*ಒಂದೇ ವಿಕೆಟ್ ಗೆ ಥಂಡಾದ ಬಿಜೆಪಿ ಬಂಡಾಯ!*: *ಒಬ್ಬಂಟಿಯಾದ ರೆಬೆಲ್ ನಾಯಕ!!* *ಬೆನ್ನಿಗೆ ನಿಂತ ಜಗದ್ಗುರು!*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕೆಲವೇ ದಿನಗಳ ಹಿಂದೆ ಉಗ್ರಸ್ವರೂಪಿಯಾಗಿದ್ದ ಬಿಜೆಪಿ ಭಿನ್ನರು ಇದ್ದಕ್ಕಿದ್ದಂತೆ ಥಂಡಾಗಿದ್ದಾರೆ. ಒಂದೇ ವಿಕೆಟ್ ಗೆ ಭಿನ್ನ ಪಾಳಯ ಕಂಗೆಟ್ಟಿದೆ. ಪಕ್ಷದ ವಿರುದ್ಧ ಮಾತನಾಡದಂತೆ ಸ್ವಯಂ ನಿಯಂತ್ರಣ ಹಾಕಿಕೊಂಡಿದ್ದಾರೆ.
ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಭಿನ್ನ ಪಡೆ ಹತ್ತಾರು ಸಭೆಗಳನ್ನು ನಡೆಸಿ ದೊಡ್ಡ ಮಟ್ಟದಲ್ಲೇ ಬೆಂಕಿ ಹೊತ್ತಿಸಿತ್ತು. ಇನ್ನೇನು ಧಗ ಧಗನೆ ಉರಿಯಲಿದೆ ಎನ್ನುವ ಹೊತ್ತಿಗೆ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಂಡಿದೆ. ನಾಯಕನನ್ನೇ ಪಕ್ಷದಿಂದ ಹೊರಗಟ್ಟಿದೆ. ಹಾಗಾಗಿ ಇಡೀ ಬಿನ್ನ ಪಾಳಯ ದಿಕ್ಕು ತೋಚದಂತಾಗಿ ಕುಳಿತುಬಿಟ್ಟಿದೆ.
ಯತ್ನಾಳ ಮತ್ತು ಅವರ ಬಂಡಾಯ ಪಾಳಯದ ನೇರ ಗುರಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ. ವಿಜಯೇಂದ್ರ ವಿರುದ್ಧ ಮನಬಂದಂತೆ ಮಾತನಾಡುತ್ತಿದ್ದರು. ವಿಜಯೇಂದ್ರ ಅವರನ್ನು ಕೆಳಗಿಳಿಸುವವರೆಗೂ ವಿಶ್ರಮಿಸುವುದಿಲ್ಲ ಎಂದು ಗುಡುಗುತ್ತಿದ್ದರು. ವಿಶೇಷವಾಗಿ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಬಹಳ ಜೋರಾಗಿ ಸದ್ದು ಮಾಡುತ್ತಿದ್ದರು. ಯಾವಾಗ ಯತ್ನಾಳ ಉಚ್ಛಾಟನೆ ಮತ್ತು ಇನ್ನೂ ಐವರಿಗೆ ನೋಟೀಸ್ ಜಾರಿಯಾಯಿತೋ ಎಲ್ಲವೂ ತಣ್ಣಗಾಗಿದೆ. ಸಧ್ಯದಲ್ಲೇ ಶಾಸಕರಾದ ಎಸ್.ಟಿ.ಸೋಮಶೇಖರ ಮತ್ತು ಶಿವರಾಮ ಹೆಬ್ಬಾರ್ ಅವರ ಉಚ್ಛಾಟನೆಯಾದರೂ ಆಶ್ಚರ್ಯವಿಲ್ಲ.
