Cancer Hospital 2
Beereshwara 36
LaxmiTai 5

ಬೆಳಗಾವಿ ಜಿಲ್ಲೆಯ ಕಾಶ್ಮೀರ ನಮ್ಮ ಖಾನಾಪುರ

Anvekar 3

ಹಂಡಿಬಡಗನಾಥ ಬೆಟ್ಟ:
ಖಾನಾಪುರ ತಾಲೂಕಿನ ನಾಗರಗಾಳಿ ಅರಣ್ಯದಲ್ಲಿರುವ ಪ್ರಮುಖ ಪ್ರವಾಸಿ ತಾಣ ಹಂಡಿಭಡಂಗನಾಥ
ಬೆಟ್ಟ. ಧಾರವಾಡ ಪಣಜಿ ಹೆದ್ದಾರಿಯ ಮೇಲಿರುವ ಕುಂಬಾರವಾಡಾ ಗ್ರಾಮದಿಂದ 3 ಕಿಮೀ
ಅಂತರದಲ್ಲಿ ಅತಿ ಎತ್ತರದ ಬೆಟ್ಟದಲ್ಲಿರುವ ಹಂಡಿಬಡಗನಾಥ ಮಠಕ್ಕೆ ಸುಮಾರು 400 ವರ್ಷಗಳ
ಇತಿಹಾಸವಿದೆ. ದಟ್ಟ ಅರಣ್ಯವನ್ನು ಸುತ್ತುವರೆದ ಹಂಡಿಭಡಂಗನಾಥದಲ್ಲಿ ಶಿವಾಲಯವಿದೆ.
ಪೀರಯೋಗಿ ಶೇರನಾಥರ ಗದ್ದುಗೆಯಿದೆ. ಹಿಂದೆ ಇಲ್ಲಿ ತಪಸ್ಸುಗೈದ ಒಂಭತ್ತು ಸ್ವಾಮಿಗಳ
ಗದ್ದುಗೆ ಹಾಗೂ ಅವರ ಪ್ರತಿಕೃತಿ ಇರುವ ನವನಾಥ ಗುಹೆಯಿದೆ. ಹಂಡಿಭಡಂಗನಾಥದ ಪ್ರಮುಖ
ಆಕರ್ಷಣೆಯೆಂದರೆ ಇಲ್ಲಿರುವ ಆಕಳ ಗವಿ. ಇಕ್ಕಟ್ಟಾದ ಗುಹೆಯಲ್ಲಿ ಮಠದ ಒಂದು ಬದಿಯಿಂದ
ಇನ್ನೊಂದು ಬದಿಗೆ ತೆವಳಿಕೊಂಡು ಸಾಗುವುದು ಇಲ್ಲಿ ಆಗಮಿಸುವ ಯಾತ್ರಾರ್ಥಿಗಳಿಗೆ ವಿಶೇಷ
ಅನುಭವ ನೀಡುತ್ತದೆ. ಈ ಗುಹೆಯಲ್ಲಿರುವ ಪವಿತ್ರ ಹಂಡಿಯಿಂದ ಪ್ರತಿ ಶಿವರಾತ್ರಿಯಂದು
ಹೊರಹೊಮ್ಮುವ ತೀರ್ಥವನ್ನು ಸ್ವೀಕರಿಸಲು  ಸಾವಿರಾರು ಭಕ್ತರ ದಿಂಡೇ ಇಲ್ಲಿಗೆ ಹರಿದು
ಬರುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಉತ್ತರ ಭಾತರದ ನಾಥ ಪಂಕ್ತಿಯ ಸಂತರು ಇಲ್ಲಿಗೆ
ಆಗಮಿಸಿ 21ದಿನಗಳ ಕಾಲ ವಿವಿಧ ಪೂಜೆ ಪುನಸ್ಕಾರ ನಡೆಸುತ್ತಾರೆ. ಕಿತ್ತೂರ ರಾಣಿ
ಚನ್ನಮ್ಮ ಮಠದ ಹೆಬ್ಬಾಗಿಲನ್ನು ಕಟ್ಟಿಸಿಕೊಟ್ಟಿದ್ದಾಳೆ ಹಾಗೂ ಬ್ರಿಟೀಷರೊಂದಿಗೆ
ಕಾದಾಡಿ ವೀರಮರಣ ಹೊಂದಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಡಗು ತಾಣವೂ ಇದಾಗಿತ್ತು
ಎಂಬ ಪ್ರತೀತಿ ಇದೆ. ಗುಡ್ಡದ ಮೇಲೆ ನಿಂತಾಗ ನಾಲ್ಕು ದಿಕ್ಕಿನಲ್ಲಿ 20-30 ಕಿಮೀ ದೂರದ
ವರೆಗೆ ಬೆಟ್ಟಗಳ ನಿಸರ್ಗ ಸೌಂದರ್ಯ ನಯನ ಮನೋಹರವಾಗಿ ಕಾಣುತ್ತದೆ. ದಾಂಡೇಲಿಯ ಕಾಗದ
ಕಾಖರ್ಾನೆಯ ಹೊಗೆಯುಗುಳುವ ಕೊಳವೆ ಮತ್ತು ಧಾರವಾಡ ವಿಶ್ವವಿದ್ಯಾಲಯದ ಗೋಪುರ ಸಹ
ಗೋಚರಿಸುತ್ತವೆ.

