*ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರಕ್ಕೆ ಸೂಚಿಸುವಂತೆ ನಾಳೆ ರಾಜ್ಯಪಾಲರಿಗೆ ಮನವಿ: ಮಾಜಿ ಸಿಎಂ ಬೊಮ್ಮಾಯಿ*
ಕಾಂಗ್ರೆಸ್ ಪ್ರತಿಭಟನೆಗೆ ಟಾಂಗ್ ನೀಡಿದ ಮಾಜಿ ಸಿಎಂ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೈನ ಮುನಿಗಳ ಕೊಲೆ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ನಾಳೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೈನ ಮುನಿಗಳನ್ನು ಅಮಾನವೀಯ ರೀತಿಯಲ್ಲಿ ಕೊಲೆ ಮಾಡಿದ್ದು, ಇಷ್ಡೆಲ್ಲ ನಡೆದರೂ ಕೂಡ ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ವಲಯದಲ್ಲಿ ಈ ಪ್ರಕರಣ ಸಿಬಿಐಗೆ ಕೊಡಬೇಕೆಂಬ ಆಗ್ರಹ ಇದೆ. ನಾವು ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅಗ್ರಹಿಸಿದ್ದೇವೆ ಎಂದರು.
ಟಿ ನರಸೀಪುರದಲ್ಲಿಯೂ ಹಿಂದು ಕಾರ್ಯಕರ್ತನ ಹತ್ಯೆಯಾಗಿದೆ. ಸಕಲೇಶಪುರದಲ್ಲೂ ಹತ್ಯೆಯಾಗಿದೆ. ಕಲಬುರ್ಗಿಯಲ್ಲಿ ಹೆಡ್ ಕಾನ್ ಸ್ಟೇಬಲ್ ಅಕ್ರಮ ಮರಳು ದಂಧೆ ಮಾಡುವುದನ್ನು ತಡೆಯಲು ತೆರಳಿದವನ ಕೊಲೆ ಮಾಡುತ್ತಾರೆ. ಹಪ್ತಾ ವಸೂಲಿಗೆ ಹಿರಿಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಈ ಸರ್ಕಾರದಲ್ಲಿ ಸಮಾಜ ಘಾತುಕರಿಗೆ ಯಾರೂ ಏನೂ ಮಾಡಲು ಆಗುವುದಿಲ್ಲ ಎಂಬ ಧೈರ್ಯ ಬಂದಿದೆ. ಈ ಸರ್ಕಾರ ಒಂದೂವರೆ ತಿಂಗಳಲ್ಲಿ ಕಾನೂನು ಸುವ್ಯವಸ್ಥೆ ಇಷ್ಟೊಂದು ಹದಗೆಟ್ಟಿದೆ. ಇವರು ಐದು ದೊಖಾಗಳ ನಡುವೆ ಕಾನೂನು ಸುವ್ಯವಸ್ಥೆ ದೊಖಾ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ನಾಳೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಇನ್ನು ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ವಿರುದ್ದ ನ್ಯಾಯಾಲಯ ಆದೇಶ ನೀಡಿದೆ. ಕಾಂಗ್ರೆಸ್ ನವರು ನ್ಯಾಯಾಲಯದ ಆದೇಶದ ವಿರುದ್ದ ಪ್ರತಿಭಟನೆ ಮಾಡುವುದು ನ್ಯಾಯಾಂಗ ನಿಂದನೆ ಆಗಲಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