Latest

ಪಿ.ಎಸ್.ಐ ನೇಮಕಾತಿ ಅಕ್ರಮದಲ್ಲಿ ಕಾಂಗ್ರೆಸ್ ಪಕ್ಷದವರೇ ರೂವಾರಿಗಳು: ಸಿಎಂ ಬೊಮ್ಮಾಯಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ: ಯಾದಗಿರಿ: ಪಿ.ಎಸ್.ಐ ನೇಮಕಾತಿ ಅಕ್ರಮದಲ್ಲಿ ಕಾಂಗ್ರೆಸ್ ಪಕ್ಷದವರೇ ರೂವಾರಿಗಳು ಎಂದು ಮುಖ್ಯಮಂತ್ರಿ ಬಸವರಾಜ ವಾಗ್ದಾಳಿ ನಡೆಸಿದ್ದಾರೆ.

ಯಾದಗಿರಿ ಜಿಲ್ಲಾ ಭಾಜಪ ಹುಣಸಗಿಯಲ್ಲಿ ಆಯೋಜಿಸಿದ್ದ ಜನಸಂಕಲ್ಪಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಹುಲ್ ಗಾಂಧಿಗೆ ದೇಶ ಹಾಗೂ ಕರ್ನಾಟಕದ ಬಗ್ಗೆ ಗೊತ್ತಿಲ್ಲ. ಕರ್ನಾಟಕದ ಜನರ ಭಾವನೆಗಳೂ ತಿಳಿದಿಲ್ಲ. ಅವರ ಕಾಲದ ಎಲ್ಲಾ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಕಳುಹಿಸಲಾಗುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಲ್ಲ ಎಂದು ಹೇಳಿದ್ದಾರೆ. ಈ ಹುಡುಗ ಏನೂ ಆಗುವುದಿಲ್ಲ ಎಂದು ನಮಗೆ 15 ವಷರ್ಗಳಿಗೆ ಮುಂಚೆಯೇ ಗೊತ್ತಿತ್ತು . ಆದರೆ ಕಾಂಗ್ರೆಸ್ಸಿಗರ ಬೆನ್ನು ಹತ್ತಿದ್ದಾರೆ. ರಾಹುಲ್ ಗಾಂಧಿ ಯಾವತ್ತೂ ಪ್ರಧಾನಿ ಆಗುವುದಿಲ್ಲ. ಕಾಂಗ್ರೆಸ್ ಕಾಲದ ಹಗರಣಗಳ ಬಗ್ಗೆ ಈಗಾಗಲೇ ತನಿಖೆಯಾಗುತ್ತಿದೆ. ರಾಹುಲ್ ಗಾಂಧಿಗೆ ಕೊಡುತ್ತೇನೆ ಎಂದರೆ ಅವರಿಗೆ ಭಯ ಶುರುವಾಗಿದೆ. ಇಂಥವರನ್ನು ಕಟ್ಟಿಕೊಂಡು ನಡೆದರೆ ಇವರ ಮೇಲೆ ನಿಮ್ಮ ಪಕ್ಷದಲ್ಲಿ ಏನಾದರೂ ಕ್ರಮ ತೆಗೆದುಕೊಳ್ಳಲಾಗುವುದೇ ಎಂದು ಪ್ರಶ್ನೆ ಮಾಡುತ್ತಿದ್ದೇನೆ ಎಂದರು.