ಅಸೋಗಾ:
ಇದು ಮಲಪ್ರಭೆಯ ತಟದಲ್ಲಿ ಪರಶಿವನ ದೇವಾಲಯವಿರುವ ಪುಣ್ಯಭೂಮಿ. ಖಾನಾಪುರ ಪಟ್ಟಣದಿಂದ 4
ಕಿಮೀ ದೂರದ ಮಲಪ್ರಭಾ ನದಿದಂಡೆಯಲ್ಲಿರುವ ಸುಂದರ ಪಿಕ್ನಿಕ್ ತಾಣ. ಪುರಾತನ ಕಾಲದ
ರಾಮಲಿಂಗೇಶ್ವರ ದೇವಾಲಯವಿದೆ. ಸಂಕ್ರಮಣ, ಶಿವರಾತ್ರಿಯಂದು ದೊಡ್ಡ ಜಾತ್ರೆ
ಸೇರುತ್ತದೆ. ಸುಂದರ ಹೂದೋಟವಿದೆ. ಸಾಮಾನ್ಯ ಗಾತ್ರದ ಬಂಡೆಗಲ್ಲುಗಳ ಮೂಲಕ ಮಲಪ್ರಭಾ
ನದಿಯ ನೀರು ರಭಸದಿಂದ ಮಂಜುಳ ನಿನಾದ ಹೊರಡಿಸುತ್ತ ಹರಿಯುತ್ತಿರುವ ದೃಶ್ಯ ಕಣ್ಮನ
ತಣಿಸುತ್ತದೆ. ಭಕ್ತರು ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಅಸೋಗಾ ಉತ್ತಮ ತಾಣವಾಗಿದೆ.
ಅಸೋಗಾ ಗ್ರಾಮದ ಈ ಸ್ಥಳದಲ್ಲಿ ದಶಕಗಳ ಹಿಂದೆ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ
ಹೃಷಿಕೇಶ ಮುಖರ್ಜಿ ನಿರ್ದೇಶನದಲ್ಲಿ ಮೇರು ನಟರಾದ ಅಮಿತಾಭ್ ಬಚ್ಚನ್-ಜಯಾಬಾಧುರಿ
ನಟಿಸಿರುವ ಹಿಟ್ ಚಿತ್ರ ‘ಅಭಿಮಾನ್’ ಸೇರಿದಂತೆ ಮರಾಠಿ, ಕನ್ನಡ ಮತ್ತು ಹಿಂದಿ ಭಾಷೆಯ
ಅನೇಕ ಚಿತ್ರಗಳ ಚಿತ್ರೀಕರಣ ನಡೆದಿದೆ.

ಕಣಕುಂಬಿ:
ಖಾನಾಪುರದಿಂದ 38 ಮತ್ತು ಬೆಳಗಾವಿಯಿಂದ 40ಕಿಮೀ ದೂರದ ಕಣಕುಂಬಿಯು ಉತ್ತರ ಕನರ್ಾಟಕದ
ಜೀವನದಿ ಮಲಪ್ರಭೆಯ ಉಗಮ ಸ್ಥಾನ. ಚಿಕ್ಕ ಒರತೆಯಿಂದ ನದಿ ಉಗಮಿಸಿ ತಾಲೂಕಿನಲ್ಲಿ ಹರಿದು
ಬಯಲು ನಾಡನ್ನು ಸೇರುತ್ತದೆ. ಕಣಕುಂಬಿ ದಟ್ಟ ಅರಣ್ಯದಿಂದ ಸುತ್ತುವರೆದ
ಗ್ರಾಮವಾಗಿದ್ದು, ರಾಜ್ಯದ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು.
ಭೌಗೋಳಿಕವಾಗಿ ಕಣಕುಂಬಿ ಕನರ್ಾಟಕದಲ್ಲಿದ್ದರೂ ಇಲ್ಲಿಯ ಭಾಷೆ, ಸಂಸ್ಕೃತಿ ಮತ್ತು ಜನರ
ಜೀವನ ಶೈಲಿ ಗೋವಾ ರಾಜ್ಯವನ್ನು ಹೋಲುತ್ತದೆ. ಮಳೆಗಾಲದ ಸಮಯದಲ್ಲಿ ಕಣಕುಂಬಿಯ ಹವಾಗುಣ,
ಸೃಷ್ಟಿ ಸೌಂದರ್ಯ, ಆಗಸದ ಮೋಡಗಳ ಚೆಲ್ಲಾಟ ಮತ್ತು ಮಳೆಯ ಆರ್ಭಟ ಮನಸ್ಸಿಗೆ ಮುದ
ನೀಡುತ್ತದೆ.

