇತ್ತು. ನೀರಾವರಿ ಹೆಚ್ಚಿಸಿ, ಕಬ್ಬು ಬೆಳೆದು ಸಕ್ಕರೆ ಉತ್ಪಾದನೆ , ಎಥನಾಲ್ ಉತ್ಪಾದನೆಯಿಂದ ರೈತರಿಗೆ ಅನುಕೂಲವಾಗುತ್ತದೆ. ಇದರ ಬಗ್ಗೆ ತಜ್ಞರ ಸಮಿತಿಯನ್ನು ಈ ಪ್ರದೇಶಕ್ಕೆ ಕಳುಹಿಸಿ, ಅವರ ಅಭಿಪ್ರಾಯದಂತೆ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಬಿ.ಶ್ರೀರಾಮುಲು, ಗೋವಿಂದ ಕಾರಜೋಳ, ಶಾಸಕರಾದ ಚಂದ್ರಣ್ಣ, ಪೂರ್ಣಿಮಾ, ತಿಪ್ಪಾರೆಡ್ಡಿ, ರಾಮಚಂದ್ರ, ನಾರಾಯಣಸ್ವಾಮಿ, ನವೀನ್ ಹಾಗೂ ಜಿಲ್ಲಾ ಅಧ್ಯಕ್ಷ ಮುರಳಿ, ಸಿದ್ದೇಶ್ ಯಾದವ್, ರವಿಕುಮಾರ್, ಅನಿಲ್‍ಕುಮಾರ್, ಜಯಪಾಲ್ ಮೊದಲಾದವರು ಉಪಸ್ಥಿತರಿದ್ದರು.