ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಳಗಾವಿ ನಗರದ ನಾಗರಿಕರ ಆರೋಗ್ಯ ರಕ್ಷಣೆಯಲ್ಲಿ ಕೆಎಲ್ಇ ಸಂಸ್ಥೆಯ ಕೊಡುಗೆ ಅಪಾರ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿದರು.
ಅವರು ಇಂದು ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ ವೈದ್ಯರ ದಿನಾಚರಣೆ, ರಕ್ತಭಂಡಾರ, ಔಷಧಾಲಯ, ಹೋಮ್ ನರ್ಸಿಂಗ್ ಸೇವೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಗರಗಳು ಬೆಳೆದಂತೆ ಜನಸಂಖ್ಯೆಯು ಅಧಿಕವಾಗುತ್ತದೆ, ಅದೇ ರೀತಿ ಅಭಿವೃದ್ದಿಯ ಕಾರ್ಯಕ್ರಮಗಳು, ಆರ್ಥಿಕ ಚಟುವಟಿಕೆಗಳು ಅಧಿಕವಾಗುತ್ತವೆ. ರೋಗಗಳ ಸಂಖ್ಯೆಯೂ ಅಧಿಕವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಮಾತ್ರವಲ್ಲದೇ ದೇಶವಿದೇಶಗಳಲ್ಲಿಯೂ ಹೆಸರುವಾಸಿಯಾದ ಕೆ ಎಲ್ ಇ ಸಂಸ್ಥೆಯ ಸೇವೆ ಅಪಾರವೆಂದು ನುಡಿದರು.
ಕಾರ್ಯಕ್ರಮದ ಇನ್ನೊಬ್ಬ ಅತಿಥಿ ಕೆ ಎಲ್ ಇ ಸಂಸ್ಥೆಯ ನಿರ್ದೇಶಕ ಡಾ. ವಿ ಎಸ್ ಸಾಧುನವರ ಮಾತನಾಡುತ್ತ ದಕ್ಷಿಣ ಬೆಳಗಾವಿ ಹಾಗೂ ಆರ್ಥಿಕವಾಗಿ ಹಿಂದುಳಿದ ನಾಗರಿಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯನ್ನು ಕೆ ಎಲ್ ಇ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಲೋಕಾರ್ಪಣೆಗೊಳಿಸಲಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ವಹಿಸಿದ್ದರು.
ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಜ್ಞ ಡಾ. ಅಶೋಕ ಗೋದಿ ಹಾಗೂ ಮಕ್ಕಳ ತಜ್ಞೆ ಡಾ. ವಿಜಯಲಕ್ಷ್ಮಿ ಕುಲಗೊಡರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆ ಎಲ್ ಇ ಹೋಮಿಯೋಪಥೀಕ ಕಾಲೇಜಿನ ಪ್ರಾಂಶುಪಾಲ ಡಾ. ಎಮ್ ಎ ಉಡಚನಕರ, ಹಿರಿಯ ವೈದ್ಯ ಡಾ. ಅಶೋಕ ಪಾಂಗಿ, ಡಾ. ಬಿ ಎಸ್ ಮಹಾಂತಶೆಟ್ಟಿ ಮತ್ತು ಕೆ ಎಲ್ ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ರಕ್ತ ಭಂಡಾರ ಅಧಿಕಾರಿ ಡಾ. ವೀರಗೆ, ಮಾಜಿ ಮೇಯರ ವಿಜಯ ಮೋರೆ, ಮಾಜಿ ನಗರಸೇವಕರಾದ ಸಂಜಯ ಸವಾಶೇರಿ, ರಮೇಶ ಸೊಂಟಕ್ಕಿ, ದೀಪಕ ಮುಚ್ಚಂಡಿ ಹಿರಿಯನಾಗರಿಕ ಸಂಘದ ಅಧ್ಯಕ್ಷ ಗುರುನಾಥ ಶಿಂಧೆ, ಮಾಜಿ ಅಧ್ಯಕ್ಷ ಪ್ರಭಾಕರ ಕುಲಕರ್ಣಿ ಭಾಗವಹಿದ್ದರು.
ಕಾರ್ಯಕ್ರಮವನ್ನು ಅರುಣ ನಾಗಣ್ಣವರ ನಿರೂಪಿಸಿದರು, ಹಿರಿಯ ವೈದ್ಯ ಡಾ. ಬಿಎಸ್ ಮಹಾಂತಶೆಟ್ಟಿ ಸ್ವಾಗತಿಸಿದರು. ಡಾ. ಕಿಶೋರ ಬಂಡಗಾರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