ಕರ್ನಾಟಕದ ಜನ ಸುಳ್ಳನ್ನು ನಂಬುವುದಿಲ್ಲ

ದಾಖಲೆ ಇಲ್ಲದೆ ಆರೋಪ ಮಾಡುವ ಕಾಂಗ್ರೆಸ್ಸಿಗೆ ದಾಖಲೆ ಕೊಟ್ಟು ಮಾತನಾಡುತ್ತಿದ್ದೇನೆ. ಕುಂಡಗಳಲ್ಲಿ ಇರುವ ಗಿಡಗಳಲ್ಲ. ಕರ್ನಾಟಕದ ಭೂಮಿಯಲ್ಲಿ ಹೆಮ್ಮರವಾಗಿ, ಆಳವಾಗಿ ಬೇರು ಬಿಟ್ಟರುವವರು ನಾವು. ಸುಳ್ಳು ಆಪಾದನೆ, ಮಾತುಗಳನ್ನು ಕರ್ನಾಟಕದ ಜನ ನಂಬುವುದಿಲ್ಲ. ಹೆಮ್ಮರಗಳನ್ನು ನೀವು ಏನೂ ಮಾಡಲು ಸಾಧ್ಯವಿಲ್ಲ ಸ್ವಚ್ಛ ದಕ್ಷ ಆಡಳಿತ, ಎಲ್ಲಾ ವರ್ಗಕ್ಕೂ ನ್ಯಾಯ, ಎಲ್ಲಾ ಪ್ರದೇಶಕ್ಕೂ ನ್ಯಾಯ ನೀಡುವ ಸಂಕಲ್ಪ ನಮ್ಮದು ಎಂದರು.

ಭಾಷಣದಲ್ಲಿ ಸಾಮಾಜಿಕ ನ್ಯಾಯ

ಕಾಂಗ್ರೆಸ್ ಸಾಮಾಜಿಕ ನ್ಯಾಯವನ್ನು ಭಾಷಣದಲ್ಲಿ ಹೇಳಿ 70 ವರ್ಷ ಆಡಳಿತ ಮಾಡಿದರು. ಮೀಸಲಾತಿಯ ಬೇಡಿಕೆ ಐದು ದಶಕಗಳದ್ದು. ದುರ್ಬಲ ವರ್ಗದವರು ಹೇಗಿದ್ದಾರೆ ಎಂದು ತಿರುಗಿ ನೋಡಲು ಅವರಿಗೆ ಪುರುಸೊತ್ತು ಸಿಗಲಿಲ್ಲ. ಅವರಿಗೆ ಮೀಸಲಾತಿ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿ ರಚನೆಯಾಯಿತು. ಇಂದು ಅದನ್ನು ಅನುಷ್ಠಾನ ಮಾಡಬೇಕೆಂಬ ಇಚ್ಛಾಶಕ್ತಿಗೆ ಮೀಸಲಾತಿ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಎಂದರು.

ಮಾತಿನಲ್ಲಿ ಅಲ್ಲ, ಕೃತಿಯಲ್ಲಿ ತೋರಿಸಿದ್ದೇವೆ

ಕಾಂಗ್ರೆಸ್ ನವರಿದ್ದಾಗ ಕೆ.ಕೆ.ಆರ್.ಡಿ.ಬಿ ಅನುದಾನ ಜನರಿಗೆ ಮುಟ್ಟಲಿಲ್ಲ. ನರೇಗಾ ಯೋಜನೆಯಡಿ ನೂರಾರು ಕೋಟಿ ರೂ.ಗಳನ್ನು ಕಾಂಗ್ರೆಸ್ ಶಾಸಕರು ಹೊಡೆದಿದ್ದರು. ಕೇಂದ್ರದಲ್ಲಿ ಪ್ರಶಸ್ತಿ ಪಡೆಯಲು ಹೊರಟಿದ್ದರು. ಕೊನೆಗೆ ಸಿಬಿಐ ತನಿಖೆಯಾಯಿತು. ಇದು ಅವರ ಆಡಳಿತದ ಶೈಲಿ. ಬಡವರ, ಪರಿಶಿಷ್ಟರ ವಿದ್ಯಾಲಯಗಳಲ್ಲಿ ಮಕ್ಕಳಿಗೆ ನೀಡುವ ದಿಂಬು, ಹಾಸಿಗೆಗಳಲ್ಲಿ ಹಣ ಹೊಡೆದಿದ್ದು, ಅವರಿಗೆ ನಾಚಿಕೆಯಾಗಬೇಕು. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ನೆಲ, ನೀರು, ನೌಕರಿಯಲ್ಲಿ ದುಡ್ಡು ಹೊಡೆದಿದ್ದಾರೆ, ಹಿಂದುಳಿದವರಿಗೂ ನ್ಯಾಯ ನೀಡಬೇಕು. ಕನಕದಾಸರ ಊರಿನಿಂದ ಬಂದಿರುವ ನಾನು ಬಾಡಾ ಕ್ಷೇತ್ರವನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ. ಕನಕದಾಸರ ನೆನಪಿಡುವ ರೀತಿಯಲ್ಲಿ ಅವರ ದರ್ಶಗಳನ್ನು ಜನರಿಗೆ ತಲುಪಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಯಡಿಯೂರಪ್ಪನವರು ಕಾಗಿನೆಲೆಯನ್ನು ಅಭಿವೃದ್ಧಿಗೊಳಿಸಿದ್ದಾರೆ. ಎಸ್.ಟಿ ಸಮುದಾಯಕ್ಕೆ ನಿಗಮ ಮಾಡಿದ್ದು, ಭಾಜಪ. ವಾಲ್ಮೀಕ ಜಯಂತಿ, ಎಸ್.ಟಿ ಸಮುದಾಯಕ್ಕೆ ಪ್ರತ್ಯೇಕ ಇಲಾಖೆ ಕಲ್ಪಿಸಿರುವುದು ಬಾಜಪ. ಮಾತಲ್ಲಿ ಅಲ್ಲ. ಕೃತಿಯಲ್ಲಿ ತೋರಿಸಿದ್ದೇವೆ. ಸುರಪುರದ ನಾಯಕರ ಇತಿಹಾಸ ದೊಡ್ಡದಿದೆ. ಔರಂಗಜೇಬನ್ನು ಹಿಮ್ಮೆಟ್ಟಿಸಿದಂತೆಯೇ ಈ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಈ ಬಾರಿ ಕರ್ನಾಟಕದಲ್ಲಿ ಕಮಲವನ್ನು ಅರಳಿಸಬೇಕು ಎಂದರು.