ಚಿಗುಳೆ:
ಖಾನಾಪುರ ತಾಲೂಕಿನ ಪಶ್ಚಿಮ ದಿಕ್ಕಿನ ಕೊನೆಯ ಗ್ರಾಮ ಚಿಗುಳೆ. ಈ ಗ್ರಾಮ ಕಣಕುಂಬಿಯಿಂದ
5ಕಿ.ಮೀ ದೂರದಲ್ಲಿದ್ದು, ತಾಲೂಕಿನ ಪ್ರಮುಖ ನಿಸರ್ಗದ ರಮ್ಯ ತಾಣಗಳಲ್ಲಿ ಒಂದಾಗಿ
ಮಳೆಗಾಲದಲ್ಲಿ ಹಚ್ಚಹಸಿರುಮಯವಾಗಿ ನೋಡುಗರ ಮನಸೂರೆಗೊಳ್ಳುತ್ತದೆ. ಪಶ್ಚಿಮ ಘಟ್ಟಗಳ
ಅತ್ಯಂತ ಎತ್ತರದ, ಸಮುದ್ರಮಟ್ಟದಿಂದ 900ಮೀ ಎತ್ತರದಲ್ಲಿರುವ ಈ ಗ್ರಾಮ ಪಶ್ಚಿಮ
ಘಟ್ಟಗಳ ತುತ್ತ ತುದಿಯಲ್ಲಿದೆ. ಚಿಗುಳೆ ನಮ್ಮ ರಾಜ್ಯದ ಗಡಿಗ್ರಾಮವೂ ಹೌದು. ಈ ಗ್ರಾಮದ
ಬಳಿ ಎತ್ತರದ ಸ್ಥಳದಿಂದ ಬಲಭಾಗಕ್ಕೆ ಕಾಣುವ  ನೋಟವೆಲ್ಲಾ ಮಹಾರಾಷ್ಟ್ರ ರಾಜ್ಯಕ್ಕೆ
ಸೇರಿದ್ದರೆ ಎಡಕ್ಕೆ ಕಾಣುವ ದೃಶ್ಯ ಗೋವಾ ರಾಜ್ಯಕ್ಕೆ ಸೇರಿದೆ. ಇಲ್ಲಿ ಉತ್ತಮ
ಮಳೆಯಾಗುವ ಕಾರಣ ಕಣ್ಣು ದೃಷ್ಟಿ ಹರಿಸುವ ವರೆಗೆ ಕಾಣುವ ದೃಶ್ಯವೆಲ್ಲಾ ಹಸಿರಿನಿಂದ
ಕಂಗೊಳಿಸುತ್ತದೆ. ಇಲ್ಲಿ ಹರಿಯುವ ಚಿಕ್ಕ ಜಲಪಾತ ನೋಡುಗರ ಕಣ್ಮನಗಳನ್ನು
ಸೆಳೆಯುತ್ತದೆ. ಎತ್ತರದ ಸ್ಥಳವಾದ್ದರಿಂದ ಬೀಸುವ ತಂಗಾಳಿಯೂ ಹಿತಕರ ಅನುಭವವನ್ನು
ನೀಡುತ್ತದೆ. ನೀರಿನ ಜುಳು-ಜುಳು ನಾದ, ಹಕ್ಕಿಗಳ ನಿನಾದ, ಗಾಳಿಯ ಸದ್ದು
ಪ್ರಕೃತಿಪ್ರಿಯರನ್ನು ಮತ್ತೆ ಮತ್ತೆ ಇಲ್ಲಿಗೆ ಬರುವಂತೆ ಕೈಬೀಸಿ ಕರೆಯುತ್ತದೆ. ಈಗ
ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಉತ್ತಮವಾಗಿದೆ.

