ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಕಾರ್ಯಕರ್ತರು ಧೈರ್ಯದಿಂದ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಿ. ಯಾವುದೇ ಕಾರಣಕ್ಕೂ ಹೆದರಬೇಡಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ಶನಿವಾರ ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಅರಭಾವಿ ಮಂಡಲ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಸದಸ್ಯತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕರ್ತರು ಆತ್ಮವಿಶ್ವಾಸದಿಂದ ದುಡಿಯಬೇಕು. ಯಾವುದಕ್ಕೂ ಅಂಜಬಾರದು. ನಿಮ್ಮೊಂದಿಗೆ ಸದಾ ನಾನಿದ್ದೇನೆ ಎಂದು ಕಾರ್ಯಕರ್ತರಿಗೆ ಬಲ ತುಂಬಿದರು.
ಸಸಿಗೆ ನೀರುಣಿಸುವ ಮೂಲಕ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದರು. ಭಾರತೀಯ ಜನತಾ ಪಾರ್ಟಿಯ ಸದಸ್ಯತಾ ಅಭಿಯಾನದ ಪ್ರಾಥಮಿಕ ಸದಸ್ಯತಾ ಕೋರಿಕೆಯ ಪತ್ರಗಳನ್ನು ಅವರು ಬಿಡುಗಡೆ ಮಾಡಿದರು.
ಕಳೆದ ವರ್ಷ ಅರಭಾವಿ ಕ್ಷೇತ್ರವೊಂದರಲ್ಲಿಯೇ ಬಿಜೆಪಿಯಿಂದ ಲಕ್ಷಕ್ಕೂ ಅಧಿಕ ಮತದಾರರನ್ನು ಸದಸ್ಯರನ್ನಾಗಿ ನೊಂದಣಿ ಮಾಡಲಾಗಿತ್ತು. ಇದು ರಾಜ್ಯದಲ್ಲಿಯೇ ದಾಖಲೆಯಾಗಿತ್ತು. ಈ ಬಾರಿಯೂ ನಮ್ಮ ಕ್ಷೇತ್ರದಿಂದ ಅತೀ ಹೆಚ್ಚಿನ ಹೊಸ ಸದಸ್ಯರನ್ನಾಗಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕು. ಬಿಜೆಪಿಗೆ ಹೆಚ್ಚಿನ ಶಕ್ತಿಯನ್ನು ತುಂಬಬೇಕೆಂದು ಹೇಳಿದರು.
ನಾನು ದೇವರಲ್ಲ. ಆದರೆ ದೇವರ ಮಗ :
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿನ ಬಗ್ಗೆ ನಮ್ಮ ಕಾರ್ಯಕರ್ತರು ಅನುಮಾನಪಟ್ಟಿದ್ದರು. ಅಲ್ಲದೇ ಚರ್ಚೆಗಳು ಕೂಡಾ ಅಲ್ಲಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಕೆಲವು ಮುಖಂಡರಿಗೆ ನಾನೊಂದು ಮಾತು ಹೇಳಿದ್ದೆ. ಕೆಲವರು ನನಗೆ ಕೈಕೊಟ್ಟರೆ ೫೦ ಸಾವಿರ. ಹಾಗೂ ಕೈಕೊಡದೇ ನನ್ನನ್ನು ಬೆಂಬಲಿಸಿದರೆ ೮೦ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಆಯ್ಕೆಯಾಗುತ್ತೇನೆಂದು ವಿಶ್ವಾಸದಿಂದ ಹೇಳಿದ್ದೆ. ನನ್ನನ್ನು ಕೆಲ ವಿರೋಧಿಗಳು ಇವರೇನು ದೇವರೇ? ಎಂದು ಪ್ರಶ್ನಿಸಿದ್ದರು. ಆದರೆ ಆಗಲೇ ಅವರಿಗೆ ಪ್ರಚಾರ ವೇದಿಕೆಯಲ್ಲಿ ಉತ್ತರಿಸಿದ್ದೆ. ನಾನು ದೇವರಲ್ಲ. ನಾನೊಬ್ಬ ದೇವರ ಮಗ ಎಂದು ಹೇಳಿದ್ದೆ ಎಂದರು.
