ನಾಟಕ ಮಾಡಲು ಹೋಗಿ ಅಪಹಾಸ್ಯಕ್ಕೊಳಗಾದ ಬಿಜೆಪಿ : ಪ್ರತ್ಯುತ್ತರದಿಂದ ತೀವ್ರ ಮುಖಭಂಗ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎನ್ನುವ ಆರೋಪದೊಂದಿಗೆ, ಉತ್ತರಿಸಿ ಶಾಸಕರೇ ಎನ್ನುವ ಅಭಿಯಾನದ ನೆಪದಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕರೂ ಆಗಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಚೇರಿಗೆ ಶನಿವಾರ ತೆರಳಿದ್ದ ಕ್ಷೇತ್ರದ ಕಾರ್ಯಕರ್ತರು ಅಪಹಾಸ್ಯಕ್ಕೊಳಗಾಗಿ, ತೀವ್ರ ಮುಖಭಂಗ ಅನುಭವಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಎಷ್ಟು ಅನುದಾನ ಬಂದಿದೆ ಎನ್ನುವುದನ್ನು ಸಾಕ್ಷಿ ಸಮೇತ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದ 12 ಪದಾಧಿಕಾರಿಗಳು ಸಹ್ಯಾದ್ರಿ ನಗರದ ಶಾಸಕರ ನಿವಾಸದ ಬಳಿ ತೆರಳಿದ್ದರು. ಶಾಸಕರ ಅನುಪಸ್ಥಿತಿಯಲ್ಲಿ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಮೃಣಾಲ ಹೆಬ್ಬಾಳಕರ್, ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 6 ವರ್ಷದಿಂದಲೂ ಸಾಕಷ್ಟು ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಇನ್ನಷ್ಟು ಅಭಿವೃದ್ಧಿಯಾಗಬೇಕೆನ್ನುವ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ನೀವೂ ಸೇರಿದಂತೆ ಎಲ್ಲರೂ ಸಹಕರಿಸಬೇಕು. ಅಭಿವೃದ್ಧಿಯ ಕಳಕಳಿಯಿಂದ ನೀವು ಇಲ್ಲಿಗೆ ಬಂದಿದ್ದರೆ ಅದಕ್ಕೆ ಸ್ವಾಗತ. ನಿಮ್ಮ ಪ್ರಶ್ನೆಗಳಿಗೆ ಶಾಸಕರು ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಸರಕಾರ ಬಂದ ನಂತರ ಇಲ್ಲಿಯವರೆಗೆ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಯಾವ ಕಾಮಗಾರಿಗಳನ್ನು ಮಾಡಿದ್ದಾರೆ, ಯಾರು ಯಾವ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಎಷ್ಟು ಅನುದಾನ ತಂದಿದ್ದಾರೆ ಇದನ್ನು ಪುರಾವೆಯೊಂದಿಗೆ ಬಹಿರಂಗಪಡಿಸಬೇಕು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷ ಗ್ಯಾರಂಟಿಯ ಭರವಸೆಗಳನ್ನು ನೀಡಿದೆ. ಸರ್ಕಾರದ ಅವ್ಯವಸ್ಥೆಯಿಂದ ರಾಜ್ಯ ದಿವಾಳಿಯ ಅಂಚಿನಲ್ಲಿದೆ. ಕಳೆದ ಹತ್ತು ತಿಂಗಳಲ್ಲಿ ಎಷ್ಟು ಹಣ ತಂದಿದ್ದಿರಿ ಹಾಗೂ ಯಾವ ಕೆಲಸಕ್ಕೆ ಎಂದು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಮತ್ತು ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಅಭಿವೃದ್ಧಿ ಯೋಜನೆಗಳ ಕುರಿತು ನೀಡಿದ ಪ್ರತ್ಯುತ್ತರಕ್ಕೆ ತತ್ತರಿಸಿದ ಧನಂಜಯ ಜಾಧವ ಮತ್ತು ಬಿಜೆಪಿ ಕಾರ್ಯಕರ್ತರು ಮರು ಮಾತನಾಡಲಾಗದೆ ಮುಖಭಂಗ ಅನುಭವಿಸಿದರು.
