ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಭಾರತೀಯ ಜನತಾ ಪಾರ್ಟಿಯ ಮಹತ್ವದ ಕೋರ್ ಕಮಿಟಿ ಮೀಟಿಂಗ್ ಗುರುವಾರ (ನ.5) ಮಂಗಳೂರಿನಲ್ಲಿ ನಡೆಯಲಿದೆ.
ರಾಜ್ಯಾಧ್ಯಕ್ಷರಾಗಿ ನಳಿನಿ ಕುಮಾರ ಕಟಿಲು ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಮೊದಲ ಬಾರಿಗೆ ತಮ್ಮ ತವರು ಜಿಲ್ಲೆಯಲ್ಲಿ ಕೋರ್ ಕಮಿಟಿ ಸಭೆ ನಡೆಸುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಹಲವಾರು ಮಹತ್ವದ ವಿದ್ಯಮಾನಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ರಾಜ್ಯ ಮಂತ್ರಿ ಮಂಡಳ ವಿಸ್ತರಣೆ, ಬಿಜೆಪಿಗೆ ಅನ್ಯ ಪಕ್ಷಗಳಿಂದ ವಲಸೆ, ಪಕ್ಷದ ವಿವಿಧ ಕಮಿಟಿಗಳ ರಚನೆ, ಕೆಲವು ಮಂತ್ರಿಗಳ ಮಧ್ಯೆ ಇರುವ ಭಿನ್ನಾಭಿಪ್ರಾಯ ಮತ್ತು ಇದರಿಂದ ಪಕ್ಷದ ಬೆಳವಣಿಗೆಗಳ ಮೇಲೆ ಪರಿಣಾಮ, ಉಪಚುನಾವಣೆ ಮೊದಲಾದ ವಿಷಯಗಳು ಈ ಸಭೆಯಲ್ಲಿ ಚರ್ಚೆಗೆ ಬರಲಿವೆ.
ರಾಜ್ಯ ಬಿಜೆಪಿ ಸರಕಾರಕ್ಕೆ ಕೇಂದ್ರದ ಅಸಹಕಾರ ಹಾಗೂ ಇದರಿಂದ ಸಾರ್ವಜನಿಕರ ಎದುರು ಪಕ್ಷಕ್ಕೆ ಆಗುತ್ತಿರುವ ಮುಜುಗರಗಳ ಕುರಿತು ಸಹ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
5ರಂದು ಇಡೀ ದಿನ ಸಭೆ ನಡೆಯಲಿದೆ. ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಸಂಜೆಯೇ ಮಂಗಳೂರಿಗೆ ತೆರಳಲಿದ್ದಾರೆ. ಮಂಗಳೂರಿನಲ್ಲಿ ವಾಸ್ತವ್ಯ ಹೂಡಿ ಕೋರ್ ಕಮಿಟಿ ಮೀಟಿಂಗ್ ಮುಗಿಸಿ 5ರಂದು ಸಂಜೆಯೇ ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಕೋರ್ ಕಮಿಟಿ ಸಭೆಗೆ ಮುನ್ನ ಸಚಿವಸಂಪುಟ ಸಭೆಯನ್ನೂ ನಡೆಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