೭೦೦ ಕ್ಯೂಸೆಕ್ಸ್ ನೀರು :
ಜಿಆರ್‌ಬಿಸಿ ಕಾಲುವೆಗೆ ಹಿರಣ್ಯಕೇಸಿ ನದಿಯಿಂದ ೭೦೦ ಕ್ಯೂಸೆಕ್ಸ್ ನೀರು ಹರಿದುಬರಲಿದೆ. ವಿದ್ಯುತ್ ವಿತರಕ ಸುಟ್ಟಿದ್ದರಿಂದ ಸಮಸ್ಯೆ ಉದ್ಬವವಾಗಿದ್ದು, ಇನ್ನೆರಡು ದಿನಗಳಲ್ಲಿ ನೀರು ಹರಿಸಲಾಗುವುದು. ಬೆಟಗೇರಿ ೨ ಕಾಲುವೆವರೆಗೆ ನೀರು ತಲುಪಲಿದೆ ಎಂದು ಹೇಳಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಬಸಗೌಡ ಪಾಟೀಲ(ನಾಗನೂರ), ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೂಳಪ್ಪ ಹೊಸಮನಿ, ರಾಜ್ಯ ಬಿಜೆಪಿ ರೈತಮೋರ್ಚಾ ಕಾರ್ಯದರ್ಶಿ ಗೋವಿಂದ ಕೊಪ್ಪದ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ(ಮೆಳವಂಕಿ), ಘಯೋಮನೀಬ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯ ಬಡ್ನಿಂಗಗೋಳ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಲ್.ಎನ್. ಬೂದಿಗೊಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಅಜ್ಜಪ್ಪ ಗಿರಡ್ಡಿ, ಶಿದ್ಲಿಂಗ ಕಂಬಳಿ, ಮುಖಂಡರಾದ ಬಸವಂತ ಕಮತಿ, ಹನಮಂತ ತೇರದಾಳ, ಮುತ್ತೆಪ್ಪ ಕುಳ್ಳೂರ, ಪರ್ವತಗೌಡ ಪಾಟೀಲ, ಮಹಾದೇವಪ್ಪ ಭೋವಿ, ಅಜೀಜ ಡಾಂಗೆ, ರಮೇಶ ಸಣ್ಣಕ್ಕಿ, ಲಕ್ಷ್ಮಣ ಗಣಪ್ಪಗೋಳ, ಶಿವನಗೌಡ ಪಾಟೀಲ, ವಿಠ್ಠಲ ಸವದತ್ತಿ, ಡಾ.ಎಸ್.ಎಸ್. ಪಾಟೀಲ, ರವಿ ಪರುಶೆಟ್ಟಿ, ಚುನಾಯಿತ ಪ್ರತಿನಿಧಿಗಳು, ಸಹಕಾರಿಗಳು, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ಸ್ವಾಗತಿಸಿದರು. ಬಸವರಾಜ ಮಾಳೇದವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಸಪ್ಪ ಬಬಲಿ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದಲ್ಲಿಂದು ರಾಜಕೀಯ ಬೆಳವಣಿಗೆಗಳು ಬಿರುಸಿನಿಂದ ಸಾಗಿವೆ. ದೇವರ ದಯೆಯಿಂದ ರಾಜ್ಯದಲ್ಲಿ ಬಿಜೆಪಿ ಹೊಸ ಸರ್ಕಾರ ರಚನೆಯಾದರೆ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಿದ್ದರೆ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಹೊಸ ಸರ್ಕಾರ ರಚನೆಯಾಗಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಮೈತ್ರಿ ಸರ್ಕಾರದಲ್ಲಿ ಶಾಸಕರ ಭಿನ್ನಮತ ಸ್ಪೋಟಗೊಂಡಿದ್ದು, ಬಿಜೆಪಿಗೆ ವರದಾನವಾಗಿ ಪರಿಣಮಿಸಲಿದೆ.
-ಬಾಲಚಂದ್ರ ಜಾರಕಿಹೊಳಿ, ಶಾಸಕರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