ನಿರ್ಲಕ್ಷಿಸಿದ್ದ ಹೈಕಮಾಂಡ್
ಬಸನಗೌಡ ಪಾಟೀಲ ಯತ್ನಾಳ ಭಿನ್ನಮತ ಇಂದು ನಿನ್ನೆಯದಲ್ಲ. ಅವರಿಗೆ ಉಚ್ಛಾಟನೆಯೂ ಹೊಸದಲ್ಲ. ಈ ಹಿಂದೆಯೇ ಎರಡು ಬಾರಿ ಅವರು ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಇದೀಗ 3ನೇ ಬಾರಿಗೆ ಹೊರಹಾಕಲ್ಪಟ್ಟಿದ್ದಾರೆ. 6 ವರ್ಷ ಪಕ್ಷದಿಂದ ಉಚ್ಛಾಟಿಸಲಾಗಿದೆ. ಯತ್ನಾಳ ಅವರು ಯಡಿಯರಪ್ಪ ಮತ್ತು ವಿಜಯೇಂದ್ರ ವಿರುದ್ಧ ಹರಿಹಾಯಲು ಆರಂಭಿಸಿದಾಗಲೇ ಗಂಭೀರ ಎಚ್ಚರಿಕೆ ನೀಡಿದ್ದರೆ ಈ ಮಟ್ಟಕ್ಕೆ ಭಿನ್ನಮತ ಬೆಳೆಯುತ್ತಿರಲಿಲ್ಲವೇನೋ.
ಆದರೆ ದೊಡ್ಡಮಟ್ಟಕ್ಕೆ ಬೆಳೆಯುವವರೆಗೂ ಹೈಕಮಾಂಡ್ ಸುಮ್ಮನೇ ಕುಳಿತಿತ್ತು. ಹೋದಲ್ಲಿ ಬಂದಲ್ಲಿ ಸಭೆ ಮಾಡಿದರೂ, ಸಿಕ್ಕಸಿಕ್ಕಲ್ಲಿ ನಾಲಿಗೆ ಹರಿಬಿಟ್ಟರೂ ಯಾರೂ ತಡೆಯುವ ಗೋಜಿಗೆ ಹೋಗಿರಲಿಲ್ಲ. ಹಾಗಾಗಿ ಯತ್ನಾಳ್ ಗೆ ಹೈಕಮಾಂಡ್ ಬೆಂಬಲವೂ ಇರಬಹುದೆನ್ನುವ ಅನುಮಾನ ಹಲವರಲ್ಲಿತ್ತು. ಹೈಕಮಾಂಡ್ ಸುಮ್ಮನೆ ಕುಳಿತಿದ್ದರಿಂದ ಯತ್ನಾಳ್ ಮತ್ತು ಟೀಮ್ ದಿನದಿಂದ ದಿನಕ್ಕೆ ಬೆಳೆಯತೊಡಗಿತು. ಅನೇಕ ಹೊಸಮುಖಗಳೂ ಭಿನ್ನರ ಗುಂಪು ಸೇರತೊಡಗಿದರು.
ನೋಟೀಸ್ ನೀಡಿದಾಗಲೂ ಯತ್ನಾಳ್ ಉಚ್ಛಾಟನೆ ಮಟ್ಟಕೆ ಹೋಗಬಹುದೆನ್ನುವ ವಿಶ್ವಾಸ ಯಾರಲ್ಲೂ ಇರಲಿಲ್ಲ. ನೋಟೀಸ್ ನೀಡಿ ಸ್ಪಷ್ಟೀಕರಣ ಪಡೆದು ಸುಮ್ಮನಾಗಬಹುದೆನ್ನುವ ಅನುಮಾನ ಎಲ್ಲರಲ್ಲಿತ್ತು. ಆದರೆ ಇದೀಗ ಅಂತಿಮವಾಗಿ ಬಂಡಾಯ ನಾಯಕ ಯತ್ನಾಳ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.