ಕಾಂಗ್ರೆಸ್ ನಾಯಕರು ಈ ಭಾಗದ ಜನರ ಋಣದಲ್ಲಿದ್ದಾರೆ

ಇಷ್ಟು ವರ್ಷ ಕಾಂಗ್ರೆಸ್ ಅಭಿವೃದ್ಧಿ ಮಾಡದೇ ಇರಲು ಇಚ್ಛಾಶಕ್ತಿಯ ಕೊರತೆ ಕಾರಣ. ಜನರನ್ನು ಕತ್ತಲಲ್ಲಿ ಇಡುವ ಪ್ರಯತ್ನವಾಗಿದೆ. ಕಾಂಗ್ರೆಸ್ ನಾಯಕರು ಈ ಭಾಗದ ಜನರ ಋಣದಲ್ಲಿದ್ದಾರೆ. ನಿಮ್ಮ ಋಣವನ್ನು ತೀರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸಾಮಾಜಿಕ ಅಭಿವೃದ್ಧಿಯ ಜೊತೆಗೆ, ಸಾಮಾಜಿಕ ನ್ಯಾಯವನ್ನು ನೀಡುತ್ತಿದ್ದೇವೆ ಎಂದರು.

ಕಲ್ಯಾಣ ನಾಡನ್ನಾಗಿ ಮಾಡುವ ಸಂಕಲ್ಪ

ಈಗ ಕಾಲ ಬದಲಾಗಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ. ಅದು ಬಿರುಗಾಳಿಯಾಗಿ ಅದರ ಪರಿಣಾಮವನ್ನು ನೀವು ನೋಡುತ್ತಿದ್ದೀರಿ. ಇನ್ನು ಮುಂದೆ ಈ ಭಾಗದ ಜನರಿಗೆ ವಿಶ್ವಾಸದ್ರೋಹ ಮಾಡುವುದು ಕಾಂಗ್ರೆಸ್ಸಿಗೆ ಸಾಧ್ಯ್ವವಿಲ್ಲ. ನಮ್ಮ ಸರ್ಕಾರ ಭಾಗಕ್ಕೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡುವುದಷ್ಟೇ ಅಲ್ಲ, ಇದನ್ನು ಕಲ್ಯಾಣ ನಾಡನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದೇವೆ. ಅದಕ್ಕಾಗಿ ಮುಂದಿನ ಬಜೆಟ್ ನಲ್ಲಿ 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗುತ್ತಿದೆ. ಪ್ರಸ್ತುತ ಒಂದು ಕ್ಷೇತ್ರಕ್ಕೆ 50-100 ಕೋಟಿ ಬಂದರೆ, 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟರೆ 100-200 ಕೋಟಿ ರೂ.ಗಳ ಅನುದಾನ ರಲಿದೆ. ಇದು ನಿಮ್ಮ ಹಕ್ಕು, ಉಪಕಾರವಲ್ಲ. ಇದು ನಮ್ಮ ಬದ್ಧತೆ ಎಂದರು.