ಚೋರ್ಲಾ ಘಟ್ಟ ಪ್ರದೇಶ:
ಖಾನಾಪುರ ತಾಲೂಕಿನ ಕಟ್ಟಕಡೆಯ ಗ್ರಾಮ ಚೋರ್ಲಾದಿಂದ ಗೋವಾ ರಾಜ್ಯದತ್ತ ಸಾಗುವ 20 ಕಿಮೀ
ಪ್ರದೇಶ ಚೋರ್ಲಾ ಘಟ್ಟ. ಈ ರಸ್ತೆಯಲ್ಲಿ ಪಶ್ಚಿಮ ದಿಗಂತದತ್ತ ನೋಡಿದಾಗ ಗೋವಾ ನಾಡು
ಕಾಣುತ್ತದೆ. ಇಲ್ಲಿ ಸಂಜೆಯ ಸೂರ್ಯಾಸ್ತದ ಸುಂದರ ದೃಶ್ಯ ಮನಮೋಹಕವಾದದ್ದು. ಕೆಳಗೆ
ಕಾಲಡಿಯಲ್ಲಿ ಸಾವಿರಾರು ಅಡಿ ಪ್ರಪಾತ ರುದ್ರ ಭಯಾನಕವಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲ
ಗೋಚರಿಸುವ ಹಚ್ಚ ಹಸಿರಿನ ವಾತಾವರಣ, ಹಾವಿನಂತಿರುವ ರಸ್ತೆ, ಎತ್ತರದಿಂದ ಬೀಸುವ
ತಂಗಾಳಿ ವಿಶೇಷ ಅನುಭವ ನೀಡುತ್ತದೆ.

ಭೀಮಗಡ ಅಭಯಾರಣ್ಯ:
ಖಾನಾಪುರ ಪಟ್ಟಣದಿಂದ 21 ಕಿಮೀ ದೂರದಲ್ಲಿರುವ ಹೆಮ್ಮಡಗಾ ಗ್ರಾಮಕ್ಕೆ ವಾಹನ ಮೂಲಕ
ಚಲಿಸಿ ಅರಣ್ಯ ಇಲಾಖೆಯ ಪ್ರವಾಸಿ ನಿರೀಕ್ಷಣಾ ಮಂದಿರ ತಲುಪಿ ಇಲಾಖಾ ಅನುಮತಿಯೊಂದಿಗೆ 6
ಕಿ.ಮೀ ಕಾಡಿನಲ್ಲಿ ಪಯಣಿಸಿದರೆ ತಳೇವಾಡಿ ಗ್ರಾಮ ಸಿಗುತ್ತದೆ. ಅಲ್ಲಿ ಕಳ್ಳ ಬೇಟೆ
ನಿಯಂತ್ರಣ ಕೇಂದ್ರವಿದೆ. ಅಲ್ಲಿಂದ ಕೆಲ ಕಿ.ಮೀ ದೂರದ ಬೆಟ್ಟದ ಮೇಲೆ ಬೃಹತ್ ಗವಿಯೊಂದು
ಇದ್ದು, ಗವಿಯ ಒಳ ಹೊಕ್ಕಾಗ ಅದರ ವಿಶಾಲತೆ ಬೆರಗು ಗೊಳಿಸುತ್ತದೆ. ಗುಹೆ (ಗವಿ) ಒಂದೇ
ಸಲ ಮೂರ್ನಾಲ್ಕು ನೂರು ಜನ ಕುಳಿಕೊಳ್ಳುವಷ್ಟು ವಿಶಾಲವಾಗಿದೆ. ಗುಹೆಯಲ್ಲಿ ರಂಧ್ರ
ಕೊರೆದು ವಾಸಿಸುವ ರಾಬಿನ್ ಬ್ಯಾಟ್ ಬಾವಲಿಗಳ ಸಂಸಾರವಿದೆ. ಈ ಬಾವಲಿಗಳು ಇಲ್ಲಿ
ಬಿಟ್ಟರೆ ಕಾಂಬೋಡಿಯಾ ದೇಶದಲ್ಲಿ ಮಾತ್ರ ಕಾಣ ಸಿಗುತ್ತವೆ. ಇಂತಹ ವಿಶಿಷ್ಟ ಬಾವಲಿಗಳು
ಗಾತ್ರದಲ್ಲಿ ಚಿಕ್ಕವು ಮತ್ತು ಶುದ್ಧ ಸಸ್ಯಾಹಾರಿಗಳು. ಇದಲ್ಲದೇ ಭೀಮಗಡ ಅರಣ್ಯದಲ್ಲಿ
ಸ್ವಚ್ಛಂದವಾಗಿ ಹರಿಯುವ ಪಣಸೂರಿ ಹಳ್ಳ, ಕಳಸಾ ಮತ್ತು ಭಂಡೂರಿ ಹಳ್ಳಗಳು, ಮಹಾದಾಯಿ
ನದಿಗಳ ಜುಳುಜುಳು ನೀರು ಪ್ರವಾಸಿಗರ ಮೈ ಮನಗಳಿಗೆ ಮುದ ನೀಡುತ್ತದೆ. ಹಚ್ಚ ಹಸಿರಿನ
ವಾತಾವರಣ ಮತ್ತು ಹಕ್ಕಿಗಳ ಕಲರವ ಅರಣ್ಯದ ಶ್ರೀಮಂತಿಕೆ ಹೆಚ್ಚಿಸಿವೆ.