ಥಂಡಾದ ಭಿನ್ನರ ಗುಂಪು; ಯತ್ನಾಳ್ ಒಬ್ಬಂಟಿ
ಯತ್ನಾಳ ಉಚ್ಛಾಟನೆ ಬೆನ್ನಲ್ಲೇ ಭಿನ್ನರ ಗುಂಪು ಸೈಲೆಂಟ್ ಆಗಿದೆ. ಯಾರೂ ಗಟ್ಟಿಯಾಗಿ ಮಾತನಾಡುತ್ತಿಲ್ಲ. ರಮೇಶ ಜಾರಕಿಹೊಳಿ, ಯತ್ನಾಳ್ ಅವರನ್ನು ಪಕ್ಷಕ್ಕೆ ವಾಪಸ್ ಕರೆ ತರುತ್ತೇವೆ, ಹೈಕಮಾಂಡ್ ಮನವೊಲಿಸುತ್ತೇವೆ ಎನ್ನುತ್ತಿದ್ದಾರೆ. ಪಕ್ಷಕ್ಕೆ ಮುಜುಗರವಾಗುವಂತೆ ಮಾತನಾಡಬೇಡಿ ಎಂದು ಯತ್ನಾಳ್ ಗೆ ಬುದ್ದಿವಾದ ಹೇಳಿದ್ದಾರೆ. ನಾವು ಬಿಜೆಪಿ ಬಿಡುವುದಿಲ್ಲ, ಯತ್ನಾಳ ಅವರನ್ನೇ ವಾಪಸ್ ಸೇರಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಆದರೆ ಯತ್ನಾಳ್ ಹೊಸ ಪಕ್ಷ ಕಟ್ಟುವ ಬಗ್ಗೆ ಕೇಳಿದರೆ, ಅವರು ಹೊಸ ಪಕ್ಷ ಕಟ್ಟುವುದಿಲ್ಲ, ನಾವು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎನ್ನುತ್ತಿದ್ದಾರೆ.
ಬೇರೆ ಯಾವ ಭಿನ್ನಮತೀಯ ನಾಯಕರೂ ತುಟಿ ಬಿಚ್ಚಿಲ್ಲ. ಕುಮಾರ ಬಂಗಾರಪ್ಪ ಕೂಡ ಯತ್ನಾಳ ಜೊತೆ ನಿಲ್ಲುವುದಾಗಿ ಹೇಳುತ್ತಿಲ್ಲ. ಅಲ್ಲಿಗೆ ಯತ್ನಾಳ್ ಪೂರ್ತಿ ಒಬ್ಬಂಟಿಯಾದರಾ ಎನ್ನುವ ಅನುಮಾನ ಬರತೊಡಗಿದೆ. ಯತ್ನಾಳ ಅವರು ಮಾತಿಗೆ ಸಿಕ್ಕಿಲ್ಲ ಎಂದು ಭಿನ್ನಮತೀಯ ನಾಯಕರು ಹೇಳುತ್ತಿದ್ದಾರೆ. ಭಿನ್ನಮತೀಯ ನಾಯಕರು ಈಗ ಯತ್ನಾಳ್ ನೇತೃತ್ವದಲ್ಲಿ ಸಭೆ ಸೇರುವ ಬಗ್ಗೆ ಅಥವಾ ಯತ್ನಾಳ ಭೇಟಿ ಮಾಡುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಅದನ್ನೂ ಭಿನ್ನಮತೀಯ ಚಟುವಟಿಕೆ ಎಂದು ಪರಿಗಣಿಸಿ ತಮಗೂ ನೋಟೀಸ್ ನೀಡಿದರೆ… ಎನ್ನುವ ಆತಂಕ ಅವರನ್ನು ಕಾಡುತ್ತಿದೆ. ಅಲ್ಲಿಗೆ ಬಂಡಾಯ ಥಂಡಾಯ ಎನ್ನುವಂತಾಗಿದೆ.
ಯತ್ನಾಳ ಅವರು ಹೊಸ ಹಿಂದೂ ಪಕ್ಷ ಕಟ್ಟುವುದಾಗಿ ಹೇಳಿದ್ದರೂ ಅವರಲ್ಲಿ ವಿಶ್ವಾಸ ಇದ್ದಂತೆ ಕಾಣುತ್ತಿಲ್ಲ. ಅಲ್ಲದೆ ಅವರ ಹೊಸ ಪಕ್ಷ ಬೆಂಬಲಿಸುವುದಾಗಿ ಪಂಚಮಸಾಲಿ ಸ್ವಾಮಿಗಳೊಬ್ಬರನ್ನು ಬಿಟ್ಟು ಯಾರೊಬ್ಬರೂ ಹೇಳಿಕೆ ನೀಡಿಲ್ಲ!
ಬೆನ್ನಿಗೆ ನಿಂತ ಜಗದ್ಗುರು!