ಭ್ರಮನಿರಸನ

371 ಜೆ ಸುಲಭವಾಗಿ ಬಂದಿಲ್ಲ. ಸುಮಾರು ಮೂರು ದಶಕಗಳ ಹೋರಾಟದಿಂದ ದೊರಕಿದೆ. ಆಂಧ್ರದಿಂದ ತೆಲಂಗಾಣ ರಾಜ್ಯವಾದಾಗ ಕೇಂದ್ರ ಸರ್ಕಾರ ಅನಿವಾರ್ಯವಾಗಿ 371 ಜೆ ನೀಡಬೇಕಾಯಿತು. 371 ಜೆ ಕೊಡದೇ ಹೋಗಿದ್ದರೆ ಇಲ್ಲಿ ಕಾಂಗ್ರೆಸ್ ನವರು ಓಡಾಡಲು ಕಷ್ಟವಾಗುತ್ತಿತ್ತು. ಅದಕ್ಕೆ ಕಾಂಗ್ರೆಸ್ ನವರು ಈಗ ಎದೆ ಮುಟ್ಟಿ ಹೇಳುತ್ತಾರೆ ನಾವು ತಂದಿದ್ದು ಎಂದು. ಆದರೆ ಇದು ಹೋರಾಟದ ಫಲ. 371 ಜೆ ಬಂದ ನಂತರ ಅನುದಾನ ನೀಡದಿದ್ದರೆ ಅಭಿವೃದ್ಧಿಯಾಗಲು ಹೇಗೆ ಸಾಧ್ಯ. ಜನರಲ್ಲಿ ಈ ಬಗ್ಗೆ ಭ್ರಮನಿರಸನವಾಗಿತ್ತು ಎಂದರು.

ಜೇವರ್ಗಿಯಲ್ಲಿ ಮಲ್ಲಾಬಾದ್ ಏತ ನೀರಾವರಿ ಯಾರು ಮಾಡಿದ್ದು, ಹೈದರಾಬಾದ್ ಕರ್ನಾಟಕ ಭಾಗದ ಜನರ ಮತದಿಮದ ಬಹಳ ದೊಡ್ಡ ನಾಯಕರಾಗಿ, ರಾಜ್ಯ ಮತ್ತು ಕೇಂದ್ರದಲ್ಲಿ ಮಂತ್ರಿಗಳಾಗಿ ಕಲ್ಯಾಣ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ. ಸುಮಾರು ನಾಲ್ಕು ಐದು ದಶಕಗಳ ಕಾಲ ಅವರನ್ನು ಈ ಭಾಗದ ಜನ ಹೆಗಲ ಮೇಲಿಟ್ಟುಕೊಂಡು ಮೆರೆಸಿದ್ದೀರಿ. ವಿಶ್ವಾಸ, ನಂಬಿಕೆಯನ್ನಿಟ್ಟಿರಿ, ಆದರೆ ಈ ಭಾಗದ ಜನ ಹಿಂದುಳಿದೇ ಇದ್ದಾರೆ 371 ಜೆ, ಬೇಡುವಂಥ ಪರಿಸ್ಥಿತಿ ಬಂತು. ನಾಲ್ಕು ದಶಕಗಳ ಕಾಲ ಅಭಿವೃದ್ಧಿಯನ್ನೇ ಕಾಣಲಿಲ್ಲ. ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ನಂಜುಂಡಪ್ಪ ವರದಿ ಸಲ್ಲಿಕೆಯಾಯಿತು. 2007 ರಲ್ಲಿ ಯಡಿಯೂರಪ್ಪ ನವರು ಮುಖ್ಯಮಂತ್ರಿಗಳಾದಾಗ ಅದಕ್ಕೆ ಅನುದಾನ ನೀಡಿದರು. 5 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ನಂಜುಂಡಪ್ಪ ವರದಿ ಧೂಳು ತಿನ್ನುತ್ತಿತ್ತು. ಅದನ್ನು ಕಸದ ಬುಟ್ಟಿಗೆ ಹಾಕಿದ್ದರು. 371 ಜೇ ಪರಿಚ್ಚೇಧ ಬಂದ ನಂತರ 5 ವರ್ಷ ಸರಿಯಾದ ಅನುದಾನ ಬರಲಿಲ್ಲ, ಬಂದ ಅನುದಾನ ಖರ್ಚು ಆಗಲಿಲ್ಲ. ಈ ಪ್ರದೇಶ ಹಿಂದುಳಿಯಿತು. 371 ಜೆ ಕೇವಲ ಕಾಗದದಲ್ಲಿ ಉಳಿಯಿತು. ಇಲ್ಲಿಯ ಜನರು ಮುಗ್ಧರಿದ್ದಾರೆ, ಮತಬ್ಯಾಂಕುಗಳು, ಕಣ್ಣು ಮುಚ್ಚಿಕೊಂಡು ಮತ ಹಾಕುತ್ತಾರೆ ಎಂದು ಗ್ಯಾರಂಟಿ ಇತ್ತು ಎಂದರು .