ಕಳೆದ 6 ವರ್ಷದಿಂದ ಗ್ರಾಮೀಣ ಕ್ಷೇತ್ರದಲ್ಲಿ ಎಂದೂ ಕಾಣದಷ್ಟು ಅಭಿವೃದ್ಧಿಯಾಗಿದೆ. ಕಳೆದ ಅವಧಿಯಲ್ಲಿ 1800 ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನ ತಂದಿದ್ದಾರೆ. ಹಾಗಾಗಿಯೇ ಜನರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತ ನೀಡಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಪುನರಾಯ್ಕೆ ಮಾಡಿದ್ದಾರೆ. ಈಗ ಪುನಃ ಗ್ರಾಮೀಣ ಕ್ಷೇತ್ರದ ಕೆರೆ ತುಂಬುವ ಯೋಜನೆಗೆ 800 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ. ಅಭಿವೃದ್ಧಿಯ ಅರ್ಥ ನಿಮಗೆ ಗೊತ್ತಿದೆಯೇ? ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಲಾಗದೆ, ನಾವು ಎಲ್ಲ ಕಡೆ ಅಭಿಯಾನ ಮಾಡುತ್ತಿದ್ದೇವೆ. ಹಾಗಾಗಿ ಇಲ್ಲಿಯೂ ಬಂದಿದ್ದೇವೆ. ನಿಮಗೆ ಮುಜುಗರ ಉಂಟು ಮಾಡುವ ಉದ್ದೇಶ ನಮ್ಮದಲ್ಲ ಎನ್ನುತ್ತ ಬಿಜೆಪಿ ಕಾರ್ಯಕರ್ತರು ಅಲ್ಲಿಂದ ಕಾಲ್ಕಿತ್ತರು.
ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ, ಪ್ರದೀಪ ಪಾಟೀಲ, ಲಿಂಗರಾಜ ಹಿರೇಮಠ, ವಿಠ್ಠಲ ಕಲ್ಲಣ್ಣವರ, ಪ್ರಸಾದ ಬಾಚಿಕರ, ಶಾದ್ಯಕಶ್ರೀ ಹಿರೇಮಠ, ಗುನವಂತ ಸುತಾರ, ಚಂದ್ರಶೇಖರ್ ವಕ್ಕುಂದ, ವಿಲಾಸ ತಶೀಲ್ದಾರ್, ಗಣಪತರಾವ್ ದೇಸಾಯಿ, ಗುರು ಹಲಗತ್ತಿ, ರಾಜು ಖನಗಾಂವಕರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಇಷ್ಟು ದಿನ ಎಲ್ಲಿ ಹೋಗಿದ್ದರು?:
ನಂತರ ಮಾಧ್ಯಮಗಳು ಮೃಣಾಲ ಹೆಬ್ಬಾಳಕರ್ ಅವರ ಪ್ರತಿಕ್ರಿಯೆ ಕೇಳಿದಾಗ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಿರುವುದಕ್ಕೆ ನೀವೆಲ್ಲ ಸಾಕ್ಷಿ ಇದ್ದೀರಿ. ಲೋಕಸಭೆ ಚುನಾವಣೆ ಹತ್ತಿರ ಬಂದಿದ್ದರಿಂದ ಅವರು ಈಗ ಬಂದಿದ್ದಾರೆ. ಇಷ್ಟು ದಿನ ಇವರೆಲ್ಲ ಎಲ್ಲಿ ಹೋಗಿದ್ದರು? ಅಭಿವೃದ್ಧಿ ಮಾಡಿದ್ದರಿಂದಲೇ 1.10 ಲಕ್ಷದಷ್ಟು ಜನರು ಮತ ನೀಡಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಪುನರಾಯ್ಕೆ ಮಾಡಿದ್ದಾರೆ. ಈಗ ಮತ್ತೆ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಕೆರೆ ತುಂಬುವ ಯೋಜನೆಗೆ ದೊಡ್ಡ ಮೊತ್ತ ಬಿಡುಗಡೆಯಾಗಿದೆ. ಒಳ್ಳೆಯ ಮುಹೂರ್ತ ನೋಡಿ ಪೂಜೆ ಮಾಡಿ ಕಾಮಗಾರಿ ಆರಂಭಿಸುತ್ತೇವೆ. ಎಲ್ಲರ ಸಹಕಾರದಿಂದ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಗುರಿಯನ್ನಿಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ, ಚುನಾವಣೆಗೆ ಯಾರೇ ನಿಂತರೂ ಗೆಲ್ಲಿಸಿಕೊಂಡು ಬರಬೇಕೆನ್ನುವ ಉದ್ದೇಶದಿಂದ ನಾವು ಕೆಲಸ ಮಾಡುತ್ತಿದ್ದೇವೆ. ಅಂತಿಮವಾಗಿ ಹೈಕಮಾಂಡ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಯಾರನ್ನು ಕಣಕ್ಕಿಳಿಸಬೇಕೆಂದು ನಿರ್ಧರಿಸುತ್ತಾರೆ. ಅದಕ್ಕೆ ನಾವೆಲ್ಲ ಬದ್ದರಾಗಿರುತ್ತೇವೆ ಎಂದು ಮೃಣಾಲ ಹೆಬ್ಬಾಳಕರ್ ಉತ್ತರಿಸಿದರು.
ಒಟ್ಟಾರೆ, ಏನೋ ನಾಟಕ ಮಾಡಲು ಹೋದ ಬಿಜೆಪಿ ಕಾರ್ಯಕರ್ತರು ತೀವ್ರ ಅಪಹಾಸ್ಯಕ್ಕೊಳಗಾಗಿ ಅಲ್ಲಿಂದ ಹಿಂತಿರುಗಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