ಹಬ್ಬನಹಟ್ಟಿ:
ಮಲಪ್ರಭಾ ನದಿ ತೀರದಲ್ಲಿ ಆಂಜನೇಯನ ದೇವಾಲಯವಿರುವ ಪುಣ್ಯಕ್ಷೇತ್ರ. ಖಾನಾಪುರದಿಂದ 22
ಕಿಮೀ, ಜಾಂಬೋಟಿಯಿಂದ 5 ಕಿಮೀ, ಬೆಳಗಾವಿಯಿಂದ 28ಕಿಮೀ ದೂರವಿದ್ದು, ಉತ್ತಮ ರಸ್ತೆ
ಸಂಪರ್ಕವಿದೆ. ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಹೆಚ್ಚು ಮಳೆಯಾದರೆ ಹಬ್ಬನಹಟ್ಟಿಯ
ಆಂಜನೇಯ ದೇಗುಲ ಮಲಪ್ರಭಾ ನದಿಯಲ್ಲಿ ಮುಳುಗುತ್ತದೆ. ಮಳೆಗಾಲದ ಮೂರು ತಿಂಗಳವರೆಗೆ
ಮಲಪ್ರಭೆಯಲ್ಲಿ ಮುಳುಗುವ ಆಂಜನೇಯನಿಗೆ ನದಿತಟದಲ್ಲಿಯೇ ಪೂಜೆ ಸಲ್ಲಿಸಲಾಗುತ್ತದೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ದೇವಾಲಯ ಸಮಿತಿ ಅಗತ್ಯ ಸೌಕರ್ಯ
ಕಲ್ಪಿಸಿದೆ.

?
Emergency Service

ಭಟವಾಡಾ ಜಲಪಾತ
ಜಾಂಬೋಟಿ ಅರಣ್ಯದಲ್ಲಿರುವ ಭಟವಾಡಾ ಜಲಪಾತ ನಿಸರ್ಗಪ್ರಿಯರ ಮೈ-ಮನ
ಪುಳಕಗೊಳಿಸುತ್ತಿದೆ. ಚಾಪೋಲಿ-ಮುಡಗೈ ಅರಣ್ಯ ಪ್ರದೇಶದಲ್ಲಿ ಹುಟ್ಟುವ ಚಿಕ್ಕ ಹಳ್ಳ
ಮುಂದೆ ಜಾಂಬೋಟಿ ಬಳಿ 15 ಅಡಿಗಳಷ್ಟು ಎತ್ತರದ ಬೆಟ್ಟದಿಂದ ಆಳವಾದ ಪ್ರಪಾತಕ್ಕೆ
ಧುಮ್ಮಿಕ್ಕಿ ಹರಿದು ಕಾಲಮನಿ ಗ್ರಾಮದ ಬಳಿ ಮಲಪ್ರಭಾ ನದಿಯನ್ನು ಸಂಗಮಿಸುತ್ತದೆ.
ಎತ್ತರದಿಂದ ಪ್ರಪಾತಕ್ಕೆ ಬೀಳುವ ಪ್ರದೇಶಕ್ಕೆ ಸ್ಥಳೀಯರು ಭಟವಾಡಾ ಜಲಪಾತ ಎಂದು
ಕರೆಯುತ್ತಿದ್ದಾರೆ. ಬೆಳಗಾವಿ-ಚೋಲರ್ಾ ಹೆದ್ದಾರಿಯ ಜಾಂಬೋಟಿ ಗ್ರಾಮದಿಂದ ಕಣಕುಂಬಿ
ಕಡೆಗೆ ಸಾಗುವ ಹೆದ್ದಾರಿಯಲ್ಲಿ 2.5 ಕಿಮೀ ಕ್ರಮಿಸಿದ ಬಳಿಕ ರಸ್ತೆ ಪಕ್ಕ ವಾಹನ
ನಿಲ್ಲಿಸಿ ಬಲಭಾಗದಲ್ಲಿರುವ ಸಣ್ಣ ಕಾಲುದಾರಿಯ ಮೂಲಕ ಅರ್ಧ ಕಿಮೀ ನಡೆದು ಹೋದರೆ
ಭಟವಾಡಾ ಜಲಪಾತ ವೀಕ್ಷಣೆಗೆ ಲಭ್ಯ.