ಸಮಗ್ರ ಅಭಿವೃದ್ಧಿಯ ಬಗ್ಗೆ ಭಾಜಪಕ್ಕೆ ಸ್ಪಷ್ಟತೆ ಇದೆ:

ಸಮಗ್ರ ಅಭಿವೃದ್ಧಿಯ ಬಗ್ಗೆ ನಮಗೆ ಸ್ಷಷ್ಟಯೆ ಇದೆ. ನಮ್ಮಸರ್ಕಾರ ರೈತರ ಮಕ್ಕಳಿಗೆ ವಿದ್ಯಾನಿಧಿ, ರೈತ ಕೂಲಿಕಾರರು, ನೇಕಾರರು, ಮೀನುಗಾರರಿಗೆ ವಿಸ್ತರಿಸಲಾಗಿದೆ. ಎಸ್ ಸಿ/ಎಸ್/ಟಿ ಜನಾಂಗಕ್ಕೆ 75 ಯೂನಿಟ್ ವರೆಗೂ ಉಚಿತ ವಿದ್ಯುತ್, ಅವರ ಮನೆಗೆ 2 ಲಕ್ಷ ರೂ.ಗಳು, ಜಮೀನಿಗೆ 20 ಲಕ್ಷ ರೂ.ಗಳು ಒದಗಿಸಲಾಗುತ್ತಿದೆ. 100 ಡಾ; ಅಂಬೇಡ್ಕರ್ ಹಾಸ್ಟಲ್, 50 ಕನಕದಾಸರ ಹಾಸ್ಟೆಲ್ , ಒಂದು ಸಾವಿರ ಮಕ್ಕಳಿಗೆ 5 ಮೆಗಾ ಹಾಸ್ಟೆಲ್ ಗಳನ್ನು ಕಲಬುಗಿಯಲ್ಲಿ ನಿರ್ಮಿಸಲಾಗುತ್ತಿದೆ. ರಾಯಚೂರಿನಲ್ಲಿ ವಿಮಾನ ನಿಲ್ದಾಣ, ರಾಯಚೂರು ಮತ್ತು ಕಲಬುರಗಿಯಲ್ಲಿ ಜವಳಿ ಪಾರ್ಕ್ , ಯಾದಗಿರಿಯಲ್ಲಿ ಫಾರ್ಮಸ್ಯುಟಿಕಲ್ ಪಾರ್ಕ್ ನಿರ್ಮಿಸಲಾಗುತ್ತಿದೆ ಎಂದರು.

