Politics

*ಸಾಲ ಕೊಡಿಸುವುದಾಗಿ ಕರೆದೊಯ್ದು ಮಹಿಳೆ ಮೇಲೆ ಅತ್ಯಾಚಾರ ಯತ್ನ; ಬಿಜೆಪಿ ಮುಖಂಡ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಮುಖಂಡರೊಬ್ಬರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಮಹಿಳೆಯೊಬ್ಬರಿಗೆ ಸಾಲ ಕೊಡಿಸುವುದಾಗಿ ಹೇಳಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಬಿಜೆಪಿ ಮುಖಂಡ ಚಲುವರಾಮು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಾತನೂರು ಹೋಬಳಿಯ ಸೂರನಹಳ್ಳಿಯ ಬಿಜೆಪಿ ಮುಖಂಡ ಚಲುವರಾಮು ಮಹಿಳೆಯೊಬ್ಬರಿಗೆ ಜಮೀನಿನ ಮೇಲೆ ಸಾಲ ಕೊಡಿಸುವುದಾಗಿ ನಂಬಿಸಿ ರಾಮನಗರದ ರಾಮಗಡ್ ಹೋಟೆಲ್ ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಮಹಿಳೆ ಸಾತನೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಸೋಮವಾರ ಸಾಯಂಕಾಲ ಸಾಲಕೊಡಿಸುವುದಾಗಿ ಹೇಳಿ ರಾಮನಗರಕ್ಕೆ ಕರೆಸಿಕೊಂಡಿದ್ದಾರೆ. ಅಲ್ಲಿಂದ ಚಲುವರಾಮು, ಬಿಎಂ ರಸ್ತೆಯ ರಾಮಗಡ್ ಹೋಟೆಲ್ ಬಳಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ನನ್ನ ಮುಖಕ್ಕೆ ಮಾಸ್ಕ್ ಹಾಕಿಸಿ ರೂಮ್ ಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ನಾನು ಪ್ರತಿರೋಧಿಸಿದಾಗ ನನ್ನ ಕಪಾಳಕ್ಕೆ ಹೊಡೆದ್ದಿದ್ದಾರೆ. ನಾನು ಪ್ರಜ್ಞೆ ತಪ್ಪಿದ್ದೆ. ನನಗೆ ಪ್ರಜ್ಞೆ ಬಂದಾಗ ಬೆಳಗಾಗಿತ್ತು. ಸ್ಥಳದಲ್ಲಿ ಯಾರೂ ಇರಲಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡೆ ಆದರೆ ಮಕ್ಕಳು ಅನಾಥರಾಗುತ್ತಾರೆ ಎಂದು ಯೋಚಿಸಿ ನಡೆದ ಘಟನೆ ಬಗ್ಗೆ ಮನೆಯಲ್ಲಿ ತಿಳಿಸಿದೆ.

ಬಳಿಕ ಚಲುವರಾಮು ಹಾಗೂ ರವಿ ಎಂಬಾತ ಕರೆ ಮಾಡಿ ನಿನ್ನ ಖಾಸಗಿ ವಿಡಿಯೋ ನಮ್ಮ ಬಳಿ ಇದೆ. ನಾವು ಹೇಳಿದಾಗಲೆಲ್ಲ ನೀನು ಬರಬೇಕು. ಇಲ್ಲವಾದಲ್ಲಿ ವಿಡಿಯೋಗಳನ್ನು ಸಾಮಾಜಿಕ ಜಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಹಿಳೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಸಾತನೂರು ಪೊಲೀಸರು ಚಲುವರಾಮುನನ್ನು ಬಂಧಿಸಿ ಕೋರ್ಟ್ ಗೆ ಒಪ್ಪಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button