ದೂಧಸಾಗರ ಜಲಪಾತ
ಕರ್ನಾಟಕ-ಗೋವಾ ಗಡಿಯಲ್ಲಿರುವ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿರುವ ಪ್ರೇಕ್ಷಣೀಯ
ತಾಣವಾದ ದೂಧಸಾಗರ ಜಲಪಾತ. ಕೇವಲ ರೈಲು ಪ್ರಯಾಣದ ಮೂಲಕ ಮಾತ್ರ ಈ ಜಲಪಾತ ವೀಕ್ಷಣೆ
ಸಾಧ್ಯ. ಪ್ರವಾಸಿಗರು ಹಗಲು ಹೊತ್ತಿನಲ್ಲಿ ಮಡಗಾಂವ-ಲೋಂಡಾ ಮಾರ್ಗದಲ್ಲಿ ಸಾಗುವ
ರೈಲುಗಳಲ್ಲಿ ಕುಳಿತು ಈ ಜಲಪಾತವನ್ನು ವೀಕ್ಷಿಸಬಹುದಾಗಿದೆ. ಲೋಂಡಾ-ಮಡಗಾಂವ
ಮಾರ್ಗದಲ್ಲಿ ಸಂಚರಿಸುವ ಅಮರಾವತಿ, ಗೋವಾ, ಪೂರ್ಣಾ, ಚೆನ್ನೈ, ಯಶವಂತಪುರ ಎಕ್ಸಪ್ರೆಸ್
ರೈಲುಗಳು ದೂಧಸಾಗರ ನಿಲ್ದಾಣ ಮತ್ತು ಜಲಪಾತದ ಮೂಲಕ ಹಾದುಹೋಗುತ್ತವೆ. ದೂಧ ಸಾಗರ
ಜಲಪಾತ ಚಾರಣ ಪ್ರಿಯರನ್ನು ಕೈಬೀಸಿ ಕರೆಯುವ ಸುಪ್ರಸಿದ್ಧ ತಾಣ. ಈ ಜಲಪಾತ ಮಳೆಗಾಲ
ಮತ್ತು ಚಳಿಗಾಲದಲ್ಲಿ ಮೈದುಂಬಿ ಹರಿಯುತ್ತದೆ. ಬಾನೆತ್ತರದ ಬೆಟ್ಟದಿಂದ ಪಾತಾಳದ
ಅರಣ್ಯದೆಡೆಗೆ ಬಿಳಿ ಬಣ್ಣದ ಶುಭ್ರವಾದ ನೀರು ಅವಸರದಿಂದ ಧುಮುಕುತ್ತದೆ. ಹೀಗೆ
ಮೇಲಿನಿಂದ ಧುಮುಕಿದ ನೀರು ಅನನ್ಯ ಪ್ರಕೃತಿಯ ವನಸಿರಿಯ ಮಧ್ಯೆ ನರ್ತಿಸುತ್ತ ಸಾವಿರಾರು
ಅಡಿ ಕಂದಕದ ಮೂಲಕ ಧುಮುಕುವ ದೃಶ್ಯವನ್ನು ನೋಡಿದ ಪ್ರತಿಯೊಬ್ಬ ಪ್ರವಾಸಿಗ ಪ್ರಕೃತಿಯ
ವಿಸ್ಮಯಕ್ಕೆ ಮಂತ್ರಮುಗ್ಧನಾಗುತ್ತಾನೆ.

