Kannada NewsKarnataka NewsLatestPolitics

ಕಾಂಗ್ರೆಸ್ ಗೆ ಕಿಚಾಯಿಸಿದ್ದ ಬಿಜೆಪಿಗೆ ಈಗ ದೊಡ್ಡ ಮುಜುಗರ; ಪ್ರಜಾಪ್ರಭುತ್ವ ಯಶಸ್ಸಿಗೆ ಜವಾಬ್ದಾರಿಯುತ ವಿರೋಧ ಪಕ್ಷವೂ ಮುಖ್ಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲಾಗುತ್ತಿಲ್ಲ ಎಂದು ಚುನಾವಣೆ ಫಲಿತಾಂಶ ಪ್ರಕಟವಾಗಿ ನಾಲ್ಕೇ ದಿನಕ್ಕೆ ಕಾಂಗ್ರೆಸ್ ಗೆ ಕಿಚಾಯಿಸಿದ್ದ ಬಿಜೆಪಿ ನಾಯಕರು ಈಗ 2 ತಿಂಗಳಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ ದೊಡ್ಡ ಮುಜುಗರಕ್ಕೀಡಾಗಿದೆ.

ಒಂದೆರಡು ದಿನದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ ಎಂದು ತಿಂಗಳಿಂದ ಹೇಳುತ್ತ ಬಂದಿರುವ ಬಿಜೆಪಿ ನಾಯಕರಿಗೆ ಈಗ ಮಾಧ್ಯಮಗಳ ಮುಂದೆ ಬರದಂತಾಗಿದೆ. ವಿಪಕ್ಷ ನಾಯಕನಿಲ್ಲದೆ ಒಂದು ವಾರ ವಿಧಾನಸಭೆ ಅಧಿವೇಶನವೂ ಮುಗಿಯಿತು. 66 ಶಾಸಕರಲ್ಲಿ ವಿಪಕ್ಷ ನಾಯಕನಾಗುವ ಅರ್ಹತೆ ಒಬ್ಬರಿಗೂ ಇಲ್ಲವೇ ಎಂದು ಕಾಂಗ್ರೆಸ್ ಹೆಜ್ಜೆ ಹೆಜ್ಜೆಗೂ ವ್ಯಂಗ್ಯವಾಡುತ್ತ ಕುಟುಕುತ್ತಿದೆ. ದೆಹಲಿಯತ್ತ ಮುಖ ಮಾಡಿ ಮಾಡಿ ರಾಜ್ಯ ನಾಯಕರು ಸುಸ್ತಾಗಿದ್ದಾರೆ.

ವಿಧಾನಸಭೆ ಚುನಾವಣೆಗೆ ಸ್ಥಳೀಯ ನಾಯಕರ ಅಭಿಪ್ರಾಯವನ್ನು ಕಡೆಗಣಿಸಿ ಹೀನಾಯ ಸೋಲಿಗೆ ಕಾರಣರಾದ ಬಿಜೆಪಿ ಹೈಕಮಾಂಡ್ ನಾಯಕರು ಈಗ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸಮರ್ಥ ವಿರೋಧ ಪಕ್ಷದ ನಾಯಕನನ್ನೂ ಆಯ್ಕೆ ಮಾಡಲಾಗದ ಸ್ಥಿತಿಗೆ ತಲುಪಿರುವುದು ಸಹಜವಾಗಿಯೇ ಪಕ್ಷದ ನಾಯಕರಷ್ಟೆ ಅಲ್ಲ, ಕಾರ್ಯಕರ್ತರಿಗೂ ಇರುಸುಮುರಿಸನ್ನು ಉಂಟು ಮಾಡಿದೆ.

ವಿಪಕ್ಷ ನಾಯಕನ ಸ್ಥಾನಕ್ಕೆ ಮೊದಲಿಗೆ ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಸರು ಕೇಳಿಬಂದಿತ್ತು. ಆದರೆ ರಾಜ್ಯದಲ್ಲಿ ಹೀನಾಯ ಸೋಲಿಗೆ ಅವರ ಆಡಳಿತವೇ ಕಾರಣ, ಮತ್ತೆ ಅವರಿಗೆ ಸ್ಥಾನ ನೀಡಿದರೆ ಲೋಕಸಭೆ ಚುನಾವಣೆಗೂ ಹೊಡೆತ ಬೀಳಲಿದೆ ಎಂದು ಹಲವಾರು ಮುಖಂಡರು ದೆಹಲಿ ನಾಯಕರ ಕಿವಿ ಊದಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ ಹೆಸರು ಮುನ್ನೆಲೆಗೆ ಬಂದಿತ್ತಾದರೂ, ಸ್ವಪಕ್ಷೀಯರ ವಿರುದ್ಧವೇ ಬಹಿರಂಗವಾಗಿ ಮಾತನಾಡುವ ಅವರ ನಡೆಯಿಂದಾಗಿ ಹಲವರು ಅಸಮಾಧಾನಗೊಂಡಿದ್ದಾರೆ.