ಅಭಿವೃದ್ಧಿಯಲ್ಲಿ ಎಲ್ಲರ ಪಾಲಿರಬೇಕು

ಅಭಿವೃದ್ಧಿಯಲ್ಲಿ ಎಲ್ಲರ ಪಾಲಿರಬೇಕು. ಎಲ್ಲರೂ ಬೆಳೆಯಬೇಕು. ದುಡಿಯುವ ವರ್ಗಕ್ಕೆ ಹೆಚ್ಚಿನ ಶಕ್ತಿ ಮತ್ತು ಅವಕಾಶಗಳನ್ನು ನೀಡಬೇಕು. ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದೆ ಬಂದು ಸ್ವಾವಲಂಬಿಗಳಾಗಿ, ಸ್ವಾಭಿಮಾನದ ಜೀವನವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರು ನಡೆಸಬೇಕು ಎಂದು ಈ ತೀರ್ಮಾನ ಮಾಡಲಾಗಿದೆ. ಸಾಮಾಜಿಕ ನ್ಯಾಯ ನೀಡುವುದು ನಮ್ಮ ಧ್ಯೇಯ, ಬದ್ಧತೆ ಹಾಗೂ ಇಚ್ಛಾಶಕ್ತಿ. ಕಾನೂನಾತ್ಮಕವಾಗಿ ಇನ್ನಷ್ಟು ಗಟ್ಟಿಗೊಳಿಸುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು. ಒಮ್ಮೆ ಅವಕಾಶ ಕೊಟ್ಟರೆ ಕನ್ನಡ ನಾಡು, ಭಾರತದೇಶವನ್ನು ದುರ್ಬಲ ವರ್ಗದವರು ಕಟ್ಟುತ್ತಾರೆ. ಈ ದೇಶವನ್ನು ಕೇವಲ ಶ್ರೀಮಂತರು ಕಟ್ಟಲಾಗುವುದಿಲ್ಲ. ಕೂಲಿಕಾರರು ರಸ್ತೆ ನಿರ್ಮಿಸುವುದರಿಂದ ಬದಲಾವಣೆ ಸಾಧ್ಯವಾಗುತ್ತದೆ ಎಂದರು.

ಸರ್ಕಾರದ ಸಂಕಲ್ಪ

ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶಾಸಕ ರಾಜೂಗೌಡ ಶ್ರಮಿಸುತ್ತಿದ್ದಾರೆ. ಇದು ನಮ್ಮ ಸರ್ಕಾರದ ಸಂಕಲ್ಪವೂ ಹೌದು. ಹೈದರಾಬಾದ್ ಕರ್ನಾಟಕ ಹಿಂದುಳಿದಿದ್ದು, ಈ ಭಾಗವನ್ನು ಮುಂದೆ ತರಲು ರೈತರಿಗಾಗಿ ನೀರಾವರಿ, ಉದ್ಯೋಗಕ್ಕಾಗಿ ಕೈಗಾರಿಕೆ, ಶಿಕ್ಷಣಕ್ಕಾಗಿ ಶಾಲೆಗಳು, ಆರೋಗ್ಯಕ್ಕಾಗಿ ಆಸ್ಪತ್ರೆಗಳು,ಸಂಪರ್ಕಕ್ಕಾಗಿ ರಸ್ತೆ, ವಿಶ್ವವಿದ್ಯಾಲಯ, ವಿಮಾನನಿಲ್ದಾಣ ಗಳನ್ನು ಈ ಭಾಗದ ಅಭಿವೃದ್ಧಿಗಾಗಿ ಒದಗಿಸಲಾಗುತ್ತಿದೆ ಎಂದರು.

ಕಾಂಗ್ರೆಸ್ ಕಲ್ಯಾಣ ಕರ್ನಾಟಕಕ್ಕೆ ದ್ರೋಹ ಬಗೆದಿದೆ ಎಂದು ಆಕ್ರೋಶ:

