ನಿಷ್ಠಾವಂತರಾಗಿ ದುಡಿದು ಹಲವು ಬಾರಿ ಶಾಸಕರಾದರೂ ಪಕ್ಷದಲ್ಲಿ ಲೆಕ್ಕಕ್ಕಿಲ್ಲ: ಶಾಸಕ ಆನಂದ್ ಮಾಮನಿ

ಪ್ರಗತಿವಾಹಿನಿ ಸುದ್ದಿ; ಸವದತ್ತಿ: ಫೆ.6ರಂದು ರಾಜ್ಯ ಸಚಿವ ಸಂಪುಟಗೆ ಮುಹೂರ್ತ ಫಿಕ್ಸ್ ಆಗಿದ್ದು, ಈಗಾಗಲೇ ಬಿಜೆಪಿ ಶಾಸಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಸವದತ್ತಿ ಶಾಸಕ ಆನಂದ್ ಮಾಮನಿ, ಹೊಸದಾಗಿ ಪಕ್ಷ ಸೇರಿ ಮಂತ್ರಿಯಾಗುವವರೆದುರಿಗೆ, ಪಕ್ಷಕ್ಕೆ ಅಡಿಪಾಯ ಹಾಕಿ, ಕಟ್ಟಿ, ನಿಷ್ಠಾವಂತರಾಗಿ ದುಡಿದು ಸಾಕಷ್ಟು ಬಾರಿ ಶಾಸಕರಾದರೂ ಲೆಕ್ಕಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್ ಮೂಲಕ ಒಂದು ರೀತಿಯಲ್ಲಿ ಬಂಡಾಯದ ಬಾವುಟ ಹಾರಿಸಿರುವ ಆನಂದ್ ಮಾಮನಿ, ಬಿಜೆಪಿ ಮೇಲಿಟ್ಟಿರುವ ಕ್ಷೇತ್ರದ ಜನತೆಯ ಅಮೂಲ್ಯ ಪ್ರೀತಿ-ಅಭಿಮಾನಕ್ಕೂ ಪಕ್ಷದಲ್ಲಿ ಬೆಲೆಯಿಲ್ಲದಾಯಿತೆ…? ಎಂದು ಪ್ರೆಶ್ನಿಸಿದ್ದಾರೆ.

ಸಾಕಷ್ಟು ಬಾರಿ ಇಲ್ಲಿವರೆಗೆ ಸರ್ಕಾರದಲ್ಲಿ ಅಧಿಕಾರ ಅನುಭವಿಸಿದವರು ಯಾವತ್ತೂ ತಾವು ಪಡೆದ ಸ್ಥಾನಮಾನ ತ್ಯಜಿಸಲು ಹಿಂದೇಟು ಹಾಕುತ್ತಿರುವುದು, ಪಕ್ಷದ ಮುಖಂಡರೂ ಸಹ ನನ್ನ ಕ್ಷೇತ್ರವನ್ನು ಹಾಗೂ ನಮ್ಮಂಥವರನ್ನು ಬೆಳೆಸಲು ಯಾವುದೇ ಆಸಕ್ತಿ ತೋರಿಸದಿರುವುದು ಬೇಸರ ತಂದಿದೆ. ಇನ್ಮೇಲೆ ಪಕ್ಷ ನಿಷ್ಠರಿಗೆ ಕಾಲವಿಲ್ಲವೇ, ಎಂಬುದು ಯಕ್ಷಪ್ರೆಶ್ನೆ. ನಾವೆಲ್ಲ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಇದೇನು ವಿಪರ್ಯಾಸವೇ, ಕಟು ಸತ್ಯವೇ? ಈಗ ಸ್ಪಷ್ಟವಾಗಿ ಹೇಳಬೇಕಿರುವುದು ಇಷ್ಟೇ ’ಕಾಲಾಯ ತಸ್ಮೈ ನಮಃ’ ಎಂದು ಮಾರ್ಮಿಕವಾಗಿ ಬರೆದಿದ್ದಾರೆ.

ಇದು ಪಕ್ಷ ನಿಷ್ಠರಿಗೆ ಹಾಗೂ ಮತದಾರರಿಗೆ ಆದ ಘೋರ ಅಪಮಾನ. ಕಾದು ನೋಡಬೇಕು. ಆದರೆ, ಮುಂದಿನ ನಡೆ ವಿಚಾರ ಮಾಡುವಂತದ್ದು ಎಂದು ತಿಳಿಸಿದ್ದಾರೆ. ಈ ಮೂಲಕ ಮಾಮನಿ ಪರೋಕ್ಷವಾಗಿ ಪಕ್ಷ ತೊರೆಯುವ ಸೂಚನೆ ನೀಡಿದರೆ? ಎಂಬ ಪ್ರೆಶ್ನೆ ಮೂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button