ಅಶ್ವತ್ಥ ನಾರಾಯಣ ಹೆಸರು ಕೇಳಿಬಂದಿತ್ತಾದರೂ, ಅವರಿಗೆ ಆ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡುವ, ಪಕ್ಷವನ್ನು ಸಮರ್ಥಿಸಿಕೊಳ್ಳುವ ಸಾಮರ್ಥ್ಯವಿಲ್ಲ ಎನ್ನುವುದು ಹೈಕಮಾಂಡ್ ಗಮನಕ್ಕೆ ಬಂದಿದೆ. ಬಿ.ವೈ.ವಿಜಯೇಂದ್ರ ಹೆಸರು ಪ್ರಸ್ತಾವನೆಯಲ್ಲಿದ್ದರೂ, ಯಡಿಯೂರಪ್ಪ ಪುತ್ರನಿಗೆ ಏಕಾಏಕಿ ದೊಡ್ಡ ಹುದ್ದೆ ಕೊಡಲು ಪಕ್ಷಕ್ಕೆ ಇಷ್ಟವಿಲ್ಲ.

ಸೋಲಿನ ಆಘಾತದಿಂದ ಇನ್ನೂ ಹೊರಬರಲಾಗದೆ ಒದ್ದಾಡುತ್ತಿರುವ ಬಿಜೆಪಿ ನಾಯಕರು ಈಗ ವಿಪಕ್ಷ ನಾಯಕನ ವಿಷಯದಲ್ಲಿ ಹಿನ್ನಡೆ ಅನುಭವಿಸಿ, ಸರಕಾರದ ವಿರುದ್ಧ ಹೋರಾಟ ಮಾಡಲಾಗದೆ ಮತ್ತಷ್ಟು ಕುಸಿದಿದೆ. ಲೋಕಸಭೆ ಚುನಾವಣೆಗೆ ಇನ್ನು ವರ್ಷವೂ ಇಲ್ಲದಿರುವ ಸಂದರ್ಭದಲ್ಲಿ ಇಂತಹ ಸ್ಥಿತಿ ಬಿಜೆಪಿಯಂತ ದೊಡ್ಡ ಪಕ್ಷಕ್ಕೆ ಸಹನೀಯವಲ್ಲ.

ಬಿಜೆಪಿ ತನ್ನದೇ ತಪ್ಪಿನಿಂದ ರಾಜ್ಯದಲ್ಲಿ ಇಷ್ಟೊಂದು ದೊಡ್ಡಮಟ್ಟದ ಹಿನ್ನಡೆ ಅನುಭವಿಸುತ್ತಿರುವುದು ಜನಜನಿತವಾಗಿದೆ. ಜನರು ಕಾಂಗ್ರೆಸ್ ಬೇಕು ಎಂದು ಮತ ನೀಡಿದ್ದಾರೋ ಇಲ್ಲವೋ, ಆದರೆ ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರ, ಅಹಂಗಳಿಂದ ಬೇಸತ್ತು ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ. ಇದನ್ನು ಈಗಲೂ ಅರ್ಥ ಮಾಡಿಕೊಳ್ಳದಿದ್ದರೆ ಮತ್ತೊಂದು ಚುನಾವಣೆಗೂ ಎದ್ದೇಳದಂತಹ ಸ್ಥಿತಿಯಲ್ಲೇ ಇರಲಿದೆ.

ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಬಿಜೆಪಿ ನಾಯಕರು ಪ್ರತಿಭಟನೆ, ಸರಕಾರದ ವಿರುದ್ಧ ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಕೆಲದಿನಗಳಾದರೂ ಆಡಳಿತ ನೋಡಿ ಮಾತನಾಡಿದರೆ ಅದಕ್ಕೊಂದು ಅರ್ಥವಿರುತ್ತದೆ. ಅದನ್ನು ಬಿಟ್ಟು ಸರಕಾರದ ನಡೆ ಇನ್ನೂ ಗೊತ್ತಾಗುವ ಮೊದಲೇ ಕಾಲೆಳೆಯುವುದು ಅರ್ಥಹೀನ. ಇಂತಹ ಸ್ಥಿತಿಯಲ್ಲಿ ಸಂಘಪರಿವಾರದವರು ಎಲ್ಲವನ್ನೂ ಅವಲೋಕನ ಮಾಡುವ ಕೆಲಸಕ್ಕೆ ಮುಂದಾಗಬೇಕಿದೆ. ತನ್ನ ಹಾಗೂ ಭಾರತೀಯ ಜನತಾಪಾರ್ಟಿಯ ತಪ್ಪು ಹೆಜ್ಜೆಗಳನ್ನು ಈಗಲೂ ಗುರುತಿಸಿಕೊಳ್ಳದಿದ್ದರೆ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಹಿನ್ನಡೆ ಅನುಭವಿಸಬೇಕಾದೀತು.

ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಬೇಕಾದರೆ ಗುಣಮಟ್ಟದ ಸರಕಾರ ಎಷ್ಟರಮಟ್ಟಿಗೆ ಮುಖ್ಯವೋ ಜವಾಬ್ದಾರಿಯುತ ವಿರೋಧ ಪಕ್ಷವೂ ಅಷ್ಟೇ ಮುಖ್ಯವಾಗುತ್ತದೆ. ಇದನ್ನು ಬಿಜೆಪಿ ನಾಯಕರು ಆದಷ್ಟು ಬೇಗ ಅರ್ಥ ಮಾಡಿಕೊಳ್ಳಲಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button