ವಜ್ರಾ ಮತ್ತು ವಜ್ರಪೋಹಾ ಜಲಪಾತ
ಜಾಂಬೋಟಿ ಅರಣ್ಯದ ಚಾಪೋಲಿ ಬಳಿ ಮಹಾದಾಯಿ ನದಿಯ ನೀರು ಮೇಲಿಂದ ಕೆಳಗೆ ಧುಮುಕಿ
ಉಂಟಾಗುವ ವಜ್ರಾ ಜಲಪಾತ ಮತ್ತು ಕಣಕುಂಬಿ ಅರಣ್ಯದ ಪಾರವಾಡ ಬಳಿ ಸ್ಥಳೀಯ ಹಳ್ಳವೊಂದರ
ನೀರು ಪ್ರಪಾತಕ್ಕೆ ಬೀಳುವ ಮೂಲಕ ನಿರ್ಮಾಣವಾಗುವ ವಜ್ರಪೋಹಾ ಜಲಪಾತಗಳೂ ಸಹ ತಮ್ಮದೇ ಆದ
ವೈಶಿಷ್ಟತೆಗಳಿಂದ ಕೂಡಿವೆ. ಈ ಜಲಪಾತಗಳ ಮತ್ತೊಂದು ವಿಶೇಷತೆಯೆಂದರೆ ಜಲಪಾತಗಳು
ಮೇಲಿನಿಂದ ಧುಮ್ಮಿಕ್ಕಿ ಹರಿದು ಬರುವ ನೆಲ ನಮ್ಮ ಕರ್ನಾಟಕದಾಗಿದ್ದು, ಕೆಳಗೆ ಇವು
ಬಿದ್ದು ಹರಿಯುವ ಪ್ರಪಾತದ ಪ್ರದೇಶ ನೆರೆದ ಗೋವಾ ರಾಜ್ಯಕ್ಕೆ ಸೇರಿದೆ. ಹೀಗಾಗಿ ಈ
ಜಲಪಾತಗಳು ಎರಡು ರಾಜ್ಯಗಳನ್ನು ಬೆಸೆಯುವ ಬಾಂಧವ್ಯದ ತಾಣಗಳೆಂದೂ ಹೇಳಲಾಗುತ್ತದೆ.
ಅರಣ್ಯ ಪ್ರದೇಶದಲ್ಲಿ ಸುರಿಯುವ ಮಳೆಯ ಪ್ರಮಾಣವೂ ಅಧಿಕವಾಗಿರುವ ಕಾರಣ ಈ ಜಲಪಾತಕ್ಕೆ
ಸಾಗುವ ರಸ್ತೆಯೂ ಸಮರ್ಪಕವಾಗಿಲ್ಲ. ಜಲಪಾತದ ಬಳಿ ಪ್ರಪಾತವಿದ್ದು, ಅವುಗಳ ಸಮೀಪ
ತೆರಳಿದರೆ ಅಪಾಯವಾಗುವ ಸಾಧ್ಯತೆಯುಂಟು. ಹೀಗಾಗಿ ಚಾರಣಿಗರು ನೋಡಲು ಸುಂದರವಾಗಿ ಕಾಣುವ
ಜಲಪಾತಗಳ ವೀಕ್ಷಣೆಗೆ ತೆರಳುವ ಮುನ್ನ ಹಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕಿದೆ.
ಮುಖ್ಯವಾಗಿ ಜಲಪಾತಗಳ ವೀಕ್ಷಣೆಗೆ ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯುವುದು ಮತ್ತು
ಸ್ಥಳೀಯ ವ್ಯಕ್ತಿಯೊಬ್ಬರ ಸಹಾಯದಿಂದ ಜಲಪಾತ ವೀಕ್ಷಣೆಗೆ ತೆರಳುವುದು ಸುರಕ್ಷತೆಯ
ದೃಷ್ಟಿಯಿಂದ ಅಗತ್ಯ ಮತ್ತು ಕಡ್ಡಾಯ.