ಕಲಬುರಗಿ: ಕಲ್ಯಾಣ ಕರ್ನಾಟಕದಿಂದ ಎಲ್ಲ ಸ್ಥಾನಮಾನವನ್ನು ಪಡೆದುಕೊಂಡರು ಕೂಡ ಕಾಂಗ್ರೆಸ್ ಈ ಭಾಗಕ್ಕೆ ದ್ರೋಹ ಬಗೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಅವರು ಕಲಬುರಗಿಯ ಕಮಲಾಪುರದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಯ ಗಾಳಿ ಸುನಾಮಿಯಂತೆ ಬೀಸುತ್ತಿದೆ. ಕಾಂಗ್ರೆಸ್ ಮುಂಬರುವ 2023ರ ಚುನಾವಣೆಯಲ್ಲಿ ಧೂಳಿಪಟವಾಗಲಿದೆ. ಕಲ್ಯಾಣ ಕರ್ನಾಟಕದ ಜನರು ಜಾಗೃತರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನ ಆಟ ನಡೆಯುವುದಿಲ್ಲ ಎಂದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ ನೀಡಿದ್ದು,ಮುಂದಿನ ಬಜೆಟ್ ನಲ್ಲಿ ಅದನ್ನು 5 ಸಾವಿರ ಕೋಟಿಗೆ ಹೆಚ್ಚಿಸಲಾಗುವುದು ಈ ಭಾಗದ ಅಭಿವೃದ್ಧಿಗೆ ಹಣ ನೀಡಿದರೆ, ಕಾಂಗ್ರೆಸ್ ನವರು ಅದನ್ನು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗುವುದು ಇಷ್ಟವಿಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನವರು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿಲ್ಲ. ಎಸ್.ಸಿ, ಎಸ್.ಟಿಯವರಿಗೆ, ಹಿಂದುಳಿದ ವರ್ಗದವರಿಗೆ ಮೋಸ ಮಾಡಿದ್ದಾರೆ ಎಂದರು.

ಫಲಾಯನವಾದದ ನಾಯಕತ್ವ

ಕಾಂಗ್ರೆಸ್ ದೇಶದೆಲ್ಲೆಡೆ ಮುಳುಗಿದೆ. ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆ ನಡೆಯುತ್ತಿದ್ದರೆ, ರಾಹುಲ್ ಗಾಂಧಿ ಆಂಧ್ರಪ್ರದೇಶದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಎಲ್ಲಿ ಯುದ್ಧವಿದೆ, ಅಲ್ಲಿ ಹೋರಾಟ ಮಾಡುವವನು ನಿಜವಾದ ನಾಯಕ. ಫಲಾಯನವಾದದ ನಾಯಕತ್ವ ಕಾಂಗ್ರೆಸ್ ಗೆ ಇದೆ. ಮುಳುಗುತ್ತಿರುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗುತ್ತಿದ್ದಾರೆ. ಅಧಿಕಾರ ಇದ್ದಾಗ ಕಾಂಗ್ರೆಸ್ ನಾಯಕತ್ವ ನೀಡಿದ್ದರೆ ನಾವೆಲ್ಲ ಸ್ವಾಗತ ಮಾಡುತ್ತಿದ್ದೆವು. ಕಾಂಗ್ರೆಸ್ ಮುಳುಗಿದರೆ ಖರ್ಗೆಯವರ ಹೆಸರಾಗಬೇಕು ಅಂತ ಮಾಡಿದ್ದಾರೆ ಎಂದು ಸಿಎಂ ಹೇಳಿದರು.
.
ವಿಶೇಷವಾದ ಪ್ರಾಶ್ಯಸ್ತ
ಕರ್ನಾಟಕದ ಅಭಿವೃದ್ಧಿಗೆ ಶಾಲಾ ಕೊಠಡಿ, ವಸತಿ ನಿಲಯ, ಆಸ್ಪತ್ರೆ, ರಸ್ತೆ ಹಾಗೂ ನೀರಾವರಿಗೆ ವಿಶೇಷವಾದ ಪ್ರಾಶ್ಯಸ್ತವನ್ನು ಕೊಟ್ಟಿದ್ದೇವೆ. ಕಲಬುರಗಿ, ಯಾದಗಿರಿಯಲ್ಲಿ ಟೆಕ್ಸಟೈಲ್ ಪಾರ್ಕ್ ರಾಜ್ಯ ಸರ್ಕಾರದಿಂದ ಮಾಡಿದ್ದೇವೆ. ಕಲಬುರಗಿ ವಿಮಾನ ನಿಲ್ಧಾಣ ನಿರ್ಮಾಣದ ಅಭಿವೃದ್ಧಿ ಕೆಲಸ ಆಗುತ್ತಿದೆ. 50 ವರ್ಷಗಳ ಬೇಡಿಕೆ ಎಸ್.ಸಿ, ಎಸ್.ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇವೆ. ಕಾಂಗ್ರೆಸ್ ನಿಂದ ಮಾಡಲು ಆಗಿರಲಿಲ್ಲ. ಅಂತಹ ಐತಿಹಾಸಿಕ ನಿರ್ಣಯವನ್ನು ನಮ್ಮ ಸಚಿವ ಸಂಪುಟದಲ್ಲಿ ತೆಗೆದುಕೊಂಡು ಸ್ವಾಭಿಮಾನದಿಂದ ಬದುಕುವ ರೀತಿಯಲ್ಲಿ ನಾವು ಮಾಡಿದ್ದೇವೆ ಎಂದರು. .