ವಿಚಿತ್ರವೆಂದರೆ, ಯತ್ನಾಳ ಉಚ್ಛಾಟನೆ ಸುದ್ದಿ ಹೊರಬೀಳುತ್ತಿದ್ದಂತೆ ಮೊದಲು ಸಿಡಿದೆದ್ದವರು ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ. ಬಿಜೆಪಿ ಹೈಕಮಾಂಡ್ ನ್ನು ಬೈಯುತ್ತ ಯತ್ನಾಳ ಪರ ಹೇಳಿಕೆ ನೀಡುತ್ತಿರುವವರು ಅವರು. ಏಪ್ರಿಲ್ 10ರ ಗಡುವು ನೀಡಿ, ಅಷ್ಟರೊಳಗೆ ಯತ್ನಾಳ ಅವರನ್ನು ಬಿಜೆಪಿಗೆ ವಾಪಸ್ ಸೇರಿಸದಿದ್ದರೆ 13ರಂದು ಬೀದಿಗಿಳಿದು ಉಗ್ರ ಪ್ರತಿಭಟನೆ ಮಾಡುವುದಾಗಿ ಸ್ವಾಮೀಜಿ ಬೆದರಿಕೆ ಹಾಕಿದ್ದಾರೆ.
ಇಡೀ ಪಂಚಮಸಾಲಿ ಸಮಾಜ ಯತ್ನಾಳ ಬೆನ್ನಿಗಿದೆ, ಅವರು ಏನು ಕರೆ ಕೊಟ್ಟರೂ ಅದಕ್ಕೆ ನಾವು ಬದ್ದರಿದ್ದೇವೆ ಎಂದೂ ಸ್ವಾಮಿಗಳು ಹೇಳಿಕೆ ನೀಡಿದ್ದಾರೆ. ಯತ್ನಾಳ ಹೊಸ ಪಕ್ಷ ಕಟ್ಟಿದರೂ ಬೆಂಬಲಿಸುವುದಾಗಿ ಅವರು ಮಾತನಾಡಿದ್ದಾರೆ. ಈ ಬಗ್ಗೆ ಈಗಾಗಲೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮಠಾಧೀಶರಾದವರು ಈ ರೀತಿ ರಾಜಕಾರಣ ಮಾಡಬಾರದು. ತಮ್ಮ ಇತಿ ಮಿತಿ ಅರಿತುಕೊಂಡು ವರ್ತಿಸಬೇಕು ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಬಿಜೆಪಿಯ ಆಂತರಿಕ ವಿಷಯ. ಸ್ವಾಮಿಗಳು ಧರ್ಮ ಕೆಲಸ ಮಾಡಲಿ, ರಾಜಕಾರಣ ಬೇಡ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಕೈ ಎತ್ತಿದ ಕಾಂಗ್ರೆಸ್
ಯತ್ನಾಳ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿಗೆ ಕಾಂಗ್ರೆಸ್ ಬ್ರೇಕ್ ಹಾಕಿದೆಯ ಯತ್ನಾಳ್ ಕಾಂಗ್ರೆಸ್ ಗೆ ಬೇಕಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಅವರ ತತ್ವ ಸಿದ್ದಾಂತ ಕಾಂಗ್ರೆಸ್ ಗೆ ಹೊಂದಾಣಿಕೆ ಆಗುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಯತ್ನಾಳ ಕೂಡ ಕಾಂಗ್ರೆಸ್ ಸೇರುವ ಆಸಕ್ತಿ ತೋರಿಸಿಲ್ಲ. ಅಲ್ಲಿಗೆ ಕಾಂಗ್ರೆಸ್ ಬಾಗಿಲು ಮುಚ್ಚಿದಂತಾಗಿದೆ.
ಯತ್ನಾಳ್ ಉಚ್ಚಾಟನೆ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರಿದಂತೆ ಕಾಣಿಸುತ್ತಿಲ್ಲ. ಕೆಲವೆಡೆ ಬೆಂಬಲಿಗರು ಸಣ್ಣ ಪ್ರಮಾಣದ ಪ್ರತಿಭಟನೆ ನಡೆಸಿದರೂ ಅದು ಗಮನ ಸೆಳೆಯುವ ಮಟ್ಟದಲ್ಲಿ ಇಲ್ಲ. ಬಿಜೆಪಿ ಸೇರಿದಂತೆ ಯಾವುದೇ ಪಕ್ಷದವರೂ ಯತ್ನಾಳ ಉಚ್ಛಾಟನೆ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.