ನಾಗರಗಾಳಿ ಜಲಪಾತ
ಖಾನಾಪುರ: ತಾಲೂಕಿನ ನಾಗರಗಾಳಿ ಅರಣ್ಯದಲ್ಲಿರುವ ಜಲಪಾತ ಚಾರಣಪ್ರಿಯರ ಹೃನ್ಮನ ತಣಿಸುವ
ತಾಣವಾಗಿ ಗುರುತಿಸಲ್ಪಟ್ಟಿದೆ. ದಟ್ಟವಾದ ಅರಣ್ಯದ ನಡುವೆ ಶಾಂತಚಿತ್ತವಾಗಿ ಹರಿಯುವ
ಪುಟ್ಟ ತೊರೆಯೊಂದು ಜುಳುಜುಳು ನಿನಾದದೊಂದಿಗೆ ಬಳಕುತ್ತ ಕುಲುಕುತ್ತ ಸುಮಾರು 40
ಅಡಿಗಳಷ್ಟು ಎತ್ತರದಿಂದ ಕಲ್ಲುಬಂಡೆಯ ಮೂಲಕ ಇಳಿಜಾರಿನಲ್ಲಿ ಧುಮುಕುವ ನಾಗರಗಾಳಿ
ಜಲಪಾತವನ್ನು ಒಮ್ಮೆ ವೀಕ್ಷಿಸಿದರೆ ಎಂತಹ ಆಯಾಸವೂ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.
ಅಷ್ಟರಮಟ್ಟಿಗೆ ಈ ಜಲಪಾತ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಧಾರವಾಡ ಜಿಲ್ಲೆಯ ಅಳ್ನಾವರ ಮತ್ತು ಬೆಳಗಾವಿ
ಜಿಲ್ಲೆಯ ಲೋಂಡಾ ಅರಣ್ಯದ ನಡುವೆ ನಾಗರಗಾಳಿ ಅರಣ್ಯ ಪ್ರದೇಶ ತಮ್ಮ ವಿಸ್ತಾರವನ್ನು
ಹೊಂದಿದೆ. ಬಹುತೇಕ ಸಾಗವಾನಿ ಮತ್ತು ಸೀಸಂ ಮರಗಳು ಇರುವ ಈ ಕಾಡಿನಲ್ಲಿ ಹುಟ್ಟಿ
ಹರಿಯುವ ಪುಟ್ಟ ತೊರೆಯೊಂದು ಸುಮಾರು 12 ಕಿಮೀಗಳಷ್ಟು ಕ್ರಮಿಸಿ ಮುಂದೆ ದಾಂಡೇಲಿ
ಅರಣ್ಯದಲ್ಲಿ ಕಾಳಿ ನದಿಯನ್ನು ಸೇರುತ್ತದೆ. ಈ ತೊರೆಯ ಮಾರ್ಗಮಧ್ಯದಲ್ಲಿ ನಾಗರಗಾಳಿ
ಗ್ರಾಮದಿಂದ 4 ಕಿಮೀ ದೂರದ ದಟ್ಟ ಅಡವಿಯಲ್ಲಿ ನಾಗರಗಾಳಿ ಜಲಪಾತವಿದೆ. ಜಲಪಾತವನ್ನು
ವೀಕ್ಷಿಸಲು ಅರಣ್ಯ ಇಲಾಖೆಯ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಕೇವಲ ಕಾಲ್ನಡಿಗೆಯಿಂದ
ಮಾತ್ರ ಹೋಗಿಬರಬಹುದಾಗಿದೆ.

ಜಲಪಾತ ವೀಕ್ಷಿಸಬೇಕೆ… ಹಾಗಾದರೆ ಹೀಗೆ ಮಾಡಿ…
ಜಲಪಾತ ಅಥವಾ ಅರಣ್ಯ ಚಾರಣ ಮಾಡುವ ಮುನ್ನ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಿರಿ
ಜಲಪಾತದ ಬಗ್ಗೆ ಮಾಹಿತಿ ಇರುವ ಸ್ಥಳೀಯ ವ್ಯಕ್ತಿ ಅಥವಾ ಅರಣ್ಯ ಇಲಾಖೆಯವರ
ಮಾರ್ಗದರ್ಶನದಲ್ಲಿ ಚಾರಣ ಮಾಡಿ
ಜಲಪಾತಗಳಿಗೆ ತೆರಳುವಾಗ ಕೊಡೆ, ರೇನ್ ಕೋಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ
ಹಿರಿಯರ ಮಾರ್ಗದರ್ಶನದಲ್ಲಿ ಚಾರಣ ಮಾಡಿ, ಸಂಜೆಯ ಸೂರ್ಯಾಸ್ತಕ್ಕೆ ಸಾಕಷ್ಟು ಮೊದಲೇ
ಜಲಪಾತ ಅಥವಾ ಅರಣ್ಯದಿಂದ ಹೊರಡಿ.

ಹೀಗೆ ಮಾಡದಿರಿ….
ಜಲಪಾತ ಅಥವಾ ಅರಣ್ಯ ಪ್ರದೇಶಗಳಿಗೆ ಪ್ಲಾಸ್ಟಿಕ್ ಚೀಲಗಳು, ಬಾಟಲ್ ಗಳನ್ನು ತೆಗೆದುಕೊಂಡು ಹೋಗಬೇಡಿ
ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಜಲಪಾತ ವೀಕ್ಷಣೆಯ ಸಂದರ್ಭದಲ್ಲಿ ಪ್ರಪಾತದ ಕಡೆ ಗಮನಹರಿಸಿ
ಸೆಲ್ಫಿ ತೆಗೆದುಕೊಳ್ಳುವ ಅಥವಾ ಅಪಾಯಕಾರಿ ಸ್ಥಳಕ್ಕೆ ತೆರಳುವ ದುಸ್ಸಾಹಸಕ್ಕೆ ಕೈ ಹಾಕದಿರಿ.
ಅರಣ್ಯದಲ್ಲಿ ಗದ್ದಲ ಮಾಡುವುದು ಮದ್ಯಪಾನ, ಧೂಮಪಾನ ಮಾಡುವ ಪ್ರವೃತ್ತಿಯನ್ನು ಕೈಬಿಡಿ.

Bottom Add3
Bottom Ad 2