ಜನರ ಸಂಕಲ್ಪವೇ ನಮ್ಮ ಸಂಕಲ್ಪ
ಜನರ ಸಂಕಲ್ಪವೇ ನಮ್ಮ ಬಿಜೆಪಿಯ ಸಂಕಲ್ಪ. 2023 ರಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಿಕೊಡಿ. ಕಲ್ಯಾಣ ಕರ್ನಾಟಕದಲ್ಲಿ ಕಡೆ ಬಿಜೆಪಿ ಗಾಳಿ ಸುನಾಮಿಯಂತೆ ಬೀಸುತ್ತಿದೆ. ನವ ಕರ್ನಾಟಕದಿಂದ ನವ ಭಾರತವನ್ನು ಕಟ್ಟುವ ಸಂಕಲ್ಪವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದರು.

ಬಸವರಾಜ ಮತ್ತಿಮೂಡ ಈ ಕ್ಷೇತ್ರದ ಸಮಸ್ತ ಅಭಿವೃದ್ಧಿಗೆ ಕೆಲಸವನ್ನು ಮಾಡುತ್ತಿದ್ದಾರೆ. ಕ್ಷೇತ್ರದ ಶಾಸಕರಾದ ಮೇಲೆ 1,500 ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಅವರನ್ನು 25 ಸಾವಿರ ಮತಗಳ ಅಂತರದಿಂದ ಮತ್ತೊಮ್ಮೆ ಗೆಲ್ಲಿಸಿಕೊಡಬೇಕೆಂದು ಸಿಎಂ ಬೊಮ್ಮಾಯಿ ನುಡಿದರು.

ಅಲ್ಪ ಸಂಖ್ಯಾತರ ಸಾವಿರಾರು ಕೋಟಿ ವಕ್ಫ ಆಸ್ತಿಯನ್ನು ಕಾಂಗ್ರೆಸ್ ನಾಯಕರು ನುಂಗಿ ನೀರು ಕುಡಿದಿದ್ದಾರೆ

ಕಾಂಗ್ರೆಸ್ ನವರು ಅಲ್ಪ ಸಂಖ್ಯಾತರಿಗೆ ದ್ರೋಹ ಮಾಡಿದ್ದಾರೆ. ಸಮುದಾಯದ ಸಾವಿರಾರು ಕೋಟಿ ಮೌಲ್ಯದ ವಕ್ಫ ಆಸ್ತಿಯನ್ನು ಕಾಂಗ್ರೆಸ್ ನಾಯಕರು ನುಂಗಿ ನೀರು ಕುಡಿದಿದ್ದಾರೆ. ಕಲಬುರಗಿ, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿರುವ ವಕ್ಫ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈಗಾಗಲೇ ಅದರ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಇನ್ನಷ್ಟು ಹೆಚ್ಚಿನ ತನಿಖೆಗೆ ನಾವು ಆದೇಶಿಸಿಸುತ್ತೇವೆ. ಅಲ್ಪಸಂಖ್ಯಾತರ ಮತ ಪಡೆದು ಅವರಿಗೆ ದ್ರೋಹ ಮಾಡಿದ್ದಾರೆ. ಅದೆಲ್ಲವನ್ನು ಬಯಲಿಗೆ ತರುತ್ತೇವೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಗೆ ಅಲ್ಪಸಂಖ್ಯಾತರು ಕೂಡ ಬೆಂಬಲ ನೀಡುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ; ವಿದ್ಯುತ್ ತಂತಿ ತಗುಲಿ ವೃದ್ಧ ಸಾವು

https://pragati.taskdun.com/local/man-died-by-electrocution-in-mole-villege-of-kagwad-belagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button